ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜರುಗಲಿದೆ. ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಐಪಿಎಲ್‌ನಲ್ಲಿ ಹಲವು ಆಟಗಾರರು ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ.
ಬೆಂಗಳೂರು: ಸದ್ಯ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಭರ್ಜರಿಯಾಗಿಯೇ ಸಾಗುತ್ತಿದೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಮುಗಿಯುತ್ತಿದ್ದಂತೆಯೇ ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜರುಗಲಿದೆ. ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಐಪಿಎಲ್‌ನಲ್ಲಿ ಹಲವು ಆಟಗಾರರು ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ರಿಷಭ್ ಪಂತ್ ಹಾಗೂ ಸೂರ್ಯಕುಮಾರ್ ಯಾದವ್ ಪಾಲಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಒಬ್ಬ ಆಟಗಾರ ಅಡ್ಡಿಯಾಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಹೌದು, ಕಳೆದ ವರ್ಷದ ಐಪಿಎಲ್ ಟೂರ್ನಿಯಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಶಿವಂ ದುಬೆ ಸ್ಪೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸುತ್ತಿದ್ದಾರೆ. ದೇಸಿ ಕ್ರಿಕೆಟ್, ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ಸಿಕ್ಸರ್ ಬೌಂಡರಿಗಳ ಮೂಲಕವೇ ದುಬೆ ಮಿಂಚುತ್ತಿದ್ದಾರೆ. ಇದೀಗ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಶಿವಂ ದುಬೆ, ಸಿಎಸ್‌ಕೆ ಪರ ಮೈಚಳಿ ಬಿಟ್ಟು ಬ್ಯಾಟ್ ಬೀಸುತ್ತಿದ್ದಾರೆ.
undefined
ಈ 4 ತಂಡಗಳು ಪ್ಲೇ ಆಫ್‌ಗೇರಲಿವೆ: ಅಚ್ಚರಿಯ ಭವಿಷ್ಯ ನುಡಿದ ನಟ ಅಕ್ಷಯ್ ಕುಮಾರ್
ಶಿವಂ ದುಬೆ ಅವರ ಅದ್ಭುತ ಬ್ಯಾಟಿಂಗ್ ಇಡೀ ಐಪಿಎಲ್ ಪೂರ್ತಿ ಮುಂದುವರೆದರೆ, ಬಹುತೇಕ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಖಚಿತ ಎನ್ನಲಾಗುತ್ತಿದೆ. ಇನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡಾ ದುಬೆ ಬೆನ್ನಿಗೆ ನಿಂತಿದ್ದಾರೆ.
"ಶಿವಂ ದುಬೆ ಭರ್ಜರಿಯಾಗಿ ರನ್ ಗಳಿಸುತ್ತಿದ್ದು, ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಬಲ್ಲ ನೆಚ್ಚಿನ ಆಟಗಾರರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ಅವರ ಈ ಪ್ರದರ್ಶನ ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್ ಹಾಗೂ ರಿಷಭ್ ಪಂತ್ ಅವರ ಮೇಲೆ ಮತ್ತಷ್ಟು ಒತ್ತಡ ಬೀಳುವಂತೆ ಮಾಡಿದೆ. ಒಬ್ಬ ಒಳ್ಳೆಯ ಆಟಗಾರ ಮಾತ್ರ ಸಹಸ್ಪರ್ಧಿಯ ಮೇಲೆ ಒತ್ತಡ ಹೇರಲು ಸಾಧ್ಯ, ಆ ಕೆಲಸವನ್ನು ದುಬೆ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ" ಎಂದು ವೀರೂ ಹೇಳಿದ್ದಾರೆ.