ಅಹಮದಾಬಾದ್: ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಮಾರಕ ದಾಳಿ ಹಾಗೂ ಕನ್ನಡಿಗ ಕೆ.ಎಲ್.ರಾಹುಲ್ ಅಮೋಘ ಬ್ಯಾಟಿಂಗ್ ನೆರವಿನಿಂದ ವೆಸ್ಟ್‌ಇಂಡೀಸ್ ವಿರುದ್ಧ ಮೊದಲ ಟೆಸ್ಟ್‌ನ ಮೊದಲ ದಿನ ಭಾರತ ಪ್ರಾಬಲ್ಯ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ಕೇವಲ 162 ರನ್‌ಗೆ ಆಲೌಟಾಯಿತು. ಬಳಿಕ ಬ್ಯಾಟಿಂಗ್ ಆರಂಭಿಸಿರುವ ಭಾರತ ಮೊದಲ ದಿನದಂತ್ಯಕ್ಕೆ 2 ವಿಕೆಟ್ ನಷ್ಟದಲ್ಲಿ 121 ರನ್ ಗಳಿಸಿದ್ದು, ಇನ್ನು ಕೇವಲ 41 ರನ್ ಹಿನ್ನಡೆಯಲ್ಲಿದೆ. ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮುನ್ನಡೆ ಸಾಧಿಸಿ, ಸುಲಭದಲ್ಲಿ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ.
ಕುಸಿದ ವೆಸ್ಟ್‌ಇಂಡೀಸ್: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿಂಡೀಸ್‌ಗೆ ಯಾವ ಕ್ಷಣದಲ್ಲೂ ಭಾರತದ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ. ಮೊದಲ ಅವಧಿಯಲ್ಲೇ 5 ವಿಕೆಟ್ ಕಳೆದುಕೊಂಡ ವಿಂಡೀಸ್, ಬಳಿಕ ಚೇತರಿಸಿ ಕೊಳ್ಳಲಿಲ್ಲ. ತಂಡದ ಇನ್ನಿಂಗ್ಸ್ 44.1 ಓವರ್‌ಗಳಲ್ಲಿ ಕೊನೆಗೊಂಡಿತು. ಆರಂಭಿಕ ಐವರು ಬ್ಯಾಟರ್‌ಗಳ ಪೈಕಿ ನಾಲ್ವರನ್ನು ಮೊಹಮ್ಮದ್ ಸಿರಾಜ್ ಪೆವಿಲಿಯನ್‌ಗೆ ಅಟ್ಟಿದರು. ತೇಜ್‌ನರೈನ್ ಚಂದ್ರಪಾಲ್ (0), ಅಲಿಕ್ ಅಥನಾಜ್ (12), ಬ್ರೆಂಡಾನ್ ಕಿಂಗ್ (13), ನಾಯಕ ರೋಸ್ಟನ್ ಚೇಸ್ (24) ಸಿರಾಜ್‌ಗೆ ಬಲಿಯಾದರು. ಮತ್ತೊಂದೆಡೆ ಬುಮ್ರಾ ಕೂಡಾ ಅತ್ಯಮೋಘ ದಾಳಿ ನಡೆಸಿದರು. ಜಸ್ಟಿನ್ ಗ್ರೀನ್ಸ್(32) ಗರಿಷ್ಠ ಮೊತ್ತ ದಾಖಲಿಸಿದರು.
ಬಳಿಕ ಇನ್ನಿಂಗ್ಸ್ ಆರಂಭಿಸಿದ ಭಾರತ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಮೊದಲ ವಿಕೆಟ್‌ಗೆ ಕೆ.ಎಲ್. ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ 68 ರನ್ ಸೇರಿಸಿದರು. ನಿಧಾನ ಆರಂಭದ ಬಳಿಕ ಬೌಂಡರಿಗಳ ಮೂಲಕವೇ ರನ್ ಕಲೆಹಾಕಲು ನಿಂತ ಜೈಸ್ವಾಲ್ 36 ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಬಂದ ಸಾಯಿ ಸುದರ್ಶನ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಅವರ ಇನ್ನಿಂಗ್ಸ್ 1 ರನ್‌ಗೆ ಕೊನೆಗೊಂಡಿತು. ಆದರೆ ಕೊನೆ ಅವಧಿ ಪೂರ್ತಿ ಕ್ರೀಸ್ ಕಚ್ಚಿನಿಂತ ರಾಹುಲ್, ಆಕರ್ಷಕ ಅರ್ಧಶತಕ ಬಾರಿಸಿದರು. ಅವರು 114 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 53 ರನ್ ಗಳಿಸಿದ್ದು, ನಾಯಕ ಗಿಲ್ (ಔಟಾಗದೆ 18) ಜೊತೆ 2ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಸ್ಕೋರ್: ವೆಸ್ಟ್‌ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 162/10 (ಗ್ರೀನ್ಸ್ 32, ಹೋಪ್ 26, ಸಿರಾಜ್ 4-40),
ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 121/2 (ಮೊದಲ ದಿನದಂತ್ಯಕ್ಕೆ) (ರಾಹುಲ್ ಔಟಾಗದೆ 53, ಜೈಸ್ವಾಲ್ 36, ರಾಸ್ಟನ್ ಚೇಸ್ 1-16)
ಭಾರತದಲ್ಲಿ ಅತಿ ವೇಗವಾಗಿ (ಎಸೆತಗಳ ಆಧಾರದಲ್ಲಿ) 50 ವಿಕೆಟ್ ಪೂರೈಸಿದ ಬೌಲರ್ ಎಂಬ ದಾಖಲೆಯನ್ನು ಬುಮ್ರಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅವರು 1747 ಎಸೆತಗಳಲ್ಲೇ ಈ ಮೈಲುಗಲ್ಲು ತಲುಪಿದ್ದಾರೆ. ಇನ್ನಿಂಗ್ಸ್ ಆಧಾರದಲ್ಲಿ ಅತಿವೇಗದ 50 ವಿಕೆಟ್ ಕಿತ್ತ ಸಾಧಕರ ಪಟ್ಟಿಯಲ್ಲಿ ಬುಮ್ರಾ ಅವರು ಜಾವಗಲ್ ಶ್ರೀನಾಥ್ ದಾಖಲೆ ಯನ್ನು ಸರಿಗಟ್ಟಿದ್ದಾರೆ. ಇವರಿಬ್ಬರೂ 24 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಮೊದಲ ಟೆಸ್ಟ್‌ನ ಮೊದಲ ದಿನ ಅಹಮದಾಬಾದ್ ಕ್ರೀಡಾಂಗಣಕ್ಕೆ ಹೆಚ್ಚಿನ ಪ್ರೇಕ್ಷಕರು ಆಗಮಿಸಲಿಲ್ಲ. 1.32 ಲಕ್ಷ ಆಸನ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣದಲ್ಲಿ ಕೆಲವೇ ಸಾವಿರ ಪ್ರೇಕ್ಷಕರಿದ್ದರು. ಈ ಬಗ್ಗೆ ಹಲವರು ಸಾಮಾಜಿಕ ತಾಣಗಳಲ್ಲಿ ಬಿಸಿಸಿಐ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ. ಏಷ್ಯಾಕಪ್ ಮುಗಿದ ಕೆಲ ದಿನಗಳಲ್ಲೇ, ಅದು ಕೂಡಾ ವಿಶ್ವದ ಅತಿ ದೊಡ್ಡ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜಿಸುತ್ತಿರುವ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.