
ಕರಾಚಿ(ಜು.17): ಭಾರತದ ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ಅವರನ್ನು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಮತ್ತೊಮ್ಮೆ ಗುಣಗಾನ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಯಾರೂ ಊಹಿಸಲಾಗದ 10 ಸಾವಿರ ರನ್ ಬಾರಿಸಿದ್ದ ಗವಾಸ್ಕರ್‌ನ್ನು ಇಂಜಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಗವಾಸ್ಕರ್ ಬರುವುದಕ್ಕಿಂತ ಹಲವಾರು ಸ್ಟಾರ್ ಆಟಗಾರರು ಬಂದು ಹೋದರು. ಅದರಲ್ಲೂ ಜಾವೇದ್ ಮಿಯಾಂದಾದ್, ವೀವ್ ರಿಚರ್ಡ್ಸ್ ಅವರಂತಹ ಸಮಕಾಲೀನ ಆಟಗಾರರು ಇದ್ದರೂ ಯಾರೊಬ್ಬರು 10 ಸಾವಿರ ರನ್ ಬಾರಿಸಲು ಸಾಧ್ಯವಾಗಲಿಲ್ಲ. ಆದರೆ ಲಿಟ್ಲ್ ಮಾಸ್ಟರ್ ಯಾರು ಊಹಿಸಲೂ ಸಾಧ್ಯವಿರದ ಮೈಲಿಗಲ್ಲನ್ನು ನೆಟ್ಟರು. ಆಗ ಗವಾಸ್ಕರ್ ಬಾರಿಸಿದ 10 ಸಾವಿರ ರನ್ ಈಗಿನ 16 ಸಾವಿರ ರನ್‌ಗಳಿಗಿಂತಲೂ ಹೆಚ್ಚು ಎಂದು ಹೇಳಿದ್ದಾರೆ.
ಜಾವೇದ್ ಮಿಯಾಂದಾದ್, ವೀವ್ ರಿಚರ್ಡ್ಸ್, ಗ್ಯಾರಿ ಸೋಬರ್ಸ್ ಹಾಗೂ ಡಾನ್ ಬ್ರಾಡ್ಮನ್ ಅವರಂತಹ ಆಟಗಾರರು 10 ಸಾವಿರ ರನ್ ಬಾರಿಸುವ ಕಲ್ಪನೆಯನ್ನೂ ಮಾಡಿಕೊಂಡಿರಲಿಲ್ಲವೇನೋ ಆದರೆ ಗವಾಸ್ಕರ್ ಟೆಸ್ಟ್‌ನಲ್ಲೂ 10 ಸಾವಿರ ರನ್ ಬಾರಿಸಬಹುದು ಎಂದು ಸಾಧಿಸಿ ತೋರಿಸಿದ್ದರು ಎಂದಿದ್ದಾರೆ.
ಗವಾಸ್ಕರ್ ನೆರವನ್ನು ಸ್ಮರಿಸಿಕೊಂಡ ಇಂಜಮಾಮ್ ಉಲ್ ಹಕ್..!
ಮಾರ್ಚ್ 1987ರಲ್ಲಿ ಅಹಮದಾಬಾದ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ 10 ಸಾವಿರ ರನ್ ಪೂರೈಸಿದರು. ಈ ಮೂಲಕ ಹತ್ತು ಸಾವಿರ ರನ್ ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನ್ನುವ ಶ್ರೇಯಕ್ಕೆ ಲಿಟ್ಲ್ ಮಾಸ್ಟರ್ ಪಾತ್ರರಾದರು.
ಆ ಕಾಲಘಟ್ಟದಲ್ಲಿ ಸುನಿಲ್ ಗವಾಸ್ಕರ್ ಬಾರಿಸಿದ 10 ಸಾವಿರ ರನ್ ಆಧುನಿಕ ಕ್ರಿಕೆಟ್‌ನಲ್ಲಿ ಈಗ ಬಾರಿಸುವ 15, 16 ಸಾವಿರ ರನ್‌ಗಳಿಗೇನು ಕಡಿಮೆಯಿಲ್ಲ. ಈಗ ಬ್ಯಾಟ್ಸ್‌ಮನ್ ಒಳ್ಳೆಯ ಫಾರ್ಮ್‌ನಲ್ಲಿದ್ದರೆ ಒಂದು ಸೀಸನ್‌ನಲ್ಲಿ ಒಂದು-ಒಂದೂವರೆ ಸಾವಿರ ರನ್‌ಗಳನ್ನು ಸುಲಭವಾಗಿ ಬಾರಿಸಬಹುದು. ಈಗೆಲ್ಲ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳನ್ನು ರೆಡಿ ಮಾಡಲಾಗುತ್ತಿದೆ. ಆದರೆ ಗವಾಸ್ಕರ್ ಆಡುವ ಸಂದರ್ಭದಲ್ಲಿ ಪರಿಸ್ಥಿತಿ ವ್ತತಿರಿಕ್ತವಾಗಿರುತ್ತಿತ್ತು ಎಂದು ಪಾಕ್ ಮಾಜಿ ನಾಯಕ ಇಂಜಿ ಹೇಳಿದ್ದಾರೆ.
ಗವಾಸ್ಕರ್ ಬಗ್ಗೆ ಇಂಜಮಾಮ್ ಏನಂದ್ರು ನೀವೇ ಕೇಳಿ..
ಗವಾಸ್ಕರ್ ನಿವೃತ್ತಿಯ ಬಳಿಕ 12ಕ್ಕೂ ಹೆಚ್ಚು ಬ್ಯಾಟ್ಸ್‌ಮನ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ 200 ಟೆಸ್ಟ್ ಪಂದ್ಯಗಳನ್ನಾಡಿ 15,921 ರನ್ ಬಾರಿಸಿದ ಸಚಿನ್ ತೆಂಡುಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.
ಸುನಿಲ್ ಗವಾಸ್ಕರ್ ಪಾಕಿಸ್ತಾನ ವಿರುದ್ಧ ಮತ್ತೊಂದು ಟೆಸ್ಟ್ ಪಂದ್ಯವನ್ನಾಡಿ 1987ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು. ಭಾರತ ಪರ ಒಟ್ಟು 125 ಟೆಸ್ಟ್ ಪಂದ್ಯಗಳನ್ನಾಡಿ 51.12 ರ ಸರಾಸರಿಯಂತೆ 10122 ರನ್ ಬಾರಿಸಿದ್ದರು. 34 ಶತಕಗಳು ಕೂಡಾ ಆ ಸಮಯದಲ್ಲಿ ವಿಶ್ವದಾಖಲೆಯಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.