ಇಂದು ಅಹಮದಾಬಾದ್ನಲ್ಲಿ ಫೈನಲ್ ಪಂದ್ಯ
ಸತತ 2ನೇ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿ ಗುಜರಾತ್
10ನೇ ಬಾರಿ ಫೈನಲ್ ಆಡುತ್ತಿರುವ ಚೆನ್ನೈಗೆ 5ನೇ ಪ್ರಶಸ್ತಿ ಗೆಲ್ಲುವ ಗುರಿ
ಸಿಎಸ್ಕೆ ಗೆದ್ದರೆ ಮುಂಬೈ ಇಂಡಿಯನ್ಸ್ ದಾಖಲೆ ಸಮ
ಅಹಮದಾಬಾದ್(ಮೇ.28): ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್‌್ಸನ ಪಂದ್ಯದೊಂದಿಗೆ ಆರಂಭಗೊಂಡಿದ್ದ 16ನೇ ಆವೃತ್ತಿ ಐಪಿಎಲ್ ಇದೀಗ ಅದೇ ತಂಡಗಳ ಮುಖಾಮುಖಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಟೂರ್ನಿಯ ಕ್ಲೈಮಾಕ್ಸ್ ಹಂತ ತಲುಪಿದ್ದು, ‘ಈ ಸಲ ಕಪ್ ಯಾರಿಗೆ’ ಎಂಬ ಕುತೂಹಲಕ್ಕೆ ಭಾನುವಾರ ಉತ್ತರ ಸಿಗಲಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್ನಲ್ಲಿ 4 ಬಾರಿ ಚಾಂಪಿಯನ್ ಚೆನ್ನೈ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಕಾದಾಡಲಿವೆ. ಇದರೊಂದಿಗೆ ಕೊನೆ ಆವೃತ್ತಿ ಎಂದೇ ಹೇಳಲಾಗುತ್ತಿರುವ ಎಂ.ಎಸ್.ಧೋನಿಗೆ ಚೆನ್ನೈ ವಿದಾಯದ ಗಿಫ್ಟ್ ನೀಡಲಿದೆಯೇ ಅಥವಾ ತವರಿನ ಅಂಗಳದಲ್ಲಿ ಸತತ 2ನೇ ಪ್ರಶಸ್ತಿ ಗೆದ್ದು ಗುಜರಾತ್ ಟೈಟಾನ್ಸ್ ಮತ್ತೊಂದು ಸೂಪರ್ ಪವರ್ ತಂಡ ಎನಿಸಿಕೊಳ್ಳಲಿದೆಯೇ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
undefined
ಕಳೆದ ಬಾರಿಯಷ್ಟೇ ಐಪಿಎಲ್ಗೆ ಕಾಲಿರಿಸಿದ್ದ ಗುಜರಾತ್ ಈ ಬಾರಿಯೂ ಫೈನಲ್ಗೇರಿದ್ದು ಅಚ್ಚರಿಯ ಸಂಗತಿಯೇನಲ್ಲ. ಟೂರ್ನಿಯುದ್ದಕ್ಕೂ ಅಬ್ಬರಿಸಿದ್ದ ತಂಡ ಅರ್ಹವಾಗಿಯೇ ಫೈನಲ್ ಟಿಕೆಟ್ ಪಡೆದಿದೆ. ಆದರೆ ಕಳೆದ ವರ್ಷ 9ನೇ ಸ್ಥಾನಿಯಾಗಿದ್ದ ಚೆನ್ನೈ ಈ ಬಾರಿ ಹಲವು ಸಮಸ್ಯೆಗಳನ್ನು ಮೆಟ್ಟಿನಿಂತು ಕಮ್ಬ್ಯಾಕ್ ಸಾಹಸದೊಂದಿಗೆ ಫೈನಲ್ಗೇರಿದೆ. 10ನೇ ಬಾರಿ ಫೈನಲ್ ಆಡುತ್ತಿರುವ ತಂಡ 5ನೇ ಪ್ರಶಸ್ತಿ ಗೆದ್ದು ಮುಂಬೈ ಇಂಡಿಯನ್ಸ್ನ ದಾಖಲೆ ಸರಿಗಟ್ಟುವ ತವಕದಲ್ಲಿದೆ.
ಗುಂಪು ಹಂತದಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದಿದ್ದ ಉಭಯ ತಂಡಗಳು ಈಗಾಗಲೇ ಮೊದಲ ಕ್ವಾಲಿಫೈಯರ್ನಲ್ಲಿ ಮುಖಾಮುಖಿಯಾಗಿದ್ದು, ಚೆನ್ನೈ ಗೆದ್ದು ನೇರವಾಗಿ ಫೈನಲ್ ಪ್ರವೇಶಿಸಿತ್ತು. ಸೋತಿದ್ದ ಗುಜರಾತ್ ಬಳಿಕ ಮುಂಬೈ ವಿರುದ್ಧದ 2ನೇ ಕ್ವಾಲಿಫೈಯರ್ನಲ್ಲಿ ಜಯಿಸಿ ಪ್ರಶಸ್ತಿ ಸುತ್ತು ತಲುಪಿದೆ.
'ಒಂದು ವೇಳೆ ನಾನೇ ಆಯ್ಕೆಗಾರನಾಗಿದ್ದರೇ..': ವಿರಾಟ್ ಟಿ20 ಬದುಕಿನ ಬಗ್ಗೆ ತುಟಿಬಿಚ್ಚಿದ ಸನ್ನಿ..!
ಗಿಲ್ vs ಚೆನ್ನೈ: ಮೇಲ್ನೋಟಕ್ಕೆ ಎರಡೂ ತಂಡಗಳು ಬಲಿಷ್ಠವಾಗಿ ತೋರುತ್ತಿದ್ದರೂ ಚೆನ್ನೈ ಪಾಲಿಗೆ ತಲೆನೋವಾಗಿ ಕಾಣುತ್ತಿರುವುದು ಶುಭ್‌ಮನ್ ಗಿಲ್. ಕಳೆದ 4 ಪಂದ್ಯಗಳಲ್ಲಿ 3 ಭರ್ಜರಿ ಶತಕ. 16 ಪಂದ್ಯಗಳಲ್ಲಿ 851 ರನ್ ಸಿಡಿಸಿರುವ ಗಿಲ್ ವಿರುದ್ಧ ಧೋನಿ ತಮ್ಮ ಸ್ಪಿಸ್ ಅಸ್ತ್ರಗಳನ್ನು ಹೇಗೆ ಬಳಸಲಿದ್ದಾರೆ ಎನ್ನುವ ಕುತೂಹಲವಿದೆ. ಉಳಿದಂತೆ ಇತರೆ ಬ್ಯಾಟರ್ಗಳ ಪೈಕಿ ಸಾಯಿ ಸುದರ್ಶನ್, ಸಾಹ, ಶಂಕರ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ರಶೀದ್ ಆಲ್ರೌಂಡ್ ಆಟ ತಂಡದ ಸೋಲು ಗೆಲುವನ್ನು ನಿರ್ಧರಿಸುವಂತಿದ್ದು, ಶಮಿ, ಮೋಹಿತ್ ನಿರ್ಣಾಯಕ ಎನಿಸಿದ್ದಾರೆ.
ಮತ್ತೊಂದೆಡೆ ಚೆನ್ನೈ ಸಂಘಟಿತ ಆಟದ ಮೂಲಕ ಪಂದ್ಯ ಗೆಲ್ಲಲು ಎದುರು ನೋಡುತ್ತಿದೆ. ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಶಿವಂ ದುಬೆ ಜೊತೆಗೆ ಅಜಿಂಕ್ಯ ರಹಾನೆ, ಅಂಬಟಿ ರಾಯುಡು ಮಿಂಚಬೇಕಿದೆ. ದೀಪಕ್ ಚಹರ್, ಪತಿರನ, ತೀಕ್ಷಣ, ಜಡೇಜಾ ತಂಡದ ಬೌಲಿಂಗ್ ಶಕ್ತಿ.
ಮುಖಾಮುಖಿ: 04
ಚೆನ್ನೈ: 01
ಗುಜರಾತ್: 03
ಸಂಭವನೀಯ ಆಟಗಾರರ ಪಟ್ಟಿ
ಚೆನ್ನೈ: ಡೆವೊನ್ ಕಾನ್ವೇ, ಋುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೋಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ಎಂ ಎಸ್ ಧೋನಿ(ನಾಯಕ), ರವೀಂದ್ರ ಜಡೇಜಾ, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣ, ಮಥೀಶ್ ಪತಿರನ.
ಗುಜರಾತ್: ಶುಭ್‌ಮನ್ ಗಿಲ್, ವೃದ್ದಿಮಾನ್ ಸಾಹ, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹಮ್ಮದ್, ಮೊಹಮ್ಮದ್ ಶಮಿ, ಯಶ್ ದಯಾಳ್, ಜೋಶ್ವಾ ಲಿಟ್ಲ್.
ಪಂದ್ಯ ಆರಂಭ: ಸಂಜೆ 7.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಹಾಗೂ ಜಿಯೋ ಸಿನಿಮಾ
ಪಿಚ್ ರಿಪೋರ್ಟ್
ಇಲ್ಲಿನ ಪಿಚ್ ಬ್ಯಾಟರ್ಗಳಿಗೆ ಹೆಚ್ಚಿನ ನೆರವು ನೀಡಿದ ಉದಾಹರಣೆ ಇದ್ದು, ಮತ್ತೊಮ್ಮೆ ದೊಡ್ಡ ಮೊತ್ತ ದಾಖಲಾಗಬಹುದು. ಇಲ್ಲಿ ಕೊನೆ 5 ಪಂದ್ಯದಲ್ಲಿ ಚೇಸ್ ಮಾಡಿದ ತಂಡ ಗೆದ್ದಿಲ್ಲ. ಹೀಗಾಗಿ ಟಾಸ್ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್ ಮಾಡುವ ಸಾಧ್ಯತೆಯೇ ಹೆಚ್ಚು.
20 ಕೋಟಿ ರುಪಾಯಿ ಬಹುಮಾನ
ಪ್ರಶಸ್ತಿ ಗೆಲ್ಲುವ ತಂಡ ಈ ಬಾರಿಯೂ 20 ಕೋಟಿ ರುಪಾಯಿ ಬಹುಮಾನ ಮೊತ್ತ ತನ್ನದಾಗಿಸಿಕೊಳ್ಳಲಿದ್ದು, ರನ್ನರ್-ಅಪ್ ತಂಡಕ್ಕೆ 13 ಕೋಟಿ ರು. ಸಿಗಲಿದೆ.