ವಿರಾಟ್ ಕೊಹ್ಲಿಗೆ ಬಿಟ್ಟಿ ಸಲಹೆ ಕೊಟ್ಟ ಶೋಯೆಬ್ ಅಖ್ತರ್..! ಪಾಕ್ ವೇಗಿಗೆ ದಾದಾ ಕೊಟ್ರು ಸೂಪರ್ ಆನ್ಸರ್

By Naveen KodaseFirst Published Aug 19, 2023, 6:00 PM IST
Highlights

ವಿಶ್ವಕಪ್‌ ಮುಗಿದ ಮೇಲೆ ಕೊಹ್ಲಿ ಒನ್‌ಡೇ ಕ್ರಿಕೆಟ್‌ಗೆ ವಿದಾಯ ಹೇಳಲಿ ಎಂದು ಅಖ್ತರ್
ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 05ರಿಂದ ಆರಂಭ
ಸಚಿನ್ ಅಪರೂಪದ ದಾಖಲೆ ಮುರಿಯಲು ಕೊಹ್ಲಿಗೆ ಇನ್ನೂ 6 ವರ್ಷ ಬೇಕೆಂದ ಪಾಕ್ ವೇಗಿ

ಬೆಂಗಳೂರು(ಆ.19): ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಇತ್ತೀಚೆಗಷ್ಟೇ, 2023ರ ಏಕದಿನ ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಏಕದಿನ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ವಿದಾಯ ಘೋಷಿಸಬೇಕು ಎನ್ನುವ ಸಲಹೆ ನೀಡಿದ್ದರು. ಸಚಿನ್‌ ತೆಂಡುಲ್ಕರ್ ಹೆಸರಿನಲ್ಲಿರುವ 100 ಶತಕಗಳ ದಾಖಲೆಯನ್ನು ಮುರಿಯಬೇಕಿದ್ದರೇ, ವರ್ಕ್‌ಲೋಡ್ ಮ್ಯಾನೇಜ್ ಮಾಡಬೇಕಿದ್ದರೇ, ಕೊಹ್ಲಿ ಈ ನಿರ್ಧಾರ ತೆಗೆದುಕೊಳ್ಳುವುದು ಒಳಿತು ಎಂದು ಹೇಳಿದ್ದರು.

Revsportz ಜತೆಗಿನ ಮಾತುಕತೆ ವೇಳೆ ಶೋಯೆಬ್ ಅಖ್ತರ್, ವಿರಾಟ್ ಕೊಹ್ಲಿ ದೀರ್ಘ ಸಮಯದ ಕಾಲ ಟೆಸ್ಟ್ ಕ್ರಿಕೆಟ್ ಆಡಬೇಕಿದ್ದರೇ, ಸೀಮಿತ ಓವರ್‌ಗಳ ಕ್ರಿಕೆಟ್ ಆಡುವುದನ್ನು ಕೈಬಿಡಬೇಕು. ಹೀಗಾಗದಿದ್ದಲ್ಲಿ ಅವರು ದೀರ್ಘ ಸಮಯದ ಕಾಲ ಟೆಸ್ಟ್ ಕ್ರಿಕೆಟ್ ಆಡುವ ಕನಸಿಗೂ ಹಿನ್ನಡೆಯಾಗಲಿದೆ ಎಂದು ಶೋಯೆಬ್ ಅಖ್ತರ್ ಅಭಿಪ್ರಾಯಪಟ್ಟಿದ್ದರು.

"ಈ ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ, ಹೆಚ್ಚು 50 ಓವರ್‌ಗಳ ಪಂದ್ಯಗಳನ್ನಾಡುತ್ತಾರೆ ಎಂದು ನನಗನಿಸುತ್ತಿಲ್ಲ. ಅದೇ ರೀತಿ ಟಿ20 ಕೂಡಾ. ಅವರು ಒಂದು ವೇಳೆ ಅವರು ಸಚಿನ್ ತೆಂಡುಲ್ಕರ್ ಹೆಸರಿನಲ್ಲಿರುವ 100 ಶತಕಗಳ ದಾಖಲೆಯನ್ನು ಮುರಿಯಬೇಕಿದ್ದರೇ, ಕೊಹ್ಲಿ ಇನ್ನೂ ಕನಿಷ್ಠ 6 ವರ್ಷಗಳ ಕಾಲ ಆಡಬೇಕು. ಹೀಗಾಗಿ ಈ ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನತ್ತ ಗಮನ ಹರಿಸಬೇಕು ಹಾಗೂ ಆ ದಾಖಲೆ ಮುರಿಯಬೇಕು" ಎಂದು ಬ್ಯಾಕ್‌ ಸ್ಟೇಜ್‌ ವಿಥ್ ಬೋರಿಯಾ ಕಾರ್ಯಕ್ರಮದಲ್ಲಿ ಅಖ್ತರ್ ಹೇಳಿದ್ದಾರೆ.

2024ರ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಯಾಕೆ ಆಡ್ಬೇಕು ಗೊತ್ತಾ..?

ಇನ್ನು ಶೋಯೆಬ್‌ ಅಖ್ತರ್ ಅವರ ಹೇಳಿಕೆಗೆ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮುಟ್ಟಿನೋಡಿಕೊಳ್ಳುವಂತಹ ತಿರುಗೇಟು ನೀಡಿದ್ದಾರೆ. ಈ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ದಾದಾ, "ಯಾಕೆ? ವಿರಾಟ್ ಕೊಹ್ಲಿ ಬಯಸಿದರೆ ಯಾವುದೇ ಮಾದರಿಯ ಕ್ರಿಕೆಟ್ ಆಡಲು ಅವರು ಸಮರ್ಥರಿದ್ದಾರೆ. ಯಾಕೆಂದರೆ ಅವರು ಅಷ್ಟು ಚೆನ್ನಾಗಿ ಪ್ರದರ್ಶನ ತೋರಲಿದ್ದಾರೆ" ಎಂದು ದಾದಾ ಹೇಳಿದ್ದಾರೆ.

ಇನ್ನು ಇದೇ ವೇಳೆ ಸೌರವ್ ಗಂಗೂಲಿ, ಈ ಬಾರಿ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡಗಳಲ್ಲಿ ಭಾರತ ಕೂಡಾ ಒಂದು ಎಂದು ಅಭಿಪ್ರಾಯಪಟ್ಟಿದ್ದಾರೆ. ಸೆಮೀಸ್‌ಗೆ ಯಾವೆಲ್ಲಾ ತಂಡಗಳು ಬರಬಹುದು ಎನ್ನುವ ಪ್ರಶ್ನೆಗೆ, ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಪ್ರಬಲ ಪೈಪೋಟಿ ನೀಡಬಹುದು. ಹಾಗಂತ ನ್ಯೂಜಿಲೆಂಡ್ ತಂಡವನ್ನು ಕೂಡಾ ಕಡೆಗಣಿಸುವಂತಿಲ್ಲ ಎಂದು ದಾದಾ ಹೇಳಿದ್ದಾರೆ.

ಯುವರಾಜ್ ಸಿಂಗ್ ಅವರಂತ ಮತ್ತೊಬ್ಬ ಆಟಗಾರ ಸಿಕ್ಕಿಲ್ಲ..! ಟೀಂ ಇಂಡಿಯಾ ಸಮಸ್ಯೆ ಬಿಚ್ಚಿಟ್ಟ ರೋಹಿತ್ ಶರ್ಮಾ

ಭಾರತ ಕ್ರಿಕೆಟ್‌ ತಂಡದಲ್ಲಿ ವಿಶ್ವಕಪ್ ಹಾಗೂ ಏಷ್ಯಾಕಪ್ ಟೂರ್ನಿಗೆ ಸಾಕಷ್ಟು ಆಯ್ಕೆಗಳಿವೆ. ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ಜೋಡಿ ಸರಿಯಾದ ಕಾಂಬಿನೇಷನ್‌ನಲ್ಲಿ ಕಣಕ್ಕಿಳಿಯಬೇಕು ಎಂದು ದಾದಾ ಅಭಿಪ್ರಾಯಪಟ್ಟಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಅಗ್ರಕ್ರಮಾಂಕದಲ್ಲಿ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಒಳ್ಳೆಯ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್‌ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಿದೆ. ಫೈನಲ್‌ ಪಂದ್ಯವು ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

click me!