
ಕೋಲ್ಕತ್ತಾ: ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನು ಭಾರತೀಯ ತಂಡಕ್ಕೆ ಪರಿಗಣಿಸದ ಬಗ್ಗೆ ಮಾಜಿ ಭಾರತೀಯ ನಾಯಕ ಮತ್ತು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸೌರವ್ ಗಂಗೂಲಿ ಮೊದಲ ಸಲ ಪ್ರತಿಕ್ರಿಯಿಸಿದ್ದಾರೆ. ಶಮಿಯನ್ನು ಹೊರಗಿಡಲು ಯಾವುದೇ ಕಾರಣ ಕಾಣುತ್ತಿಲ್ಲ, ರಣಜಿಯಲ್ಲಿ ದೀರ್ಘ ಸ್ಪೆಲ್‌ಗಳನ್ನು ಬೌಲ್ ಮಾಡಿ ವಿಕೆಟ್‌ಗಳನ್ನು ಪಡೆದು ಶಮಿ ಫಿಟ್‌ನೆಸ್ ಮತ್ತು ಫಾರ್ಮ್ ಎರಡನ್ನೂ ಸಾಬೀತುಪಡಿಸಿದ್ದಾರೆ ಎಂದು ಗಂಗೂಲಿ ಕೋಲ್ಕತ್ತಾದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಶಮಿ ಒಬ್ಬ ಅಸಾಮಾನ್ಯ ಬೌಲರ್ ಎಂಬುದು ಎಲ್ಲರಿಗೂ ತಿಳಿದಿದೆ. ಕಳೆದ ಎರಡು-ಮೂರು ರಣಜಿ ಪಂದ್ಯಗಳಲ್ಲಿ ಬಂಗಾಳವನ್ನು ಏಕಾಂಗಿಯಾಗಿ ಗೆಲ್ಲಿಸಿದ್ದಾರೆ. ಆಯ್ಕೆಗಾರರು ಇದನ್ನು ಖಂಡಿತ ಗಮನಿಸುತ್ತಿರಬಹುದು. ಶಮಿ ಮತ್ತು ಆಯ್ಕೆಗಾರರ ನಡುವೆ ಮಾತುಕತೆ ನಡೆದಿರಬಹುದು ಎಂದು ಭಾವಿಸುತ್ತೇನೆ. ಆದರೆ ಆ ವಿಷಯ ನನಗೆ ಖಚಿತವಿಲ್ಲ. ಆದರೆ ಫಾರ್ಮ್ ಮತ್ತು ಫಿಟ್‌ನೆಸ್ ನೋಡಿದರೆ, ಶಮಿಯನ್ನು ಟೆಸ್ಟ್, ಏಕದಿನ ಮತ್ತು ಟಿ20 ತಂಡಗಳಿಂದ ಹೊರಗಿಡಲು ನನಗೆ ಯಾವುದೇ ಕಾರಣ ಕಾಣುತ್ತಿಲ್ಲ. ಯಾಕೆಂದರೆ, ಅವನು ಅಷ್ಟು ಪ್ರತಿಭಾವಂತ ಆಟಗಾರ ಎಂದು ಗಂಗೂಲಿ ಹೇಳಿದರು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ತಂಡದಿಂದ ಶಮಿಯನ್ನು ಆಯ್ಕೆಗಾರರು ಕಡೆಗಣಿಸಿದ್ದರು. ಶಮಿಗೆ ಫಿಟ್‌ನೆಸ್ ಇಲ್ಲ ಎಂದು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಈ ಹಿಂದೆ ಹೇಳಿದ್ದರು. ಆದರೆ, ಬಂಗಾಳ ಪರ ರಣಜಿ ಟ್ರೋಫಿ ಆಡಲಿಳಿದ ಶಮಿ, ಮೊದಲ ಎರಡು ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ಪಡೆದು, ದೀರ್ಘ ಸ್ಪೆಲ್‌ಗಳನ್ನು ಬೌಲ್ ಮಾಡಿ ತಮ್ಮ ಫಿಟ್‌ನೆಸ್ ಸಾಬೀತುಪಡಿಸಿದ್ದರು. ಟೆಸ್ಟ್ ತಂಡಕ್ಕೆ ಪರಿಗಣಿಸದ ಕಾರಣಕ್ಕೆ ಆಯ್ಕೆಗಾರರ ವಿರುದ್ಧ ಶಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
ನನಗೆ ಯಾವುದೇ ಫಿಟ್‌ನೆಸ್ ಸಮಸ್ಯೆಗಳಿಲ್ಲ, ನನ್ನ ಫಿಟ್‌ನೆಸ್ ಬಗ್ಗೆ ಆಯ್ಕೆಗಾರರು ಯಾರೂ ವಿಚಾರಿಸಿಲ್ಲ, ನಾನಾಗಿಯೇ ಕರೆ ಮಾಡಿ ತಿಳಿಸುವ ಉದ್ದೇಶವಿಲ್ಲ ಎಂದು ಶಮಿ ಹೇಳಿದ್ದರು. ಅಗರ್ಕರ್ ಏನು ಬೇಕಾದರೂ ಹೇಳಲಿ, ನಾನು ಫಿಟ್ ಆಗಿದ್ದೇನೆಯೇ ಎಂಬುದು ಈ ಪಂದ್ಯ ನೋಡಿದ ಪತ್ರಕರ್ತರಿಗೆಲ್ಲಾ ಗೊತ್ತಾಗಿದೆಯಲ್ಲವೇ ಎಂದು ಶಮಿ ಜಾರ್ಖಂಡ್ ವಿರುದ್ಧದ ಪಂದ್ಯದ ನಂತರ ಹೇಳಿದ್ದರು. ಬಂಗಾಳ ಪರ ಮೊದಲ ಮೂರು ರಣಜಿ ಪಂದ್ಯಗಳನ್ನು ಆಡಿದ್ದ ಶಮಿ, ನಾಲ್ಕನೇ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದರು.
ಯುವ ಆಟಗಾರರಿಗೆ ಅವಕಾಶ ನೀಡುವ ಉದ್ದೇಶದಿಂದ ಮೊಹಮ್ಮದ್ ಶಮಿಯನ್ನು ಆಯ್ಕೆಗೆ ಪರಿಗಣಿಸುತ್ತಿಲ್ಲ ಎನ್ನುವಂತಹ ಮಾತುಗಳು ಕೇಳಿ ಬರುತ್ತಿವೆ. ಇದರ ಹೊರತಾಗಿಯೂ ಉತ್ತಮವಾದ ಫಾರ್ಮ್ ಹಾಗೂ ಫಿಟ್ನೆಸ್ ಹೊಂದಿರುವ ಶಮಿಯನ್ನು ತವರಿನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದಲೂ ಕೈಬಿಟ್ಟಿರುವುದು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮೇಲೆ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.