ರೋಹಿತ್‌ ಶರ್ಮಗಿಂತ ಒಳ್ಳೆ ಟ್ರ್ಯಾಕ್‌ ರೆಕಾರ್ಡ್‌ ಇದ್ರೂ ಸಚಿನ್‌ನ ಈ ಗೆಳಯನಿಗೆ ಸಿಗಲಿಲ್ಲ ಟೀಂ ಇಂಡಿಯಾ ಚಾನ್ಸ್‌!

Published : Jun 28, 2023, 05:02 PM ISTUpdated : Jun 28, 2023, 05:07 PM IST
ರೋಹಿತ್‌ ಶರ್ಮಗಿಂತ ಒಳ್ಳೆ ಟ್ರ್ಯಾಕ್‌ ರೆಕಾರ್ಡ್‌ ಇದ್ರೂ ಸಚಿನ್‌ನ ಈ ಗೆಳಯನಿಗೆ ಸಿಗಲಿಲ್ಲ ಟೀಂ ಇಂಡಿಯಾ ಚಾನ್ಸ್‌!

ಸಾರಾಂಶ

* ಪ್ರತಿಭೆಯಿದ್ದೂ ಅವಕಾಶವಂಚಿತರಾದ ಕ್ರಿಕೆಟಿಗ ಅಮೊಲ್ ಮಜುಂದಾರ್ * ಮುಂಬೈ ಮೂಲದ ಅಮೊಲ್ ಮಜುಂದಾರ್, ರಣಜಿ ಟ್ರೋಫಿ ಇತಿಹಾಸದಲ್ಲಿ ಎರಡನೇ ಗರಿಷ್ಠ ರನ್ ಸರದಾರ * ಅಮೊಲ್ ಮಜುಂದಾರ್ ಓರ್ವ ನತದೃಷ್ಟ ಕ್ರಿಕೆಟಿಗ ಎಂದು ಕರೆದರೆ ಅತಿಶಯೋಕ್ತಿಯಾಗಲಾರದು

ಮುಂಬೈ(ಜೂ.28): ಭಾರತದಲ್ಲಿ ಸಾಕಷ್ಟು ಪ್ರತಿಭಾನ್ವಿತ ಆಟಗಾರರಿದ್ದು, ದೇಶವನ್ನು ಪ್ರತಿನಿಧಿಸುವಂತಾಗಬೇಕಿದ್ದರೇ ಪ್ರತಿಭೆ ಜತೆಗೆ ಒಮ್ಮೊಮ್ಮೆ ಅದೃಷ್ಟ ಕೂಡಾ ಸಾಥ್ ನೀಡಬೇಕಾಗುತ್ತದೆ. ಎಷ್ಟೋ ಕ್ರಿಕೆಟಿಗರು ದೇಶಿ ಕ್ರಿಕೆಟ್‌ನಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ಹೊರತಾಗಿಯೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾದ ಹಲವು ಕ್ರಿಕೆಟಿಗರಿದ್ದಾರೆ. ಅಂತಹವರ ಪೈಕಿ ಅಮೊಲ್ ಮಜುಂದಾರ್ ಕೂಡಾ ಒಬ್ಬರೆನಿಸಿದ್ದಾರೆ. 

ಅಮೊಲ್ ಮಜುಂದಾರ್ ಓರ್ವ ನತದೃಷ್ಟ ಕ್ರಿಕೆಟಿಗ ಎಂದು ಕರೆದರೆ ಅತಿಶಯೋಕ್ತಿಯಾಗಲಾರದು. ಅವರು ದೇಶಿ ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರದರ್ಶನದ ಮೂಲಕ ಮಿಂಚಿದ್ದರು. ಹೀಗಿದ್ದೂ ಅವರಿಗೆ ಕೊನೆಗೂ ರಾಷ್ಟ್ರೀಯ ತಂಡದ ಬಾಗಿಲು ತೆರೆಯಲೇ ಇಲ್ಲ. ಅಮೊಲ್ ಮಜುಂದಾರ್ ಲಿಸ್ಟ್ 'ಎ' ಕ್ರಿಕೆಟ್‌ನಲ್ಲೂ ಮಿಂಚಿನ ಪ್ರದರ್ಶನ ತೋರಿದ್ದರು.

ಹೌದು, ಮುಂಬೈ ಮೂಲದ ಅಮೊಲ್ ಮಜುಂದಾರ್ ಬರೋಬ್ಬರಿ 171 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನಾಡಿ 48.13ರ ಬ್ಯಾಟಿಂಗ್ ಸರಾಸರಿಯಲ್ಲಿ 30 ಶತಕ ಸಹಿತ 11,167 ರನ್ ಬಾರಿಸಿದ್ದಾರೆ. ಸದ್ಯ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಸರಾಸರಿ(45)ಗಿಂತ ಅಮೊಲ್ ಮಜುಂದಾರ್ ಅವರ ಬ್ಯಾಟಿಂಗ್ ಸರಾಸರಿ ಉತ್ತಮವಾಗಿದೆ.

ಅಮೊಲ್ ಮಜುಂದಾರ್ ಸಾಕಷ್ಟು ವರ್ಷಗಳ ಕಾಲ ಮುಂಬೈ, ಆಂಧ್ರ ಪ್ರದೇಶ ಹಾಗೂ ಅಸ್ಸಾಂ ಪರ ರಣಜಿ ಟ್ರೋಫಿ ಪಂದ್ಯಗಳನ್ನಾಡಿ 9,205 ರನ್ ಬಾರಿಸಿದ್ದಾರೆ. ಈ ಮೂಲಕ ವಾಸೀಂ ಜಾಫರ್ ಬಳಿಕ ರಣಜಿ ಟ್ರೋಫಿ ಇತಿಹಾಸದಲ್ಲಿ ಅತಿಹೆಚ್ಚು ರನ್ ಬಾರಿಸಿದ ದಾಖಲೆ ಅಮೊಲ್ ಮಜುಂದಾರ್ ಅವರ ಹೆಸರಿನಲ್ಲಿದೆ. ಹೀಗಿದ್ದೂ ಅಮೊಲ್ ಮಜುಂದಾರ್ ಅವರಿಗೆ ಭಾರತ ಪರ ಒಂದೇ ಪಂದ್ಯ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಅವಕಾಶ ಸಿಗಲಿಲ್ಲ. ಇನ್ನು ಅಮೊಲ್ ಮಜುಂದಾರ್ ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ 3,286 ರನ್ ಬಾರಿಸಿದ್ದಾರೆ. 48 ವರ್ಷದ ಅಮೊಲ್ ಮಜುಂದಾರ್, ಸದ್ಯ ಮುಂಬೈ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಪಿಲ್‌ ದೇವ್‌ಗೆ ಸಿಗುವ ಗೌರವ, ಕ್ಯಾಪ್ಟನ್ ಕೂಲ್ ಧೋನಿಗೇಕಿಲ್ಲ..?

ಸಚಿನ್ ತೆಂಡುಲ್ಕರ್ ಹಾಗೂ ವಿನೋದ್ ಕಾಂಬ್ಳಿ ಬಾರಿಸಿದ ದಾಖಲೆಯ 664 ರನ್‌ಗಳ ಜತೆಯಾಟವಾಡಿದ ಪಂದ್ಯದಲ್ಲಿ ಅಮೊಲ್ ಮಜುಂದಾರ್ ಕೂಡಾ ಅದೇ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದರು. ದೇಶಿ ಕ್ರಿಕೆಟ್‌ನಲ್ಲಿ ರನ್‌ಗಳ ರಾಶಿಯನ್ನೇ ಗುಡ್ಡೆ ಹಾಕಿ ಟೀಂ ಇಂಡಿಯಾದಲ್ಲಿ ಅವಕಾಶಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದರು. ಆದರೆ ದುರಾದೃಷ್ಟವಶಾತ್ ಅಮೊಲ್ ಮಜುಂದಾರ್ ಅವರಿಗೆ ಭಾರತ ತಂಡವನ್ನು ಪ್ರತಿನಿಧಿಸಲು ಚಾನ್ಸ್ ಸಿಗಲೇ ಇಲ್ಲ.

ಸಚಿನ್ ತೆಂಡುಲ್ಕರ್ ಹಾಗೂ ವಿನೋದ್ ಕಾಂಬ್ಳಿ ಇಬ್ಬರೂ ಕೂಡಾ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಲು ಯಶಸ್ವಿಯಾದರು. ಆದರೆ ಅವಕಾಶಕ್ಕಾಗಿ ಕಾದು ಕಾದು ಕೊನೆಗೆ ಅಮೊಲ್ ಮಜುಂದಾರ್ 2017ರಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳಿದರು. ಸುಮಾರು ಮೂರು ದಶಕಗಳ ಕಾಲ ಅಮೊಲ್ ಮಜುಂದಾರ್ ಕ್ರಿಕೆಟ್‌ ಆಡಿದ್ದರು. ಆದರೆ ಆಯ್ಕೆ ಸಮಿತಿ ಅಮೊಲ್ ಮಜುಂದಾರ್ ಅವರಿಗೆ ಭಾರತ ತಂಡದಲ್ಲಿ ಸ್ಥಾನ ನೀಡಲು ಮನಸ್ಸು ಮಾಡಲಿಲ್ಲ.

ಅಮೊಲ್ ಮಜುಂದಾರ್ 1993-94ರಿಂದ 2008-09ರ ವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡಿದ್ದರು. ಇದಾದ ಬಳಿಕ 2009-10ರಲ್ಲಿ ಅಸ್ಸಾಂ ಪರ ಹಾಗೂ 2013-14ರಲ್ಲಿ ಆಂಧ್ರ ಪ್ರದೇಶ ತಂಡವನ್ನು ಪ್ರತಿನಿಧಿಸಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ