
ಶಿವಮೊಗ್ಗ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುತ್ತಿರುವ ಬಹುನಿರೀಕ್ಷಿತ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಪಂದ್ಯಾವಳಿಯ 5ನೇ ಆವೃತ್ತಿಗೆ ಅದ್ಧೂರಿ ವೇದಿಕೆ ಸಿದ್ಧಗೊಂಡಿದ್ದು, ಶಿವಮೊಗ್ಗ ಯೋಧಾಸ್ ತಂಡದ ನೂತನ ಜರ್ಸಿ ಹಾಗೂ ಅಧಿಕೃತ ಆಲ್ಬಂ ಗೀತೆಯನ್ನು ಬಿಡುಗಡೆ ಮಾಡಲಾಯಿತು.
ನಗರದ ಹೊರವಲಯದಲ್ಲಿರುವ ಮಲ್ನಾಡ್ ಶೈರ್ ಹೋಟೆಲ್‌ನಲ್ಲಿ ಮಂಗಳವಾರ ಸಂಜೆ ಸಂಸದ ಬಿ.ವೈ.ರಾಘವೇಂದ್ರ ಪೋಷಾಕನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಮಹಾರಾಜ ಟ್ರೋಫಿಯು ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವ ಕ್ರಿಕೆಟ್ ಪ್ರತಿಭೆಗಳಿಗೆ ತಮ್ಮ ಅಪ್ರತಿಮ ಕೌಶಲ್ಯವನ್ನು ಪ್ರದರ್ಶಿಸಲು ಸಿಕ್ಕಿರುವ ಸುವರ್ಣ ಅವಕಾಶವಾಗಿದೆ. ಈ ಕ್ರೀಡಾಕೂಟವು ಕರ್ನಾಟಕದ ಕ್ರಿಕೆಟ್ ಪ್ರಗತಿಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುತ್ತಿದೆ ಎಂದರು.
ಈ ಬಾರಿ ಶಿವಮೊಗ್ಗ ಯೋಧಾಸ್ ತಂಡವು ಮೈದಾನದಲ್ಲಿ ಅಮೋಘ ಪ್ರದರ್ಶನ ನೀಡಲಿದ್ದು, ಈ ಹೊಸ ಉಡುಪು ಕೇವಲ ಡ್ರೆಸ್ ಕೋಡ್ ಆಗಿ ಉಳಿಯದೆ ತಂಡದ ವಿಜಯದ ಹೆಗ್ಗುರುತಾಗಲಿ ಎಂದು ಹಾರೈಸಿದರು.
ತಂಡದ ರಾಯಭಾರಿ ನಟ ದಿಗಂತ್ ಮಂಚಾಲೆ ಮಾತನಾಡಿ, ಕ್ರೀಡೆಯು ಜಾತಿ, ಧರ್ಮಗಳ ಗಡಿಗಳನ್ನು ಮೀರಿ ಜನರನ್ನು ಒಗ್ಗೂಡಿಸುವ ಶಕ್ತಿ ಹೊಂದಿದೆ. ಮಲೆನಾಡಿನ ಕ್ರೀಡಾಭಿಮಾನಿಗಳು ನಮ್ಮ ಶಿವಮೊಗ್ಗ ಯೋಧಾಸ್ ತಂಡಕ್ಕೆ ಕ್ರೀಡಾಂಗಣದಲ್ಲಿ ಭರ್ಜರಿ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.
ಕೆಎಸ್‌ಸಿಎ ವಕ್ತಾರ ವಿನಯ್ ಮೃತ್ಯುಂಜಯ ಮಾತನಾಡಿ, ಶಿವಮೊಗ್ಗ ಸೇರಿದಂತೆ ರಾಜ್ಯದಾದ್ಯಂತ ಕ್ರಿಕೆಟ್ ಮೂಲಸೌಕರ್ಯವನ್ನು ಬಲಪಡಿಸುವ ಕೆಎಸ್‌ಸಿಎ ಬದ್ಧತೆಯನ್ನು ಒತ್ತಿ ಹೇಳಿದರು.
ಮುಂದಿನ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಆವೃತ್ತಿಗಳಲ್ಲಿ ಶಿವಮೊಗ್ಗದಲ್ಲಿ ಪಂದ್ಯಗಳನ್ನು ಆಯೋಜಿಸುವ ಯೋಜನೆ ಇದೆ ಎಂದು ತಿಳಿಸಿದ ಅವರು, ಕ್ರೀಡಾಂಗಣದಲ್ಲಿ ಶೀಘ್ರವೇ ಫ್ಲಡ್‌ಲೈಟ್‌ಗಳನ್ನು ಅಳವಡಿಸಲು ಕೆಎಸ್‌ಸಿಎ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಹಾಗೂ ನಮ್ಮ ಹೆಮ್ಮೆಯ "ಶಿವಮೊಗ್ಗ ಯೋಧಾಸ್" ತಂಡದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ತಂಡದ ಅಧಿಕೃತ ಜರ್ಸಿ ಅನಾವರಣ, ಆಂಥೆಮ್ ಬಿಡುಗಡೆ ಕಾರ್ಯಕ್ರಮದಲ್ಲಿ ಇಂದು ಭಾಗವಹಿಸಲಾಯಿತು,
ಮಹಾರಾಜ ಟ್ರೋಫಿ ಕೆಎಸ್‌ಸಿಎ T2೦ ಪಂದ್ಯಾವಳಿಯಲ್ಲಿ ನಮ್ಮ ಶಿವಮೊಗ್ಗವನ್ನು ಪ್ರತಿನಿಧಿಸುತ್ತಿರುವ "ಶಿವಮೊಗ್ಗ… pic.twitter.com/NkCipshuWJ— B Y Raghavendra (@BYRBJP) June 16, 2026
ಇದಲ್ಲದೆ, ಶಿವಮೊಗ್ಗ ನಗರದಲ್ಲಿ ಅತ್ಯಾಧುನಿಕ ಒಳಾಂಗಣ (ಇಂಡೋರ್) ಕ್ರಿಕೆಟ್ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನೂ ಅವರು ಪ್ರಕಟಿಸಿದರು. ಈ ಮೂಲಕ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು ಹಾಗೂ ಈ ಭಾಗದ ಕ್ರಿಕೆಟ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದು ಕೆಎಸ್‌ಸಿಎಯ ಉದ್ದೇಶವಾಗಿದೆ ಎಂದು ತಿಳಿಸಿದರು
ಜಂಟಿ ಕಾರ್ಯದರ್ಶಿ ಬಿ.ಕೆ. ರವಿ ಮಾತನಾಡಿ, ಮುಂಬರುವ ಜೂನ್ 20 ರಂದು ಮೈಸೂರಿನಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಈ ಟಿ-20 ಕ್ರೀಡಾ ಹಬ್ಬಕ್ಕೆ ಅಧಿಕೃತ ಚಾಲನೆ ನೀಡಲಿದ್ದು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ತಲಾ 12 ಮತ್ತು ಬೆಂಗಳೂರಿನಲ್ಲಿ 10 ಪಂದ್ಯಗಳು ಸೇರಿ ಒಟ್ಟು 34 ಟಿ-20 ಪಂದ್ಯಗಳು ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಲಿವೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗ ವಲಯ ಸಂಚಾಲಕ ಡಿ.ಎಸ್.ಆರುಣ್, ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಮಾಜಿ ಸದಸ್ಯೆ ಶಾಂತಾ ರಂಗಸ್ವಾಮಿ, ತಂಡದ ಮಾಲೀಕ ಮಿಥುನ್ ಕುಮಾರ್, ಅಭಿಷೇಕ್ ಆಗರ್ವಾಲ್, ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿ ಸದಸ್ಯೆ ಕಲ್ಪನಾ ವೆಂಕಟಾಚಾರ್, ಸುಭಾಷ್ ರಾಘವೇಂದ್ರ, ವಲಯ ಅಧ್ಯಕ್ಷ ನಾಗೇಂದ್ರ ಪಂಡಿತ್ ಹಾಗೂ ಉದ್ಯಮಿ ಶ್ರೀನಿವಾಸ ಮೂರ್ತಿ ಪ್ರಮುಖರು ಹಾಜರಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.