Ind vs WI ಕಿಂಗ್ ಕೊಹ್ಲಿ ಶತಕ; ವಿಂಡೀಸ್‌ ಬೌಲರ್‌ಗಳ ಚಳಿ ಬಿಡಿಸಿದ ಭಾರತ

Published : Jul 22, 2023, 09:57 AM IST
Ind vs WI ಕಿಂಗ್ ಕೊಹ್ಲಿ ಶತಕ; ವಿಂಡೀಸ್‌ ಬೌಲರ್‌ಗಳ ಚಳಿ ಬಿಡಿಸಿದ ಭಾರತ

ಸಾರಾಂಶ

ವಿಂಡೀಸ್ ಎದುರು ಭರ್ಜರಿ ಶತಕ ಚಚ್ಚಿದ ವಿರಾಟ್ ಕೊಹ್ಲಿ ಮೊದಲ ಇನಿಂಗ್ಸ್‌ನಲ್ಲಿ 438 ರನ್‌ ಬಾರಿಸಿದ ಟೀಂ ಇಂಡಿಯಾ ಎರಡನೇ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 86 ರನ್ ಬಾರಿಸಿದ ವಿಂಡೀಸ್

ಪೋರ್ಟ್‌ ಆಫ್‌ ಸ್ಪೇನ್‌(ಜು.22): ವೆಸ್ಟ್‌ಇಂಡೀಸ್‌ ವಿರುದ್ಧದ ಆರಂಭಿಕ ಟೆಸ್ಟ್‌ನಂತೆಯೇ 2ನೇ ಟೆಸ್ಟ್‌ನಲ್ಲೂ ಭಾರತ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದು, ದೊಡ್ದ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ. ವಿರಾಟ್ ಕೊಹ್ಲಿ ಬಾರಿಸಿದ ಆಕರ್ಷಕ ಶತಕ ಹಾಗೂ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 438 ರನ್‌ ಬಾರಿಸಿ ಸರ್ವಪತನ ಕಂಡಿದೆ. ಇನ್ನು ಮೊದಲ ಇನಿಂಗ್ಸ್‌ ಆರಂಭಿಸಿರುವ ವೆಸ್ಟ್ ಇಂಡೀಸ್ ತಂಡವು ಎಚ್ಚರಿಕೆಯ ಆರಂಭ ಪಡೆದಿದ್ದು, ಎರಡನೇ ದಿನದಾಟದಂತ್ಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 86 ರನ್‌ ಬಾರಿಸಿದೆ. ನಾಯಕ ಕ್ರೆಗ್‌ ಬ್ರಾಥ್‌ವೇಟ್‌(37) ಹಾಗೂ ಕಿರ್ಕ್‌ ಮೆಕೆಂಜೆ(14) ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಮೊದಲ ದಿನ ಆರಂಭದಲ್ಲೇ ವಿಂಡೀಸ್‌ ಮೇಲೆ ಸವಾರಿ ಮಾಡಿದ್ದ ಭಾರತೀಯ ಬ್ಯಾಟರ್‌ಗಳು ಮೊದಲ ವಿಕೆಟ್‌ಗೆ 139 ರನ್‌ ಸೇರಿಸಿದ್ದರು. ಮೊದಲ ಅವಧಿಯಲ್ಲಿ ಭಾರತ ಮೇಲುಗೈ ಸಾಧಿಸಿದ್ದರೆ, 2ನೇ ಅವಧಿಯಲ್ಲಿ ವಿಂಡೀಸ್‌ ಪ್ರಾಬಲ್ಯ ಮೆರೆಯಿತು. ಯಶಸ್ವಿ ಜೈಸ್ವಾಲ್‌ 57 ರನ್‌ಗೆ ಔಟಾದರೆ, ಬಳಿಕ ಬಂದ ಶುಭ್‌ಮನ್‌ ಗಿಲ್‌ 10 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಮತ್ತೊಂದು ಶತಕದ ನಿರೀಕ್ಷೆಯಲ್ಲಿದ್ದ ನಾಯಕ ರೋಹಿತ್‌ ಶರ್ಮಾ 80 ರನ್‌ ಗಳಿಸಿ ವ್ಯಾರಿಕನ್‌ ಎಸೆತದಲ್ಲಿ ಬೌಲ್ಡ್‌ ಆಗಿ ನಿರ್ಗಮಿಸಿದರು. ಅಜಿಂಕ್ಯ ರಹಾನೆ(08) ಮತ್ತೆ ಅವಕಾಶ ಬಳಸಿಕೊಳ್ಳಲು ವಿಫಲರಾದರು.

ಕೊಹ್ಲಿ-ಜಡೇಜಾ ಶೋ: 182ಕ್ಕೆ 4 ವಿಕೆಟ್‌ ಕಳೆದುಕೊಂಡ ಭಾರತಕ್ಕೆ ವಿರಾಟ್‌ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಆಸರೆಯಾದರು. ಇವರಿಬ್ಬರ ಜವಾಬ್ದಾರಿಯುತ ಆಟದಿಂದಾಗಿ ಮೊದಲ ದಿನದಂತ್ಯಕ್ಕೆ 4 ವಿಕೆಟ್‌ಗೆ 288 ರನ್‌ ಗಳಿಸಿದ ಭಾರತ 2ನೇ ದಿನವಾದ ಶನಿವಾರವೂ ಮೇಲುಗೈ ಸಾಧಿಸಿತು. ಈ ಜೋಡಿ 5ನೇ ವಿಕೆಟ್‌ಗೆ 159 ರನ್‌ ಜೊತೆಯಾಟವಾಡಿ ತಂಡವನ್ನು ಮೇಲೆತ್ತಿತು. 500ನೇ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿರುವ ವಿರಾಟ್‌ ಕೊಹ್ಲಿ ಟೆಸ್ಟ್‌ನಲ್ಲಿ 29ನೇ ಹಾಗೂ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 76ನೇ ಶತಕ ಪೂರ್ತಿಗೊಳಿಸಿದರು. 206 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ 121 ರನ್‌ ಸಿಡಿಸಿದ ಅವರು ರನ್‌ಔಟ್‌ ಆದರೆ, ಜಡೇಜಾ ಟೆಸ್ಟ್‌ನಲ್ಲಿ 19ನೇ ಅರ್ಧಶತಕ ಪೂರ್ಣಗೊಳಿಸಿದರು. ಅವರು 152 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 61 ರನ್‌ ಸಿಡಿಸಿದರು.

Breaking: ಡಾನ್‌ ಬ್ರಾಡ್ಮನ್‌ ಶತಕದ ದಾಖಲೆ ಸರಿಗಟ್ಟಿದ ವಿರಾಟ್‌ ಕೊಹ್ಲಿ!

ಇನ್ನು ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್‌ 25 ರನ್‌ ಬಾರಿಸಿ ಜೇಸನ್ ಹೋಲ್ಡರ್‌ಗೆ ವಿಕೆಟ್‌ ಒಪ್ಪಿಸಿದರು. ಅನುಭವಿ ಆಲ್ರೌಂಡರ್‌ ರವಿಚಂದ್ರನ್ ಅಶ್ವಿನ್‌ 78 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ ಆಕರ್ಷಕ 56 ರನ್‌ ಬಾರಿಸುವ ಮೂಲಕ ತಂಡದ ಮೊತ್ತವನ್ನು ನಾನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. 

500ನೇ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಮೊದಲಿಗ ಕೊಹ್ಲಿ

500ನೇ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿರುವ ಭಾರತದ ತಾರಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಟೆಸ್ಟ್‌ನಲ್ಲಿ 29 ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 76ನೇ ಶತಕ ಬಾರಿಸಿದರು. ಶುಕ್ರವಾರ ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಅವರು ಈ ಮೈಲಿಗಲ್ಲು ಸಾಧಿಸಿದ್ದು, 206 ಎಸೆತಗಳಲ್ಲಿ 121 ರನ್‌ ಸಿಡಿಸಿ ಅವರು ನಿರ್ಗಮಿಸಿದರು. ಇದರೊಂದಿಗೆ 500ನೇ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡರು. ಇದು ವಿಂಡೀಸ್‌ ವಿರುದ್ಧ ಟೆಸ್ಟ್‌ನಲ್ಲಿ ಕೊಹ್ಲಿ ಹೊಡೆದ 3ನೇ ಶತಕ. ಈ ಮೊದಲು 2016, 2018ರಲ್ಲೂ ಶತಕ ಬಾರಿಸಿದ್ದರು.

ಒನ್‌ಡೇ ವಿಶ್ವಕಪ್​ನಲ್ಲಿ ರೋಹಿತ್ ಜೊತೆ ಇನ್ನಿಂಗ್ಸ್​ ಆರಂಭಿಸೋರು ಯಾರು.?

ಕೊಹ್ಲಿ ಏಷ್ಯಾದ ಹೊರಗಡೆ ತಮ್ಮ 28ನೇ ಶತಕ ಪೂರ್ತಿಗೊಳಿಸಿದರು. ಸಚಿನ್‌ ತೆಂಡುಲ್ಕರ್‌ 29 ಶತಕ ಬಾರಿಸಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದೇ ವೇಳೆ ಕೊಹ್ಲಿ ಸದ್ಯ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಸಚಿನ್‌ ತೆಂಡುಲ್ಕರ್‌ 51 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ರಾಹುಲ್‌ ದ್ರಾವಿಡ್‌ 36, ಸುನಿಲ್‌ ಗವಾಸ್ಕರ್‌ 34 ಶತಕ ಬಾರಿಸಿದ್ದಾರೆ.

ವಿದೇಶದಲ್ಲಿ 5 ವರ್ಷ ಬಳಿಕ ಶತಕ:

ಕೊಹ್ಲಿ ಬರೋಬ್ಬರಿ 5 ವರ್ಷಗಳ ಬಳಿಕ ಟೆಸ್ಟ್‌ನಲ್ಲಿ ವಿದೇಶಿ ನೆಲದಲ್ಲಿ ಶತಕ ಸಿಡಿಸಿದರು. 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆ ಬಾರಿ ವಿದೇಶದಲ್ಲಿ ಶತಕ ಬಾರಿಸಿದ್ದರು. ಆ ಬಳಿಕ ಟೆಸ್ಟ್‌ನಲ್ಲಿ ಬಾರಿಸಿದ್ದ 3 ಶತಕಗಳೂ ಭಾರತದಲ್ಲೇ ದಾಖಲಾಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆರ್‌ಸಿಬಿ ಕಾಲ್ತುಳಿತದ ದುರ್ಘಟನೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ? ಕೊಹ್ಲಿ ಭಾಗಿ
ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?