
ಎಜ್‌ಬಾಸ್ಟನ್: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ಬಗ್ಗೆ ಮಾಜಿ ಭಾರತೀಯ ಆಟಗಾರ ಸುರೇಶ್ ರೈನಾ ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಫೈನಲ್‌ನಲ್ಲಿ ಶತಕ ಬಾರಿಸಿದ ಎಬಿ ಡಿವಿಲಿಯರ್ಸ್ ಅವರ ಪ್ರದರ್ಶನವನ್ನು ರೈನಾ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಶ್ಲಾಘಿಸಿದ್ದಾರೆ.
ಡಿವಿಲಿಯರ್ಸ್ ಅದ್ಭುತ ಪ್ರದರ್ಶನ ನೀಡಿದರು, ನಿಜಕ್ಕೂ ಅಬ್ಬರಿಸಿದರು. ನಾವು ಆಡಿದ್ದರೆ ನಾವೂ ಪಾಕಿಸ್ತಾನವನ್ನು ಸೋಲಿಸುತ್ತಿದ್ದೆವು. ಆದರೆ ನಾವು ನಮ್ಮ ದೇಶವನ್ನೇ ಎಲ್ಲಕ್ಕಿಂತ ಮಿಗಿಲಾಗಿ ಆಯ್ಕೆ ಮಾಡಿಕೊಂಡೆವು ಎಂದು ಸುರೇಶ್ ರೈನಾ ಬರೆದುಕೊಂಡಿದ್ದಾರೆ. ಲೆಜೆಂಡ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಬೇಕಿತ್ತು.
"ಫೈನಲ್‌ನಲ್ಲಿ ಎಬಿ ಡಿವಿಲಿಯರ್ಸ್ ಅವರಿಂದ ಎಂತಹ ಅದ್ಭುತ ಆಟ. ನಿಜಕ್ಕೂ ಚಿಂದಿ ಮಾಡಿದರು. ನಾವು ಅವರ ಮೇಲೆ ಆಡಿದ್ದರೂ ಅವರನ್ನು ಬಗ್ಗುಬಡಿಯುತ್ತಿದ್ದೆವು. ಆದರೆ ನಾವು ಎಲ್ಲದಕ್ಕಿಂತ ದೇಶವೇ ಮೊದಲು ಎನ್ನುವುದನ್ನು ಆರಿಸಿಕೊಂಡೆವು" ಎಂದು ಸುರೇಶ್ ರೈನಾ ಟ್ವೀಟ್ ಮಾಡಿದ್ದಾರೆ.
ಆದರೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕ್ ತಂಡದ ನಾಯಕ ಶಾಹಿದ್ ಅಫ್ರಿದಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಮತ್ತು ಭಾರತ ವಿರೋಧಿ ನಿಲುವಿನಿಂದಾಗಿ ಪಾಕಿಸ್ತಾನ ವಿರುದ್ಧ ಆಡುವುದಿಲ್ಲ ಎಂದು ಭಾರತೀಯ ಆಟಗಾರರು ಸ್ಪಷ್ಟಪಡಿಸಿದ್ದರಿಂದ ಪಾಕಿಸ್ತಾನ ಫೈನಲ್ ತಲುಪಿತ್ತು. ಈ ಹಿಂದೆ ಗುಂಪು ಹಂತದಲ್ಲೂ ಭಾರತ ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಹಿಂದೆ ಸರಿದಿತ್ತು.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಚಾಂಪಿಯನ್ಸ್ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಪಾಕಿಸ್ತಾನ ಲೆಜೆಂಡ್ಸ್ ಪರ ಶಾರ್ಜೀಲ್ ಖಾನ್ 44 ಎಸೆತಗಳಲ್ಲಿ 76 ರನ್ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇನ್ನು ಉಮರ್ ಅಮಿನ್ 36 ಹಾಗೂ ಆಸಿಫ್ ಅಲಿ 28 ರನ್ ಸಿಡಿಸುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. ಅಂತಿಮವಾಗಿ ಪಾಕಿಸ್ತಾನ ಲೆಜೆಂಡ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 195 ರನ್ ಕಲೆಹಾಕಿತು.
ಇನ್ನು ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ವಿಸ್ಪೋಟಕ ಆರಂಭ ಪಡೆಯಿತು. ಮೊದಲ ಆರು ಓವರ್‌ನಲ್ಲೇ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ 72 ರನ್ ಕಲೆಹಾಕಿತು. 60 ಎಸೆತಗಳಲ್ಲಿ 120 ರನ್ ಗಳಿಸಿ ಅಜೇಯರಾಗುಳಿದ ಡಿವಿಲಿಯರ್ಸ್ ಮತ್ತು 28 ಎಸೆತಗಳಲ್ಲಿ 50 ರನ್ ಗಳಿಸಿ ಅಜೇಯರಾಗುಳಿದ ಜೆಪಿ ಡುಮಿನಿ ಅವರ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ 16.5 ಓವರ್‌ಗಳಲ್ಲಿ ಗುರಿ ತಲುಪಿತು. 18 ರನ್ ಗಳಿಸಿದ ಹಾಶಿಂ ಆಮ್ಲಾ ಅವರ ವಿಕೆಟ್ ಮಾತ್ರ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಕಳೆದುಕೊಂಡಿತು.
ಪಾಕ್ ಬೌಲರ್‌ಗಳನ್ನು ಚಚ್ಚಿದ ಡಿವಿಲಿಯರ್ಸ್ 47 ಎಸೆತಗಳಲ್ಲಿ ಟೂರ್ನಿಯ ಮೂರನೇ ಶತಕ ಪೂರೈಸಿದರು. ಈ ಹಿಂದೆ ಆಸ್ಟ್ರೇಲಿಯಾ ಚಾಂಪಿಯನ್ಸ್ ವಿರುದ್ಧ 39 ಎಸೆತಗಳಲ್ಲಿ ಮತ್ತು ಇಂಗ್ಲೆಂಡ್ ಚಾಂಪಿಯನ್ಸ್ ವಿರುದ್ಧ 41 ಎಸೆತಗಳಲ್ಲಿ ಡಿವಿಲಿಯರ್ಸ್ ಶತಕ ಗಳಿಸಿದ್ದರು. 196 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಪರ ಡಿವಿಲಿಯರ್ಸ್ ಮತ್ತು ಹಾಶಿಂ ಆಮ್ಲಾ ಅಬ್ಬರದ ಆರಂಭ ಒದಗಿಸಿದರು.
ಮೊದಲ ಆವೃತ್ತಿಯ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಭಾರತ ತಂಡವು ಬದ್ದ ಎದುರಾಳಿ ಪಾಕಿಸ್ತಾನ ತಂಡವನ್ನು ಬಗ್ಗುಬಡಿದು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದೀಗ ಎರಡನೇ ಆವೃತ್ತಿಯ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಭಾರತ ಲೆಜೆಂಡ್ಸ್ ತಂಡವು ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ಸೆಮೀಸ್‌ನಲ್ಲಿ ಪಾಕಿಸ್ತಾನ ಎದುರು ಅಡಲು ಇಂಡಿಯಾ ಲೆಜೆಂಡ್ಸ್ ನಿರಾಕರಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.