Ind vs SA Test Series: ಸ್ಟಾರ್ ಕ್ರಿಕೆಟಿಗ ಕ್ವಿಂಟನ್ ಡಿ ಕಾಕ್‌ ಕೊನೆಯ 2 ಟೆಸ್ಟ್‌ನಿಂದ ಔಟ್..?

By Suvarna NewsFirst Published Dec 14, 2021, 7:12 PM IST
Highlights

* ದಕ್ಷಿಣ ಆಫ್ರಿಕಾ ಹಾಗೂ ಭಾರತ ನಡುವಿನ 3 ಪಂದ್ಯಗಳ ಟೆಸ್ಟ್‌ ಸರಣಿಗೆ ಕ್ಷಣಗಣನೆ

* 3 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಡಿಸೆಂಬರ್ 26ರಿಂದ ಆರಂಭ

* ವಿಕೆಟ್ ಕೀಪರ್ ಬ್ಯಾಟರ್‌ ಕ್ವಿಂಟನ್‌ ಡಿ ಕಾಕ್‌ ಕೊನೆಯ ಎರಡು ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಳ್ಳೋದು ಡೌಟ್

ಜೊಹಾನ್ಸ್‌ಬರ್ಗ್‌(ಡಿ.14): ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಭಾರತ ವಿರುದ್ದ ತವರಿನಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ದಕ್ಷಿಣ ಆಫ್ರಿಕಾ ವಿಕೆಟ್ ಕೀಪರ್‌ ಬ್ಯಾಟರ್‌ ಕ್ವಿಂಟನ್ ಡಿ ಕಾಕ್ (Quinton De Kock) ಅಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ. ಡಿ ಕಾಕ್‌ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಟೆಸ್ಟ್ ಸರಣಿಯ ಕೆಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ

ಕ್ರೀಡಾ ವೆಬ್‌ಸೈಟ್‌  ESPNcricinfo ವರದಿಯ ಪ್ರಕಾರ ಕ್ವಿಂಟನ್‌ ಡಿ ಕಾಕ್ ಪತ್ನಿ ಸಶಾ ಜನವರಿಯ ಆರಂಭದಲ್ಲಿ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿದ್ದಾರೆ. ಆಟಗಾರರು ಬಯೋ ಬಬಲ್‌ನೊಳಗೆ (Bio-Bubble) ಇರಬೇಕಾಗಿರುವುದರಿಂದ ಮೊದಲ ಟೆಸ್ಟ್ ಪಂದ್ಯದ ಬಳಿಕ ಕ್ವಿಂಟನ್ ಡಿ ಕಾಕ್‌ ಮನೆಗೆ ವಾಪಾಸ್ಸಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.  

Latest Videos

ಇನ್ನೊಂದು ಮೂಲದ ಪ್ರಕಾರ, ಕ್ವಿಂಟನ್ ಡಿ ಕಾಕ್ ಭಾರತ ವಿರುದ್ದದ ಕೊನೆಯ ಟೆಸ್ಟ್‌ ಪಂದ್ಯ ಮಾತ್ರ ಹೊರಗುಳಿಯಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಆಯ್ಕೆ ಸಮಿತಿಯ ವಕ್ತಾರ ವಿಕ್ಟರ್ ಮಿಪ್ಟಿಸಂಗ್ ತಿಳಿಸಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಡಿಸೆಂಬರ್ 26ರಿಂದ ಸೆಂಚುರಿಯನ್‌ನಲ್ಲಿ ಆರಂಭವಾಗಲಿದೆ.

ಇನ್ನು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಎರಡನೇ ಟೆಸ್ಟ್‌ ಪಂದ್ಯವು ಜನವರಿ 03ರಿಂದ ಜೊಹಾನ್ಸ್‌ಬರ್ಗ್‌ನಲ್ಲಿ ಆರಂಭವಾಗಲಿದೆ. ಇನ್ನು ಮೂರು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಜನವರಿ 11ರಿಂದ ಕೇಪ್‌ಟೌನ್‌ನಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿವೆ. 

ಕ್ವಿಂಟನ್ ಡಿ ಕಾಕ್‌ ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯಲ್ಲಿ ಕಡೆಯ ಬಾರಿಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಗುಂಪು ಹಂತದ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ನೀಡಿದ್ದ ಬ್ಲಾಕ್‌ ಲೈವ್ಸ್‌ ಮ್ಯಾಟರ್ಸ್‌ ಅಭಿಯಾನಕ್ಕೆ ಬೆಂಬಲ ಸೂಚಿಸಲು ನಿರಾಕರಿಸಿ ಪಂದ್ಯದಿಂದ ಹೊರಗುಳಿದು ಸುದ್ದಿಯಾಗಿದ್ದರು.

Virat Kohli vs Rohit Sharma: ಒಂಡೇ ಕ್ಯಾಪ್ಟನ್ ಟೆಸ್ಟ್ ಸರಣಿಗಿಲ್ಲ, ಟೆಸ್ಟ್ ಕ್ಯಾಪ್ಟನ್ ಏಕದಿನ ಸರಣಿಗೆ ಇಲ್ಲ!

14ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ಕ್ವಿಂಟನ್ ಡಿ ಕಾಕ್‌, ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಇದೀಗ ಮುಂಬರುವ ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ, ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್‌ ಡಿ ಕಾಕ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ. ಹೀಗಾಗಿ 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ನಡೆಯಲಿರುವ ಮೆಗಾ ಹರಾಜಿನಲ್ಲಿ ಕ್ವಿಂಟನ್ ಡಿ ಕಾಕ್‌ ಕಾಣಿಸಿಕೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾಗೆ ಈ ಬಾರಿ ಅಗ್ನಿ ಪರೀಕ್ಷೆ: ಭಾರತ ತಂಡವು ದಕ್ಷಿಣ ಆಫ್ರಿಕಾ ನೆಲದಲ್ಲಿ ಇದುವರೆಗೂ 20 ಟೆಸ್ಟ್ ಪಂದ್ಯಗಳನ್ನಾಡಿದ್ದು, ಕೇವಲ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. ಆದರೆ ಟೆಸ್ಟ್ ಸರಣಿ ಗೆಲ್ಲಲು ಭಾರತಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಈ ಬಾರಿ ಮೇಲ್ನೋಟಕ್ಕೆ ಟೀಂ ಇಂಡಿಯಾ ಸಾಕಷ್ಟು ಬಲಿಷ್ಠವಾಗಿ ಕಂಡು ಬಂದಿದ್ದು, ಹರಿಣಗಳ ಭೇಟೆಯಾಡಲು ಭಾರತದ ಹುಲಿಗಳು ಸಜ್ಜಾಗಿವೆ.

click me!