
ಚೆನ್ನೈ: ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ವೇಳೆ, ಚೆನ್ನೈ ಆಟಗಾರ ಸಂಜು ಸ್ಯಾಮ್ಸನ್ ಮತ್ತು ಹೈದರಾಬಾದ್ ಆಟಗಾರ ಹೆನ್ರಿಕ್ ಕ್ಲಾಸೆನ್ ನಡುವೆ ಮಾತಿನ ಚಕಮಕಿ ನಡೆದಿದೆ. ಎಂ.ಎಸ್. ಧೋನಿಯವರ ಮಿಂಚಿನ ಸ್ಟಂಪಿಂಗ್‌ಗಳನ್ನು ನೆನಪಿಸುವಂತೆ ಸಂಜು, ಕ್ಲಾಸೆನ್‌ರನ್ನು ಔಟ್ ಮಾಡಿದ ನಂತರ ಮೈದಾನದಲ್ಲಿ ಈ ನಾಟಕೀಯ ಸನ್ನಿವೇಶ ನಡೆಯಿತು.
ಚೆನ್ನೈ ನೀಡಿದ್ದ 181 ರನ್‌ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ಪರ ಇಶಾನ್ ಕಿಶನ್ (47 ಎಸೆತಗಳಲ್ಲಿ 70) ಮತ್ತು ಹೆನ್ರಿಕ್ ಕ್ಲಾಸೆನ್ (26 ಎಸೆತಗಳಲ್ಲಿ 47) ಸ್ಫೋಟಕ ಆಟವಾಡಿದರು. ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ ಚೆನ್ನೈ ಬೌಲರ್‌ಗಳನ್ನು ದಂಡಿಸುತ್ತಿದ್ದ ಕ್ಲಾಸೆನ್ ವಿಕೆಟ್ ಅನ್ನು 15ನೇ ಓವರ್‌ನಲ್ಲಿ ನೂರ್ ಅಹ್ಮದ್ ಪಡೆದು, ಚೆನ್ನೈ ತಂಡಕ್ಕೆ ಬಹುದೊಡ್ಡ ಬ್ರೇಕ್‌ಥ್ರೂ ನೀಡಿದರು.
ನೂರ್ ಅಹ್ಮದ್ ಅವರ ಅದ್ಭುತ ಗೂಗ್ಲಿಗೆ ಕ್ಲಾಸೆನ್ ಬ್ಯಾಟ್ ಬೀಸಲು ವಿಫಲರಾದರು. ಇದೇ ಸಮಯಕ್ಕೆ ಕಣ್ಣು ಮುಚ್ಚಿ ತೆಗೆಯುವುದರೊಳಗೆ ಸಂಜು ಸ್ಯಾಮ್ಸನ್ ಬೇಲ್ಸ್ ಹಾರಿಸಿದರು. ಚೆಪಾಕ್ ಕ್ರೀಡಾಂಗಣದಲ್ಲಿದ್ದ ಚೆನ್ನೈ ಅಭಿಮಾನಿಗಳಿಗೆ ಈ ಸ್ಟಂಪಿಂಗ್, ತಮ್ಮ ನೆಚ್ಚಿನ 'ತಲಾ' ಧೋನಿಯ ಸುವರ್ಣ ಯುಗವನ್ನು ನೆನಪಿಸಿತು. ಸಂಜು ಅವರ ಈ ವಿಶ್ವದರ್ಜೆಯ ಸ್ಟಂಪಿಂಗ್ ನೋಡಲು ಡ್ರೆಸ್ಸಿಂಗ್ ರೂಮ್‌ನಲ್ಲಿ ಸ್ವತಃ ಎಂ.ಎಸ್. ಧೋನಿ ಕೂಡ ಇದ್ದರು. ಸ್ಟಂಪ್ ಮಾಡಿದ ತಕ್ಷಣ ಸಂಜು ಸಂಭ್ರಮದಿಂದ ಕುಣಿದಾಡಿದರು ಮತ್ತು ರಿಪ್ಲೇ ನೋಡುವ ಮೊದಲೇ ಅದು ಔಟ್ ಎಂದು ಅವರಿಗೆ ಖಚಿತವಾಗಿತ್ತು.
ಟಿವಿ ರಿಪ್ಲೇಯಲ್ಲಿ ಕ್ಲಾಸೆನ್ ಔಟ್ ಎಂದು ತೀರ್ಪು ಬಂದಾಗ, ನೂರ್ ಅಹ್ಮದ್ ಸೇರಿದಂತೆ ಚೆನ್ನೈ ಆಟಗಾರರು ಸಂಜು ಅವರನ್ನು ಅಭಿನಂದಿಸುತ್ತಿದ್ದರು. ಈ ವೇಳೆ, ವಿಕೆಟ್ ಕಳೆದುಕೊಂಡ ನಿರಾಸೆಯಲ್ಲಿ ಪೆವಿಲಿಯನ್‌ಗೆ ಮರಳುತ್ತಿದ್ದ ಕ್ಲಾಸೆನ್, ಸಂಜು ಸ್ಯಾಮ್ಸನ್ ಕಡೆ ತಿರುಗಿ ಏನೋ ಹೇಳಿದರು. ನಂತರ ಮತ್ತೆ ಸಂಜು ಕಡೆಗೆ ಬೆರಳು ತೋರಿಸಿ ಏನನ್ನೋ ಕೂಗಿ ಹೇಳಿದಾಗ, ಶಿವಂ ದುಬೆ ಮಧ್ಯಪ್ರವೇಶಿಸಿ ಕ್ಲಾಸೆನ್‌ರನ್ನು ಸಮಾಧಾನಪಡಿಸಿ ಕಳುಹಿಸಿದರು. ಬಳಿಕ ಸಂಜು ಅಂಪೈರ್‌ಗೆ ಘಟನೆಯ ಬಗ್ಗೆ ವಿವರಿಸುತ್ತಿದ್ದರು. ಅರ್ಧಶತಕದ ಅಂಚಿನಲ್ಲಿ ಔಟಾಗಿದ್ದು ಮತ್ತು ತಂಡವನ್ನು ತಾವೇ ಗೆಲುವಿನ ದಡ ಸೇರಿಸಲು ಆಗಲಿಲ್ಲ ಎಂಬ ಬೇಸರವೇ ಕ್ಲಾಸೆನ್ ಕೋಪಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಕ್ಲಾಸೆನ್ ಔಟಾದರೂ, ಇನ್ನೊಂದು ಬದಿಯಲ್ಲಿ ಗಟ್ಟಿಯಾಗಿ ನಿಂತ ಇಶಾನ್ ಕಿಶನ್ ಹೈದರಾಬಾದ್ ತಂಡವನ್ನು ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದರು. ಹೈದರಾಬಾದ್ 19 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ಗುರಿ ತಲುಪಿತು. ಈ ಗೆಲುವಿನೊಂದಿಗೆ ಹೈದರಾಬಾದ್ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡರೆ, ಲೀಗ್ ಹಂತದ ಕೊನೆಯಲ್ಲಿ ಎದುರಾದ ಈ ಸೋಲು ಚೆನ್ನೈ ಸೂಪರ್ ಕಿಂಗ್ಸ್‌ನ ಪ್ಲೇಆಫ್ ಕನಸಿಗೆ ದೊಡ್ಡ ಹೊಡೆತ ನೀಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.