
ಹಾಂಗ್ಝೂ(ಅ.07):ಏಷ್ಯನ್ ಗೇಮ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಪಾಲ್ಗೊಂಡಿರುವ ಭಾರತ ಪುರುಷರ ಕ್ರಿಕೆಟ್ ತಂಡವು ಇದೀಗ ಫೈನಲ್‌ನಲ್ಲಿ ಆಫ್ಘಾನಿಸ್ತಾನ ಎದುರು ಮುಖಾಮುಖಿಯಾಗಿದೆ. ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಋತುರಾಜ್ ಗಾಯಕ್ವಾಡ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.
ಚಿನ್ನ ಗೆಲ್ಲುವ ಫೇವರಿಟ್ ಎಂದೇ ಕರೆಸಿಕೊಳ್ಳುತ್ತಿರುವ ಭಾರತ ತಂಡ ನಿರೀಕ್ಷೆಯಂತೆಯೇ ಫೈನಲ್ ಪ್ರವೇಶಿಸಿತ್ತು. ಶುಕ್ರವಾರ ಸೆಮಿಫೈನಲ್‌ನಲ್ಲಿ ಮಾಜಿ ಚಾಂಪಿಯನ್ ಬಾಂಗ್ಲಾದೇಶ ವಿರುದ್ಧ 9 ವಿಕೆಟ್ ಗೆಲುವು ಸಾಧಿಸಿದೆ. ಇದೀಗ ಶನಿವಾರವಾದ ಇಂದು ನಡೆಯಲಿರುವ ಫೈನಲ್‌ನಲ್ಲಿ ಭಾರತಕ್ಕೆ ಅಫ್ಘಾನಿಸ್ತಾನ ಸವಾಲು ಎದುರಾಗಿದೆ. ಎರಡೂ ತಂಡಗಳು ಚೊಚ್ಚಲ ಚಿನ್ನಕ್ಕಾಗಿ ಸೆಣಸಾಡಲಿವೆ.
ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 20 ಓವರಲ್ಲಿ 9 ವಿಕೆಟ್ ಕಳೆದುಕೊಂಡು 96 ರನ್ ಕಲೆಹಾಕಿತು. ಜಾಖರ್ ಅಲಿ 24, ಪರ್ವೇಜ್ ಹೊಸೈನ್ 23, ರಕೀಬುಲ್ 14 ರನ್ ಗಳಿಸಿದ್ದು ಬಿಟ್ಟರೆ ಉಳಿದವರ್ಯಾರೂ ಎರಡಂಕಿ ಮೊತ್ತ ದಾಟಲಿಲ್ಲ. ಸಾಯಿ ಕಿಶೋರ್ 3, ವಾಷಿಂಗ್ಟನ್ ಸುಂದರ್ 2 ವಿಕೆಟ್ ಕಿತ್ತರು.
ಸುಲಭ ಗುರಿಯನ್ನು ಭಾರತ 1 ವಿಕೆಟ್ ಕಳೆದುಕೊಂಡು 9.2 ಓವರ್‌ಗಳಲ್ಲೇ ಬೆನ್ನತ್ತಿತು. ಕಳೆದ ಪಂದ್ಯದ ಶತಕವೀರ ಯಶಸ್ವಿ ಜೈಸ್ವಾಲ್ ಶೂನ್ಯಕ್ಕೆ ನಿರ್ಗಮಿಸಿದರೂ, ತಿಲಕ್ ವರ್ಮಾ 26 ಎಸೆತಗಳಲ್ಲಿ 56, ನಾಯಕ ಋತುರಾಜ್ ಗಾಯಕ್ವಾಡ್ 26 ಎಸೆತಗಳಲ್ಲಿ 40 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿದರು.
Asian Games 2023: ಬ್ಯಾಡ್ಮಿಂಟನ್ ಡಬಲ್ಸ್ ಫೈನಲ್ ಪ್ರವೇಶಿಸಿ ಸಾತ್ವಿಕ್-ಚಿರಾಗ್ ಇತಿಹಾಸ!
ಶುಕ್ರವಾರದ ಮತ್ತೊಂದು ಸೆಮಿಫೈನಲ್‌ನಲ್ಲಿ 2 ಬಾರಿಯ ರನ್ನರ್-ಅಪ್ ಅಫ್ಘಾನಿಸ್ತಾನಕ್ಕೆ ಪಾಕಿಸ್ತಾನ ವಿರುದ್ಧ 4 ವಿಕೆಟ್ ಗೆಲುವು ಲಭಿಸಿತು.
ಫೈನಲ್ ಪಂದ್ಯ: ಬೆಳಗ್ಗೆ 11.30ಕ್ಕೆ
ನೇರಪ್ರಸಾರ: ಸೋನಿ ಸ್ಪೋರ್ಟ್ಸ್
ಬ್ರಿಡ್ಜ್‌ನಲ್ಲಿ ರಜತ ಸಂಭ್ರಮ
ಇಸ್ಪೀಟ್ ಎಲೆ ಬಳಸಿ ಆಡುವ ಬ್ರಿಡ್ಜ್ ಕ್ರೀಡೆಯಲ್ಲಿ ಭಾರತ ಈ ಬಾರಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ. ಹಾಂಕಾಂಗ್ ವಿರುದ್ಧ 2 ದಿನಗಳ ಕಾಲ ನಡೆದ ಫೈನಲ್‌ನಲ್ಲಿ ಸಂದೀಪ್, ಜಗ್ಗಿ ಶಿವದಾಸ್ನಿ, ರಾಜು ಹಾಗೂ ಅಜಯ್ ಪ್ರಭಾಕರ್ ಅವರನ್ನೊಳಗೊಂಡ ಭಾರತದ ತಂಡ 152-238.1 ಅಂಕಗಳ ಅಂತರದಲ್ಲಿ ಸೋತು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದು 2018ಕ್ಕೆ ಹೋಲಿಸಿದರೆ ಭಾರತೀಯರ ಸಾಧಾರಣ ಪ್ರದರ್ಶನ. ಕಳೆದ ಆವೃತ್ತಿಯಲ್ಲಿ ಭಾರತಕ್ಕೆ 1 ಚಿನ್ನ ಸೇರಿ 3 ಪದಕ ಲಭಿಸಿತ್ತು.
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚೊಚ್ಚಲ 'ಶತಕ'..!
ಕುಸ್ತಿಯಲ್ಲಿ ಮೂವರಿಗೆ ಕಂಚು: ಬರಿಗೈಲಿ ಭಜರಂಗ್ ವಾಪಸ್!
ಕುಸ್ತಿಯಲ್ಲಿ ಈ ಸಲ ನಿರೀಕ್ಷಿತ ಯಶಸ್ಸು ಸಾಧಿಸಲು ಭಾರತೀಯರು ಮತ್ತೆ ವಿಫಲರಾಗಿದ್ದು, ಚಿನ್ನದ ಪದಕದ ಹುಡುಕಾಟ ಮುಂದುವರಿದಿದೆ. ಶುಕ್ರವಾರ ಭಾರತಕ್ಕೆ 3 ಕಂಚಿನ ಪದಕ ಲಭಿಸಿತು. ಪುರುಷರ ಫ್ರೀಸ್ಟೈಲ್ 57 ಕೆ.ಜಿ. ವಿಭಾಗದ ಕಂಚಿನ ಪದಕ ಪಂದ್ಯದಲ್ಲಿ ಅಮನ್ ಶೆಹ್ರಾವತ್ ಚೀನಾದ ಲ್ಯು ಮಿಂಗು ವಿರುದ್ಧ ಗೆದ್ದರೆ, ಮಹಿಳೆಯರ ಫ್ರೀಸ್ಟೈಲ್ 76 ಕೆ.ಜಿ. ಸ್ಪರ್ಧೆಯಲ್ಲಿ ಕಿರಣ್ ಮಂಗೋಲಿಯಾದ ಗನ್ಬಟ್ ವಿರುದ್ಧ ಜಯಗಳಿಸಿದರು. 62 ಕೆ.ಜಿ. ಸ್ಪರ್ಧೆ ಕಂಚಿನ ಪದಕ ಪಂದ್ಯದಲ್ಲಿ ಸೋನಂ ಮಲಿಕ್ ಚೀನಾದ ಲಾಂಗ್ ಜಿಯಾ ವಿರುದ್ಧ ಗೆಲುವು ಸಾಧಿಸಿ ಪದಕ ಗೆದ್ದರು.
ಇದೇ ವೇಳೆ ಟೋಕಿಯೋ ಒಲಿಂಪಿಕ್ ಕಂಚು ವಿಜೇತ ಭಜರಂಗ್ ಪೂನಿಯಾ ಪುರುಷರ ಫ್ರೀಸ್ಟೈಲ್ 65 ಕೆ.ಜಿ. ವಿಭಾಗದ ಕಂಚಿನ ಪದಕ ಪಂದ್ಯದಲ್ಲಿ ಸೋಲನುಭವಿಸಿದರು. 4 ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ, ಏಷ್ಯಾಡ್‌ನಲ್ಲಿ 2014ರಲ್ಲಿ ಬೆಳ್ಳಿ, 2018ರಲ್ಲಿ ಬಂಗಾರ ಗೆದ್ದಿದ್ದ ಭಜರಂಗ್ ಈ ಬಾರಿ ಪದಕವಿಲ್ಲದೇ ಮರಳಿದರು. ಕ್ರೀಡಾಕೂಟದಲ್ಲಿ ಈ ಸಲ ಭಾರತ ಕುಸ್ತಿಯಲ್ಲಿ ಒಟ್ಟಾರೆ 5 ಕಂಚಿನ ಪದಕ ಗೆದ್ದಿದ್ದು, ಶನಿವಾರ ಮತ್ತಷ್ಟು ಪದಕಗಳು ಹರಿದುಬರುವ ನಿರೀಕ್ಷೆಯಿದೆ.
ಸೆಪಕ್‌ಟಕ್ರಾನಲ್ಲಿ ಐತಿಹಾಸಿಕ ಕಂಚು
ಭಾರತ ಈ ಬಾರಿ ಹಲವು ಸ್ಪರ್ಧೆಗಳಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು, ಇದರಲ್ಲಿ ಸೆಪಕ್‌ಟಕ್ರಾ (ಕಿಕ್ ವಾಲಿಬಾಲ್) ಕೂಡಾ ಒಂದು. ರೆಗು ವಿಭಾಗದಲ್ಲಿ ಭಾರತ ಮಹಿಳಾ ತಂಡ ಕಂಚಿನ ಪದಕ ತನ್ನದಾಗಿಸಿಕೊಂಡಿತು. ಇದು ಏಷ್ಯಾಡ್ ಇತಿಹಾಸದಲ್ಲೇ ಮಹಿಳಾ ವಿಭಾಗದಲ್ಲಿ ಭಾರತಕ್ಕೆ ಸಿಕ್ಕ ಚೊಚ್ಚಲ ಪದಕ. 2018ರಲ್ಲಿ ಪುರುಷರ ರೆಗು ತಂಡ ಕಂಚಿನ ಪದಕ ಗೆದ್ದಿತ್ತು. ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಮಹಿಳಾ ತಂಡಕ್ಕೆ ಹಾಲಿ ಚಾಂಪಿಯನ್ ಥಾಯ್ಲೆಂಡ್ ವಿರುದ್ಧ ಸೋಲು ಎದುರಾಗಿ, ಕಂಚಿಗೆ ತೃಪ್ತಿಪಡುವಂತಾಯಿತು. ಇದಕ್ಕೂ ಮೊದಲು ಗುಂಪು ಹಂತದಲ್ಲಿ 2ನೇ ಸ್ಥಾನಿಯಾಗಿ ಸೆಮೀಸ್‌ಗೇರಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.