* ಪಾಕ್ ಮಾಜಿ ನಾಯಕ ಶಾಹೀದ್ ಅಫ್ರಿದಿ ಮೇಲೆ ಗಂಭೀರ ಆರೋಪ ಮಾಡಿದ ಕನೇರಿಯಾ
* ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದ ಸ್ಪಿನ್ನರ್ ದಾನೀಶ್ ಕನೇರಿಯಾ
* ಹಿಂದೂವಾಗಿದ್ದಕ್ಕೆ ನನ್ನ ಮೇಲೆ ತಾರತಮ್ಯ ಮಾಡಲಾಯಿತು ಎಂದ ಮಾಜಿ ಸ್ಪಿನ್ನರ್
ಕರಾಚಿ(ಏ.29): ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ (Danish Kaneria) ಮೇಲೆ ಪಾಕ್ ಮಾಜಿ ಕ್ರಿಕೆಟಿಗ ದಾನೀಶ್ ಕನೇರಿಯಾ ಗಂಭೀರ ಆರೋಪ ಮಾಡಿದ್ದಾರೆ. ಸದಾ ಒಂದಿಲ್ಲೊಂದು ಸೆನ್ಸೇಷನಲ್ ವಿಚಾರದ ಮೂಲಕ ಸುದ್ದಿಯಲ್ಲಿರುವ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನೀಶ್ ಕನೇರಿಯಾ, ಮಾಜಿ ನಾಯಕ ಶಾಹೀದ್ ಅಫ್ರಿದಿ ಮೇಲೆ ಧಾರ್ಮಿಕ ವಿಚಾರವಾಗಿ ಒಂದು ಗಂಭೀರ ಆರೋಪ ಮಾಡಿದ್ದಾರೆ.
IANS ಸುದ್ದಿಸಂಸ್ಥೆಯ ಜತೆಗೆ ಮಾತನಾಡಿದ ದಾನೀಶ್ ಕನೇರಿಯಾ, ಶಾಹಿದ್ ಅಫ್ರಿದಿ ಓರ್ವ ದೊಡ್ಡ ಸುಳ್ಳುಗಾರ. ನಾನು ಹಿಂದೂವಾಗಿದ್ದೆ ಎನ್ನುವ ಒಂದೇ ಕಾರಣಕ್ಕೆ ಪಾಕಿಸ್ತಾನ ತಂಡದಲ್ಲಿ ಆತ ನನ್ನನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಆರೋಪ ಮಾಡಿದ್ದಾರೆ. ಶಾಹಿದ್ ಅಫ್ರಿದಿ ಮೇಲೆ ಈ ರೀತಿಯ ಆರೋಪ ಕೇಳಿ ಬಂದಿರುವುದು ಇದೇ ಮೊದಲೇನಲ್ಲ. ಈ ಮೊದಲು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ (Shoaib Akhtar) ಕೂಡಾ ಇದೇ ರೀತಿಯ ಆರೋಪ ಮಾಡಿದ್ದರು. ನಮ್ಮ ತಂಡದಲ್ಲಿದ್ದ ಸ್ಪಿನ್ನರ್ ಹಿಂದೂ ಆಗಿದ್ದ ಕಾರಣಕ್ಕೆ ನಮ್ಮ ತಂಡದ ಕೆಲ ಸದಸ್ಯರು ಅವರನ್ನು ಅಸಹಜವಾಗಿ ನಡೆಸುಕೊಂಡಿದ್ದರು ಎಂದು ಆರೋಪಿಸಿದ್ದರು.
ಈ ಕುರಿತಂತೆ ಮಾತನಾಡಿರುವ ದಾನೀಶ್ ಕನೇರಿಯಾ, ನನ್ನ ಸಮಸ್ಯೆಯ ಕುರಿತಂತೆ ಸಾರ್ವಜನಿಕವಾಗಿ ಮೊದಲು ಮಾತನಾಡಿದ್ದು ಶೋಯೆಬ್ ಅಖ್ತರ್. ಇದನ್ನು ದಿಟ್ಟವಾಗಿ ಹೇಳಿದ್ದಕ್ಕೆ ಅಖ್ತರ್‌ಗೆ ಹ್ಯಾಟ್ಸ್‌ಅಫ್. ವಿವಿಧ ಅಧಿಕಾರಿಗಳ ಮೂಲಕ ನನ್ನ ಮೇಲೆ ಒತ್ತಡವನ್ನು ಹೇರಲಾಗಿತ್ತು. ನಾನು ಯಾವಾಗಲೂ ಶಾಹಿದ್ ಅಫ್ರಿದಿ ಅವರಿಂದ ತಿರಸ್ಕರಿಸಲ್ಪಟ್ಟಿದ್ದೆ. ನಾವು ಇಬ್ಬರು ಒಂದೇ ತಂಡದ ಒಟ್ಟಾಗಿಯೇ ಆಡಿದ್ದೇವೆ. ಅಫ್ರಿದಿ ಯಾವಾಗಲೂ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ನನ್ನನ್ನು ಬೆಂಚ್ ಕಾಯಿಸುವಂತೆ ಮಾಡಿದ್ದರು. ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುತ್ತಿರಲಿಲ್ಲ ಎಂದು ದಾನೀಶ್ ಕನೇರಿಯಾ ಹೇಳಿದ್ದಾರೆ.
ಅವರು ಯಾವಾಗಲೂ ನಾನು ತಂಡದೊಳಗೆ ಸ್ಥಾನ ನೀಡಲು ಬಯಸುತ್ತಿರಲಿಲ್ಲ. ಅವರೊಬ್ಬ ದೊಡ್ಡ ಸುಳ್ಳುಗಾರ ಹಾಗೂ ತಂತ್ರಗಾರ. ಯಾಕೆಂದರೆ ಅವರೊಬ್ಬ ಚಾರಿತ್ರ್ಯಹೀನ ವ್ಯಕ್ತಿ. ಇದೆಲ್ಲದರಾಚೆಗೆ, ನನ್ನ ಗಮನ ಕ್ರಿಕೆಟ್ ಮೇಲಿತ್ತು. ನಾನು ಇಂತಹ ರಾಜಕೀಯದ ಬಗ್ಗೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ಶಾಹಿದ್ ಅಪ್ರಿದಿ, ಉಳಿದ ಆಟಗಾರರು ನನ್ನ ಮೇಲೆ ಜಗಳವಾಡಲು ಪ್ರಚೋದಿಸುವಂತೆ ಮಾಡುತ್ತಿದ್ದರು. ನಾನು ಚೆನ್ನಾಗಿ ಪ್ರದರ್ಶನ ತೋರಿದಾಗಲೆಲ್ಲ ಆತ ನನ್ನ ಮೇಲೆ ಅಸೂಯೆ ಪಡುತ್ತಿದ್ದ. ನಾನು ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ಪರ ಆಡಿದ್ದಕ್ಕೆ ನನಗೆ ಹೆಮ್ಮೆಯಿದೆ. ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದಕ್ಕೆ ಕೃತಜ್ಞನಾಗಿದ್ದೇನೆ ಎಂದು ದಾನೀಶ್ ಕನೇರಿಯಾ ಹೇಳಿದ್ದಾರೆ.
Ben Stokes ಇಂಗ್ಲೆಂಡ್ ಟೆಸ್ಟ್ ನಾಯಕ ಸ್ಟೋಕ್ಸ್‌ಗೆ ಭಾವನಾತ್ಮಕ ಸಂದೇಶ ರವಾನಿಸಿದ ರೂಟ್..!
ದಾನೇಶ್ ಕನೇರಿಯಾ, ಸ್ಪಾಟ್ ಫಿಕ್ಸಿಂಗ್ ಮಾಡಿದ ಆರೋಪದಡಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಿಂದ ಸಸ್ಪೆಂಡ್ ಆಗಿದ್ದರು. ನನ್ನ ಮೇಲೆ ಕೆಲವೊಂದು ಸುಳ್ಳು ಆರೋಪಗಳನ್ನು ಮಾಡಲಾಗಿತ್ತು. ಸ್ಪಾಟ್ ಫಿಕ್ಸಿಂಗ್ (Spot-Fixing) ಮಾಡಿದ ವ್ಯಕ್ತಿಯ ಜತೆ ನನ್ನ ಹೆಸರನ್ನು ತಳುಕು ಹಾಕಲಾಗಿತ್ತು. ಆತ ಶಾಹಿದ್ ಅಫ್ರಿದಿ ಹಾಗೂ ಇತರ ಆಟಗಾರರ ಸ್ನೇಹಿತನಾಗಿದ್ದ. ಆದರೆ ನನ್ನನ್ನೇ ಏಕೆ ಗುರಿ ಮಾಡಲಾಯಿತು ಎನ್ನುವುದು ಗೊತ್ತಿಲ್ಲ. ನನ್ನ ಮೇಲಿರುವ ಬ್ಯಾನ್ ಶಿಕ್ಷೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತೆರವು ಮಾಡಲಿ ಎಂದು ನಾನು ಕೇಳಿಕೊಳ್ಳಿತ್ತೇನೆಂದು ಕನೇರಿಯಾ ಹೇಳಿದ್ದಾರೆ.
ಈಗಾಗಲೇ ಸಾಕಷ್ಟು ಫಿಕ್ಸರ್‌ಗಳು ಬ್ಯಾನ್ ಆಗಿ ಅದರಿಂದ ಹೊರಬಂದಿದ್ದಾರೆ. ಆದರೆ ನನಗೆ ಯಾಕೆ ಈ ರೀತಿಯ ಶಿಕ್ಷೆ ಎಂದು ಅರ್ಥವಾಗುತ್ತಿಲ್ಲ. ನಾನು ನನ್ನ ದೇಶದ ಪರ ಆಡಿದ್ದೇನೆ ಹಾಗೂ ಇತರರಂತೆ ನನಗೂ ಒಂದು ಅವಕಾಶ ನೀಡಿ. ಸದ್ಯ ನಾನೀಗ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿಲ್ಲ. ನನಗೆ ಉದ್ಯೋಗ ನೀಡಿ ಎಂದು ಪಿಸಿಬಿ ಬಳಿ ಕೇಳುತ್ತಿಲ್ಲ. ಆದರೆ ನನ್ನ ಮೇಲಿರುವ ಬ್ಯಾನ್ ತೆರವುಗೊಳಿಸಿದರೆ, ನೆಮ್ಮದಿಯಾಗಿ ಗೌರವಯುತ ಬದುಕನನ್ನು ನಾನು ನಡೆಸುತ್ತೇನೆ ಎಂದು 41 ವರ್ಷದ ದಾನೀಶ್ ಕನೇರಿಯಾ ಹೇಳಿದ್ದಾರೆ.