ಕುಮಟಾದಿಂದ ಟೀಂ ಇಂಡಿಯಾವರೆಗೆ: ವಿಶ್ವದಲ್ಲೇ ನಂ.1 ಥ್ರೋಡೌನ್ ತಜ್ಞನ ರೋಚಕ ಸ್ಟೋರಿಯಿದು..!

By Suvarna News  |  First Published Jul 17, 2020, 10:20 AM IST

ಬಡತನ ಸೇರಿದಂತೆ ಹಲವಾರು ಅಡ್ಡಿ ಆತಂಕಗಳಿದ್ದರೂ ಕಠಿಣ ಪರಿಶ್ರಮದ ಮೂಲಕ ಭಾರತ ಕ್ರಿಕೆಟ್ ತಂಡದಲ್ಲಿ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಬೆಳೆದು ನಿಂತ ಕುಮಟಾದ ಹುಡುಗ ರಘು ಬೆಳೆದು ಬಂದ ಹಾದಿ ಹೇಗಿತ್ತು? ಯಾರೆಲ್ಲಾ ನೆರವಿನ ಹಸ್ತ ಚಾಚಿದೆ ಎಂಬುದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಈ ಕುರಿತಾದ ವಿಶೇಷ ವರದಿ ಇಲ್ಲಿದೆ ನೋಡಿ.


- ಅಪ್ರಮೇಯ .ಸಿ

ಬೆಂಗಳೂರು: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಥ್ರೋಡೌನ್ ತಜ್ಞ ರಾಘವೇಂದ್ರ ದಿವಗಿ (ರಘು) ಅವರ ಟೀಮ್ ಇಂಡಿಯಾ ಪ್ರಯಾಣ ಅತ್ಯಂತ ಸ್ಫೂರ್ತಿದಾಯಕ ಮತ್ತು ಅದ್ಭುತ. ರಘು ತಮ್ಮ ಜೀವನದಲ್ಲಿ ಎದುರಿಸಿಕೊಂಡು ಬಂದ ನೂರಾರು ಸಮಸ್ಯೆಗಳು, ಅವುಗಳನ್ನು ಮೆಟ್ಟಿ ನಿಂತ ರೀತಿ ಮತ್ತು ಶಿಸ್ತು, ಸಮರ್ಪಣೆ, ಸಂಯಮ,  ಕಠಿಣ ಪರಿಶ್ರಮದ ಮೂಲಕ ಭಾರತ ಕ್ರಿಕೆಟ್ ತಂಡದಲ್ಲಿ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಹೇಗೆ ಸ್ಥಾನ ಪಡೆದರು ಎಂಬುದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂ ಎಳೆಎಳೆಯಾಗಿ ಬಿಚ್ಚಿಟ್ಟಿದೆ.

Tap to resize

Latest Videos

undefined

ಜೀವನ ಈ ಹುಡುಗನ ಮೇಲೆ ಅನೇಕ ಬೌನ್ಸರ್'ಗಳನ್ನು ಎಸೆದಿದೆ. ಆ ಎಲ್ಲಾ ಬೌನ್ಸರ್'ಗಳನ್ನು ಎದುರಿಸಿ ತಾನು ಕಟ್ಟಿದ್ದ ಕನಸಿನ ಗೋಪುರವನ್ನು ಏರಿದ ಛಲದಂಕಮಲ್ಲ ಈ ರಘು. ಅವರ ಕ್ರಿಕೆಟ್ ಪ್ರಯಾಣ ಅಡೆತಡೆಗಳಿಂದಲೇ ತುಂಬಿತ್ತು. ಆದರೆ ದೃಢ ನಿಶ್ಚಯ, ನೋವನ್ನು ಯಾರಲ್ಲೂ ಹಂಚಿಕೊಳ್ಳದೆ ತಾವೊಬ್ಬರೇ ಎದುರಿಸಿ ನಿಲ್ಲುವ ಮನೋಭಾವ ಮತ್ತು ಗೆಲ್ಲುವ ಕಲೆಯಿಂದ ಎಲ್ಲಾ ಅಡೆತಡೆಗಳನ್ನು ತೆರವುಗೊಳಿಸಿದ ರೀತಿ ಎಂಥವರಿಗಾದರೂ ಅದ್ಭುತ ಅನ್ನಿಸದೆ ಇರದು. ಅವರ ಈ ಪ್ರಯಾಸಕರ ದಾರಿಯಲ್ಲಿ ಅನೇಕ ನಿಸ್ವಾರ್ಥ ಜನರು ಕಾಣಿಸಿಕೊಂಡಿದ್ದಾರೆ ಮತ್ತು ಅವರೆಲ್ಲಾ ರಘು ಈ ಹಂತಕ್ಕೆ ತಲುಪಲು ನೆರವಾಗಿದ್ದಾರೆ, ಮಾರ್ಗದರ್ಶನ ನೀಡಿದ್ದಾರೆ. ರಘು ಈಗ ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್. ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು, ವೀಕ್ಷಕ ವಿವರಣೆಗಾರರು ಹೇಳುವ ಪ್ರಕಾರ ರಘು ವಿಶ್ವದಲ್ಲೇ ನಂ.1 ಥ್ರೋಡೌನ್ ತಜ್ಞ. ರಘು ಇಲ್ಲದೆ ಭಾರತ ತಂಡವಿಲ್ಲ ಎನ್ನುವಷ್ಟರ ಮಟ್ಟಿಗೆ ತಮ್ಮ ಛಾಪು ಮೂಡಿಸಿದ್ದಾರೆ. ಅವರ ನೈಜ ಕಥೆ ಮತ್ತು ಕಷ್ಟಪಟ್ಟು ಸಂಪಾದಿಸಿದ ಯಶಸ್ಸು ಸಿನಿಮಾವೊಂದಕ್ಕೆ ಸ್ಫೂರ್ತಿಯಾಗಬಲ್ಲುದು.

ರಘು ಭಾರತೀಯ ಕ್ರಿಕೆಟ್ ತಂಡದ ‘ತರಬೇತಿ ಸಹಾಯಕ’ ಮತ್ತು ಥ್ರೋಡೌನ್ ತಜ್ಞ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಟೀಮ್ ಇಂಡಿಯಾದ ಪ್ರತಿಯೊಬ್ಬರೂ ರಘು ಅವರ ಬಗ್ಗೆ ತುಂಬು ಹೃದಯದಿಂದ ಮಾತನಾಡುತ್ತಾರೆ, ಹೆಮ್ಮೆ ಪಡುತ್ತಾರೆ. ಅವರು ‘ಮೆನ್ ಇನ್ ಬ್ಲೂ’ ಸಹಾಯಕ ಸಿಬ್ಬಂದಿಯ ಪ್ರಮುಖ ಸದಸ್ಯನಷ್ಟೇ ಅಲ್ಲ, ಭಾರತ ತಂಡದ ಅವಿಭಾಜ್ಯ ಅಂಗವೂ ಹೌದು. ಇದು ದಿನ ಬೆಳಗಾಗುವಷ್ಟರಲ್ಲಿ ಸಿಕ್ಕ ಯಶಸ್ಸಲ್ಲ, ಇದಕ್ಕಾಗಿ ರಘು ಬರೀ ಬೆವರನ್ನಲ್ಲ, ರಕ್ತವನ್ನೇ ಬಸಿದಿದ್ದಾರೆ, ಹಸಿದ ಹೊಟ್ಟೆಯಲ್ಲಿ ದಿನಗಟ್ಟಲೆ ಮಲಗಿದ್ದಾರೆ, ಜೀವನವೇ ಸಾಕು ಎನ್ನುವಂತಹ ಕಷ್ಟಗಳನ್ನು ಎದುರಿಸಿದ್ದಾರೆ.

ನಿಮಗೆ ಜೀವನದಲ್ಲಿ ಸ್ಫೂರ್ತಿ ಬೇಕಾದರೆ, 35 ವರ್ಷದ ರಘು ಅವರ ಜೀವನಕ್ಕಿಂತ ಬೇರೆ ಉದಾಹರಣೆಯ ಅಗತ್ಯವಿಲ್ಲ. ಕುಮಟಾ ತಾಲ್ಲೂಕಿನ ವಿವೇಕ್ ನಗರ ಮೂಲದ ಈ ಯುವಕ ತನ್ನ ಧ್ಯೇಯವನ್ನು ಸಾಧಿಸುವವರೆಗೆ ಅಸಂಖ್ಯಾತ ಸಮಸ್ಯೆಗಳನ್ನು ಎದುರಿಸಿದ್ಧಾರೆ. ತಿನ್ನಲು ಅನ್ನವಿಲ್ಲದೆ ಖಾಲಿ ಹೊಟ್ಟೆಯಲ್ಲಿದ್ದ ದಿನಗಳನ್ನೂ ಕಂಡಿದ್ದಾರೆ, ಸ್ಮಶಾನದಲ್ಲಿ ಮಲಗಿದ್ದಾರೆ. ಕುಮಟಾದಿಂದ ಮುಂಬಯಿ-ಕಾರವಾರ-ಹುಬ್ಬಳ್ಳಿ-ಬೆಂಗಳೂರು. ಬೆಂಗಳೂರಿನಿಂದ ಟೀಮ್ ಇಂಡಿಯಾಗೆ ರಘು ತಲುಪಿದ್ದೇ ಒಂದು ರೋಚಕ ಕಥೆ.

ಆರಂಭಿಕ ದಿನಗಳು...

ಲಕ್ಷಾಂತರ ಭಾರತೀಯ ಯುವಕರಂತೆ ರಘು ಕೂಡ ಉನ್ನತ ಮಟ್ಟದಲ್ಲಿ ಕ್ರಿಕೆಟ್ ಆಡುವ ಕನಸು ಕಂಡಿದ್ದರು. ಆದರೆ, ರಘು ಕ್ರಿಕೆಟ್ ಆಡುವುದು ಪೋಷಕರಿಗೆ ಇಷ್ಟವಿರಲಿಲ್ಲ. ಮೋಹನ್ (ಕುಮಟಾದ ದಿವಗಿ ಗ್ರಾಮ) ಮತ್ತು ಚಂದ್ರಕಲಾ ಅವರು ತಮ್ಮ ಮಗ ಉತ್ತಮ ಶಿಕ್ಷಣ ಪಡೆದು, ಒಳ್ಳೆಯ ಉದ್ಯೋಗ ಪಡೆಯಬೇಕೆಂದು ಆಸೆ ಪಟ್ಟಿದ್ದರು. ಮೋಹನ್ ಅವರು ಒಬ್ಬ ಶಿಕ್ಷಕ, ಅವರ ಮೂರು ಮಕ್ಕಳಲ್ಲಿ ರಘು ಎರಡನೆಯ ಮಗ. ರಘು ವೈದ್ಯ ಅಥವಾ ಇಂಜಿನಿಯರ್ ಆಗಬೇಕೆಂದು ಮೋಹನ್ ಬಯಸಿದ್ದರು.

ರಘು ಸರ್ಕಾರಿ ಹಿರಿಯ ಪ್ರಾಥಮಿಕ ಶಾರದಾ ನಿಲಯ ಶಾಲೆ ವಿವೇಕನಗರ ಮತ್ತು ಕುಮಟಾದ ಗಿಬ್ ಪ್ರೌಢ ಶಾಲೆಯಲ್ಲಿ ಅಧ್ಯಯನ ಮಾಡಿದರು. ಹದಿಹರೆಯದವನಾಗಿದ್ದಾಗ, ಶಾಲಾ ರಜಾದಿನಗಳಲ್ಲಿ, ರಘುವಿನ ಪೋಷಕರು ಮಗನನ್ನು ಮುಂಬೈನ ಸಂಬಂಧಿಕರ ಮನೆಗೆ ಕಳುಹಿಸುತ್ತಿದ್ದರು. ಭರವಸೆಯ ಆಫ್‌ಸ್ಪಿನ್ನರ್ ಆಗಿದ್ದ ರಘು ಸಚಿನ್ ತೆಂಡುಲ್ಕರ್ ಅವರ ಗುರು ರಮಾಕಾಂತ್ ಅಚ್ರೇಕರ್ ಅವರ ಬೇಸಿಗೆ ತರಬೇತಿ ಶಿಬಿರಗಳಲ್ಲಿ ಎರಡು ವರ್ಷಗಳ (1996 ಮತ್ತು 1997) ಕಾಲ ಪಾಲ್ಗೊಂಡಿದ್ದರು. ಇದು ಅವರ ಜೀವನದ ಮೊದಲ ತಿರುವು.

ಕುಮಟಾದಿಂದ ಕಾರವಾರಕ್ಕೆ

ಮುಂದೆ, ರಘು ಅವರ ಕ್ರಿಕೆಟ್ ಕನಸು ಅವರನ್ನು ಕುಮಟಾದಿಂದ 70 ಕಿಲೋಮೀಟರ್ ದೂರದಲ್ಲಿರುವ ಕಾರವಾರಕ್ಕೆ ಕರೆದೊಯ್ಯಿತು. ಕಾರವಾರದಲ್ಲಿ ಕರ್ನಾಟಕ  ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ (ಡಿ ವೈ ಎಸ್ ಎಸ್) ತರಬೇತುದಾರ ಪಿ.ವಿ.ನಾಗರಾಜ್ ರಘುವಿಗೆ ಮಾರ್ಗದರ್ಶನ ನೀಡಿದರು. ಕ್ರಿಕೆಟ್ ತಂಡದ ಆಯ್ಕೆಗಾಗಿ ಕರ್ನಾಟಕ ಸರ್ಕಾರ ನೀಡಿದ್ದ ಪತ್ರಿಕಾ ಜಾಹೀರಾತು ರಘು ಅವರನ್ನು ಕಾರವಾರಕ್ಕೆ ಕರೆ ತಂದಿತು. ಆರಂಭದಲ್ಲಿ, ಮಾಲಾದೇವಿ ಮೈದಾನದಲ್ಲಿ ನಾಗರಾಜ್ ಅವರು ರಘು ಅವರಿಗೆ ತರಬೇತಿ ನೀಡಲು ನಿರಾಕರಿಸಿದರು. 

“ರಘು ಕಾರವಾರದಲ್ಲಿ ನಮ್ಮ ಕ್ರಿಕೆಟ್ ತಂಡದ ಆಯ್ಕೆಗಾಗಿ (1998) ಬಂದಾಗ ಮೊದಲಿಗೆ ನಾನು ಆತನ ಬಗ್ಗೆ ಪ್ರಭಾವಿತನಾಗಿರಲಿಲ್ಲ. ಹೀಗಾಗಿ ಅವನ ಕುರಿತಾಗಿ ಹೆಚ್ಚು ಗಮನ ಹರಿಸಲಿಲ್ಲ. ಆದರೆ ಈ ಹುಡುಗನಲ್ಲಿ ತುಂಬಾ ಆತ್ಮ ವಿಶ್ವಾಸ ಇತ್ತು. ಆತನಲ್ಲಿದ್ದ ಕ್ರಿಕೆಟ್ ಆಸಕ್ತಿಯನ್ನೂ ಗಮನಿಸಿದೆ. ಅಲ್ಲಿಂದ ಪ್ರತಿದಿನ, ರಘು ಕುಮಟಾದಿಂದ ಕಾರವಾರಕ್ಕೆ ಬಸ್ಸಿನಲ್ಲಿ ಕೋಚಿಂಗ್ ತರಗತಿಗಾಗಿ ಪ್ರಯಾಣಿಸುತ್ತಿದ್ದ,” ಹೀಗೆ ನಾಗರಾಜ್  ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌.ಕಾಂ ಜೊತೆ ಮಾತನಾಡುವಾಗ ನೆನಪಿಸಿಕೊಂಡರು. 

ರಘು ಕುಮಟಾದಿಂದ ಮುಂಜಾನೆ 4:00ಕ್ಕೆ ಮೈಸೂರು-ಪಣಜಿ (ಗೋವಾ) ಬಸ್ ಹಿಡಿಯುತ್ತಿದ್ದರು ಮತ್ತು ಕ್ರಿಕೆಟ್ ಕೋಚಿಂಗಿಗಾಗಿ ಬೆಳಿಗ್ಗೆ 6:00ರ ಹೊತ್ತಿಗೆ ಕಾರವಾರ ತಲುಪುತ್ತಿದ್ದರು. ಇದಕ್ಕಾಗಿ ರಘು ಅವರು ಪ್ರತಿದಿನ ಮುಂಜಾನೆ 3:00ಕ್ಕೆ ಎದ್ದು ಬಸ್ ಹಿಡಿಯಲು ಸಿದ್ಧರಾಗಬೇಕಿತ್ತು. ನಾಗರಾಜ್ ಅವರ ಪ್ರಕಾರ, ರಘುಗೆ ಉತ್ತಮ ಹಾಸ್ಯ ಪ್ರಜ್ಞೆ ಇತ್ತು ಮತ್ತು ಎಲ್ಲರೊಂದಿಗೆ ಸ್ನೇಹದಿಂದ ಇರುತ್ತಿದ್ದರು. ರಘು ಕಾರವಾರನಲ್ಲಿ ತರಬೇತಿ ಮುಂದುವರಿಸುತ್ತಿದ್ದಾಗ, ಒಂದು ದಿನ ಅವನ ಹೆತ್ತವರು ನಾಗರಾಜ್ ಅವರ ಮನೆಗೆ ಬಂದರು.

“ತಮ್ಮ ಮಗ ಶಿಕ್ಷಣದತ್ತ ಗಮನ ಹರಿಸುತ್ತಿಲ್ಲವೆಂದು ರಘು ಅವರ ಪೋಷಕರು ಕಣ್ಣೀರು ಹಾಕಿದರು. ‘ನಾವು ಬಡ ಕುಟುಂಬದಿಂದ ಬಂದವರು. ನಮ್ಮ ಮಗ ಅಧ್ಯಯನ ಮಾಡಬೇಕೆಂದು ನಾವು ಬಯಸುತ್ತೇವೆ. ರಘುಗೆ ಕ್ರಿಕೆಟ್ ಸಹಾಯ ಮಾಡುವುದಿಲ್ಲ. ದಯವಿಟ್ಟು ಅವನಿಗೆ ಆಟ ಆಡದಂತೆ ಸಲಹೆ ನೀಡಿ ’ ಎಂದು ರಘುವಿನ ತಂದೆ ಹೇಳಿದರು. ಆದರೆ ನಾನು ರಘು ಅವರನ್ನು ಪ್ರೋತ್ಸಾಹಿಸುವಂತೆ ಅವರ ಹೆತ್ತವರಲ್ಲಿ ವಿನಂತಿಸಿದೆ, ಚಿಂತಿಸಬೇಡಿ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟೆ” ಎಂದು ನಾಗರಾಜ್ ಹೇಳಿದರು.

2000ನೇ ಇಸವಿಯಲ್ಲಿ ಕ್ರಿಕೆಟ್ ಕೋಚ್ ನಾಗರಾಜ್ ಅವರನ್ನು ದಾವಣಗೆರೆಗೆ ವರ್ಗಾಯಿಸಲಾಯಿತು. “ನಾನು ದಾವಣಗೆರೆಗೆ ಹೋಗುವುದು ರಘು ಅವರಿಗೆ ತುಂಬಾ ದುಃಖವನ್ನು ಉಂಟು ಮಾಡಿತ್ತು. ಆಗ ನಾನು ಹುಬ್ಬಳ್ಳಿಗೆ ಹೋಗುವಂತೆ ರಘುಗೆ ಹೇಳಿದೆ. ಹುಬ್ಬಳ್ಳಿಗೆ ಹೋಗುವುದು ಅವರಿಗೆ ಇಷ್ಟವಿರಲಿಲ್ಲ. ಆಗ ನಾನು ಬಾಬಾ ಭೂಸದ್(ಕೆ ಎಸ್ ಸಿ ಎ ಸಂಚಾಲಕ) ಮತ್ತು ಕೋಚ್ ಶಿವಾನಂದ ಗುಂಜಾಲ್ ಅವರಿಗೆ ದೂರವಾಣಿ ಕರೆ ಮಾಡಿ ರಘು ಬಗ್ಗೆ ಹೇಳಿದೆ. ನಂತರವಷ್ಟೇ ರಘು ಹುಬ್ಬಳ್ಳಿಗೆ ತೆರಳಿದ” ಎಂದು ನಾಗರಾಜ್ ಹೇಳಿದರು.

ಸೋದರ ಸಂಬಂಧಿ ಶ್ರೀಕಾಂತ್ ದಿವಗಿ, ರಘು ಅವರನ್ನು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಕೆ ಎಸ್ ಸಿ ಎ ಧಾರವಾಡ ವಲಯ ಕ್ರಿಕೆಟ್ ತಂಡದ ಆಯ್ಕೆಗೆ ಕರೆದೊಯ್ದರು.

ದಾವಣಗೆರೆಗೆ ಹೋದ ನಂತರ ನಾಗರಾಜ್ ಅವರು ರಘುವಿನೊಂದಿಗೆ ಸಂಪರ್ಕದಲ್ಲಿರಲಿಲ್ಲ. ಐದು ವರ್ಷಗಳ ನಂತರ, ನಾಗರಾಜ್ ಬೆಂಗಳೂರಿನಲ್ಲಿ ನಡೆದ ಪಂದ್ಯಾವಳಿಗಾಗಿ ತುಮಕೂರು ವಲಯ ತಂಡವನ್ನು ಕರೆದೊಯ್ದಿದ್ದರು. ಅಲ್ಲಿ ನಾಗರಾಜ್ ಭಾರತ-ದಕ್ಷಿಣ ಆಫ್ರಿಕಾ ಏಕದಿನ ಪಂದ್ಯದ ವೇಳೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (2005ರಲ್ಲಿ) ರಘು ಅವರನ್ನು ಮತ್ತೆ ಭೇಟಿಯಾದರು. ಆಗ ರಘು ಭಾರತ ತಂಡದ ಅಭ್ಯಾಸಕ್ಕೆ ನೆರವಾಗುತ್ತಿದ್ದರು. ಇದು ಗುರು ನಾಗರಾಜ್ ಅವರಿಗೆ ಹೆಮ್ಮೆಯ ಕ್ಷಣವಾಗಿತ್ತು.

ಹುಬ್ಬಳ್ಳಿಯ ಸ್ಮಶಾನದಲ್ಲಿ ಉಳಿದುಕೊಂಡ ಸಮಯ

10ನೇ ತರಗತಿ ಪರೀಕ್ಷೆ ಮುಗಿಸಿದ ನಂತರ ರಘು ಕುಮಟಾದಿಂದ ಸುಮಾರು 175 ಕಿ.ಮೀ ದೂರದಲ್ಲಿರುವ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ರಘು ಅವರು ತಾವು ಕಾಲೇಜಿಗೆ ಸೇರುವುದಾಗಿ ಮತ್ತು ಹುಬ್ಬಳ್ಳಿಯಲ್ಲಿ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸುವುದಾಗಿ ತಮ್ಮ ಪೋಷಕರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು. 

1999-2000ರಲ್ಲಿ ರಘು ಹುಬ್ಬಳ್ಳಿಗೆ ಬಂದಾಗ ಅವರ ಬಳಿ ಇದ್ದದ್ದು ಕೇವಲ 21 ರುಪಾಯಿ. ಹುಬ್ಬಳ್ಳಿಯಲ್ಲಿ ವಾಸಿಸಲು ಸ್ಥಳ ಕೂಡ ಇರಲಿಲ್ಲ. ಸುಮಾರು ಒಂದು ವಾರ ರಘು ಹುಬ್ಬಳ್ಳಿ ನಗರದ ಹಳೇ ಬಸ್ ನಿಲ್ದಾಣದಲ್ಲಿ ಮಲಗಿದರು. ಆದರೆ ಪೊಲೀಸರು ಅಲ್ಲಿಂದ ಓಡಿಸಿದರು. ಮುಂದೆ ಅವರು ಎರಡು ವಾರಗಳ ಕಾಲ ಹನುಮಾನ್ ದೇವಸ್ಥಾನದಲ್ಲಿ ಮಲಗಿದರು. ಆದರೆ ಜನರು ದೂರು ನೀಡಿದ್ದರಿಂದ ಅವರನ್ನು ಅಲ್ಲಿಂದಲೂ ಹೊರಹಾಕಲಾಯಿತು. 

ನಂತರ ಅವರು ಬಿವಿಬಿ ಇಂಜಿನಿಯರಿಂಗ್ ಕಾಲೇಜು ಬಳಿ ಇರುವ ಸ್ಮಶಾನವೊಂದರಲ್ಲಿ ಆಶ್ರಯ ಪಡೆದರು. ಸುಮಾರು ಮೂರು ವರ್ಷಗಳ ಕಾಲ ಸ್ಮಶಾನವೇ ರಘು ಅವರಿಗೆ ಮನೆಯಾಯಿತು. ಆಗ ಆ ಸ್ಮಶಾನದಲ್ಲಿ ಒಂದು ಹಾವು ಕೂಡ ರಘುನೊಂದಿಗೆ ಇತ್ತು. ಕ್ರಿಕೆಟ್ ಮ್ಯಾಟೇ ಹಾಸಿಗೆ, ಅದೇ ಹೊದಿಕೆ. ಸ್ಮಶಾನದಲ್ಲಿದ್ದಾಗ ರಘು ಅವರಿಗೆ ಸ್ನೇಹಿತರಾದ ಮೊಯಿನುದ್ದೀನ್, ಸುಕೇಶ್ ನಾಯಕ್ ಮತ್ತು ಅತುಲ್ ವಿಷ್ಣು ಕಾಮತ್ ಅವರಿಂದ ಬೇರೆ ಬೇರೆ ಸಂದರ್ಭಗಳಲ್ಲಿ ನೆರವು ಸಿಕ್ಕಿತು.

ಧಾರವಾಡ ವಲಯ ತಂಡಕ್ಕೆ ಕ್ರಿಕೆಟ್ ಅಭ್ಯಾಸದಲ್ಲಿ ಭಾಗವಹಿಸುತ್ತಿದ್ದರು ರಘು. ರಾತ್ರಿಯಾದ್ರೆ ಸ್ಮಶಾನ ವಾಸ. ರಾತ್ರಿ ತಪಾಸಣೆಯ ಸಮಯದಲ್ಲಿ ರಘು ಸ್ಮಶಾನದಲ್ಲಿ ವಾಸ ಮಾಡುತ್ತಿರುವುದನ್ನು ವಿ.ಬಿ. ಹಿರೇಮಠ್ (ಭೂಮರೆಡ್ಡಿ ಇಂಜಿನಿಯರಿಂಗ್ ಕಾಲೇಜಿನ ಅಡ್ಮಿನ್ ಮ್ಯಾನೇಜರ್ ಆಗಿದ್ದರು) ನೋಡಿದರು. ಸ್ಮಶಾನದಲ್ಲಿ ಹುಡುಗ ಮಲಗಿದ್ದನ್ನು ನೋಡಿದ ಹಿರೇಮಠ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ರಘು ಅವರ ಬಗ್ಗೆ ಕೆಎಲ್ಇ ಸೊಸೈಟಿಯ ಚೇರ್ಮನ್ ಪ್ರಭಾಕರ ಕೋರೆಯವರ ಗಮನಕ್ಕೆ ತಂದರು. ನಂತರ ರಘು ಅವರಿಗೆ ಕೆಎಲ್ಇ ಸೊಸೈಟಿಯ ಕಾಲೇಜು ಹಾಸ್ಟಲ್'ನಲ್ಲಿ ವಾಸ್ತವ್ಯದ ಅವಕಾಶ ಕಲ್ಪಿಸಲಾಯಿತು.

“ಸಂಪೂರ್ಣ ಆತ್ಮವಿಶ್ವಾಸವೇ ರಘು ಈ ಮಟ್ಟಕ್ಕೆ ತಲುಪಲು ಕಾರಣ. ಅವರು ಕ್ರಿಕೆಟ್  ಬಗ್ಗೆ ತುಂಬಾ ಆಸಕ್ತಿ ಮತ್ತು ದೃಢ ನಿರ್ಧಾರ ಹೊಂದಿದ್ದರು. ರಘು ಚಿಕ್ಕ ಹುಡುಗನಾಗಿ ಹುಬ್ಬಳ್ಳಿಗೆ ಬಂದರು. ಉಚಿತ ಶಿಕ್ಷಣ ಸೇರಿದಂತೆ ನಾವು ಸಾಧ್ಯವಾದಷ್ಟು ಪ್ರೋತ್ಸಾಹ ನೀಡಿದ್ದೇವೆ. ಅವರ ಮನಸ್ಸು ಯಾವಾಗಲೂ ಕ್ರಿಕೆಟ್ನಲ್ಲಿತ್ತು. ಅವರ ಈ ಸಾಧನೆಯಿಂದ ನನಗೆ ಸಂತೋಷವಾಗಿದೆ. ಅವರು ಅನೇಕ ಜನರ ಮಾತುಗಳನ್ನು ಸುಳ್ಳಾಗಿಸಿದರು. ಎಲ್ಲಕ್ಕಿಂತ ಹೆಚ್ಚಾಗಿ ಅವರು ಎಲ್ಲರಿಗೂ ಒಂದು ಮಾದರಿಯಂತಾಗಿದ್ದಾರೆ. ಅವರನ್ನು ಹೊಗಳಲು ಪದಗಳು ಸಾಲುವುದಿಲ್ಲ, ಅವರು ಭಾರತ ತಂಡದಲ್ಲಿ ಇರಬೇಕೆಂದು ಮೊದಲೇ ನಿರ್ಣಯವಾಗಿತ್ತು ಎಂದು ಕಾಣಿಸುತ್ತದೆ.” ಎಂದು ಬಿಡಿಕೆ ಸ್ಪೋರ್ಟ್ಸ್ ಫೌಂಡೇಶನ್ನ ಟ್ರಸ್ಟಿ ಬಾಬಾ ಭೂಸಾದ್ ತಿಳಿಸಿದರು.

“ರಘು ಅವರು ಹುಬ್ಬಳ್ಳಿಗೆ ಬಂದಾಗ, ಅವರು ಎಲ್ಲದರಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ರಘು ಒಬ್ಬ ಸಮರ್ಪಿತ ವ್ಯಕ್ತಿ. ಪ್ರತಿದಿನ, ಅವರು ಬೆಳಿಗ್ಗೆ 5 ಗಂಟೆಗೆ ಎದ್ದು, ಮೈದಾನದಲ್ಲಿ 20 ರಿಂದ 25 ಸುತ್ತು  ಓಡುತ್ತಿದ್ದರು." ಎಂದು ಕೋಚ್ ಶಿವಾನಂದ್ ಗುಂಜಲ್ ಹೇಳಿದರು. 

“ರಘು ಅವರು ಪಿಯುಸಿಗೆ ಕೆಎಲ್ಇ ಸೊಸೈಟಿಯ ಶ್ರೀ ಕಾಡಸಿದ್ದೇಶ್ವರ ಕಲಾ ಕಾಲೇಜಿನಲ್ಲಿ (ಎಸ್ಕೆ ಆರ್ಟ್ಸ್ ಕಾಲೇಜು) ಪ್ರವೇಶ ಪಡೆಯಲು ಸಹಾಯ ಮಾಡಿದೆವು. ಪ್ರಭಾಕರ್ ಕೋರೆ ಸರ್ ಅವರು ಉಳಿಯಲು ಉಚಿತ ಹಾಸ್ಟೆಲ್ ಕೊಠಡಿ (ಜಗದ್ಗುರು ಗಂಗಾಧರ್ ಕಾಲೇಜ್ ಆಫ್ ಕಾಮರ್ಸ್ನಲ್ಲಿ) ನೀಡಿದರು,” ಎಂದು ಕರ್ನಾಟಕ ರಾಜ್ಯ ವಿಕಲಚೇತನ ಕ್ರಿಕೆಟ್ ಸಂಘದ ಅಧ್ಯಕ್ಷರಾಗಿರುವ ಶಿವಾನಂದ್ ಅವರು ಹೇಳಿದರು.

“ರಘು ಅವರ ಯಶಸ್ಸಿನಲ್ಲಿ ನನ್ನ ಪಾತ್ರ ಏನೂ ಇಲ್ಲ. ನಾನು ಅವನಿಗೆ ಹುಬ್ಬಳ್ಳಿಯಲ್ಲಿ ತರಬೇತಿ ನೀಡಿದ್ದೇನೆ ಎಂಬುದು ನಿಜ. ಆದರೆ ಅವನು ಸಾಧಿಸಿದ್ದು ಅವನ ಕಠಿಣ ಪರಿಶ್ರಮದಿಂದ” ಎನ್ನುತ್ತಾರೆ ತರಬೇತುದಾರ ಅಬ್ದುಲ್ ಅಜೀಜ್ ಸಯೀದ್.

ಇನ್ನೊಬ್ಬ ತರಬೇತುದಾರ ಪ್ರಮೋದ್ ಕಾಮತ್  ರಘುವಿನ ಬಗ್ಗೆ ಹೆಮ್ಮೆ ಪಡುತ್ತಾರೆ ಮತ್ತು ಅವರ ಪ್ರಯತ್ನಕ್ಕೆ ಮನ್ನಣೆ ನೀಡುತ್ತಾರೆ. “ರಘುವಿನ ಬಗ್ಗೆ ಹೆಮ್ಮೆಯಿದೆ. ನಾವು ಅವರಿಗೆ ಏಣಿಯನ್ನು ಕೊಟ್ಟಿರಬಹುದು. ಆದರೆ ರಘು ತಮ್ಮಷ್ಟಕ್ಕೆ ತಾವೇ ಮೇಲಕ್ಕೆ ಏರಿದರು. ನಮ್ಮ ಕೊಡುಗೆ ಕೇವಲ 20% ರಷ್ಟು, ಉಳಿದ 80% ರಷ್ಟು ರಘು ಅವರದ್ದೇ ಪರಿಶ್ರಮ. ಅವನು ಎಂದಿಗೂ ತನ್ನ ಗುರಿಯನ್ನು ಬಿಟ್ಟು ಬೇರೆ ಕಡೆಗೆ ಗಮನ ಹರಿಸಲಿಲ್ಲ. 15 ವರ್ಷಗಳ ಹಿಂದೆ ನಾನು ನೋಡಿದ ರಘುವಿಗು, ಈಗಿನ ರಘುವಿಗು ಏನು ವ್ಯತ್ಯಾಸವಿಲ್ಲ. ಅವರು ಮೊದಲು ಹೇಗಿದ್ದರೊ ಈಗಲೂ ಹಾಗೇ ಸ್ನೇಹದಿಂದ ಇದ್ದಾರೆ. ತುಂಬಾ ಸಿಂಪಲ್ ಮನುಷ್ಯ" ಎಂದು ರಘುವಿನ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ ಪ್ರಮೋದ್ ಕಾಮತ್.

ರಾಘವೇಂದ್ರ ಹುಬ್ಬಳ್ಳಿಯಲ್ಲಿದ್ದಾಗ ಬಿಡಿಕೆ ಸ್ಪೋರ್ಟ್ಸ್ ಫೌಂಡೇಶನ್ ಜೊತೆಗೆ ಹಲವಾರು ಸ್ಥಳೀಯ ಕ್ರಿಕೆಟ್ ಕ್ಲಬ್"ಗಳು ಪ್ರೋತ್ಸಾಹ ನೀಡಿವೆ. ರಘು ಸ್ಮಶಾನದಲ್ಲಿ ವಾಸಿಸುತ್ತಿದ್ದ ಕಾರಣ ಕಾಲೇಜಿಗೆ ಸೇರಬೇಕಾದಾಗ ವಸತಿ ವಿಳಾಸದ ಅಗತ್ಯವಿತ್ತು. ಆ ಇನ್ನೊಬ್ಬ ತರಬೇತುದಾರ ರಮೇಶ್ ಮೊರಾಬ್ ಅವರು ತಮ್ಮ ಮನೆಯ ವಿಳಾಸ ಕೊಡುವುದರ ಮೂಲಕ ಸಹಾಯ ಮಾಡಿದರು ಮತ್ತು ರಘು ಅವರು ಹಾಸ್ಟೆಲ್ಗೆ ತೆರಳುವ ಮೊದಲು ಕೆಲವು ದಿನಗಳ ಕಾಲ ಸ್ನೇಹಿತರ ಸ್ಥಳದಲ್ಲಿ ಉಳಿಯಲು ವ್ಯವಸ್ಥೆ ಮಾಡಿದರು.

“ರಘು ಸಾದ ಸೀದ ಹಳ್ಳಿ ಹುಡುಗ ಮತ್ತು ಕ್ರಿಕೆಟ್ ಆಟದ ಬಗ್ಗೆ ಅವರು ಅದ್ಭುತವಾದ ಜ್ಞಾನ ಹೊಂದ್ದಿದ್ದರು. ಅವರು ಹುಬ್ಬಳ್ಳಿಯಲ್ಲಿ 13 ವರ್ಷದೊಳಗಿನ ಹುಡುಗರಿಗೆ ತರಬೇತಿ ನೀಡಿದರು.  ಇಷ್ಟು ಕಷ್ಟಗಳಿದ್ದರೂ ರಘು ಯಾರಿಗೂ ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲಿಲ್ಲ. ಯಾರೊಬ್ಬರ  ಮೇಲೆ ದೂರು  ಕೊಡುವುದಾಗಲೀ  ಮಾಡಲಿಲ್ಲ. ಅವರು ಯಾವಾಗಲೂ ಆಟವನ್ನು ಗೌರವಿಸುತ್ತಿದ್ದರು. ನಮಗೆ ಸಾಧ್ಯವಾದಷ್ಟು ಅವನಿಗೆ ಸಹಾಯ ಮಾಡಿದ್ದೇವೆ. ನಾವೆಲ್ಲರೂ ಅವರ ಈ ಯಶಸ್ಸಿನಿಂದ ತುಂಬಾ ಸಂತೋಷವಾಗಿದ್ದೇವೆ ”ಎಂದು ರಮೇಶ್ ಹೇಳಿದರು. 

ಕಾಲೇಜು ಹಾಸ್ಟೆಲಿನಲ್ಲಿ ಮೆಟ್ಟಿಲ ಮೇಲಿಂದ ಬಿದ್ದಾಗ ರಘು ಅವರ ಜೀವನವು ಇನ್ನೊಂದು ತಿರುವು ಪಡೆದುಕೊಂಡಿತು. ಅವರ ಬಲಗೈಗೆ ತುಂಬಾ ಪೆಟ್ಟಾಗಿ ಇದು ಅವರ ಕ್ರಿಕೆಟ್ ವೃತ್ತಿಜೀವನವನ್ನು ಬಹುತೇಕ ಕೊನೆಗೊಳಿಸಿತ್ತು. 

“ರಘು ಮೆಟ್ಟಿಲ ಮೇಲಿಂದ ಬಿದ್ದು ಅವರ ಬಲಗೈಗೆ ತುಂಬಾ ಪೆಟ್ಟಾಗಿದ್ದರಿಂದ ಅವರು ಆಡಲು ಸಾಧ್ಯವಾಗಲಿಲ್ಲ. ಆದ್ದರಿಂದ ರಘು ನಮ್ಮ ಸಹಾಯಕ ಸಿಬ್ಬಂದಿಯ ಭಾಗವಾದರು. ಇಲ್ಲಿಂದ ಅವರ ಜೀವನದ ಹೊಸ ಅಧ್ಯಾಯ ಆರಂಭವಾಗಿತ್ತು. ಕೆಎಸ್ ಸಿ ಎ ನಡೆಸಿದ ವಲಯ ಪಂದ್ಯಗಳಿಗೆ ನಾನು ತರಬೇತುದಾರನಾಗಿ ತಂಡಗಳೊಂದಿಗೆ ಹೋಗುತ್ತಿದ್ದೆ. ರಘು ಅವರನ್ನು ಸಹಾಯಕರಾಗಿ ಸೇರಿಸಲು ನಾನು ಕನ್ವೀನರ್ಗೆ ವಿನಂತಿಸಿದೆ. ಅವರ ಮೊದಲ ಪ್ರವಾಸ, ಧಾರವಾಡ ವಲಯ 14 ವರ್ಷದೊಳಗಿನವರ ತಂಡದೊಂದಿಗೆ, ಒಂದು ತಿಂಗಳು ಬೆಂಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗ ನಗರಗಳಲ್ಲಿ ಇತ್ತು. ಆ ಸಮಯದಲ್ಲಿ ಕೆ.ಎಲ್.ರಾಹುಲ್ ಮಂಗಳೂರು ವಲಯ ಪರ ಆಡುತ್ತಿದ್ದರು,” ಎಂದು ಶಿವಾನಂದ್ ನೆನಪಿಸಿಕೊಂಡರು.

ಹುಬ್ಬಳ್ಳಿಯಲ್ಲಿರುವಾಗ, ಹಣವಿಲ್ಲದೆ, ರಘು ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದರು. ಆಗ ನೆರವಿಗೆ ಬಂದದ್ದು ಬಿ.ವಿ.ಭೂಮರಡ್ಡಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ (ಬಿವಿಬಿಸಿಇಟಿ) ಕ್ಯಾಂಟೀನ್, ಗುರುದತ್ತ ಭವನ ಮತ್ತು ಕರ್ನಾಟಕ ಭವನ. ರಘು ದಿನದ ಊಟಕ್ಕೆ ಈ ಮೂರು ಸ್ಥಳಗಳಿಗೆ ಹೋಗುತ್ತಿದ್ದರು.

ರಘು ತಮ್ಮ ದ್ವಿತೀಯ ಪಿಯುಸಿಯನ್ನು ಪೂರ್ಣಗೊಳಿಸಿದ ನಂತರ, ಕಾಲೇಜು ಹಾಸ್ಟೆಲ್ನಿಂದ ಹೊರಬರಬೇಕಾಗಿ ಬಂತು. ವಾಸಿಸಲು ಸ್ಥಳ ಇಲ್ಲದಂತಾದಾಗ ಆ ಸಮಯದಲ್ಲಿ ರಘು ಅವರಿಗೆ ಇನ್ನೊರ್ವ ಮುಖ್ಯವಾದ ವ್ಯಕ್ತಿ ಸಹಾಯ ಮಾಡಿದರು. ಈ ವ್ಯಕ್ತಿಯೇ ಕರ್ನಾಟಕದ ಮಾಜಿ ಕ್ರಿಕೆಟಿಗ ದಯಾನಂದ ಶೆಟ್ಟಿ.

ರಾಘವೇಂದ್ರ ಅವರ ಕನಸಿಗೆ ದೊಡ್ಡ ತಿರುವು ಸಿಕ್ಕಿದ್ದು ಅವರು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದಾಗ. ಹೀಗೆ ಹುಬ್ಬಳ್ಳಿಯಿಂದ 400 ಕಿ.ಮೀ ದೂರದಲ್ಲಿರುವ ಬೆಂಗಳೂರಿಗೆ ಹೋಗಲು ರಘು ಅವರಿಗೆ ಪ್ರೇರೇಪಣೆ ನೀಡಿದ್ದು ದಯಾನಂದ ಶೆಟ್ಟಿ. ಇದು ರಘು ಅವರ ಜೀವನದ ದಿಕ್ಕನ್ನೇ ಬದಲಾಯಿಸಿತು. ಬೆಂಗಳೂರಿನಲ್ಲಿ, ರಘು ಅವರು ಕ್ರಿಕೆಟ್ ಆಟಗಾರನಾಗುವುದಕ್ಕಿಂತ, ಕೋಚಿಂಗ್ ಅಥವಾ ಥ್ರೋಡೌನ್ ಸ್ಪೆಷಲಿಸ್ಟ್ ಆಗುವುದರ ಕಡೆಗೆ ಗಮನ ಹರಿಸಿದರು.

“ನಾನು ನನ್ನ ಸ್ನೇಹಿತ ಮತ್ತು ತರಬೇತುದಾರ ಇರ್ಫಾನ್ ಸೇಠ್ ಅವರೊಂದಿಗೆ ಮಾತನಾಡಿ ರಘುವಿಗೆ ಸಹಾಯ ಮಾಡುವಂತೆ ವಿನಂತಿಸಿದೆ. ಆ ಸಮಯದಲ್ಲಿ, ಮುಂಬೈನಲ್ಲಿದ್ದ ಇರ್ಫಾನ್, ಬೆಂಗಳೂರಿಗೆ ಹಿಂದಿರುಗುವಾಗ, ರಘು ಮತ್ತು ನಾನು ಅವರನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಭೇಟಿಯಾಗಿದ್ದೆವು. ಆರಂಭದಲ್ಲಿ, ರಘು ಅವರು ಬೆಂಗಳೂರಿಗೆ ಹೋಗುವುದಿಲ್ಲ ಎಂದು ಹೇಳಿದರು ಆದರೆ ತದನಂತರ ರಘು ತಮ್ಮ ಮನಸ್ಸು ಬದಲಾಯಿಸಿದರು, ” ಎಂದು ಶೆಟ್ಟಿ ನೆನಪಿಸಿಕೊಂಡರು.

ಹುಬ್ಬಳ್ಳಿಯಲ್ಲೇ ಉಳಿಯವುದೋ, ಬೆಂಗಳೂರಿಗೆ ಹೋಗುವುದೋ ಎಂಬ ದ್ವಂದ್ವದಲ್ಲಿದ್ದ ರಘು ಅವರನ್ನು ಒಪ್ಪಿಸಿ ಬಸ್ ಹತ್ತಿಸಿ ಕಳುಹಿಸಿದ್ದು ಅವರ ಇಬ್ಬರು ಸ್ನೇಹಿತರಾದ ಮೊಯಿನುದ್ದೀನ್ ಮತ್ತು ಸುಕೇಶ್ ನಾಯಕ್.

ಹುಬ್ಬಳ್ಳಿಯಿಂದ ಬೆಂಗಳೂರಿಗೆ ಪಯಣ; ಜಾವಗಲ್ ಶ್ರೀನಾಥ್ ಪಾತ್ರ

ರಘು ಬೆಂಗಳೂರಿನ ಇರ್ಫಾನ್ ಅವರ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಕ್ರಿಕೆಟ್ (ಕೆಐಒಸಿ)ಗೆ ಸೇರಿದರು. ಕೆಐಒಸಿಗೆ ಅಭ್ಯಾಸಕ್ಕೆಂದು ಬರುತ್ತಿದ್ದ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಹಾಯ ಮಾಡುವುದರ ಜೊತೆಗೆ ಸ್ವಸ್ತಿಕ್ ಯೂನಿಕ್ ಕ್ರಿಕೆಟ್ ಕ್ಲಬ್ ಪರ ಆಡಿದರು. ಬೇರೆ ಕ್ಲಬ್‌ಗಳ ಆಟಗಾರರೂ ರಘುವನ್ನು ಇಷ್ಟ ಪಡುತ್ತಿದ್ದರು. ಇದಕ್ಕೆ ಕಾರಣ ಅವರಲ್ಲಿದ್ದ ಬದ್ಧತೆ. ಯಾವ ಕ್ಲಬ್‌ನ ಆಟಗಾರ ಅಭ್ಯಾಸಕ್ಕೆಂದು ಬಂದರೂ ರಘು ಅವರಿಗೆ "ಇಲ್ಲ" ಎನ್ನದೆ ನೆರವಾಗುತ್ತಿದ್ದರು. ಯಾವ ಸಂದರ್ಭದಲ್ಲೂ ಅಭ್ಯಾಸಕ್ಕೆ ಸದಾ ಸಿದ್ಧರಾಗಿರುತ್ತಿದ್ದರು. ಇಂತಹ ಮನೋಭಾವ ತುಂಬಾ ಅಪರೂಪ. ರಘು ಅವರನ್ನು ಭೇಟಿ ಮಾಡಿದ ಎಲ್ಲಾ ಕ್ರಿಕೆಟಿಗರು ಇಷ್ಟಪಟ್ಟದ್ದು ಇದೇ ಕಾರಣಕ್ಕೆ.

“ನಾನು ಕರ್ನಾಟಕ ಮಹಿಳಾ ಕ್ರಿಕೆಟ್ ತಂಡದೊಂದಿಗೆ ಬೆಂಗಳೂರಿಗೆ ಹಿಂದಿರುಗುತ್ತಿದ್ದೆ, ರಘು ನನ್ನನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಭೇಟಿಯಾದರು. ನನ್ನ ಕಛೇರಿ ಕಟ್ಟಡದಲ್ಲಿ ಉಳಿಯಲು ನೀವು ಸಿದ್ಧರಿದ್ದೀರಾ ಎಂದು ನಾನು ರಘು ಅವರನ್ನು ಕೇಳಿದೆ, ಅದಕ್ಕೆ ಅವರು ಒಪ್ಪಿಕೊಂಡರು. ಆ ಸಮಯದಲ್ಲಿ ನಮ್ಮಲ್ಲಿ ಹಾಸ್ಟೆಲ್ ಸೌಲಭ್ಯವಿರಲಿಲ್ಲ. ಅವರು ಉತ್ಸಾಹಭರಿತ ಕ್ರಿಕೆಟಿಗರಾಗಿದ್ದರು. ಅವರು ರಾಬಿನ್ ಉತ್ತಪ್ಪ ಮತ್ತು ಇತರರೊಂದಿಗೆ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ ಪರ ಆಡಿದ್ದಾರೆ. ಅವರು ಕೆ.ಎಸ್.ಸಿ.ಎ'ಯ  ವೈಎಸ್ ರಾಮಸ್ವಾಮಿ (ವೈಎಸ್ಆರ್) ಸ್ಮಾರಕ ಪಂದ್ಯಾವಳಿಯಲ್ಲೂ ಆಡಿದ್ದಾರೆ. ನಮ್ಮ ಕ್ಲಬ್ ಅನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಾಗ ಅವರು ತುಂಬಾ ಭಾವುಕರಾಗಿದ್ದರು" ಎಂದು ನೆನಪಿಸಿಕೊಂಡರು ಇರ್ಫಾನ್ ಸೇಠ್.

“ರಘು ಅವರು ಕೆಐಒಸಿಯಲ್ಲಿ ಬೌಲಿಂಗ್ ಯಂತ್ರದಿಂದ ಕರ್ನಾಟಕದ ಕ್ರಿಕೆಟಿಗರಿಗೆ ಸಹಾಯ ಮಾಡುತ್ತಿದ್ದರು. ಹೀಗಾಗಿ ಅವರಿಗೆ  ರಾಜ್ಯ ಕ್ರಿಕೆಟ್ ಆಟಗಾರರ ಸಂಪರ್ಕ ಸಿಕ್ಕಿತು. ಬೌಲಿಂಗ್ ಯಂತ್ರವನ್ನು ಬಳಸುವುದರ ಬಗ್ಗೆ ಅವರು ತುಂಬಾ ಕೌಶಲ್ಯ ಹೊಂದಿದ್ದರು. ಜೊತೆಗೆ ಬ್ಯಾಟಿಂಗ್ ಡ್ರಿಲ್ಸ್ ಮಾಡಿಸಿ ಚೆಂಡು ಎಸೆಯುತ್ತಿದ್ದರು. ಕೆಲವೊಮ್ಮೆ ವಿದ್ಯುತ್ ವೈಫಲ್ಯಗಳು ಬಂದಾಗ, ಅವರೇ ಬೌಲಿಂಗ್ ಮಷಿನ್ ಆಗುತ್ತಿದ್ದರು. ಅಲ್ಲಿಂದ ಅವರು ಥ್ರೋಡೌನ್ ತಜ್ಞರಾಗುವ ಆಸೆಗೆ ಬಲ ಬಂದಂತಾಯಿತು. ಅವರು ಥ್ರೋಡೌನ್‌ಗಳನ್ನು ಮಾಡಬಹುದು ಎಂದು ಸ್ವತಃ ನಂಬಲು ಪ್ರಾರಂಭಿಸಿದರು. ಅವರ ಮೊದಲ ಹೆಜ್ಜೆ ಯಾವುದೆಂದರೆ ಕರ್ನಾಟಕ ಮಹಿಳಾ ತಂಡದ ಸಹಾಯಕ ಸಿಬ್ಬಂದಿಯಾಗಿ ಅವರು ನನ್ನೊಂದಿಗೆ ಭುವನೇಶ್ವರಕ್ಕೆ ಪ್ರಯಾಣ ಮಾಡಿದ್ದು” ಎಂದು ಇರ್ಫಾನ್ ಸೇಠ್ ಹೇಳಿದರು.

ಭಾರತ ತಂಡದ ಸ್ಟಾರ್ ಆಟಹಾರ ಕೆ.ಎಲ್. ರಾಹುಲ್ ಕರ್ನಾಟಕ ಕಿರಿಯರ ತಂಡವನ್ನು ಮುನ್ನಡೆಸುತ್ತಿದ್ದಾಗ, ತಂಡಕ್ಕೆ ಸಹಾಯಕ ಸಿಬ್ಬಂದಿಯಾಗಿ ರಘು ಅವರನ್ನು ಸೇರಿಸುವಲ್ಲಿ ಕೋಚ್ ಫಜಲ್ ಖಲೀಲ್ ಪ್ರಮುಖ ಪಾತ್ರ ವಹಿಸಿದ್ದರು.

“ನನಗೆ ಇನ್ನೂ ನೆನಪಿದೆ. ಅದು 2007. ನಾನು ಕರ್ನಾಟಕ ಅಂಡರ್ -17 ತಂಡದ ಕೋಚ್ ಆಗಿದ್ದೆ, ಕೆ.ಎಲ್. ರಾಹುಲ್ ತಂಡದ ನಾಯಕರಾಗಿದ್ದರು. ನಮ್ಮಲ್ಲಿ ಸಹಾಯಕ ತರಬೇತುದಾರ ಇರಲಿಲ್ಲ. ನಾನು ಈ ಹುಡುಗನನ್ನು ಕರೆದುಕೊಂಡು ಹೋಗುತ್ತೇನೆ (ಕಟಕ್ಗೆ) ಎಂದು ಬ್ರಿಜೇಶ್ ಪಟೇಲ್ (ಕೆಎಸ್ಸಿಎ ಕಾರ್ಯದರ್ಶಿ)ಗೆ ಹೇಳಿದೆ. ನಾವು ಒಂದು ತಿಂಗಳು ಅಲ್ಲಿದ್ದೆವು. ರಘು, ವಿಮಾನದಲ್ಲಿ ಇದು ತನ್ನ ಮೊದಲ ಪ್ರಯಾಣ ಎಂದು ಹೇಳಿದರು. ಅವನು ನನ್ನನ್ನು ಭೇಟಿಯಾದಾಗಲೆಲ್ಲಾ, ಅವನು ತನ್ನ ಮೊದಲ ಅವಕಾಶದ ಬಗ್ಗೆ ಇನ್ನೂ ನೆನಪಿಸಿಕೊಳ್ಳುತ್ತಾನೆ. ಆಗ ನಾನು, ದೇವರು ನಿನ್ನ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಕೊಟ್ಟಿದ್ದಾನೆ ಎಂದು ಹೇಳುತ್ತಿದ್ದೆ. ಪರಿಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬುದಕ್ಕೆ ರಘು ಉತ್ತಮ ಉದಾಹರಣೆ. ಅದೃಷ್ಟವಶಾತ್, ರಾಹುಲ್ (ದ್ರಾವಿಡ್), ಸಚಿನ್ (ತೆಂಡೂಲ್ಕರ್) ರಘು ಅವರನ್ನು NCAಯಲ್ಲಿ ಗಮನಿಸಿದರು. ರಘು ಕಠಿಣ ಪರಿಶ್ರಮದಿಂದ ಬಂದಿದ್ದಾನೆ. ಅವನದು ಒಂದು ಅದ್ಭುತ ಕಥೆ," ಎಂದು ಮಾಜಿ ರಣಜಿ ಕ್ರಿಕೆಟಿಗ ಮತ್ತು ಪ್ರಸ್ತುತ ರಾಜ್ಯ ಆಯ್ಕೆ ಸಮಿತಿ ಮುಖ್ಯಸ್ಥ ಫಜಲ್ ಖಲೀಲ್ ಹೇಳಿದರು.

ಕೆಐಒಸಿಯಲ್ಲಿ, ರಘು ಅವರ ಕೆಲಸವು ಕರ್ನಾಟಕ ರಣಜಿ ಟ್ರೋಫಿ ಆಟಗಾರರಾದ ತಿಲಕ್ ನಾಯ್ಡು, ಬಿ ಅಖಿಲ್, ದೀಪಕ್ ಚೌಗುಲೆ ಮತ್ತು ಇತರರ ಗಮನ ಸೆಳೆಯಿತು. ಮುಂದೆ ರಘು, ವೆಂಕಟೇಶ್ ಪ್ರಸಾದ್ ಕರ್ನಾಟಕ ತಂಡದ ಕೋಚ್ ಆಗಿದ್ದಾಗ ಟ್ರೈನಿಂಗ್ ಆಸಿಸ್ಟೆಂಟ್ ಆಗಿ ತಂಡದೊಂದಿಗೆ ಕೆಲಸ ಮಾಡಿದರು. ಇಂತಹ ಒಂದು ಅವಕಾಶ ಸಿಗುವಲ್ಲಿ ತಿಲಕ್ ನಾಯ್ಡು ಮತ್ತು ಮೈಸೂರು ಎಕ್ಸ್'ಪ್ರೆಸ್ ಜಾವಗಲ್ ಶ್ರೀನಾಥ್ ಪಾತ್ರ ತುಂಬಾ ದೊಡ್ಡದು. ತಿಲಕ್ ನಾಯ್ಡು ಮತ್ತು ಶ್ರೀನಾಥ್ ಕಾರಣದಿಂದ ರಘುಗೆ ಕರ್ನಾಟಕ ತಂಡದ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕರೆ, ರಘು ಅವರನ್ನು ರಾಹುಲ್ ದ್ರಾವಿಡ್ ಅವರಿಗೆ ಪರಿಚಯಿಸಿದ್ದು ಕರ್ನಾಟಕದ ಮತ್ತೊಬ್ಬ ಆಟಗಾರ ಬಾಲಚಂದ್ರ ಅಖಿಲ್. ಕರ್ನಾಟಕ ತಂಡದೊಂದಿದ್ದಾಗ ವಿಜಯ್ ಭರದ್ವಾಜ್ ಕೂಡ ಸಹಾಯ ಮಾಡಿದರು.

“ರಘು ಇರ್ಫಾನ್ ಅಕಾಡೆಮಿಯಲ್ಲಿದ್ದಾಗ ನಾನು ಅವರನ್ನು ಭೇಟಿಯಾದೆ. ಅದು 2003 ಅಥವಾ 2004ರಲ್ಲಿ ಎಂದು ಭಾವಿಸುತ್ತೇನೆ. ರಘು ಥ್ರೋಡೌನ್ಗಳಿಗೆ ನನಗೆ ಸಹಾಯ ಮಾಡುತ್ತಿದ್ದ. ಆತನ ಬದ್ಧತೆ, ಪರಿಶ್ರಮವನ್ನು ನೋಡಿದ ನಾನು ಶ್ರೀನಾಥ್ ಅವರೊಂದಿಗೆ ಮಾತನಾಡಿದೆ ಮತ್ತು ಅವರ ಸಹಾಯವನ್ನು ಕೋರಿದೆ. ಮುಂದೆ ರಘು ರಾಜ್ಯ ಕ್ರಿಕೆಟ್ ಸಂಸ್ಥೆಯಿಂದಲೇ NCA ಮತ್ತು ಭಾರತೀಯ ತಂಡಕ್ಕೆ ಹೋಗುವಂತಾಯಿತು. ಅವರ ಈ ಯಶಸ್ಸಿನಿಂದ ಸಂತೋಷವಾಗಿದೆ” ಎಂದು ಕರ್ನಾಟಕ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ತಿಲಕ್ ನಾಯ್ಡು ಹೇಳಿದರು.

ರಘು ಅವರ ಬಗ್ಗೆ ಮತ್ತೊಬ್ಬ ಮಾಜಿ ರಣಜಿ ಕ್ರಿಕೆಟಿಗ ದೀಪಕ್ ಚೌಗುಲೆ ಕೂಡ ಮಾತನಾಡಿದ್ದಾರೆ. "ರಘು ಅವರು ಇಂದು ಈ ಮಟ್ಟಕ್ಕೆ ತಲುಪಲು ತುಂಬಾ ಶ್ರಮ ಪಟ್ಟಿದ್ದಾರೆ. ನಾನು ಅವರನ್ನು KIOC ನಲ್ಲಿ ಮೊದಲು ಭೇಟಿಯಾಗಿದ್ದೆ. ಅವರು ಬೆಂಗಳೂರಿನ ವಿಲ್ಸನ್ ಗಾರ್ಡನ್ನಲ್ಲಿರುವ ನನ್ನ ಮನೆಯಲ್ಲಿ ತಂಗಿದ ಹಲವಾರು ಸಂದರ್ಭಗಳಿವೆ. ಆ ಸಮಯದಲ್ಲಿ ನಾನು ಕೆಐಒಸಿ ವಿಕೆಟ್ಗಳಲ್ಲಿ ಪ್ಲಾಸ್ಟಿಕ್ ಚೆಂಡುಗಳೊಂದಿಗೆ ಅಭ್ಯಾಸ ಮಾಡುತ್ತಿದ್ದೆ ಮತ್ತು ರಘು ಥ್ರೋಡೌನ್ ಸ್ಪೆಷಲಿಸ್ಟ್ ಆಗಿದ್ದರು. ಅಲ್ಲದೆ, ಅವರು ಮನೀಶ್ ಪಾಂಡೆಗೆ ಚಿಕ್ಕಂದಿನಲ್ಲಿ ಕ್ರಿಕೆಟ್ ಅಭ್ಯಾಸಕ್ಕೆ ಸಾಕಷ್ಟು ಸಹಾಯ ಮಾಡಿದ್ದಾರೆಂಬುದು ಹಲವರಿಗೆ ತಿಳಿದಿಲ್ಲ. ಕರ್ನಾಟಕ ಮತ್ತು ಭಾರತ ಪರ ಆಡುವ ಮೊದಲು ಮನೀಶ್ ಅವರಿಗೆ ರಘು  ಸಾಕಷ್ಟು ಚೆಂಡುಗಳನ್ನು ಎಸೆದಿದ್ದಾರೆ. ರಘು ಮೊದಲು ಹೇಗಿದ್ದರೊ ಈಗಲೂ ಹಾಗೇ ಇದ್ದಾರೆ" ಎಂದು ನೆನಪಿಸಿಕೊಳ್ಳುತ್ತಾರೆ ದೀಪಕ್ ಚೌಗುಲೆ.

ಶ್ರೀನಾಥ್ ಗಮನ ಸೆಳೆದದ್ದು ಹೇಗೆ ಗೊತ್ತಾ..?

ರಘು ಒಮ್ಮೆ KSCA ‘ಬಿ’ ಮೈದಾನದಲ್ಲಿ (NCA) ತಿಲಕ್ ನಾಯ್ಡು ಅವರಿಗೆ ಥ್ರೋಡೌನ್ಗಳನ್ನು ಎಸೆಯುತ್ತಿದ್ದರು. ಆ ಸಮಯದಲ್ಲಿ NCA ಜಿಮ್ನಲ್ಲಿ ಥ್ರೆಡ್ಮಿಲ್ ಬಳಸುತ್ತಿದ್ದ ಜಾವಗಲ್ ಶ್ರೀನಾಥ್ ಅಲ್ಲಿಂದಲೇ ಅವರು ರಘುವನ್ನು ಗಮನಿಸಿದರು. ತಿಲಕ್ ಜೊತೆ ರಘು ತಮ್ಮ ಕ್ರಿಕೆಟ್ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದುದನ್ನು ನೋಡಿದ ಶ್ರೀನಾಥ್ ಅವರಿಗೆ ರಘು ಬಗ್ಗೆ ಕುತೂಹಲ ಉಂಟಾಯಿತು.  ಯಾರು ಈ ಚಿಕ್ಕ ಹುಡುಗ ಎಂದು ತಿಲಕ್ ಅವರನ್ನು ಶ್ರೀನಾಥ್ ಕೇಳಿದರು. ಆಗ ರಘು ಬಗ್ಗೆ ಹೇಳಿದ ತಿಲಕ್ ನಾಯ್ಡು, ಶ್ರೀನಾಥ್ ಅವರ ಸಹಾಯವನ್ನು ಕೋರಿದರು.

ರಘು ಭಾರತ ತಂಡಕ್ಕೆ ಆಯ್ಕೆಯಾಗಿ ಕ್ರಿಕೆಟ್ ಜೀವನದಲ್ಲಿ ಉನ್ನತ ಸ್ಥಾನಕ್ಕೇರುವಲ್ಲಿ ಜಾವಗಲ್ ಶ್ರೀನಾಥ್ ಪಾತ್ರ ನಿರ್ಣಾಯಕ. ಆ ದಿನಗಳನ್ನು ಏಷ್ಯನೆಟ್ ಸುವರ್ಣ ನ್ಯೂಸ್.ಕಾಂ ಜೊತೆ ಹಂಚಿಕೊಂಡ ಶ್ರೀನಾಥ್, “ರಘು KSCAಗೆ (ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಬರುತ್ತಿದ್ದರು. ತರಬೇತಿ ಅವಧಿಯಲ್ಲಿ ಆಟಗಾರರಿಗೆ ಚೆಂಡುಗಳನ್ನು ಎಸೆಯಲು ಅವರು ಸಿದ್ಧರಾಗಿದ್ದರು ಮತ್ತು ಯಾವುದೇ ಕೆಲಸವನ್ನು ಮಾಡಲು ಸಿದ್ಧರಾಗಿದ್ದರು. ರಘು ಅದ್ಭುತ ದೃಢತೆಯನ್ನು ಹೊಂದಿದ್ದ ಪ್ರಾಮಾಣಿಕ ಹುಡುಗ. ಜೀವನದಲ್ಲಿ ನೀವು ಆಟದ ಬಗ್ಗೆ ಸರಿಯಾದ ರೀತಿಯ ಭಕ್ತಿಯನ್ನು ತೋರಿಸಿದರೆ, ಅದು ನಿಮಗೆ ಸರಿಯಾದ ದಿಕ್ಕನ್ನೇ ತೋರಿಸುತ್ತದೆ. ರಘು ಪ್ರಕರಣದಲ್ಲಿ ನಾವು ನೋಡಿದ್ದು ಅದನ್ನೇ. ಅವನು ಒಳ್ಳೆಯ ಹುಡುಗ. ಒಳ್ಳೆಯ ಜನರಿಗೆ ಯಾವಾಗಲೂ ಜೀವನದಲ್ಲಿ ಒಳ್ಳೆಯದ್ದೇ ಸಿಗುತ್ತದೆ. ಅದೇ ರಘು ಅವರ ವಿಷಯದಲ್ಲಿ ನಡೆದಿದೆ” ಎಂದರು ಶ್ರೀನಾಥ್.

ಕರ್ನಾಟಕ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತುದಾರರಾಗಿದ್ದ ಕೋಚ್ ಕೆ. ಸನತ್ ಕುಮಾರ್ ಹಾಗೂ ರಾಜ್ಯ ಕಿರಿಯರ ತಂಡಗಳ ಮಾಜಿ ಕೋಚ್ ಆರ್.ಎಕ್ಸ್ ಮುರಳೀಧರ್ ಅವರಿಂದಲೂ ರಘು ಅವರಿಗೆ ಸೂಕ್ತ ಸಮಯದಲ್ಲಿ ಪ್ರೋತ್ಸಾಹ ಸಿಕ್ಕಿತು.

ಗವಾಸ್ಕರ್ ನೆರವನ್ನು ಸ್ಮರಿಸಿಕೊಂಡ ಇಂಜಮಾಮ್ ಉಲ್ ಹಕ್..!

KSCAನಲ್ಲಿ, ರಘು ಕರ್ನಾಟಕ ರಣಜಿ ತಂಡಕ್ಕೆ ಸಹಾಯ ಮಾಡುತ್ತಿದ್ದರು. ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುತ್ತಿದ್ದ ಬೂಸ್ಟ್ ಕಪ್ ಟೂರ್ನಮೆಂಟ್'ನಲ್ಲಿ ಅಂಡರ್ -16 ತಂಡಗಳನ್ನು ನೋಡಿಕೊಳ್ಳುತ್ತಿದ್ದರು. ಅವರು ಕರ್ನಾಟಕ ತಂಡದೊಂದಿಗೆ ಇಲ್ಲದಿದ್ದಾಗ, ಚಿನ್ನಸ್ವಾಮಿ ಕ್ರೀಡಾಂಗಣ ಆವರಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (NCA) ಹೋಗುತ್ತಿದ್ದರು. ಶ್ರೀನಾಥ್ ಅವರ ಕಾರಣದಿಂದಾಗಿ KSCAಯಿಂದ ರಘು ಅಧಿಕೃತವಾಗಿ NCAಯ ಭಾಗವಾಗುವಂತಾಯಿತು. ಆರು ತಿಂಗಳು KSCA, ಉಳಿದ ಆರು ತಿಂಗಳು NCAನಲ್ಲಿ ಕೆಲಸ. ನೆನಪಿರಲಿ, ಈ ಕೆಲಸಗಳಿಗೆ ರಘು ಯಾವುದೇ ಸಂಭಾವನೆ ಪಡೆಯುತ್ತಿರಲಿಲ್ಲ. ಸೌರವ್ ಗಂಗೂಲಿ ಭಾರತ ತಂಡದ ನಾಯಕರಾಗಿದ್ದಾಗ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬರುತ್ತಿದ್ದ ಟೀಮ್ ಇಂಡಿಯಾ ಆಟಗಾರರು ರಘು ಅವರ ಪ್ರತಿಭೆಯನ್ನು ಗುರುತಿಸಲು ಶುರು ಮಾಡಿದರು.

NCA ಜನರಲ್ ಮ್ಯಾನೇಜರ್ (ಆಡಳಿತ) ಆಗಿದ್ದ ಕರ್ನಲ್ (ನಿವೃತ್ತ) ಕೆ.ಆರ್.ನಾಯರ್ ಕೂಡ ರಘು ಬಗ್ಗೆ ಮಾತನಾಡಿದ್ದಾರೆ.

“ರಘು NCA ಸುತ್ತ ಸುತ್ತುತ್ತಿದ್ದ. ಒಂದು ದಿನ, (ಜಾವಗಲ್) ಶ್ರೀನಾಥ್ ನನ್ನೊಂದಿಗೆ ಮಾತನಾಡುತ್ತಾ, ನೀವು ರಘು ಅವರಿಗೆ ಸಹಾಯ ಮಾಡುತ್ತೀರಾ ಎಂದು ಕೇಳಿದರು. ನಂತರ, ನಾನು ರಘುವಿಗೆ ಕ್ರಿಕೆಟ್ ಕಿಟ್ ಮತ್ತು ಶೂಗಳನ್ನು ಕೊಟ್ಟೆ. ಬಳಿಕ NCA ಸ್ಟೋರ್ ನೋಡಿಕೊಳ್ಳುವಂತೆ ಮಾಡಿದೆ. ಅವರು ಆಟದ ತೀವ್ರ ಅನುಯಾಯಿ. ವಹಿಸಿದ ಕೆಲಸಕ್ಕಿಂತ ಹೆಚ್ಚಿನದನ್ನು ಶ್ರದ್ಧೆಯಿಂದ ಮಾಡುತ್ತಿದ್ದ ಹುಡುಗ. ನಾನು ಅವನಿಗೆ NCA ಆವರಣದಲ್ಲಿ ಉಳಿಯಲು ಒಂದು ಸ್ಥಳವನ್ನು ಕೊಟ್ಟೆ. ನಂತರ, ಅವರು NCAಯ ಭಾಗವಾದರು, ಅಧಿಕೃತವಾಗಿ ಸಹಾಯಕರಾದರು. ಎಲ್ಲರೊಂದಿಗೆ ಹೊಂದಿಕೊಂಡರು. NCA ಕೆಲಸಗಳಿಗೆ ರಘು ಅವರು 24/7 ಲಭ್ಯವಿರುತ್ತಿದ್ದರು. ಅವರು ಇಂದು ಯಾವ ಸ್ಥಾನದಲ್ಲಿದ್ದಾರೋ, ಅದೆಕ್ಕೆಲ್ಲಾ ಕಠಿಣ ಪರಿಶ್ರಮವೇ ಕಾರಣ. ಅವರು ಅದಕ್ಕೆ ಅರ್ಹರು" ಎಂದು ರಘು ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು ಕರ್ನಲ್ ನಾಯರ್.

ರಘು NCAನಲ್ಲಿದ್ದಾಗ ಬ್ಯಾಟಿಂಗ್ ಕನ್ಸಲ್ಟೆಂಟ್ ಆಗಿದ್ದ ಕ್ರಿಕೆಟ್ ದಂತಕಥೆ ಜಿ.ಆರ್. ವಿಶ್ವನಾಥ್, ಬ್ಯಾಟಿಂಗ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ಭಾರತ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ, ಲಕ್ಷ್ಮೀಪತಿ ಬಾಲಾಜಿ, ಹರ್ಭಜನ್ ಸಿಂಗ್, ಆಶಿಶ್ ನೆಹ್ರಾ ಮತ್ತು ಇತರ ಅನೇಕ ಆಟಗಾರರು, ತರಬೇತುದಾರರು, ಬಿಸಿಸಿಐ ಪದಾಧಿಕಾರಿಗಳು, ಅಧಿಕಾರಿಗಳು, ಬಿಸಿಸಿಐ ಸ್ಟಾಫ್, ಎನ್'ಸಿಎ ಸಿಬ್ಬಂದಿ ವರ್ಗದವರು ರಘುವಿಗೆ ಸಹಾಯ ಮಾಡಿದ್ದಾರೆ. ಆಗಿನ NCA ಡೈರೆಕ್ಟರ್ ಡೇವ್ ವಾಟ್ಮೋರ್, ಭಾರತ ತಂಡದ ಮಾಜಿ ತರಬೇತುದಾರ ಡಂಕನ್ ಫ್ಲೆಚರ್ ಸಹಿತ ವಿದೇಶಿ ಕೋಚ್'ಗಳೂ ರಘು ಅವರ ಬದ್ಧತೆ ಹಾಗು ಪರಿಶ್ರಮಕ್ಕೆ ಮಾರು ಹೋಗಿದ್ದರು.

ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಬಳಿ ಕ್ರಿಕೆಟ್ ಕಲಿತ ರಘು, ನಂತರದ ದಿನಗಳಲ್ಲಿ ಸಚಿನ್ ತೆಂಡುಲ್ಕರ್ ಅವರು ಅತ್ಯಂತ ಇಷ್ಟ ಪಡುವ ವ್ಯಕ್ತಿಯಾಗಿ ಬೆಳೆದು ನಿಂತದ್ದು ನಿಜಕ್ಕೂ ದೊಡ್ಡ ಸಾಧನೆ. ಏಕೆಂದರೆ ಕ್ರಿಕೆಟ್ ದೇವರ ಮೆಚ್ಚುಗೆಗೆ ಪಾತ್ರವಾಗುವುದು ಎಂದರೆ ಅದು ಸಾಮಾನ್ಯ ಮಾತಲ್ಲ.

ಟೀಂ ಇಂಡಿಯಾ ಪದಾರ್ಪಣೆ

ರಘು 2011ರಲ್ಲಿ ಮೊದಲ ಬಾರಿ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಯಾಗಿ ರಾಷ್ಟ್ರೀಯ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ್ದರು. ಇಲ್ಲಿ ಸಚಿನ್ ತೆಂಡುಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರ ಪಾತ್ರ ಮಹತ್ವದ್ದಾಗಿತ್ತು. ಆದರೆ ಒಂದೇ ಪ್ರವಾಸದ ನಂತರ ರಘು ಮತ್ತೆ ಎನ್'ಸಿಎಗೆ ಮರಳಿದರು.

ಭಾರತ ತಂಡ 2011ರಲ್ಲಿ 28 ವರ್ಷಗಳ ನಂತರ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಆ ವಿಶ್ವಕಪ್ ಟೂರ್ನಿಗೆ ಎಂ.ಎಸ್ ಧೋನಿ ನಾಯಕತ್ವದ ತಂಡ NCAನಲ್ಲಿ ಪೂರ್ವಸಿದ್ಧತಾ ಶಿಬಿರದಲ್ಲಿ ಪಾಲ್ಗೊಂಡಿತ್ತು. ಆಗ ರಘು ಧೋನಿ ನೇತೃತ್ವದ ತಂಡದ ಅಭ್ಯಾಸಕ್ಕೆ ನೆರವಾಗಿದ್ದರು. ಮತ್ತೆ ಅವರು 2014ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕಾಗಿ ‘ತರಬೇತಿ ಸಹಾಯಕ’ರಾಗಿ ಭಾರತೀಯ ತಂಡಕ್ಕೆ ಮರಳಿದರು. ಅಂದಿನಿಂದ ರಘು, ಎಂ.ಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ.

ರಘು ಅರ್ಹ ಕ್ರಿಕೆಟ್ ತರಬೇತುದಾರ

ಕಷ್ಟಗಳ ಮಧ್ಯೆ ರಘು ಬಿಸಿಸಿಐನ ಲೆವೆಲ್-1 ಕೋಚಿಂಗ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ ಎಂಬ ವಿಚಾರ ನಿಮಗೆ ಗೊತ್ತಾ? ಹೌದು, ರಘು ಬಿಸಿಸಿಐನಿಂದ ಮಾನ್ಯತೆ ಕ್ರಿಕೆಟ್ ತರಬೇತುದಾರ. ಅವರು ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ (ಜಿಸಿಎ) ಮೂಲಕ ಬಿಸಿಸಿಐನ ಲೆವೆಲ್ 1 ಕೋಚಿಂಗ್ ಕೋರ್ಸ್ ಅನ್ನು ಅಹಮದಾಬಾದ್‌ನಲ್ಲಿ ಯಶಸ್ವಿಯಾಗಿ ಪೂರೈಸಿದರು.

ರಘುವಿನ ರೋಬೋ ಆರ್ಮ್

ರೋಬೋ ಆರ್ಮ್ ಬಾಲ್ ಎಸೆಯುವ ಉಪಕರಣವನ್ನು ಭಾರತೀಯ ಕಂಪನಿಯು ರಘು ಅವರೊಂದಿಗೆ ಸಮಾಲೋಚಿಸಿ ಅಭಿವೃದ್ಧಿಪಡಿಸಿದೆ ಎಂದು ಹಲವರಿಗೆ ತಿಳಿದಿಲ್ಲ. ಹೈದರಾಬಾದ್ ಮೂಲದ ರೋಬೋ ಆರ್ಮ್ ಬಾಲ್ ಎಸೆಯುವ ಉಪಕರಣದ ತಯಾರಕ ಪಿ.ವಿ ಪಾರ್ಥಸಾರಥಿ, ಗ್ಯಾಜೆಟ್ ತಯಾರಿಸುವ ಮೊದಲು ರಘುವಿನಿಂದ ಹಲವಾರು ಸಲಹೆಗಳನ್ನು ಪಡೆದಿದ್ದಾರೆ. ತರಬೇತಿ ಅವಧಿಯಲ್ಲಿ, ರಘು ಅದನ್ನು ಬಳಸುವುದನ್ನು ನೀವು ನೋಡಬಹುದು. ರಘು ಅವರಿಗೆ ಗೌರವ ಸೂಚಕವಾಗಿ, ಕಂಪನಿಯು ಆ ಗ್ಯಾಜೆಟ್ಗೆ ‘ಆರ್’ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನೇ ಇಟ್ಟಿದೆ.

ಮೂರು ಗಂಟೆಗಳ ತರಬೇತಿ ಅವಧಿಯಲ್ಲಿ ರಘು ಸುಮಾರು 1,000 ಎಸೆತಗಳನ್ನು ಎಸೆಯುತ್ತಾರೆ. ಅವರ ಎಸೆತಗಳು ಸತತವಾಗಿ 145+ ಕಿಲೋ ಮೀಟರ್ ವೇಗವನ್ನು ಮುಟ್ಟುತ್ತವೆ. ರಘು ಅವರು ಒದಗಿಸುವ ವಿಶ್ವಶ್ರೇಷ್ಠ ಗುಣಮಟ್ಟದ ಅಭ್ಯಾಸದ ಪರಿಣಾಮ, ವಿರಾಟ್ ಕೊಹ್ಲಿ ಸೇರಿದಂತೆ ಬಹುತೇಕ ಭಾರತೀಯ ಬ್ಯಾಟ್ಸ್‌ಮನ್‌ಗಳು ಜಗತ್ತಿನ ಅತ್ಯುತ್ತಮ ವೇಗದ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸುವಂತಾಗಿದೆ. ಇದನ್ನು ಕೊಹ್ಲಿ ಸಹಿತ ಟೀಂ ಇಂಡಿಯಾ ಆಟಗಾರರೇ ಸಾಕಷ್ಟು ಬಾರಿ ಹೇಳಿದ್ದಾರೆ.

ರಘುಗೆ ಭಾರತ ಮೊದಲು

ರಘು ಭಾರತಕ್ಕೆ ಸೇವೆ ಸಲ್ಲಿಸುವ ಬಗ್ಗೆ ತುಂಬಾ ಒಲವು ಹೊಂದಿದವರಾಗಿದ್ದರಿಂದ, ಅವರು ತಮಗೆ ಬಂದ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯಿಂದ (ಇಸಿಬಿ) ಲಾಭದಾಯಕ ಒಪ್ಪಂದವನ್ನು ನಿರಾಕರಿಸಿದರು. ಅಷ್ಟೇ ಅಲ್ಲ, ಕೆಲ ಐಪಿಎಲ್ ತಂಡಗಳಿಂದ ಬಂದ ಆಫರ್ ಅನ್ನೂ ಕೂಡ ನಯವಾಗಿಯೇ ನಿರಾಕರಿಸಿದರು. ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಪಾತ್ರ ವಹಿಸಿದ ಬಿಸಿಸಿಐ ಮತ್ತು NCAಗೆ ನಿಷ್ಠರಾಗಿರಲು ಅವರು ಬಯಸಿದ್ದರಿಂದ ಅವರು ಐಪಿಎಲ್ ಕೊಡುಗೆಗಳನ್ನು ತಿರಸ್ಕರಿಸಿದರು. ತಮ್ಮ ಜೀವನವನ್ನು ಭಾರತೀಯ ಕ್ರಿಕೆಟ್ ತಂಡಕ್ಕೆ ಮುಡಿಪಾಗಿಟ್ಟರು ಮತ್ತು ಈಗಲೂ ಅದಕ್ಕೇ ಬದ್ಧರಾಗಿದ್ದಾರೆ.

ರಘು ಅವರು ಕಟ್ಟುನಿಟ್ಟಾದ ಸಸ್ಯಾಹಾರಿ. ಅನೇಕ ಸಂದರ್ಭಗಳಲ್ಲಿ, ಹುಬ್ಬಳ್ಳಿಯಲ್ಲಿ ಮತ್ತು ಬೆಂಗಳೂರಿನಲ್ಲಿ, ರಘು ಆಹಾರವಿಲ್ಲದೆ ಬದುಕಿದ್ದಾರೆ. ಕೆಲವೊಮ್ಮೆ ಅವರು ಬಾಳೆಹಣ್ಣುಗಳನ್ನು ತಿಂದು ಮಲಗಿದ್ದಾರೆ. ಅದೂ ಸಿಗದಿದ್ದಾಗ ನೀರನ್ನಷ್ಟೇ ಕುಡಿದು ತುಂಬಾ ದಿನ ಮಲಗಿದ ಉದಾಹರಣೆಗಳೂ ಇವೆ.  ರಘು ಅವರು ಮನೆಯಿಂದ ಹೊರಟಾಗ, ಯಾವುದೇ ಕೆಲಸವನ್ನು ಪ್ರಮಾಣಿಕತೆಯಿಂದ ಮಾಡು ಮತ್ತು ಯಾವಾಗಲೂ ನಿನ್ನ ಕಡೆಯಿಂದ 100% ಶ್ರಮ ಹಾಕು ಎಂದು ಅವರ ತಂದೆ ಸಲಹೆ ನೀಡಿದ್ದರು. ಇಲ್ಲಿಯವರೆಗೆ ಅವರ ತನ್ನ ತಂದೆಯ ಮಾತುಗಳನ್ನುಅನುಸರಿಸುತ್ತಿದ್ದಾರೆ.

ಕ್ರಿಕೆಟಿಗರ ಮತ್ತು ತರಬೇತುದಾರರಿಗೆ ರಘು ಅವರ ಬಗ್ಗೆ ಕೇಳಿದರೆ, "ರಘು ಒಬ್ಬ ಪ್ರಾಮಾಣಿಕ, ನಿಸ್ವಾರ್ಥ ವ್ಯಕ್ತಿ, ಆಟಕ್ಕೆ ಮೀಸಲಾಗಿರುವವನು" ಎಂದು ಅವರು ಪದೇ ಪದೇ ಹೇಳುತ್ತಾರೆ. ರಘು ವ್ಯಕ್ತಿತ್ವ ಎಂಥದ್ದು ಎಂಬುದಕ್ಕೆ ಇದೇ ಸಾಕ್ಷಿ.

ಕ್ರಿಕೆಟಿಗರು, ತರಬೇತುದಾರರು ಅವರಿಗೆ ಹಣವನ್ನು ನೀಡುವ ಅವಕಾಶಗಳನ್ನು ಕೊಟ್ಟಾಗ, ರಘು ಒಂದೇ ಒಂದು ಪೈಸಾವನ್ನು ಸಹ ಸ್ವೀಕರಿಸದೆ ನಿರಾಕರಿಸಿರುವ ಹಲವಾರು ಉದಾಹರಣೆಗಳಿವೆ. ಅವರ ಜೇಬು ಖಾಲಿಯಾಗಿದ್ದರೂ,  ಎಂದಿಗೂ ತಮ್ಮ ಪ್ರಾಮಾಣಿಕತೆಯಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ಯಾರ ಮುಂದೆ ಕೈಯೊಡ್ಡಲಿಲ್ಲ. ಯಾವ ನಿರೀಕ್ಷೆಯನ್ನೂ ಬಯಸದೆ ಸೇವೆ ಸಲ್ಲಿಸುವುದಷ್ಟೇ ಅವರ ಧ್ಯೇಯವಾಗಿತ್ತು. ಎಲ್ಲೋ ಇದ್ದ ರಘು ಅವರನ್ನು ಮತ್ತೆಲ್ಲಿಗೋ ಮುಟ್ಟಿಸಿ, ಇಂದು ಜಗತ್ತಿನ ಶ್ರೇಷ್ಠ ಕ್ರಿಕೆಟಿಗರೇ ಮೆಚ್ಚುವಂತಾಗಿದ್ದಕ್ಕೆ ಕಾರಣ ಪರಿಶ್ರಮ, ಪ್ರಾಮಾಣಿಕತೆ, ಸಂಯಮ, ದೃಢತೆ, ಬದ್ಧತೆ, ಗುರಿ ಮುಟ್ಟುವ ಛಲ, ಆ ಹಾದಿಯಲ್ಲಿ ನಿರಂತರ ತಪಸ್ಸು.

ಈ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಈ ಲಿಂಕ್ ಕ್ಲಿಕ್ ಮಾಡಿ

 

click me!