
ಜೈಪುರ: ಕೋಚ್ ರಾಹುಲ್ ದ್ರಾವಿಡ್ ರಾಜೀನಾಮೆ ನೀಡಿದ್ರೂ, ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್‌ನಲ್ಲಿ ಮುಂದುವರಿಯುವ ಸಾಧ್ಯತೆ ಕಡಿಮೆ ಅಂತೆ. ಬೇರೆ ತಂಡಕ್ಕೆ ಹೋಗುವ ನಿರ್ಧಾರದಲ್ಲಿ ಸಂಜು ಖಚಿತವಾಗಿದ್ದಾರೆ ಎಂದು ತಂಡದ ಮ್ಯಾನೇಜ್‌ಮೆಂಟ್ ಸುಳಿವು ನೀಡಿದೆ. ಕ್ಯಾಪ್ಟನ್ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತೊರೆಯಲಿದ್ದಾರೆ ಎಂಬ ವರದಿಗಳ ನಡುವೆ ಕೋಚ್ ರಾಹುಲ್ ದ್ರಾವಿಡ್ ಅನಿರೀಕ್ಷಿತವಾಗಿ ರಾಜೀನಾಮೆ ನೀಡಿದ್ದಾರೆ. ಕಳೆದ ಋತುವಿನಲ್ಲಿ ತಂಡಕ್ಕೆ ದ್ರಾವಿಡ್ ಕೋಚ್ ಆಗಿ ಬಂದ ನಂತರ ರಾಜಸ್ಥಾನ ರಾಯಲ್ಸ್ ಒಳ್ಳೆಯ ಪ್ರದರ್ಶನ ನೀಡಿರಲಿಲ್ಲ.
ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹದಿನಾಲ್ಕು ಪಂದ್ಯಗಳಲ್ಲಿ ಹತ್ತರಲ್ಲಿ ಸೋತು ಕೇವಲ 4 ಗೆಲುವಿನೊಂದಿಗೆ ಲೀಗ್‌ನಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿತ್ತು. ಇದರ ಬೆನ್ನಲ್ಲೇ ನಾಯಕ ಸಂಜು ಸ್ಯಾಮ್ಸನ್ ಮತ್ತು ಕೋಚ್ ರಾಹುಲ್ ದ್ರಾವಿಡ್ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ವರದಿಗಳು ಹೊರಬಿದ್ದವು. ಜೋಸ್ ಬಟ್ಲರ್ ಸೇರಿದಂತೆ ಪ್ರಮುಖ ಆಟಗಾರರನ್ನು ಕೈಬಿಟ್ಟಿದ್ದು ಮತ್ತು ಹರಾಜಿನಲ್ಲಿ ತಂಡದ ನಿರ್ವಹಣೆಯ ನಿಲುವಿನ ಬಗ್ಗೆ ನಾಯಕನಿಗೆ ಅಸಮಾಧಾನವಿತ್ತು ಎಂದೆಲ್ಲಾ ವರದಿಯಾಗಿತ್ತು.
18ನೇ ಸೀಸನ್ ಮುಗಿದ ನಂತರ ತಂಡ ಬಿಡುವುದಾಗಿ ಸಂಜು ಸ್ಯಾಮ್ಸನ್, ರಾಜಸ್ಥಾನ ರಾಯಲ್ಸ್‌ಗೆ ತಿಳಿಸಿದ್ದಾರೆ ಎಂಬ ವರದಿಗಳು ಹೊರಬಂದವು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸಂಜು ಸ್ಯಾಮ್ಸನ್ ಅವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳಲು ಮುಂದೆ ಬಂದಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಂಜು ನೀಡಿದ ಸುಳಿವುಗಳು ಈ ವದಂತಿಗಳಿಗೆ ಪುಷ್ಟಿ ನೀಡಿವೆ. ಇದೆಲ್ಲದರ ನಡುವೆ ಸಂಜು ಸ್ಯಾಮ್ಸನ್ ಅವರ ವೃತ್ತಿಜೀವನದ ಮೇಲೆ ಪ್ರಭಾವ ಬೀರಿದ ದ್ರಾವಿಡ್ ರಾಜೀನಾಮೆ ನೀಡಿದ್ದಾರೆ.
ಆದರೆ ಕೋಚ್ ರಾಜೀನಾಮೆಯಲ್ಲಿ ಸಂಜು ಸ್ಯಾಮ್ಸನ್ ಪಾತ್ರವಿಲ್ಲ ಮತ್ತು ತಂಡ ಬಿಡುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ರಾಜಸ್ಥಾನ ರಾಯಲ್ಸ್ ಮೂಲಗಳು ತಿಳಿಸಿವೆ. ಕಳೆದ ಐಪಿಎಲ್ ಋತುವಿನ ಮೊದಲು ನಡೆದ ಹರಾಜಿನಲ್ಲಿ ಜೋಸ್ ಬಟ್ಲರ್ ಅವರನ್ನು ಉಳಿಸಿಕೊಳ್ಳದಿರುವುದು ರಾಜಸ್ಥಾನ ರಾಯಲ್ಸ್ ಪಾಲಿಗೆ ಹಿನ್ನಡೆಯಾಗಿತ್ತು. ಜೋಸ್ ಬಟ್ಲರ್ ಬದಲಿಗೆ ರೀಟೈನ್ ಮಾಡಿಕೊಂಡಿದ್ದ ಶಿಮ್ರಾನ್ ಹೆಟ್ಮೇಯರ್ ನಿರಾಸೆ ಮೂಡಿಸಿದರು. ದುಬಾರಿ ಖರ್ಚು ಮಾಡಿ ಉಳಿಸಿಕೊಂಡಿದ್ದ ರಿಯಾನ್ ಪರಾಗ್ ಮತ್ತು ಧ್ರುವ್ ಜುರೆಲ್ ಕೂಡ ಒಳ್ಳೆಯ ಪ್ರದರ್ಶನ ನೀಡಲಿಲ್ಲ. ಸಂಜು ಗಾಯಗೊಂಡು ಹಲವು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದು ಕೂಡ ತಂಡದ ಮೇಲೆ ಪರಿಣಾಮ ಬೀರಿತ್ತು.
ರಾಜಸ್ಥಾನ ರಾಯಲ್ಸ್ ಜತೆ ಉತ್ತಮ ಒಡನಾಟ ಹೊಂದಿದ್ದ ದ್ರಾವಿಡ್:
ದ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್, ಆಟಗಾರನಾಗಿ ತಂಡ ಕೂಡಿಕೊಂಡು, ಬಳಿಕ ನಾಯಕನಾಗಿ ಆ ಬಳಿಕ ಮಾರ್ಗದರ್ಶಕರಾಗಿ ಕೊನೆಯಲ್ಲಿ ಕೋಚ್ ಆಗಿಯೂ ರಾಜಸ್ಥಾನ ರಾಯಲ್ಸ್ ಪರ ಕಾರ್ಯನಿರ್ವಹಿಸಿದ್ದರು. 2011ರಲ್ಲಿ ಆಟಗಾರನಾಗಿ ರಾಜಸ್ಥಾನ ರಾಯಲ್ಸ್ ತಂಡ ಕೂಡಿಕೊಂಡ ರಾಹುಲ್ ದ್ರಾವಿಡ್, 2012ರಲ್ಲಿ ನಾಯಕರಾಗಿ ನೇಮಕವಾದರು. ಇನ್ನು 2014-15ರಲ್ಲಿ ತಂಡದ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದರು. ಇದಾದ ಬಳಿಕ ಭಾರತ ತಂಡದ ಯುವ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಗುಡ್ ಬೈ ಹೇಳಿದ್ದರು. ಇನ್ನು 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗುತ್ತಿದ್ದಂತೆಯೇ ಭಾರತ ತಂಡದ ಕೋಚ್ ಹುದ್ದೆಗೆ ಗುಡ್ ಬೈ ಹೇಳಿ, ಮತ್ತೆ ರಾಜಸ್ಥಾನ ರಾಯಲ್ಸ್ ತೆಕ್ಕೆಗೆ ಜಾರಿದ್ದರು. ಆದರೆ 2025ರ ಐಪಿಎಲ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್-ಸಂಜು ಸ್ಯಾಮ್ಸನ್ ಜೋಡಿ ಮ್ಯಾಜಿಕ್ ಮಾಡಲು ವಿಫಲವಾಗಿತ್ತು.
ಇನ್ನು 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ತಂಡದ ಅತ್ಯಂತ ನಂಬಿಗಸ್ಥ ಬ್ಯಾಟರ್ ಜೋಸ್ ಬಟ್ಲರ್ ಹಾಗೂ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರನ್ನು ರಾಜಸ್ಥಾನ ರಾಯಲ್ಸ್ ತಂಡದಿಂದ ರಿಲೀಸ್ ಮಾಡಿದ್ದು, ನಾಯಕ ಸಂಜು ಸ್ಯಾಮ್ಸನ್ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದೆಲ್ಲಾ ವರದಿಯಾಗಿತ್ತು. ಇದರ ನಡುವೆ ನಾಯಕ ಸಂಜು ಸ್ಯಾಮ್ಸನ್ ಹಾಗೂ ಹೆಡ್ ಕೋಚ್ ರಾಹುಲ್ ದ್ರಾವಿಡ್ ನಡುವಿನ ಸಂಬಂಧ ಹದಗೆಟ್ಟಿದೆ ಎಂದೆಲ್ಲಾ ವರದಿಯಾಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ರಾಹುಲ್ ದ್ರಾವಿಡ್, ರಾಜಸ್ಥಾನ ರಾಯಲ್ಸ್ ತಂಡದ ಹೆಡ್‌ಕೋಚ್ ಹುದ್ದೆಗೆ ರಾಜೀನಾಮೆ ನೀಡಿರುವುದು ಕ್ರಿಕೆಟ್ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.