IPL 2026: ನಿನ್ನೆ ನಡೆದ ಸಿಎಸ್‌ಕೆ-ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಹೈವೋಲ್ಟೇಜ್ ಮ್ಯಾಚ್ ಗೆದ್ದಿದ್ದು ಯಾರು?

Kannadaprabha News   | Kannada Prabha
Published : May 19, 2026, 09:13 AM IST
CSK vs SRH IPL 2026

ಸಾರಾಂಶ

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಐಪಿಎಲ್ ಪ್ಲೇ-ಆಫ್‌ಗೆ ಅಧಿಕೃತವಾಗಿ ಪ್ರವೇಶಿಸಿದೆ. ಈ ಸೋಲಿನೊಂದಿಗೆ ಸಿಎಸ್‌ಕೆ ತಂಡದ ಪ್ಲೇ-ಆಫ್ ಕನಸು ಬಹುತೇಕ ಅಂತ್ಯಗೊಂಡಿದ್ದು, ಇಶಾನ್‌ ಕಿಶನ್‌ ಅವರ ಅರ್ಧಶತಕ ಹೈದರಾಬಾದ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.

ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 5 ವಿಕೆಟ್‌ ಗೆಲುವು ಸಾಧಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಈ ಬಾರಿ ಐಪಿಎಲ್‌ನ ಪ್ಲೇ-ಆಫ್‌ಗೆ ಅಧಿಕೃತ ಪ್ರವೇಶ ಪಡೆದಿದೆ. ತಂಡ 13 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 16 ಅಂಕ ಸಂಪಾದಿಸಿದ್ದು, ಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡಿತು. ಸಿಎಸ್‌ಕೆ ತಂಡ 13 ಪಂದ್ಯಗಳಲ್ಲಿ 7ನೇ ಸೋಲು ಕಂಡಿದ್ದು, ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಕೊನೆ ಪಂದ್ಯದಲ್ಲಿ ಗೆದ್ದರೂ ಪ್ಲೇ-ಆಫ್‌ ಪ್ರವೇಶಿಸುವುದು ಕಷ್ಟ.

ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಋತುರಾಜ್ ಗಾಯಕ್ವಾಡ್

ಮೊದಲು ಬ್ಯಾಟ್‌ ಮಾಡಿದ ಚೆನ್ನೈ 7 ವಿಕೆಟ್‌ ನಷ್ಟದಲ್ಲಿ 180 ರನ್‌ ಕಲೆಹಾಕಿತು. ನಾಯಕನಾಗಿ ತಂಡವನ್ನು ಮುನ್ನಡೆಸಲು ಮತ್ತೆ ವೈಫಲ್ಯ ಕಂಡ ಋತುರಾಜ್‌ ಗಾಯಕ್ವಾಡ್‌ 15 ರನ್‌ ಗಳಿಸಲು 21 ಎಸೆತ ತೆಗೆದುಕೊಂಡರು. ಸಂಜು ಸ್ಯಾಮ್ಸನ್‌ 13 ಎಸೆತಕ್ಕೆ 27, ಕಾರ್ತಿಕ್‌ ಶರ್ಮಾ 19 ಎಸೆತಕ್ಕೆ 32, ಡೆವಾಲ್ಡ್‌ ಬ್ರೆವಿಸ್‌ 27 ಎಸೆತಕ್ಕೆ 44, ಶಿವಂ ದುಬೆ 26 ರನ್‌ ಸಿಡಿಸಿದರು. ಮಾರಕ ದಾಳಿ ಸಂಘಟಿಸಿದ ಸನ್‌ರೈಸರ್ಸ್‌ ನಾಯಕ ಪ್ಯಾಟ್‌ ಕಮಿನ್ಸ್ 28 ರನ್‌ ನೀಡಿ 3 ವಿಕೆಟ್‌ ಕಿತ್ತರು.

ದೊಡ್ಡ ಗುರಿ ಬೆನ್ನತ್ತಿದ ಸನ್‌ರೈಸರ್ಸ್‌ ತಂಡ ಆರಂಭಿಕರ ವೈಫಲ್ಯದ ಹೊರತಾಗಿಯೂ 19 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಅಭಿಷೇಕ್‌ ಶರ್ಮಾ 26, ಟ್ರ್ಯಾವಿಸ್‌ ಹೆಡ್‌ 6 ರನ್‌ ಗಳಿಸಿ ಔಟಾದ ಬಳಿಕ 3ನೇ ವಿಕೆಟ್‌ಗೆ ಹೆನ್ರಿಚ್‌ ಕ್ಲಾಸೆನ್‌-ಇಶಾನ್‌ ಕಿಶನ್‌ 41 ಎಸೆತಕ್ಕೆ 75 ರನ್‌ ಜೊತೆಯಾಟವಾಡಿದರು. ಕ್ಲಾಸೆನ್‌ 26 ಎಸೆತಕ್ಕೆ 47 ರನ್‌ ಸಿಡಿಸಿದರೆ, ಕಿಶನ್‌ 47 ಎಸೆತಕ್ಕೆ 70 ರನ್‌ ಗಳಿಸಿ ಗೆಲುವಿನ ರೂವಾರಿಯಾದರು.

ಸ್ಕೋರ್‌: ಸಿಎಸ್‌ಕೆ 20 ಓವರಲ್ಲಿ 180/7 (ಬ್ರೆವಿಸ್‌ 44, ಕಾರ್ತಿಕ್‌ 32, ಕಮಿನ್ಸ್‌ 3-28), ಸನ್‌ರೈಸರ್ಸ್‌ 19 ಓವರಲ್ಲಿ 181/5 (ಇಶಾನ್‌ 70, ಕ್ಲಾಸೆನ್‌ 47, ಮುಕೇಶ್‌ 2-36)

ಸನ್‌ರೈಸರ್ಸ್ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್‌ ಕೂಡಾ ಪ್ಲೇ ಆಫ್‌ಗೆ ಲಗ್ಗೆ:

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಪಂಜಾಬ್ ಕಿಂಗ್ಸ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ 18 ಅಂಕಗಳೊಂದಿಗೆ ಅಧಿಕೃತವಾಗಿ ಮೊದಲ ತಂಡವಾಗಿ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿತ್ತು. ಇದಾದ ಬಳಿಕ ಇದೀಗ ಸಿಎಸ್‌ಕೆ ಎದುರು ಗೆದ್ದು ಬೀಗಿದ ಆರೆಂಜ್ ಆರ್ಮಿ ಕೂಡಾ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದೆ. ಇನ್ನೊಂದೆಡೆ ಸನ್‌ರೈಸರ್ಸ್‌ಗಿಂತ ಉತ್ತಮ ರನ್‌ರೇಟ್ ಹೊಂದಿರುವ ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಕೂಡಾ ಸಿಎಸ್‌ಕೆ ಸೋಲುತ್ತಿದ್ದಂತೆಯೇ ಎರಡನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದೆ.

ಪಂದ್ಯಶ್ರೇಷ್ಠ: ಇಶಾನ್‌ ಕಿಶನ್‌

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Video: ಪುಟ್ಟ ಅಭಿಮಾನಿಗೆ 'ಸೈಡ್‌ಗೆ ಹೋಗು' ಎಂದು ಗದರಿದ ರಿಯಾನ್ ಪರಾಗ್; ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ
ಓಡಾಟಕ್ಕೆ ಬ್ರೇಕ್, ಇಂಧನ ಸಂಕಷ್ಟದಿಂದ ಐಪಿಎಲ್‌ನಲ್ಲಿ ಮಹತ್ವದ ಬದಲಾವಣೆ? ಚೇರ್ಮೆನ್ ಸ್ಪಷ್ಟನೆ