
ಢಾಕಾ(ಡಿ.04): ಕೆ ಎಲ್ ರಾಹುಲ್(73) ಅವರ ಸಮಯೋಚಿತ ಅರ್ಧಶತಕದ ಹೊರತಾಗಿಯೂ, ಶಕೀಬ್ ಅಲ್ ಹಸನ್(36/5) ಮಾರಕ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 186 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಆತಿಥೇಯ ಬಾಂಗ್ಲಾದೇಶ ತಂಡಕ್ಕೆ ಸಾಧಾರಣ ಗುರಿ ನೀಡಿದೆ.
ಇಲ್ಲಿನ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರು ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಶಿಖರ್ ಧವನ್ ಕೇವಲ 7 ರನ್ ಬಾರಿಸಿ ಮೆಹದಿ ಹಸನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು 11ನೇ ಓವರ್‌ನಲ್ಲಿ ಶಕೀಬ್ ಅಲ್ ಹಸನ್, ನಾಯಕ ರೋಹಿತ್ ಶರ್ಮಾ(27) ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ(9)ಯನ್ನು ಪೆವಿಲಿಯನ್ನಿಗಟ್ಟುವ ಮೂಲಕ ಭಾರತಕ್ಕೆ ಡಬಲ್ ಶಾಕ್ ನೀಡಿದರು. ಟೀಂ ಇಂಡಿಯಾ 49 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು.
ಇನ್ನು 4ನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಹಾಗೂ ಕೆ ಎಲ್ ರಾಹುಲ್ 43 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು. ನೆಲಕಚ್ಚಿ ಆಡುವ ಮುನ್ಸೂಚನೆ ನೀಡಿದ್ದ ಶ್ರೇಯಸ್ ಅಯ್ಯರ್ 24 ರನ್ ಬಾರಿಸಿ ಎಬೊದತ್ ಹೊಸೈನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು 5ನೇ ವಿಕೆಟ್‌ಗೆ ಕೆ ಎಲ್ ರಾಹುಲ್ ಹಾಗೂ ವಾಷಿಂಗ್ಟನ್ ಸುಂದರ್ 60 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಟೀಂ ಇಂಡಿಯಾಗೆ ರಾಹುಲ್ ಆಸರೆ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ರನ್ ಬರ ಅನುಭವಿಸುವ ಮೂಲಕ ಟೀಕೆಗೆ ಗುರಿಯಾಗಿದ್ದ ಕೆ ಎಲ್ ರಾಹುಲ್, ಬಾಂಗ್ಲಾದೇಶ ಎದುರಿನ ಮೊದಲ ಪಂದ್ಯದಲ್ಲಿ ಜವಾಬ್ದಾರಿಯುತ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರೂಪದಲ್ಲಿ ಕಣಕ್ಕಿಳಿದಿರುವ ರಾಹುಲ್, ಮಧ್ಯಮ ಕ್ರಮಾಂಕದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸುವ ತಂಡಕ್ಕೆ ಆಸರೆಯಾದರು. ರಾಹುಲ್ 70 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 73 ರನ್ ಬಾರಿಸಿ ಎಬೊದತ್ ಹೊಸೈನ್‌ಗೆ ಮೂರನೇ ಬಲಿಯಾದರು.
Ind vs Ban: ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ಕೆ, ಭಾರತ ಪರ ಕುಲ್ದೀಪ್ ಸೆನ್ ಪಾದಾರ್ಪಣೆ
ಟೀಂ ಇಂಡಿಯಾ ಬ್ಯಾಟರ್‌ಗಳನ್ನು ಕಾಡಿದ ಶಕೀಬ್: ಹೌದು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾವನ್ನು ಮಾಜಿ ನಾಯಕ ಶಕೀಬ್ ಅಲ್ ಹಸನ್ ಬೌಲಿಂಗ್‌ನಲ್ಲಿ ಇನ್ನಿಲ್ಲದಂತೆ ಕಾಡಿದರು. ಒಂದೇ ಓವರ್‌ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯನ್ನು ಪೆವಿಲಿಯನ್ನಿಗಟ್ಟಿದ ಶಕೀಬ್, ಇದಾದ ಬಳಿಕ ಆಲ್ರೌಂಡರ್‌ಗಳಾದ ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ ಹಾಗೂ ದೀಪಕ್ ಚಹರ್ ಅವರನ್ನು ಬಲಿ ಪಡೆಯುವ ಮೂಲಕ ಶಾಕ್ ನೀಡಿದರು. ಅಂತಿಮವಾಗಿ ಶಕೀಬ್ ಅಲ್ ಹಸನ್ 36 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.