T20 World Cup ಟೀಕೆಗೆ ಬೆಂಕಿ ಬೌಲಿಂಗ್‌ನಿಂದಲೇ ಉತ್ತರಿಸಿದ ಆರ್ಶದೀಪ್ ಸಿಂಗ್!

By Naveen Kodase  |  First Published Oct 24, 2022, 9:05 AM IST

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಎದುರು ಮಿಂಚಿದ ಆರ್ಶದೀಪ್ ಸಿಂಗ್
ಟಿ20 ವಿಶ್ವಕಪ್‌ನ ಮೊದಲ ಎಸೆತದಲ್ಲೇ ವಿಕೆಟ್ ಕಬಳಿಸಿದ ಎಡಗೈ ವೇಗಿ
32 ರನ್ ನೀಡಿ ಪಾಕ್‌ನ ಮಹತ್ವದ 3 ವಿಕೆಟ್ ಕಬಳಿಸಿದ ಆರ್ಶದೀಪ್ ಸಿಂಗ್


ಮೆಲ್ಬರ್ನ್‌(ಅ.24): ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನ ವಿರುದ್ದದ ಮಹತ್ವದ ಪಂದ್ಯವೊಂದರಲ್ಲಿ ಭಾರತೀಯ ಕ್ರಿಕೆಟ್‌ ಕೆಲ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದ ಯುವ ವೇಗಿ ಆರ್ಶದೀಪ್ ಸಿಂಗ್, ಇದೀಗ ಇಡೀ ದೇಶವೇ ಖುಷಿ ಪಡುವಂತಹ ಪ್ರದರ್ಶನ ತೋರುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಗೆಲುವಿನ ನಗೆ ಬೀರಿತ್ತು. ಆದರೆ ಪಾಕಿಸ್ತಾನ ತಂಡವನ್ನು ಸ್ಪರ್ಧಾತ್ಮಕ ಮೊತ್ತದೊಳಗೆ ನಿಯಂತ್ರಿಸುವಲ್ಲಿ ಯುವ ಎಡಗೈ ವೇಗಿ ಆರ್ಶದೀಪ್ ಸಿಂಗ್ ಮಹತ್ವದ ಪಾತ್ರ ವಹಿಸಿದ್ದರು.

ಹೌದು, ಇತ್ತೀಚೆಗಷ್ಟೇ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್‌ ಸೂಪರ್ 4 ಪಂದ್ಯದಲ್ಲಿ ಸುಲಭ ಕ್ಯಾಚ್‌ ಬಿಟ್ಟಿದ್ದ ಭಾರತದ ವೇಗಿ ಆರ್ಶದೀಪ್ ಸಿಂಗ್‌ ಭಾರೀ ಟೀಕೆಗೆ ಗುರಿಯಾಗಿದ್ದರು. ಆದರೆ ಭಾನುವಾರದ ಪಂದ್ಯದಲ್ಲಿ ಮಿಂಚಿನ ದಾಳಿ ನಡೆಸಿದ ಆರ್ಶದೀಪ್ ಸಿಂಗ್ 32 ರನ್‌ಗೆ 3 ವಿಕೆಟ್‌ ಕಿತ್ತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಚೊಚ್ಚಲ ವಿಶ್ವಕಪ್‌ ಪಂದ್ಯವನ್ನೇ ಸ್ಮರಣೀಯವಾಗಿಸಿಕೊಂಡರು.

Latest Videos

undefined

ಇದೇ ಮೊದಲ ಬಾರಿಗೆ ಮೈದಾನದಲ್ಲಿ ಕಣ್ಣೀರಿಟ್ಟ ಕೊಹ್ಲಿ, ಚಾಂಪಿಯನ್ಸ್ ಕಿಂಗ್‌ಗೆ ದಿಗ್ಗಜರ ಸಲಾಂ!

ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಆರ್ಶದೀಪ್ ಸಿಂಗ್, ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಹೊಸ ಚೆಂಡಿನೊಂದಿಗೆ ದಾಳಿ ನಡೆಸಿ ಗಮನ ಸೆಳೆದರು. ಚೊಚ್ಚಲ ಟಿ20 ವಿಶ್ವಕಪ್ ಪಂದ್ಯವನ್ನಾಡಿದ ಆರ್ಶದೀಪ್, ತಾವೆಸೆದ ಮೊದಲ ಚೆಂಡಿನಲ್ಲೇ ಪಾಕಿಸ್ತಾನದ ನಾಯಕ ಬಾಬರ್ ಅಜಂ ವಿಕೆಟ್ ಕಬಳಿಸಿ ಟೀಂ ಇಂಡಿಯಾಗೆ ಚೊಚ್ಚಲ ಯಶಸ್ಸು ದಕ್ಕಿಸಿಕೊಟ್ಟರು. ನಂತರ ತಮ್ಮ ಕೋಟದ ಎರಡನೇ ಓವರ್‌ನಲ್ಲಿ ಪಾಕಿಸ್ತಾನದ ಮತ್ತೋರ್ವ ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಇನ್ನು  ಪಾಲಿನ ಮೂರನೇ ಓವರ್‌ನಲ್ಲಿ ಪಾಕಿಸ್ತಾನದ ಸ್ಪೋಟಕ ಬ್ಯಾಟರ್ ಆಸಿಫ್ ಅಲಿ ವಿಕೆಟ್ ಕಬಳಿಸಿ ಎದುರಾಳಿ ತಂಡಕ್ಕೆ ಬಲವಾದ ಪೆಟ್ಟು ನೀಡಿದರು. ಆರ್ಶದೀಪ್ ಸಿಂಗ್ ಮೊದಲ 3 ಓವರ್‌ಗಳಲ್ಲಿ ಕೇವಲ 18 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸಿದ್ದರು. ಆದರೆ ಇನಿಂಗ್ಸ್‌ನ 19ನೇ ಹಾಗೂ ತಮ್ಮ ಪಾಲಿನ 4ನೇ ಓವರ್‌ನಲ್ಲಿ  ಆರ್ಶದೀಪ್ 14 ರನ್ ನೀಡುವ ಮೂಲಕ ಕೊಂಚ ದುಬಾರಿಯಾದರು. 

ಏಷ್ಯಾಕಪ್ ಟೂರ್ನಿಯ ವೇಳೆ ಆರ್ಶದೀಪ್ ಸಿಂಗ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ದೇಶದ್ರೋಹಿ, ಖಲಿಸ್ತಾನಿ ಬೆಂಬಲಿಗ ಎಂದೆಲ್ಲ ನೆಟ್ಟಿಗರೂ ಟ್ರೋಲ್ ಮಾಡಿದ್ದರು.ಇದೀಗ ಅಂತಹ ಟೀಕಾಕಾರರು ಬಾಯಿ ಮುಚ್ಚಿಕೊಳ್ಳುವಂತಹ ಮಿಂಚಿನ ಪ್ರದರ್ಶನವನ್ನು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಾಡಿ ತೋರಿಸಿದ್ದಾರೆ

Arshdeep Singh after Babar Azam wicket pic.twitter.com/eLQlAmhPUH

— Cric kid  (@ritvik5_)

ಏಕಕಾಲಕ್ಕೆ 1.8 ಕೋಟಿ ವೀಕ್ಷಕರು: ಹಾಟ್‌ಸ್ಟಾರ್‌ನಲ್ಲಿ ಹೊಸ ದಾಖಲೆ.

ಭಾನುವಾರ ಭಾರತ-ಪಾಕ್‌ ಪಂದ್ಯ ಹಾಟ್‌ಸ್ಟಾರ್‌ನಲ್ಲಿ ಹೊಸ ದಾಖಲೆ ಬರೆಯಿತು. ಪಂದ್ಯದ ಆರಂಭದಲ್ಲೇ 1 ಕೋಟಿ ಇದ್ದ ವೀಕ್ಷಕರ ಸಂಖ್ಯೆ ಭಾರತದ ಚೇಸಿಂಗ್‌ ವೇಳೆ ಕೊನೆ ಓವರಲ್ಲಿ 1.8 ಕೋಟಿ ದಾಟಿತ್ತು. ಇದು ಈವರೆಗಿನ ಹೊಸ ದಾಖಲೆ. ಇದಕ್ಕೂ ಮೊದಲು ಆಗಸ್ಟ್‌ನಲ್ಲಿ ನಡೆದ ಭಾರತ-ಪಾಕ್‌ ಏಷ್ಯಾಕಪ್‌ ಪಂದ್ಯವನ್ನು ಏಕಕಾಲಕ್ಕೆ 1.3 ಕೋಟಿ ಮಂದಿ ವೀಕ್ಷಿಸಿದ್ದರು.

90,293 ಪ್ರೇಕ್ಷಕರು!

ಮೆಲ್ಬರ್ನ್‌ ಕ್ರೀಡಾಂಗಣದಲ್ಲಿ 90,293 ಮಂದಿ ಉಪಸ್ಥಿತರಿದ್ದರು. 1 ಲಕ್ಷ ಆಸನ ಸಾಮರ್ಥ್ಯದ, ವಿಶ್ವದ 2ನೇ ಅತಿ ದೊಡ್ಡ ಕ್ರೀಡಾಂಗಣದಲ್ಲಿ 2015ರ ಏಕದಿನ ವಿಶ್ವಕಪ್‌ನ ಆಸ್ಪ್ರೇಲಿಯಾ-ನ್ಯೂಜಿಲೆಂಡ್‌ ನಡುವಿನ ಫೈನಲ್‌ ಪಂದ್ಯವನ್ನು 93,013 ಮಂದಿ ವೀಕ್ಷಿಸಿದ್ದು, ಈವರೆಗಿನ ದಾಖಲೆಯಾಗಿಯೇ ಉಳಿದಿದೆ.

click me!