
ಜೊಹಾನ್ಸ್‌ಬರ್ಗ್(ಮೇ.19): ಸ್ಟಾರ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ನಿವೃತ್ತಿ ಹಿಂಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್ ಮಾಡುವುದಿಲ್ಲ. ಈಗಾಗಲೇ ನಿವೃತ್ತಿ ಪಡೆದಿರುವುದೇ ನನ್ನ ಅಂತಿಮ ತೀರ್ಮಾನವೆಂದು ಸ್ಪಷ್ಟಪಡಿಸಿದ್ದಾರೆಂದು ಕ್ರಿಕೆಟ್ ಸೌತ್ ಆಫ್ರಿಕಾ ಖಚಿತಪಡಿಸಿದೆ.
ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ 2018ರಲ್ಲಿ ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದರೊಂದಿಗೆ 15 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಬಿದ್ದಿತ್ತು. 2018ರ ಮಾರ್ಚ್‌ನಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. ಆಸೀಸ್ ವಿರುದ್ದದ ಟೆಸ್ಟ್ ಸರಣಿ ಮುಗಿಯುತ್ತಿದ್ದಂತೆಯೇ ತಮ್ಮ 34ನೇ ವಯಸ್ಸಿನಲ್ಲಿಯೇ ಎಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿ ಎಲ್ಲರನ್ನು ಅಚ್ಚರಿಗೆ ನೂಕಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ ಎಬಿಡಿ ಟಿ20 ಲೀಗ್‌ನಲ್ಲಿ ತಮ್ಮ ಅಬ್ಬರದ ಪ್ರದರ್ಶನವನ್ನು ಮುಂದುವರೆಸಿದ್ದರು. ಹೀಗಾಗಿ ಕಳೆದ ಕೆಲವು ತಿಂಗಳುಗಳಿಂದ ಎಬಿಡಿ ನಿವೃತ್ತಿ ವಾಪಾಸ್ ಪಡೆದು ಅಂತಾರಾಷ್ಟ್ರೀಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ಸಂಬಂಧ ದಕ್ಷಿಣ ಆಫ್ರಿಕಾ ಕೋಚ್ ಮಾರ್ಕ್ ಬೌಷರ್ ಹಾಗೂ ಡೈರೆಕ್ಟರ್ ಗ್ರೇಮ್ ಸ್ಮಿತ್ ಕೂಡಾ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಎಬಿಡಿ ಹರಿಣಗಳ ಪಡೆ ಕೂಡಿಕೊಳ್ಳುವ ಬಗ್ಗೆ ಸುಳಿವನ್ನು ನೀಡಿದ್ದರು.
ಎಬಿಡಿ ತೆಗೆದುಕೊಂಡ ತೀರ್ಮಾನವನ್ನು ನಾನು ಗೌರವಿಸುತ್ತೇನೆ. ಇನ್ನು ಮುಂದೆ ನಮ್ಮ ತಂಡವನ್ನು ಪ್ರತಿನಿಧಿಸದೇ ಇರುವುದು ದುರಾದೃಷ್ಟಕರ. ದುರಾದೃಷ್ಟಕರ ಏಕೆಂದರೆ ಈಗಲೂ ಸಹಾ ಎಬಿ ಡಿವಿಲಿಯರ್ಸ್ ಜಗತ್ತಿನ ಶ್ರೇಷ್ಠ ಟಿ20 ಬ್ಯಾಟ್ಸ್‌ಮನ್. ಹೀಗಿದ್ದೂ ಎಬಿಡಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಪರ ಆಡುತ್ತಿಲ್ಲವಲ್ಲ ಎನ್ನುವುದೇ ದುರಾದೃಷ್ಟಕರ ಎಂದು ಮಾರ್ಕ್ ಬೌಷರ್ ಅಭಿಪ್ರಾಯ ಪಟ್ಟಿದ್ದಾರೆ.
ಎಬಿ ಡಿವಿಲಿಯರ್ಸ್ ಅವರಂತಹ ಆಟಗಾರರು ತಂಡದೊಳಗಿದ್ದರೆ ಒಂದು ರೀತಿ ತಂಡದ ಆತ್ಮವಿಶ್ವಾಸ ಹೆಚ್ಚಲಿದೆ. ಎಬಿಡಿ ಎಂತಹದ್ದೇ ವಾತವರದಲ್ಲೂ ಸಹಾ ತಂಡದ ಆತ್ಮಸ್ಥೈರ್ಯ ಹೆಚ್ಚಿಸುವ ವಾತಾವರಣವನ್ನು ನಿರ್ಮಿಸುತ್ತಾರೆ. ತಂಡದ ಕೋಚ್ ಆಗಿ ಇಂತಹ ಒಳ್ಳೆಯ ಆಟಗಾರರು ತಂಡದೊಳಗೆ ಇರಲಿ ಎಂದು ಬಯಸುತ್ತೇನೆ. ಆದರೆ ಈಗ ಎಬಿಡಿ ತೆಗೆದುಕೊಂಡ ತೀರ್ಮಾನವನ್ನು ಗೌರವಿಸುತ್ತೇನೆ. ನಾವು ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಮುಂದೆ ಗಮನ ಹರಿಸಬೇಕು ಎಂದು ಬೌಷರ್ ಹೇಳಿದ್ದಾರೆ.
ಎಬಿಡಿ ಅಭಿಮಾನಿಗಳಿಗೆ ಶಾಕ್; ಇನ್ ಯಾವತ್ತೂ ಆಫ್ರಿಕಾ ಪರ ಕ್ರಿಕೆಟ್ ಆಡೊಲ್ಲ ಮಿಸ್ಟರ್ 360..!
ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಪಂದ್ಯಗಳನ್ನಾಡಿ ಒಟ್ಟಾರೆ 47 ಶತಕ ಸಹಿತ 20,014 ರನ್ ಬಾರಿಸಿದ್ದಾರೆ. ಇನ್ನು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಎಬಿಡಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೇವಲ 7 ಪಂದ್ಯಗಳನ್ನಾಡಿ 207 ರನ್ ಬಾರಿಸಿದ್ದರು. ಸದ್ಯ ಕೋವಿಡ್ ಕಾರಣದಿಂದಾಗಿ 14ನೇ ಆವತ್ತಿಯ ಐಪಿಎಲ್ ಟೂರ್ನಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.