
ನವದೆಹಲಿ(ಜು.27): ಭಾರತದಲ್ಲಿ ನಡೆಯಲಿರುವ ದೇಸಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಇನ್ಮುಂದೆ ಮಾಸ್ಟರ್ ಕಾರ್ಡ್ ಸಂಸ್ಥೆ ಶೀರ್ಷಿಕೆ ಪ್ರಾಯೋಜಕರಾಗಿ ಕಾಣಿಸಿಕೊಳ್ಳಲಿದೆ. ಪೇಟಿಎಂ ಸಂಸ್ಥೆ ತನ್ನ ಬಳಿ ಇದ್ದ ಪ್ರಾಯೋಜಕತ್ವ ಹಕ್ಕನ್ನು ಮಾಸ್ಟರ್ ಕಾರ್ಡ್‌ಗೆ ವರ್ಗಾಯಿಸಿದ್ದು, ಈ ಹಿಂದಿನಂತೆಯೇ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ 3.8 ಕೋಟಿ ರು. ಪಾವತಿಯಾಗಲಿದೆ.
7 ವರ್ಷಗಳಿಂದ ಶೀರ್ಷಿಕೆ ಪ್ರಾಯೋಜಕರಾಗಿದ್ದ ಪೇಟಿಎಂ ಆರ್ಥಿಕ ಸಂಕಷ್ಟದಿಂದಾಗಿ ಪ್ರಾಯೋಜಕತ್ವದಿಂದ ಹಿಂದೆ ಸರಿದಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಸೆಪ್ಟೆಂಬರ್‌ನಲ್ಲಿ ತವರಿನಲ್ಲಿ ನಡೆಯಲಿರುವ ಆಸ್ಪ್ರೇಲಿಯಾ ವಿರುದ್ಧದ ಸರಣಿಯಿಂದ ಭಾರತ ತಂಡ ಹೊಸ ಪ್ರಯೋಜಕತ್ವದೊಂದಿಗೆ ಆಡಲಿದೆ.
2025ರ ಮಹಿಳಾ ಏಕದಿನ ವಿಶ್ವಕಪ್ ಆತಿಥ್ಯಕ್ಕೆ ಭಾರತ ಬಿಡ್
ನವದೆಹಲಿ: 2025ರ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯು ಭಾರತದಲ್ಲಿ ನಡೆಯುವ ಸಾಧ್ಯತೆ ಇದೆ. ಟೂರ್ನಿಯ ಆತಿಥ್ಯ ಹಕ್ಕು ಪಡೆಯಲು ಬಿಸಿಸಿಐ ಬಿಡ್ ಸಲ್ಲಿಸಲು ನಿರ್ಧರಿಸಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಬಿಸಿಸಿಐ ಬಿಡ್ ಗೆದ್ದರೆ ಒಂದು ದಶಕದ ಬಳಿಕ ಭಾರತದಲ್ಲಿ ಮಹಿಳೆಯರ ಏಕದಿನ ವಿಶ್ವಕಪ್ ನಡೆಯಲಿದೆ. ಕೊನೆ ಬಾರಿಗೆ 2013ರಲ್ಲಿ ಭಾರತ ಪ್ರತಿಷ್ಠಿತ ಟೂರ್ನಿಗೆ ಆತಿಥ್ಯ ನೀಡಿತ್ತು. ಮುಂಬೈನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಆಸ್ಪ್ರೇಲಿಯಾ ತಂಡ ವಿಂಡೀಸ್ ವಿರುದ್ಧ ಗೆದ್ದು ಚಾಂಪಿಯನ್ ಆಗಿತ್ತು.
ಭಾರತದ 2 ಮಹಿಳಾ ಕ್ರಿಕೆಟರ್‌ಗಳಿಗೆ ಕೋವಿಡ್
ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾಗಿದ್ದ ಭಾರತದ ಇಬ್ಬರು ಮಹಿಳಾ ಕ್ರಿಕೆಟರ್‌ಗಳಿಗೆ ಕೊರೋನಾ ಸೋಂಕು ತಗುಲಿದ್ದು, ಭಾರತದಲ್ಲೇ ಉಳಿದುಕೊಂಡಿದ್ದಾರೆ. ಭಾನುವಾರ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಬರ್ಮಿಂಗ್‌ಹ್ಯಾಮ್‌ಗೆ ಪ್ರಯಾಣಿಸಿತು. ಆದರೆ ಈ ಇಬ್ಬರು ಆಟಗಾರ್ತಿಯರು ಬೆಂಗಳೂರಲ್ಲೇ ಉಳಿದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆಟಗಾರ್ತಿಯರ ಹೆಸರುಗಳನ್ನು ಬಿಸಿಸಿಐ ಬಹಿರಂಗ ಪಡಿಸಿಲ್ಲ. ಈ ಇಬ್ಬರು ಆಸ್ಪ್ರೇಲಿಯಾ ವಿರುದ್ಧ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದು, ನೆಗೆಟಿವ್ ವರದಿ ಬಂದ ಬಳಿಕ ಇಂಗ್ಲೆಂಡ್‌ಗೆ ತೆರಳುವ ಸಾಧ್ಯತೆ ಇದೆ. ಜು.31ರಂದು ಪಾಕಿಸ್ತಾನ, ಆ.3ರಂದು ಬಾರ್ಬಡೊಸ್ ವಿರುದ್ಧ ಭಾರತ ಆಡಲಿದೆ.
ಭಾರತೀಯ ಕ್ರಿಕೆಟರ್ಸ್ಗೆ ಪಾಂಟಿಂಗ್ ಅಡ್ಡಗಾಲು, ತ್ರಿಮೂರ್ತಿಗಳಿಗೆ ರೆಕಾರ್ಡ್ ಬ್ರೇಕ್ ಮಾಡಲು ಸಾಧ್ಯವಾಗ್ತಿಲ್ಲ..!
2ನೇ ಟೆಸ್ಟ್: ಪಾಕಿಸ್ತಾನ ವಿರುದ್ಧ ಲಂಕಾಕ್ಕೆ ಮುನ್ನಡೆ
ಗಾಲೆ: ಶ್ರೀಲಂಕಾದ ಸ್ಪಿನ್ನರ್‌ಗಳ ದಾಳಿಗೆ ತತ್ತರಿಸಿದ ಪಾಕಿಸ್ತಾನ, 2ನೇ ಟೆಸ್ಟ್‌ನಲ್ಲಿ ಆತಿಥೇಯ ತಂಡಕ್ಕೆ ದೊಡ್ಡ ಮುನ್ನಡೆ ಬಿಟ್ಟುಕೊಟ್ಟಿದೆ. 2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 191 ರನ್ ಗಳಿಸಿದ್ದ ಪಾಕಿಸ್ತಾನ, 3ನೇ ದಿನವಾದ ಮಂಗಳವಾರ 231 ರನ್‌ಗೆ ಆಲೌಟ್ ಆಯಿತು. ಸ್ಪಿನ್ನರ್‌ಗಳಾದ ರಮೇಶ್ ಮೆಂಡಿಸ್ 5, ಪ್ರಭಾತ್ ಜಯಸೂರ್ಯ 3 ವಿಕೆಟ್ ಕಿತ್ತರು. 147 ರನ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಲಂಕಾ, 3ನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 176 ರನ್ ಗಳಿಸಿದ್ದು, ಒಟ್ಟಾರೆ 323 ರನ್ ಮುನ್ನಡೆ ಸಂಪಾದಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.