ಲಂಕಾ ಎದುರು ಟಿ20 ಸರಣಿ ಜಯಿಸುತ್ತಾ ಶಿಖರ್ ಧವನ್ ಪಡೆ..?

By Suvarna NewsFirst Published Jul 29, 2021, 5:57 PM IST
Highlights

* ಇಂಡೋ-ಲಂಕಾ ನಿರ್ಣಾಯಕ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭ

* 3 ಪಂದ್ಯಗಳ ಸರಣಿಯಲ್ಲಿ ತಲಾ ಒಂದೊಂದು ಪಂದ್ಯ ಜಯಿಸಿರುವ ಉಭಯ ತಂಡಗಳು

* ಟೀಂ ಇಂಡಿಯಾದಲ್ಲಿಂದು ಒಂದು ಬದಲಾವಣೆ ಸಾಧ್ಯತೆ 

ಕೊಲಂಬೊ(ಜು.29): ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಇಂದು(ಜು.28) ಸಂಜೆ 8 ಗಂಟೆಗೆ ಇಲ್ಲಿನ ಆರ್‌. ಪ್ರೇಮದಾಸ ಸ್ಟೇಡಿಯಂನಲ್ಲಿ ಕೊನೆಯ ಟಿ20 ಪಂದ್ಯ ನಡೆಯಲಿದೆ. 

ಮೊದಲ ಟಿ20 ಪಂದ್ಯವನ್ನು ಗೆದ್ದು ಬೀಗಿದ್ದು ಟೀಂ ಇಂಡಿಯಾ, ಎರಡನೇ ಪಂದ್ಯಕ್ಕೆ ಸಜ್ಜಾಗುವ ಮುನ್ನ ಕೋವಿಡ್ ಶಾಕ್ ನೀಡಿದ್ದರಿಂದ 8 ಆಟಗಾರರು ಐಸೋಲೇಷನ್‌ಗೆ ಒಳಗಾಗಿದ್ದರು. ಹೀಗಿದ್ದೂ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಯುವ ಕ್ರಿಕೆಟಿಗರು ಕೆಚ್ಚೆದೆಯ ಪ್ರದರ್ಶನ ತೋರುವ ಮೂಲಕ ರೋಚಕ ಸೋಲು ಅನುಭವಿಸಿದ್ದರು. ಹೀಗಾಗಿ ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸಿದ್ದು, ಇಂದು ನಡೆಯಲಿರುವ ನಿರ್ಣಾಯಕ ಪಂದ್ಯ ಯಾರ ಪಾಲಾಗಲಿದೆ ಎನ್ನುವ ಕುತೂಹಲ ಜೋರಾಗಿದೆ.

2ನೇ ಟಿ20: ಭಾರತಕ್ಕೆ ವಿರೋಚಿತ ಸೋಲು: ಸರಣಿ ಸಮಬಲ ಸಾಧಿಸಿದ ಲಂಕಾ

ಟಿ20 ವಿಶ್ವಕಪ್‌ ಟೂರ್ನಿ ಮುನ್ನ ಭಾರತ ಕ್ರಿಕೆಟ್ ತಂಡವು ಆಡಲಿರುವ ಕಟ್ಟ ಕಡೆಯ ಟಿ20 ಪಂದ್ಯ ಇದಾಗಿರುವುದರಿಂದ ಉತ್ತಮ ಪ್ರದರ್ಶನ ತೋರಲು ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಎದುರು ನೋಡುತ್ತಿದೆ. ಇನ್ನು ಎರಡನೇ ಟಿ20 ಪಂದ್ಯದಲ್ಲಿ ನವದೀಪ್ ಸೈನಿ ಗಾಯಗೊಂಡಿದ್ದು, ಸೈನಿ ಬದಲಿಗೆ ಇಂದಿನ ಪಂದ್ಯಕ್ಕೆ ಸಂದೀಪ್‌ ವಾರಿಯರ್‌ ತಂಡ ಕೂಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

ಕಳೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇನ್ನು ಪಡಿಕ್ಕಲ್ ಹಾಗೂ ಋತುರಾಜ್‌ ಗಾಯಕ್ವಾಡ್ ಎರಡನೇ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ. ಹೀಗಾಗಿ ನಿರ್ಣಾಯಕ ಪಂದ್ಯ ಸಾಕಷ್ಟು ಪೈಪೋಟಿಯಿಂದ ಕೂಡಿರುವ ಸಾಧ್ಯತೆಯಿದೆ.

ಪಂದ್ಯ ಆರಂಭ: ಸಂಜೆ: 08 ಗಂಟೆಗೆ
ಸ್ಥಳ: ಕೊಲಂಬೊ
ನೇರ ಪ್ರಸಾರ: ಸೋನಿ ಟೆನ್
 

click me!