ಸಿಗದ ಏಕದಿನ ವಿಶ್ವಕಪ್‌ ಆತಿಥ್ಯ: ಬಿಸಿಸಿಐ ವಿರುದ್ಧ ಹಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳಿಂದ ಬಹಿರಂಗ ಸಿಟ್ಟು!

By Kannadaprabha NewsFirst Published Jun 29, 2023, 8:09 AM IST
Highlights

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭ
ವಿಶ್ವಕಪ್‌ಗೆ ಆತಿಥ್ಯ ಸಿಗದ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಂದ ಬಿಸಿಸಿಐ ಮೇಲೆ ಬಹಿರಂಗ ಅಸಮಾಧಾನ
ರಾಜಕೀಯ ಉದ್ದೇಶವೇ ಇದಕ್ಕೆ ಕಾರಣ ಎಂದು ಆರೋಪಿಸಿದ ಪಂಜಾಬ್ ಕ್ರೀಡಾ ಸಚಿವ

ನವದೆಹಲಿ(ಜೂ.29): ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ನ ಅಧಿಕೃತ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ವಿರುದ್ಧ ಹಲವು ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಆಕ್ರೋಶ ಹೊರಹಾಕಿವೆ. ಇದಕ್ಕೆ ಕಾರಣವಾಗಿದ್ದು ತಮ್ಮ ರಾಜ್ಯಗಳ ಕ್ರೀಡಾಂಗಣಗಳಿಗೆ ವಿಶ್ವಕಪ್‌ ಪಂದ್ಯದ ಆತಿಥ್ಯ ಹಕ್ಕು ಸಿಗದೇ ಇರುವುದು.

ಈ ಬಾರಿ ಟೂರ್ನಿಯ ಪಂದ್ಯಗಳು 10 ನಗರಗಳ ಕ್ರೀಡಾಂಗಣಗಳಲ್ಲಿ ನಡೆಯಲಿವೆ. ಆದರೆ 1996ರಿಂದಲೂ ವಿಶ್ವಕಪ್‌ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿರುವ ಮೊಹಾಲಿ ಜೊತೆಗೆ ರಾಜ್‌ಕೋಟ್‌, ಇಂದೋರ್‌, ನಾಗ್ಪುರ, ರಾಂಚಿ ಹಾಗೂ ಇನ್ನಿತರ ಜನಪ್ರಿಯ ಕ್ರೀಡಾಂಗಣಗಳಿಗೆ ಒಂದೂ ಪಂದ್ಯ ಸಿಕ್ಕಿಲ್ಲ.

Latest Videos

ಈ ಬಗ್ಗೆ ಪಂಜಾಬ್ ಕ್ರಿಕೆಟ್ ಸಂಸ್ಥೆ(ಪಿಸಿಎ) ಬಿಸಿಸಿಐ ವಿರುದ್ಧ ಹರಿಹಾಯ್ದಿದ್ದು, ಕೇವಲ ಮೆಟ್ರೋ ಹಾಗೂ ಬಿಸಿಸಿಐ ಪದಾಧಿಕಾರಿಗಳು ಪ್ರತಿನಿಧಿಸುವ ರಾಜ್ಯ ಸಂಸ್ಥೆಗಳಿಗಷ್ಟೇ ಪಂದ್ಯಗಳು ಸಿಕ್ಕಿವೆ ಎಂದಿದೆ. ‘ವಿಶ್ವಕಪ್‌ ಆತಿಥ್ಯ ಸಿಗಲು ಸಾಕಷ್ಟು ಪ್ರಯತ್ನ ನಡೆಸಿದ್ದೇವೆ. ಆದರೆ ಒಂದೂ ಪಂದ್ಯವೂ ಸಿಗಲಿಲ್ಲ. ಅಭ್ಯಾಸ ಪಂದ್ಯಕ್ಕೂ ನಮ್ಮನ್ನು ಪರಿಗಣಿಸಿಲ್ಲ’ ಎಂದು ಪಿಸಿಎ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು, ಮೊಹಾಲಿಗೆ ಪಂದ್ಯ ನೀಡದಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ. ಕ್ರೀಡಾಂಗಣ ಆಯ್ಕೆಯಲ್ಲೂ ರಾಜಕೀಯ ಮಾಡಿದ್ದಾರೆ ಎಂದು ಪಂಜಾಬ್ ಕ್ರೀಡಾ ಸಚಿವ ಗುರ್‌ಮೀತ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ."ಮಹತ್ವದ ಪಂದ್ಯಗಳೆಲ್ಲಾ ಅಹಮದಾಬಾದ್‌ನಲ್ಲೇ ನಡೆಯಲಿವೆ. ಇತ್ತೀಚೆಗೆ ಎಲ್ಲವೂ ಅಹಮದಾಬಾದ್‌ ಪಾಲಾಗುತ್ತಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ ಎನ್ನುವುದು ಸುಳ್ಳಲ್ಲ" ಎಂದು ಗುರ್‌ಮೀತ್ ಮಾರ್ಮಿಕವಾಗಿ ನುಡಿದಿದ್ದಾರೆ.

ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆ ಕೂಡಾ ಬಿಸಿಸಿಐ ನಿರ್ಧಾರವನ್ನು ಟೀಕಿಸಿದ್ದು, "ಬಿಸಿಸಿಐ ಆಯ್ಕೆಗೆ ಪ್ರೇರಣೆಯಾಗಿದ್ದು ಏನು ಎಂಬುದು ಗೊತ್ತಿಲ್ಲ. ಇಂದೋರ್‌ ಕ್ರೀಡಾಂಗಣಕ್ಕೆ ಶ್ರೀಮಂತ ಕ್ರಿಕೆಟ್‌ ಇತಿಹಾಸವಿದೆ. ಕನಿಷ್ಠ ಒಂದು ಪಂದ್ಯವಾದರೂ ಇಲ್ಲಿ ನಡೆಯಬೇಕಿತ್ತು’ ಎಂದು ಸಂಸ್ಥೆಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇರಳದ ಸಂಸದ ಶಶಿ ತರೂರ್‌ ಕೂಡಾ ತಿರುವನಂತಪುರಂ ಕ್ರೀಡಾಂಗಣಕ್ಕೆ ವಿಶ್ವಕಪ್‌ ಆತಿಥ್ಯ ಸಿಗದ್ದಕ್ಕೆ ಬಿಸಿಸಿಐಯನ್ನು ಟೀಕಿಸಿದ್ದಾರೆ.

ರಾಜಕೀಯ ಉದ್ದೇಶ ಇಲ್ಲ: ಬಿಸಿಸಿಐ ಸ್ಪಷ್ಟನೆ

ಇನ್ನು, ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಟೀಕೆಗೆ ಉತ್ತರಿಸಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ, "ಕ್ರೀಡಾಂಗಣಗಳ ಆಯ್ಕೆ ಹಿಂದೆ ಯಾವುದೇ ತಾರತಮ್ಯ, ರಾಜಕೀಯ ಉದ್ದೇಶವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಕೆಲ ಕ್ರೀಡಾಂಗಣಗಳು ವಿಶ್ವಕಪ್‌ ಪಂದ್ಯ ಆಯೋಜಿಸಲು ಸೂಕ್ತವಾಗಿರಲಿಲ್ಲ. ಈ ಬಾರಿ ವಿವಿಧ ವಲಯಗಳ ಅಧಾರದಲ್ಲಿ 12 ಕ್ರೀಡಾಂಗಣಗಳನ್ನು ಆಯ್ಕೆ ಮಾಡಿದ್ದೇವೆ. ಈ ಪೈಕಿ ಎರಡರಲ್ಲಿ ಅಭ್ಯಾಸ ಪಂದ್ಯಗಳು ನಡೆಯಲಿವೆ" ಎಂದಿರುವ ಅವರು, ‘ಕ್ರೀಡಾಂಗಣಗಳ ಆಯ್ಕೆಯನ್ನು ಅಂತಿಮಗೊಳಿಸುವುದು ಐಸಿಸಿ ಹೊರತು ಬಿಸಿಸಿಐ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲಿ 25ಕ್ಕೂ ಹೆಚ್ಚು ಕ್ರೀಡಾಂಗಣಗಳು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ಸಾಮರ್ಥ್ಯ ಹೊಂದಿದ್ದು, ವಿಶ್ವಕಪ್‌ನಂತಹ ಜಾಗತಿಕ ಟೂರ್ನಿ ನಡೆಸುವ ವೇಳೆ ಎಲ್ಲರಿಗೂ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಕೆಲ ಕ್ರೀಡಾಂಗಣಗಳಿಗೆ ಅವಕಾಶ ಕೈತಪ್ಪಲಿದೆ ಎನ್ನುವ ಸಬೂಬು ಬಿಸಿಸಿಐ ಅಧಿಕಾರಿಗಳಿಂದ ಕೇಳಿ ಬರುತ್ತಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ:

click me!