World Cup 2023: ವಿಶ್ವಕಪ್‌ನಲ್ಲಿ ದಾಖಲೆಗಳ ಧೂಳೀಪಟ ಮಾಡಿದ ದಕ್ಷಿಣ ಆಫ್ರಿಕಾ!

By Santosh Naik  |  First Published Oct 7, 2023, 6:23 PM IST


ಶ್ರೀಲಂಕಾ ವಿರುದ್ಧ ವಿಶ್ವಕಪ್‌ ಪಂದ್ಯದಲ್ಲಿ ದಾಖಲೆಯ 428 ರನ್‌ ಬಾರಿಸಿದ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್‌ ವೇದಿಕೆಯಲ್ಲಿ ಹಲವು ದಾಖಲೆಗಳನ್ನು ಧೂಳೀಪಟ ಮಾಡಿದೆ. ದಕ್ಷಿಣ ಆಫ್ರಿಕಾ ತಂಡ ಮಾಡಿದ ದಾಖಲೆಗಳ ವಿವರ ಇಲ್ಲಿದೆ.
 


ನವದೆಹಲಿ (ಅ.7): ಅರುಣ್‌ ಜೇಟ್ಲಿ ಮೈದಾನದಲ್ಲಿ ಶನಿವಾರ ಶ್ರೀಲಂಕಾ ತಂಡದ ಬೌಲರ್‌ಗಳನ್ನು ಚೆಂಡಾಡಿದ ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್‌ ದಾಖಲೆಯ 428 ರನ್‌ ಪೇರಿಸಿದೆ. ಇದು ವಿಶ್ವಕಪ್‌ ಟೂರ್ನಿಯಲ್ಲಿ ತಂಡವೊಂದರ ಸರ್ವಾಧಿಕ ಮೊತ್ತವಾಗಿದೆ. ಇದಕ್ಕೂ ಮುನ್ನ 2015ರ ವಿಶ್ವಕಪ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ತಾನ ವಿರುದ್ಧ 415 ರನ್‌ ಬಾರಿಸಿದ್ದು ವಿಶ್ವಕಪ್‌ ವೇದಿಕೆಯಲ್ಲಿ ತಂಡವೊಂದರ ಸರ್ವಾಧಿಕ ಮೊತ್ತವಾಗಿತ್ತು. ಇದೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಮೂವರು ಬ್ಯಾಟ್ಸ್‌ಮನ್‌ಗಳಾದ ಅನುಭವಿ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌, ರಸ್ಸಿ ವಾನ್‌ ಡರ್‌ ಡುಸೆನ್‌ ಹಾಗೂ ಏಡೆನ್‌ ಮಾರ್ಕ್ರಮ್‌ ಕೂಡ ಶತಕ ಬಾರಿಸಿದರು. ಇದು ಕೂಡ ವಿಶ್ವಕಪ್‌ ಟೂರ್ನಿಯ ದಾಖಲೆ ಎನಿಸಿದೆ.

ಅತಿವೇಗದ ಶತಕ: ದಕ್ಷಿಣ ಆಫ್ರಿಕಾದ ಏಡೆನ್‌ ಮಾರ್ಕ್ರಮ್‌ 31ನೇ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದರು. ಆ ಬಳಿಕ ಕೇವಲ 49 ಎಸೆತಗಳಲ್ಲಿ ಅವರು ಶತಕ ಬಾರಿಸಿದರು. ಇದು ವಿಶ್ವಕಪ್‌ ಟೂರ್ನಿಯಲ್ಲಿ ಅತಿವೇಗದ ಶತಕ ಎನಿಸಿದೆ.

Latest Videos

undefined

ಮೂರು ಶತಕ: ದಕ್ಷಿಣ ಆಫ್ರಿಕಾ ಪರವಾಗಿ ಕ್ವಿಂಟನ್‌ ಡಿ ಕಾಕ್‌ (100), ರಸ್ಸಿ ವಾನ್‌ ಡರ್‌ ಡುಸೆನ್‌ (108) ಹಾಗೂ ಏಡೆನ್‌ ಮಾರ್ಕ್ರಮ್‌ (106) ಶತಕ ಬಾರಿಸಿದರು. ವಿಶ್ವಕಪ್‌ ಟೂರ್ನಿಯಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂರು ಶತಕ ದಾಖಲಾಗಿರುವುದು ಇದೇ ಮೊದಲ ಬಾರಿ.

ವಿಶ್ವಕಪ್‌ನಲ್ಲಿ ತಂಡವೊಂದರ ಗರಿಷ್ಠ ರನ್‌: ದಕ್ಷಿಣ ಆಫ್ರಿಕಾ ಬಾರಿಸಿದ ಮೊತ್ತ ವಿಶ್ವಕಪ್‌ನಲ್ಲಿ ತಂಡದ ಗರಿಷ್ಠ ಮೊತ್ತ. ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ವಿರುದ್ಧ 6 ವಿಕೆಟ್‌ಗೆ 417 ರನ್‌ ಬಾರಿಸಿದ್ದು 2ನೇ ಸ್ಥಾನಕ್ಕೆ ಇಳಿಸಿದೆ. 2007ರಲ್ಲಿ ಭಾರತ ತಂಡ ಬರ್ಮುಡಾ ವಿರುದ್ಧ 413 ರನ್‌ ಬಾರಿಸಿದ್ದು ಮೂರನೇ ಸ್ಥಾನದಲ್ಲಿದ್ದರೆ, 2015ರಲ್ಲಿ ದಕ್ಷಿಣ ಆಫ್ರಿಕಾ  ತಂಡ ಐರ್ಲೆಂಡ್‌ ವಿರುದ್ಧ 411 ರನ್‌, 2015ರಲ್ಲಿ ಸಿಡ್ನಿಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ 408 ರನ್‌ ಬಾರಿಸಿದ್ದು ನಂತರದ ಸ್ಥಾನದಲ್ಲಿದೆ.

ವಿಶ್ವಕಪ್‌ನಲ್ಲಿ ಗರಿಷ್ಠ 400 ಪ್ಲಸ್‌ ರನ್‌: ವಿಶ್ವಕಪ್‌ನಲ್ಲಿ ಗರಿಷ್ಠ ಬಾರಿ 400 ಹಾಗೂ ಅದಕ್ಕಿಂತ ಹೆಚ್ಚಿನ ರನ್‌ ಬಾರಿಸಿದ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತೊಂದು ಹಂತಕ್ಕೇರಿತು. 2015ರಲ್ಲಿ 2 ಬಾರಿ ಈ ಸಾಧನೆ ಮಾಡಿದ್ದ ದಕ್ಷಿಣ ಆಫ್ರಿಕಾ ಪಾಲಿಗೆ ಇದು 3ನೇ ಸಾಧನೆಯಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಲಾ ಒಂದೊಂದು ಬಾರಿ ಈ ಸಾಧನೆ ಮಾಡಿದೆ.

ಏಕದಿನದಲ್ಲಿ ಗರಿಷ್ಠ 400 ಪ್ಲಸ್‌ ದಾಖಲೆ: ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ 400 ಪ್ಲಸ್‌ ರನ್‌ ಬಾರಿಸಿದ ದಾಖಲೆಯನ್ನೂ ದಕ್ಷಿಣ ಆಫ್ರಿಕಾ ಉತ್ತಮಪಡಿಸಿಕೊಂಡಿತು. ದಕ್ಷಿಣ ಆರ್ಫರಿಕಾ ತಂಡ 8 ಬಾರಿ ಈ ಸಾಧನೆ ಮಾಡಿದ್ದರೆ, ಭಾರತ 6, ಇಂಗ್ಲೆಂಡ್‌ 5 ಹಾಗೂ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ತಲಾ 2 ಬಾರಿ ಈ ಸಾಧನೆ ಮಾಡಿದೆ.

ದಕ್ಷಿಣ ಆಫ್ರಿಕಾದ 4ನೇ ಶ್ರೇಷ್ಠ ಮೊತ್ತ: ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ನಾಲ್ಕನೇ ಅತ್ಯುತ್ತಮ ಮೊತ್ತ ಇದಾಗಿದೆ. ಇದಕ್ಕೂ ಮುನ್ನ ವೆಸ್ಟ್‌ ಇಂಡೀಸ್‌ ವಿರುದ್ಧ 439 ರನ್‌, ಆಸ್ಟ್ರೇಲಿಯಾ ವಿರುದ್ಧ 2006ರಲ್ಲಿ 438 ರನ್‌, 2015ರಲ್ಲಿ ಭಾರತ ವಿರುದ್ಧ 4 ವಿಕೆಟ್‌ಗೆ 438 ರನ್‌  ಬಾರಿಸಿತ್ತು.

World Cup 2023: ಲಂಕಾ ಎದುರು ವಿಶ್ವಕಪ್‌ನಲ್ಲಿ ವಿಶ್ವದಾಖಲೆ ಬರೆದ ದಕ್ಷಿಣ ಆಫ್ರಿಕಾ..!

ಶ್ರೀಲಂಕಾ ವಿರುದ್ಧ ಏಕದಿನದಲ್ಲಿ ಗರಿಷ್ಠ ಮೊತ್ತ: ಶ್ರೀಲಂಕಾ ತಂಡದ ವಿರುದ್ಧ ಏಕದಿನದಲ್ಲಿ ಯಾವುದೇ ತಂಡ ಬಾರಿಸಿದ ಗರಿಷ್ಠ ಮೊತ್ತವಾಗಿದೆ. 2009ರಲ್ಲಿ ಭಾರತ ತಂಡ ರಾಜ್‌ಕೋಟ್‌ನಲ್ಲಿ 7 ವಿಕೆಟ್‌ಗೆ 414 ರನ್‌ ಬಾರಿಸಿದ್ದು ಶ್ರೀಲಂಕಾ ವಿರುದ್ಧ ಏಕದಿನದಲ್ಲಿ ಯಾವುದೇ ತಂಡದ ಗರಿಷ್ಠ ಮೊತ್ತವಾಗಿತ್ತು. ಅದರೊಂದಿಗೆ ಭಾರತದಲ್ಲಿ ನಡೆದ ಏಕದಿನದಲ್ಲಿ ತಂಡವೊಂದರ 2ನೇ ಗರಿಷ್ಠ ಮೊತ್ತ ಇದಾಗಿದೆ.

ಸ್ವಿಗ್ಗಿ ಡೆಲಿವರಿ ಬಾಯ್ಸ್‌ ಅಲ್ಲಾರೀ, ಇವರು ಟೀಮ್‌ ಇಂಡಿಯಾ ಪ್ಲೇಯರ್ಸು..!

click me!