
ನಾಟಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತದ ಸ್ಮೃತಿ ಮಂಧನಾ ಶತಕ ಬಾರಿಸಿದ್ದು, ಹಲವು ದಾಖಲೆ ಬರೆದಿದ್ದಾರೆ. ಎಲ್ಲಾ ಮೂರು ಮಾದರಿ(ಟೆಸ್ಟ್, ಏಕದಿನ, ಅಂ.ರಾ. ಟಿ20)ಯಲ್ಲಿ ಶತಕ ಬಾರಿಸಿದ ಭಾರತದ ಮೊದಲ, ವಿಶ್ವದ 5ನೇ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಈ ಮೊದಲು ಇಂಗ್ಲೆಂಡ್‌ನ ಹೀಥರ್ ನೈಟ್, ಟಾಮಿ ಬ್ಯೂಮೊಂಟ್, ದ.ಆಫ್ರಿಕಾದ ಲಾರಾ ವೊಲ್ವಾರ್ಟ್, ಆಸ್ಟ್ರೇಲಿಯಾ ಬೆಥ್ ಮೂನಿ ಈ ಸಾಧನೆ ಮಾಡಿದ್ದರು.
ಸ್ಮೃತಿ 51 ಎಸೆತದಲ್ಲಿ ಶತಕ ಪೂರ್ಣಗೊಳಿಸಿದರು. ಇದು ಮಹಿಳೆಯರ ಅಂ.ರಾ. ಟಿ20ಯಲ್ಲಿ 4ನೇ ಜಂಟಿ ವೇಗದ ಶತಕ. ವಿಂಡೀಸ್‌ನ ಡಿಯಾಂಡ್ರ ಡೊಟಿನ್ 38, ಇಂಗ್ಲೆಂಡ್‌ನ ಬ್ಯೂಮೊಂಟ್ 47, ಭಾರತದ ಹರ್ಮನ್‌ಪ್ರೀತ್ ಕೌರ್ 49, ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ 51 ಎಸೆತದಲ್ಲಿ ಶತಕ ಬಾರಿಸಿದ್ದಾರೆ. ಅಲ್ಲದೆ, ಭಾರತ ಮಹಿಳಾ ತಂಡದ ಪರ ಟಿ20 ಶತಕ ಬಾರಿಸಿದ 2ನೇ ಆಟಗಾರ್ತಿ ಮಂಧನಾ. 2018ರಲ್ಲಿ ನ್ಯೂಜಿಲೆಂಡ್ ವಿರುದ್ಧ ಹರ್ಮನ್‌ಪ್ರೀತ್ ಶತಕ ಸಿಡಿಸಿದ್ದರು.
ಭಾರತಕ್ಕೆ 97 ರನ್ ಬೃಹತ್ ಜಯ!
ನಾಟಿಂಗ್‌ಹ್ಯಾಮ್: ಇಂಗ್ಲೆಂಡ್ ಮಹಿಳೆಯರ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ 97 ರನ್ ಬೃಹತ್ ಗೆಲುವು ಸಾಧಿಸಿದ್ದು, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಮುಂದಿನ ವರ್ಷದ ಜೂನ್‌ನಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಜರುಗಲಿದ್ದು, ಈ ಟೂರ್ನಿಗೂ ಮುನ್ನ ಇಂಗ್ಲೆಂಡ್ ಎದುರಿನ ಸರಣಿಯು ಭಾರತ ತಂಡದ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 5 ವಿಕೆಟ್ ನಷ್ಟದಲ್ಲಿ 210 ರನ್ ಗಳಿಸಿತು. ಆರಂಭದಲ್ಲೇ ಸ್ಫೋಟಕ ಆಟವಾಡಿದ ಸ್ಮೃತಿ ಮಂಧನಾ 27 ಎಸೆತಗಳಲ್ಲಿ ಅರ್ಧಶತಕ, 51 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. 20ನೇ ಓವರ್‌ವರೆಗೂ ಕ್ರೀಸ್‌ನಲ್ಲಿದ್ದ ಅವರು ಅಂತಾರಾಷ್ಟ್ರೀಯ ಟಿ20ಯಲ್ಲಿ ಚೊಚ್ಚಲ ಶತಕ ಬಾರಿಸಿದರು. ಅವರು 62 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್‌ನೊಂದಿಗೆ 112 ರನ್ ಗಳಿಸಿದರು. ಹರ್ಲಿನ್ ಡಿಯೋಲ್ 23 ಎಸೆತಕ್ಕೆ 43 ರನ್ ಗಳಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. ಇಂಗ್ಲೆಂಡ್ ಪರ ಲಾರೆನ್ ಬೆಲ್ 3 ವಿಕೆಟ್ ಕಿತ್ತರು.
ದೊಡ್ಡ ಗುರಿ ಬೆನ್ನತ್ತಿದ ಇಂಗ್ಲೆಂಡ್ ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೊಳಗಾಯಿತು. ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 14.5 ಓವರ್‌ಗಳಲ್ಲಿ 113 ರನ್‌ಗೆ ಆಲೌಟಾಯಿತು. ನಾಯಕಿ ನ್ಯಾಟ್ ಶೀವರ್ ಬ್ರಂಟ್(42 ಎಸೆತಕ್ಕೆ 66) ಹೊರತುಪಡಿಸಿ ಬೇರೆ ಯಾರೂ ಹೋರಾಟ ಪ್ರದರ್ಶಿಸಲಿಲ್ಲ. ಚೊಚ್ಚಲ ಪಂದ್ಯವಾಡಿದ ಶ್ರೀ ಚರಣಿ 3.5 ಓವರ್‌ಗಳಲ್ಲಿ 12 ರನ್‌ಗೆ 4 ವಿಕೆಟ್ ಕಿತ್ತರು.
ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗೆ ಅತಿದೊಡ್ಡ ಅಂತರದ ಸೋಲು: ಭಾರತ ಮಹಿಳಾ ಕ್ರಿಕೆಟ್ ತಂಡ ಎದುರು ಇಂಗ್ಲೆಂಡ್ ತಂಡವು ಬರೋಬ್ಬರಿ 97 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ಗೆ ಎದುರಾದ ಅತಿದೊಡ್ಡ ಅಂತರದ ಸೋಲು ಎನಿಸಿಕೊಂಡಿದೆ. ಈ ಮೊದಲು 2019ರಲ್ಲಿ ಇಂಗ್ಲೆಂಡ್ ಮಹಿಳಾ ತಂಡವು ಆಸೀಸ್ ಎದುರು 93 ರನ್ ಅಂತರದ ಸೋಲು ಅನುಭವಿಸಿತ್ತು.
ಸ್ಕೋರ್: ಭಾರತ 20 ಓವರಲ್ಲಿ 210/5 (ಸ್ಮೃತಿ 112, ಹರ್ಲಿನ್ 43, ಲಾರೆನ್ 3-27), ಇಂಗ್ಲೆಂಡ್ 14.5 ಓವರಲ್ಲಿ 113/10 (ಬ್ರಂಟ್ 66, ಆರ್ಲೊಟ್ 12, ಚರಣಿ 4-12, ರಾಧಾ 2-15, ದೀಪ್ತಿ 2-32)
ಪಂದ್ಯಶ್ರೇಷ್ಠ: ಸ್ಮೃತಿ ಮಂಧನಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.