Ind vs WI: ವಿಂಡೀಸ್ ಎದುರು ಟೀಂ ಇಂಡಿಯಾಗೆ ಕ್ಲೀನ್‌ಸ್ವೀಪ್ ಗುರಿ

Published : Jul 27, 2022, 10:30 AM IST
Ind vs WI: ವಿಂಡೀಸ್ ಎದುರು ಟೀಂ ಇಂಡಿಯಾಗೆ ಕ್ಲೀನ್‌ಸ್ವೀಪ್ ಗುರಿ

ಸಾರಾಂಶ

ಭಾರತ-ವೆಸ್ಟ್ ಇಂಡೀಸ್ 3ನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಕ್ಲೀನ್‌ಸ್ವೀಪ್ ಹೊಸ್ತಿಲಲ್ಲಿ ಟೀಂ ಇಂಡಿಯಾ ಈಗಾಗಲೇ ಮೊದಲೆರಡು ಪಂದ್ಯ ಗೆದ್ದು ಬೀಗುತ್ತಿರುವ ಶಿಖರ್ ಧವನ್ ಪಡೆ

ಪೋರ್ಚ್‌ ಆಫ್‌ ಸ್ಪೇನ್(ಜು.27)‌: ಮೊದಲೆರಡು ಪಂದ್ಯಗಳಲ್ಲಿ ಸೋಲಿನ ದವಡೆಯಿಂದ ಪಾರಾಗಿ ವೆಸ್ಟ್‌ಇಂಡೀಸ್‌ ವಿರುದ್ಧ ವಿಶ್ವ ದಾಖಲೆಯ ಸರಣಿ ಗೆಲುವು ಸಾಧಿಸಿರುವ ಭಾರತ, ಬುಧವಾರ ನಡೆಯಲಿರುವ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಗೆದ್ದು ಸರಣಿ ಕ್ಲೀನ್‌ ಸ್ವೀಪ್‌ ಮಾಡುವ ವಿಶ್ವಾಸದಲ್ಲಿದೆ. ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಕೊನೆ ಓವರಲ್ಲಿ ಆಕರ್ಷಕ ಕ್ಷೇತ್ರರಕ್ಷಣೆ ಮೂಲಕ ಬೌಂಡರಿ ತಡೆದು 3 ರನ್‌ಗಳ ರೋಚಕ ಗೆಲುವು ತಂದುಕೊಟ್ಟಿದ್ದರು. ಇನ್ನು 2ನೇ ಏಕದಿನದಲ್ಲಿ ಅಕ್ಷರ್‌ ಪಟೇಲ್‌ರ ಸಾಹಸ ಭಾರತವನ್ನು ಗೆಲ್ಲಿಸಿತ್ತು. 3ನೇ ಪಂದ್ಯವನ್ನು ಶಿಖರ್‌ ಧವನ್‌ ಪಡೆ ನಿರಾಯಾಸವಾಗಿ ಗೆದ್ದು ಟ್ರೋಫಿ ಎತ್ತಿಹಿಡಿಯಲು ಎದುರು ನೋಡುತ್ತಿದೆ.

ಬೆಂಚ್‌ ಕಾಯುತ್ತಿರುವ ಆಟಗಾರರಿಗೆ ಅವಕಾಶ ನೀಡುವುದು ಭಾರತ ತಂಡದ ಆಡಳಿತದ ಮುಖ್ಯ ಉದ್ದೇಶವಾಗಿರಲಿದೆಯಾದರೂ ತಂಡದಲ್ಲಿ ಹೆಚ್ಚೇನೂ ಬದಲಾವಣೆ ಆಗುವ ನಿರೀಕ್ಷೆ ಇಲ್ಲ. ಶುಭ್‌ಮನ್‌ ಗಿಲ್‌ ಎರಡು ಆಕರ್ಷಕ ಇನ್ನಿಂಗ್ಸ್‌ಗಳನ್ನು ಆಡಿದ್ದು, ಅವರೇ ಆರಂಭಿಕನಾಗಿ ಮುಂದುವರಿಯುವ ಸಾಧ್ಯತೆ ಹೆಚ್ಚು. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಅವಕಾಶ ಪಡೆದಿದ್ದ ಋುತುರಾಜ್‌ ಗಾಯಕ್ವಾಡ್‌ ಗಮನಾರ್ಹ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಹೀಗಾಗಿ ಲಯದಲ್ಲಿರುವ ಗಿಲ್‌ರನ್ನು ಹೊರಗಿಟ್ಟು ಋುತುರಾಜ್‌ರನ್ನು ಆಡಿಸುವ ಸಾಧ್ಯತೆ ಕಡಿಮೆ. ಶ್ರೇಯಸ್‌ ಅಯ್ಯರ್‌, ಸಂಜು ಸ್ಯಾಮ್ಸನ್‌ ಲಯದಲ್ಲಿದ್ದು, ಮತ್ತೊಂದು ಅವಕಾಶ ಪಡೆಯಲಿದ್ದಾರೆ. ಸೂರ್ಯಕುಮಾರ್‌ ಕಳೆದೆರಡು ಪಂದ್ಯಗಳಲ್ಲಿ ವೈಫಲ್ಯ ಕಂಡರೂ ಅವರನ್ನು ಕೈಬಿಡಲು ತಂಡ ಯೋಚಿಸುವುದು ಕಷ್ಟ. ಹೀಗಾಗಿ ಇಶಾನ್‌ ಕಿಶನ್‌ಗೆ ಅವಕಾಶ ದೊರೆಯುವ ನಿರೀಕ್ಷೆ ಇಲ್ಲ.

ಗಾಯದ ಸಮಸ್ಯೆಯಿಂದಾಗಿ ಮೊದಲೆರಡು ಏಕದಿನಗಳನ್ನು ತಪ್ಪಿಸಿಕೊಂಡಿದ್ದ ರವೀಂದ್ರ ಜಡೇಜಾ ಈ ಪಂದ್ಯಕ್ಕೆ ಲಭ್ಯರಾಗುವ ಬಗ್ಗೆ ಮಾಹಿತಿ ಇಲ್ಲ. ಒಂದು ವೇಳೆ ಫಿಟ್‌ ಇದ್ದು, ತಂಡ ಅವರನ್ನು ಆಡಿಸಲು ನಿರ್ಧರಿಸಿದರೆ ಲೆಗ್‌ ಸ್ಪಿನ್ನರ್‌ ಚಹಲ್‌ಗೆ ವಿಶ್ರಾಂತಿ ನೀಡಬಹುದು. ಇನ್ನು ಗಾಯದಿಂದ ಚೇತರಿಸಿಕೊಂಡಿರುವ ಎಡಗೈ ವೇಗಿ ಅಶ್‌ರ್‍ದೀಪ್‌ ಸಿಂಗ್‌ಗೆ ಸ್ಥಾನ ಸಿಗುವ ಸಾಧ್ಯತೆ ಇದ್ದು, 2ನೇ ಪಂದ್ಯದಲ್ಲಿ ದುಬಾರಿಯಾಗಿದ್ದ ಆವೇಶ್‌ ಖಾನ್‌ ಬದಲಿಗೆ ಕಣಕ್ಕಿಳಿದರೆ ಅಚ್ಚರಿಯಿಲ್ಲ.

ಭಾರತೀಯ ಕ್ರಿಕೆಟರ್ಸ್​ಗೆ ಪಾಂಟಿಂಗ್ ಅಡ್ಡಗಾಲು, ತ್ರಿಮೂರ್ತಿಗಳಿಗೆ ರೆಕಾರ್ಡ್​ ಬ್ರೇಕ್ ಮಾಡಲು ಸಾಧ್ಯವಾಗ್ತಿಲ್ಲ..!

ಒತ್ತಡದಲ್ಲಿ ವಿಂಡೀಸ್‌: ಆತಿಥೇಯ ವಿಂಡೀಸ್‌ ಕಳೆದ 8 ಏಕದಿನ ಪಂದ್ಯಗಳಲ್ಲಿ ಸೋತಿದ್ದು, ಇದರಲ್ಲಿ ಬಾಂಗ್ಲಾದೇಶ ವಿರುದ್ಧ 0-3 ವೈಟ್‌ವಾಶ್‌ ಸಹ ಸೇರಿದೆ. ಮತ್ತೊಂದು ವೈಟ್‌ವಾಶ್‌ ತಪ್ಪಿಸಿಕೊಳ್ಳಬೇಕಿದ್ದರೆ ಸಂಘಟಿತ ಪ್ರದರ್ಶನ ತೋರಬೇಕಿದೆ. ಎರಡೂ ಪಂದ್ಯಗಳಲ್ಲಿ ವಿಂಡೀಸ್‌ಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಈ ಪಂದ್ಯದಲ್ಲಾದರೂ ಅದೃಷ್ಟಕೈಹಿಡಿಯಲಿದೆಯೇ ಎನ್ನುವ ಕುತೂಹಲ ವಿಂಡೀಸ್‌ ಅಭಿಮಾನಿಗಳಿದ್ದು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಶಿಖರ್‌ ಧವನ್‌(ನಾಯಕ), ಶುಭ್‌ಮನ್‌ ಗಿಲ್‌, ಶ್ರೇಯಸ್ ಅಯ್ಯರ್‌, ಸೂರ್ಯಕುಮಾರ್ ಯಾದವ್‌, ಸಂಜು ಸ್ಯಾಮ್ಸನ್‌, ದೀಪಕ್‌ ಹೂಡಾ, ಅಕ್ಷರ್ ಪಟೇಲ್‌‌, ರವೀಂದ್ರ ಜಡೇಜಾ/ ಯುಜುವೇಂದ್ರ ಚಹಲ್‌, ಶಾರ್ದೂಲ್ ಠಾಕೂರ್‌, ಪ್ರಸಿದ್ದ್‌ ಕೃಷ್ಣ, ಆವೇಶ್‌ ಖಾನ್/ಅಶ್‌ರ್‍ದೀಪ್ ಸಿಂಗ್‌.

ವೆಸ್ಟ್ ಇಂಡೀಸ್‌: ಶಾಯ್ ಹೋಪ್‌, ಕೈಲ್ ಮೇಯ​ರ್ಸ್‌, ಸಮರ್ಥ್ ಬ್ರೂಕ್ಸ್‌, ಬ್ರಾಂಡನ್‌ ಕಿಂಗ್‌, ನಿಕೋಲಸ್ ಪೂರನ್‌(ನಾಯಕ), ರೋವ್ಮನ್‌ ಪೋವೆಲ್‌, ಶೆಫರ್ಡ್‌, ಹೊಸೈನ್‌, ವಾಲ್ಶ್‌, ಅಲ್ಜಾರಿ ಜೋಸೆಫ್‌, ಸೀಲ್ಸ್‌.

ಪಂದ್ಯ: ಸಂಜೆ 7ಕ್ಕೆ
ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್‌

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜೈಸ್ವಾಲ್‌ ಸಖತ್‌ ಸೆಂಚುರಿ, ಟೆಸ್ಟ್‌ ಸರಣಿ ಸೋಲಿಗೆ ಏಕದಿನದಲ್ಲಿ ಸೇಡು ತೀರಿಸಿಕೊಂಡ ಭಾರತ!
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌