ನರೇಂದ್ರ ಮೋದಿ ಸ್ಟೇಡಿಯಂನಲ್ಲಿಂದು ಐಪಿಎಲ್ 2023 ಫೈನಲ್
ಪ್ರಶಸ್ತಿಗಾಗಿ ಚೆನ್ನೈ ಸೂಪರ್ ಕಿಂಗ್ಸ್-ಗುಜರಾತ್ ಟೈಟಾನ್ಸ್ ಕಾದಾಟ
ಫೈನಲ್‌ನಲ್ಲಿ ಹಲವು ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆ
ಅಹಮದಾಬಾದ್(ಮೇ.28): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿರ್ಣಾಯಕ ಘಟ್ಟ ತಲುಪಿದ್ದು, ಫೈನಲ್ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಹಾಗೂ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.
2023ನೇ ಸಾಲಿನ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಲೀಗ್ ಹಂತದ ಅಂತ್ಯದ ವೇಳೆಗೆ ಗುಜರಾತ್ ಹಾಗೂ ಚೆನ್ನೈ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದಿದ್ದವು. ಇದಾದ ಬಳಿಕ ಇದೀಗ ಫೈನಲ್‌ನಲ್ಲಿ ಮತ್ತೊಮ್ಮೆ ಈ ಎರಡು ತಂಡಗಳು ಮುಖಾಮುಖಿಯಾಗಲು ವೇದಿಕೆ ಸಜ್ಜಾಗಿದೆ. ಈ ಪಂದ್ಯವು ಹಲವು ಅಪರೂಪದ ದಾಖಲೆಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
undefined
ವಿರಾಟ್ ಕೊಹ್ಲಿ ದಾಖಲೆ ಮುರೀತಾರಾ ಶುಭ್‌ಮನ್ ಗಿಲ್?
ಐಪಿಎಲ್ ಆವೃತ್ತಿಯೊಂದರಲ್ಲಿ ಗರಿಷ್ಠ ರನ್ ಕಲೆಹಾಕಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2016ರ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 16 ಪಂದ್ಯಗಳನ್ನಾಡಿ 4 ಶತಕ ಸಹಿತ 973 ರನ್ ಬಾರಿಸಿದ್ದರು. ಈ ದಾಖಲೆ ಕಳೆದ 7 ವರ್ಷಗಳಿಂದಲೂ ಅಚ್ಚಳಿಯದೇ ಉಳಿದಿದೆ. ಇನ್ನು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶುಭ್‌ಮನ್ ಗಿಲ್ 16 ಪಂದ್ಯಗಳನ್ನಾಡಿ 3 ಶತಕ ಹಾಗೂ 4 ಅರ್ಧಶತಕ ಸಹಿತ 851 ರನ್ ಬಾರಿಸಿದ್ದಾರೆ.
IPL Final 2023: ಮಳೆ ಬಂದರೆ ಏನಾಗಲಿದೆ? ಇಲ್ಲಿದೆ ಕ್ಷಣ ಕ್ಷಣದ ಮಾಹಿತಿ
ಒಂದು ವೇಳೆ ಫೈನಲ್‌ನಲ್ಲಿ ಶುಭ್‌ಮನ್ ಗಿಲ್ 123 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ ಹೆಸರಿನಲ್ಲಿರುವ ಸಾರ್ವಕಾಲಿಕ ದಾಖಲೆಯನ್ನು ಮುರಿಯಬಹುದು. 2022ರ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ಬ್ಯಾಟರ್ ಜೋಸ್ ಬಟ್ಲರ್ 863 ರನ್ ಚಚ್ಚಿದ್ದರು. ಬಟ್ಲರ್ ದಾಖಲೆ ಮುರಿಯಲು ಶುಭ್‌ಮನ್ ಗಿಲ್ ಇನ್ನು ಕೇವಲ 13 ರನ್ ಗಳಿಸಬೇಕಿದೆ.
ಹರ್ಷಲ್ ಪಟೇಲ್‌ಮ ಬ್ರಾವೋ ದಾಖಲೆ ಸರಿಗಟ್ಟುತ್ತಾರಾ ಶಮಿ?
ಐಪಿಎಲ್ ಆವೃತ್ತಿಯೊಂದರಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ದಾಖಲೆ ಹರ್ಷಲ್ ಪಟೇಲ್ ಹಾಗೂ ಡ್ವೇನ್ ಬ್ರಾವೋ ಅವರ ಹೆಸರಿನಲ್ಲಿದೆ. 2021ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಹರ್ಷಲ್ ಪಟೇಲ್ 15 ಪಂದ್ಯಗಳನ್ನಾಡಿ 32 ವಿಕೆಟ್ ಕಬಳಿಸಿದ್ದರು. ಇನ್ನು ಇದಕ್ಕೂ ಮೊದಲು 2013ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಬ್ರಾವೋ 18 ಪಂದ್ಯಗಳನ್ನಾಡಿ 32 ವಿಕೆಟ್ ಪಡೆದಿದ್ದರು. ಸದ್ಯ ಗುಜರಾತ್ ಟೈಟಾನ್ಸ್ ತಂಡದ ವೇಗಿ ಮೊಹಮ್ಮದ್ ಶಮಿ16 ಪಂದ್ಯಗಳನ್ನಾಡಿ 28 ಬಲಿ ಪಡೆದಿದ್ದು, ಒಂದು ವೇಳೆ ಫೈನಲ್‌ನಲ್ಲಿ 5 ವಿಕೆಟ್ ಕಬಳಿಸಿದರೆ, ಹರ್ಷಲ್ ಪಟೇಲ್ ಹಾಗೂ ಡ್ವೇನ್ ಬ್ರಾವೋ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ಗುಜರಾತ್ ಗೆದ್ದರೆ ದಾಖಲೆ!
ಫೈನಲ್‌ನಲ್ಲಿ ಗುಜರಾತ್ ಗೆದ್ದರೆ ಸತತ 2 ಬಾರಿ ಟ್ರೋಫಿ ಗೆದ್ದ 3ನೇ ತಂಡ ಎನ್ನುವ ದಾಖಲೆ ಬರೆಯಲಿದೆ. ಈ ಮೊದಲು 2010, 2011ರಲ್ಲಿ ಚೆನ್ನೈ ಸತತ 2 ಬಾರಿ ಚಾಂಪಿಯನ್ ಆಗಿದ್ದರೆ, ಮುಂಬೈ 2019, 2020ರಲ್ಲಿ ಪ್ರಶಸ್ತಿ ಗೆದ್ದಿತ್ತು.
5 ಬಾರಿ ಫೈನಲ್ ಸೋತಿದೆ ಚೆನ್ನೈ!
ಚೆನ್ನೈ 4 ಬಾರಿ ಪ್ರಶಸ್ತಿ ಗೆದ್ದಿದ್ದರೂ 5 ಬಾರಿ ಫೈನಲ್‌ನಲ್ಲಿ ಎಡವಿ ರನ್ನರ್-ಅಪ್ ಆಗಿತ್ತು. 2008ರ ಚೊಚ್ಚಲ ಆವೃತ್ತಿ, 2012, 2013, 2015 ಹಾಗೂ 2019ರಲ್ಲಿ ತಂಡ ಫೈನಲ್‌ನಲ್ಲಿ ಸೋತಿದೆ. ಈ ಪೈಕಿ ಮೂರರಲ್ಲಿ ಮುಂಬೈ ವಿರುದ್ಧವೇ ಪರಾಭವಗೊಂಡಿದೆ.