ಶ್ರೇಯಸ್ ಗೋಪಾಲ್ ಸೇರಿದಂತೆ ಕರ್ನಾಟಕದ 3 ಆಟಗಾರರು ಬೇರೆ ರಾಜ್ಯಗಳಿಗೆ ವಲಸೆ!

By Kannadaprabha News  |  First Published Jul 22, 2023, 11:03 AM IST

2023-24ರ ದೇಸಿ ಕ್ರಿಕೆಟ್‌ ಋತುವಿನಲ್ಲಿ ಕರ್ನಾಟಕ ಕ್ರಿಕೆಟ್ ತಂಡದ ತೊರೆದ ತಾರಾ ಕ್ರಿಕೆಟಿಗರು
ರಾಜ್ಯ ತಂಡದಲ್ಲಿ ಸಾಕಷ್ಟು ಅವಕಾಶ ಸಿಗದ ಹಿನ್ನಲೆಯಲ್ಲಿ ಶ್ರೇಯಸ್‌ ಗೋಪಾಲ್ ಕೇರಳದತ್ತ ಮುಖ
ಕೆವಿ ಸಿದ್ದಾರ್ಥ್ ಹಾಗೂ ರೋಹನ್ ಕದಂ ಕೂಡಾ ರಾಜ್ಯ ತಂಡ ತೊರೆದಿದ್ದಾರೆ


ಬೆಂಗಳೂರು: ಕರ್ನಾಟಕದ ಕ್ರಿಕೆಟಿಗರಾದ ಶ್ರೇಯಸ್‌ ಗೋಪಾಲ್‌, ಕೆ.ವಿ.ಸಿದ್ದಾರ್ಥ್‌ ಹಾಗೂ ರೋಹನ್‌ ಕದಂ 2023-24ರ ದೇಸಿ ಕ್ರಿಕೆಟ್‌ ಋತುವಿನಲ್ಲಿ ಕರ್ನಾಟಕ ಬಿಟ್ಟು ಬೇರೆ ರಾಜ್ಯಗಳ ತಂಡದ ಪರ ಆಡಲು ಸಜ್ಜಾಗಿದ್ದಾರೆ. ರಾಜ್ಯ ತಂಡದಲ್ಲಿ ಸಾಕಷ್ಟು ಅವಕಾಶ ಸಿಗದ ಹಿನ್ನೆಲೆಯಲ್ಲಿ ಲೆಗ್‌ ಸ್ಪಿನ್ನರ್‌ ಶ್ರೇಯಸ್‌ ಕೇರಳ ತಂಡ ಸೇರ್ಪಡೆಗೊಳ್ಳಲಿದ್ದು, ಸಿದ್ಧಾರ್ಥ್‌ ಹಾಗೂ ರೋಹನ್‌ ಗೋವಾ ತಂಡದ ಪರ ಆಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಮೂವರೂ ಈಗಾಗಲೇ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಯಿಂದ ಎನ್‌ಒಸಿ ಪಡೆದಿದ್ದು, ಇದನ್ನು (ಕೆಎಸ್‌ಸಿಎ) ಅಧಿಕಾರಿಗಳು ಖಚಿತಪಡಿಸಿದ್ದಾರೆ.

2013ರಲ್ಲಿ ಕರ್ನಾಟಕ ಪರ ಪಾದಾರ್ಪಣೆ ಮಾಡಿದ್ದ ಶ್ರೇಯಸ್‌ ಗೋಪಾಲ್(Shreyas Gopal) ಈವರೆಗೆ 76 ಪ್ರಥಮ ದರ್ಜೆ, 57 ಲಿಸ್ಟ್‌ "ಎ" ಹಾಗೂ 87 ಟಿ20 ಪಂದ್ಯಗಳನ್ನಾಡಿದ್ದಾರೆ. ಆದರೆ ಕಳೆದ ಕೆಲ ಆವೃತ್ತಿಗಳಲ್ಲಿ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಸಿದ್ಧಾರ್ಥ್‌ 2021-22ರ ಋತುವಿನಲ್ಲಿ ಕರ್ನಾಟಕದ ಗರಿಷ್ಠ ಸ್ಕೋರರ್‌ ಆಗಿದ್ದರೂ ಆ ಬಳಿಕ ತಂಡದಿಂದ ಹೊರಬಿದ್ದಿದ್ದರು. ಅಲ್ಲದೇ, ದುಲೀಪ್‌ ಟ್ರೋಫಿ (Duleep Trophy) ಟೂರ್ನಿಯಲ್ಲೂ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಇನ್ನು. ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮಿಂಚಿದ್ದರೂ ರಾಜ್ಯ ತಂಡದ ಪರ ಅವಕಾಶಕ್ಕಾಗಿ ಕಾಯುತ್ತಿದ್ದ ರೋಹನ್‌ ಕೊನೆಗೆ ಬೇರೆ ರಾಜ್ಯದ ತಂಡ ಸೇರಲು ನಿರ್ಧರಿಸಿದ್ದಾರೆ.

Tap to resize

Latest Videos

ಇಂದು ಮಹಾರಾಜ ಟ್ರೋಫಿ ಟಿ20 ಆಟಗಾರರ ಹರಾಜು

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ) ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ತಾರಾ ಆಟಗಾರರಾದ ಮಯಾಂಕ್‌ ಅಗರ್‌ವಾಲ್‌, ದೇವದತ್‌ ಪಡಿಕ್ಕಲ್‌, ಮನೀಶ್‌ ಪಾಂಡೆ, ವೈಶಾಖ್‌, ಕೆ.ಗೌತಮ್‌ ಸೇರಿದಂತೆ 700ಕ್ಕೂ ಹೆಚ್ಚು ಆಟಗಾರರು ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.

ಅಂಡರ್‌ 23 ಏಷ್ಯಾಕಪ್‌: ಸೆಮೀಸಲ್ಲಿ ಭಾರತಕ್ಕೆ ಶರಣಾದ ಬಾಂಗ್ಲಾ, ಪ್ರಶಸ್ತಿಗಾಗಿ ಇಂಡೋ-ಪಾಕ್ ಫೈಟ್

ಟೂರ್ನಿಯಲ್ಲಿ 6 ತಂಡಗಳಾದ ಗುಲ್ಬರ್ಗಾ ಮೈಸ್ಟಿಕ್ಸ್‌, ಬೆಂಗಳೂರು ಬ್ಲಾಸ್ಟರ್ಸ್‌, ಮೈಸೂರು ವಾರಿಯರ್ಸ್‌, ಹುಬ್ಬಳ್ಳಿ ಟೈಗರ್ಸ್‌, ಮಂಗಳೂರು ಡ್ರಾಗನ್ಸ್, ಶಿವಮೊಗ್ಗ ಲಯನ್ಸ್‌ ಪಾಲ್ಗೊಳ್ಳಲಿದ್ದು, ಪ್ರತಿ ತಂಡ ಕನಿಷ್ಠ 16, ಗರಿಷ್ಠ 18 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಪ್ರತಿ ಫ್ರಾಂಚೈಸಿಯು ಆಟಗಾರರ ಖರೀದಿಗೆ 50 ಲಕ್ಷ ರು. ವರೆಗ ಬಳಸಬಹುದು. ಈ ಬಾರಿ ಟೂರ್ನಿ ಆ.14ರಿಂದ 30 ವರೆಗೆ ನಡೆಯಲಿದ್ದು, ಎಲ್ಲಾ ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ನಾಲ್ಕನೇ ಆ್ಯಷಸ್‌ ಟೆಸ್ಟ್‌: ಇಂಗ್ಲೆಂಡ್‌ 592ಕ್ಕೆ ಆಲೌಟ್‌

ಮ್ಯಾಂಚೆಸ್ಟರ್‌: ಆಸ್ಟ್ರೇಲಿಯಾ ವಿರುದ್ಧದ 4ನೇ ಆ್ಯಷಸ್‌ ಟೆಸ್ಟ್‌ನಲ್ಲಿ (Ashes Test Series) ಇಂಗ್ಲೆಂಡ್‌ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 592 ರನ್‌ ಕಲೆ ಹಾಕಿ 275 ರನ್‌ ಮುನ್ನಡೆ ಪಡೆದಿದೆ. ಇಂಗ್ಲೆಂಡ್‌ ತಂಡ 2011ರ ಬಳಿಕ ಮೊದಲ ಬಾರಿ ಆ್ಯಶಸ್‌ ಟೆಸ್ಟ್‌ನಲ್ಲಿ 500 ರನ್‌ ಗಳಿಸಿತು. ಎಂದಿನಂತೆ ತನ್ನ ಆಕ್ರಮಣಾಕಾರಿ ಆಟಕ್ಕಿಳಿದ ಇಂಗ್ಲೆಂಡ್‌ ಬ್ಯಾಟರ್‌ಗಳನ್ನು ನಿಯಂತ್ರಿಸಲು ಆಸೀಸ್‌ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ವಿಕೆಟ್‌ ಕೀಪರ್‌ ಬ್ಯಾಟರ್‌ ಜಾನಿ ಬೇರ್‌ಸ್ಟೋವ್‌ 81 ಎಸೆತಗಳಲ್ಲಿ 99 ರನ್‌ ಸಿಡಿಸಿ ಔಟಾಗದೆ ಉಳಿದರೂ ಶತಕ ಪೂರ್ತಿಗೊಳಿಸಲಾಗಲಿಲ್ಲ. ಬಳಿಕ ಬ್ಯಾಟಿಂಗ್‌ ಆರಂಭಿಸಿದ ಆಸೀಸ್‌, ಮೂರನೇ ದಿನದಾಟದಂತ್ಯದ ವೇಳೆಗೆ 4 ವಿಕೆಟ್ ಕಳೆದಕೊಂಡು 113 ರನ್‌ ಬಾರಿಸಿದ್ದು, ಇನ್ನೂ 162 ರನ್‌ಗಳ ಹಿನ್ನಡೆಯಲ್ಲಿದೆ.  ಆಸ್ಟ್ರೇಲಿಯಾ ಪರ ಮಾರ್ನಸ್ ಲಬುಶೇನ್‌(44) ಹಾಗೂ ಮಿಚೆಲ್ ಮಾರ್ಶ್‌(01) ನಾಲ್ಕನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.
 

click me!