Perth Test ನೇಥನ್ ಲಯನ್ ಸ್ಪಿನ್ ಬಲೆಗೆ ಬಿದ್ದ ಕೆರಿಬಿಯನ್ನರು, ಪರ್ತ್ ಟೆಸ್ಟ್‌ ಆಸೀಸ್ ಪಾಲು..!

By Naveena K VFirst Published Dec 4, 2022, 2:06 PM IST
Highlights

ವೆಸ್ಟ್ ಇಂಡೀಸ್ ಎದುರು ಮೊದಲ ಟೆಸ್ಟ್ ಗೆದ್ದ ಆಸ್ಟ್ರೇಲಿಯಾ
ಪರ್ತ್‌ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಗೆ 164 ರನ್‌ಗಳ ಜಯ
6 ವಿಕೆಟ್ ಕಬಳಿಸಿ ಮಿಂಚಿದ ನೇಥನ್ ಲಯನ್

ಪರ್ತ್‌(ಡಿ.04): ಆಸ್ಟ್ರೇಲಿಯಾದ ತಾರಾ ಸ್ಪಿನ್ನರ್ ನೇಥನ್ ಲಯನ್‌ ಮಾರಕ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ 333 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 164 ರನ್‌ಗಳ ಭರ್ಜರಿ ಜಯಸಾಧಿಸುವುದರ ಜತೆಗೆ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಇನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್ ನಾಯಕ ಕ್ರೆಗ್ ಬ್ರಾಥ್‌ವೇಟ್ ಸಿಡಿಸಿದ ಶತಕ ವ್ಯರ್ಥವಾದಂತೆ ಆಗಿದೆ.

ಇಲ್ಲಿನ ಪರ್ತ್‌ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ನೀಡಿದ್ದ 498 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಆರಂಭವನ್ನೇ ಪಡೆಯಿತು. ನಾಲ್ಕನೇ ದಿನದಾಟದಂತ್ಯದ ವೇಳೆಗೆ ವೆಸ್ಟ್ ಇಂಡೀಸ್ ತಂಡವು ಕೇವಲ 3 ವಿಕೆಟ್ ಕಳೆದುಕೊಂಡು 192 ರನ್ ಕಲೆಹಾಕುವ ಮೂಲಕ ದಿಟ್ಟ ಆರಂಭವನ್ನೇ ಪಡೆದಿತು. ಕೊನೆಯ ದಿನವಾದ ಇಂದು ವೆಸ್ಟ್ ಇಂಡೀಸ್ ತಂಡವು ಪರ್ತ್‌ ಟೆಸ್ಟ್‌ ಪಂದ್ಯ ಗೆಲ್ಲಲು 306 ರನ್‌ಗಳ ಅಗತ್ಯವಿತ್ತು.

ಲಯನ್ ಮ್ಯಾಜಿಕ್‌, ವಿಂಡೀಸ್‌ಗೆ ಶಾಕ್: ನಾಲ್ಕನೇ ದಿನದಾಟಂತ್ಯಕ್ಕೆ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದ ಕ್ರೇಗ್‌ ಬ್ರಾಥ್‌ವೇಟ್‌ ಹಾಗೂ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಜರ್ಮೈನ್ ಬ್ಲಾಕ್‌ವುಡ್ ಅವರನ್ನು ಹೆಚ್ಚುಹೊತ್ತು ಕ್ರೀಸ್‌ನಲ್ಲಿರಲು ನೇಥನ್ ಲಯನ್ ಅವಕಾಶ ಮಾಡಿಕೊಡಲಿಲ್ಲ. ಪರಿಣಾಮ ವೆಸ್ಟ್ ಇಂಡೀಸ್ ತಂಡವು ಒಂದು ಹಂತದಲ್ಲಿ ಕೇವಲ 233 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು. 

Perth Test: ಬ್ರಾಥ್‌ವೇಟ್‌ ಶತಕ, ರೋಚಕಘಟ್ಟದತ್ತ ಆಸ್ಟ್ರೇಲಿಯಾ-ವಿಂಡೀಸ್ ಟೆಸ್ಟ್..!

ಆದರೆ 8ನೇ ವಿಕೆಟ್‌ಗೆ ರೋಸ್ಟನ್ ಚೇಸ್ ಹಾಗೂ ಅಲ್ಜೆರಿ ಜೋಸೆಫ್‌ 82 ರನ್‌ಗಳ ಜತೆಯಾಟವಾಡುವ ಮೂಲಕ ವಿಂಡೀಸ್ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಟ್ರಾವಿಸ್ ಹೆಡ್ ಯಶಸ್ವಿಯಾದರು. ಅಲ್ಜೆರಿ ಜೋಸೆಫ್ 43 ರನ್ ಬಾರಿಸಿ ಟ್ರಾವಿಸ್ ಹೆಡ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮತ್ತೊಂದು ತುದಿಯಲ್ಲಿ 55 ರನ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದ್ದ ರೋಸ್ಟನ್ ಚೇಸ್ ಅವರನ್ನು ಬಲಿಪಡೆಯುವ ಮೂಲಕ ಆಸೀಸ್‌ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದರು.

Australia win 🎉

Nathan Lyon sends West Indies packing with a match-winning six-for 🔥

Watch the series live on https://t.co/CPDKNxpgZ3 (in select regions) 📺 | Scorecard: https://t.co/YyderoqpP2 pic.twitter.com/3Il9j6hBNL

— ICC (@ICC)

ಆಸ್ಟ್ರೇಲಿಯಾ ತಂಡದ ಪರ ನೇಥನ್ ಲಯನ್ 128 ರನ್ ನೀಡಿ 6 ವಿಕೆಟ್ ಪಡೆದರೆ, ಟ್ರಾವಿಸ್ ಹೆಡ್ 2 ಹಾಗೂ ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಜಲ್‌ವುಡ್ ತಲಾ ಒಂದೊಂದು ವಿಕೆಟ್ ಪಡೆದರು. 

ಹೇಗಿತ್ತು ಪರ್ತ್‌ ಟೆಸ್ಟ್‌?: ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್‌  ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮಾರ್ನಸ್ ಲಬುಶೇನ್(204) ಹಾಗೂ ಸ್ಟೀವ್ ಸ್ಮಿತ್(200) ಆಕರ್ಷಕ ದ್ವಿಶತಕ ಹಾಗೂ ಟ್ರಾವಿಸ್ ಹೆಡ್(99) ಮತ್ತು ಉಸ್ಮಾನ್ ಖವಾಜ(65) ಬಾರಿಸಿದ ಅರ್ಧಶತಕಗಳ ನೆರವಿನಿಂದ 4 ವಿಕೆಟ್ ಕಳೆದುಕೊಂಡು 598 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇನ್ನು ಮೊದಲ ಇನಿಂಗ್ಸ್‌ನಲ್ಲಿ ವೆಸ್ಟ್‌ ಇಂಡೀಸ್ ತಂಡವು ಕ್ರೆಗ್‌ ಬ್ರಾಥ್‌ವೇಟ್(64) ಹಾಗೂ ತೇಜ್‌ನರೈನ್ ಚಂದ್ರಪಾಲ್(51) ಬಾರಿಸಿದ ಅರ್ಧಶತಕಗಳ ನೆರವಿನಿಂದ 283 ರನ್ ಬಾರಿಸಿ ಸರ್ವಪತನ ಕಂಡಿತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಮಾರ್ನಸ್ ಲಬುಶೇನ್ ಬಾರಿಸಿದ ಅಜೇಯ ಶತಕದ ನೆರವಿನಿಂದ 2 ವಿಕೆಟ್ ಕಳೆದುಕೊಂಡು 182 ರನ್ ಬಾರಿಸಿ ಎರಡನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ 498 ರನ್‌ಗಳ ಸವಾಲಿನ ಗುರಿ ನೀಡಿತ್ತು.

click me!