
ಬೆಂಗಳೂರು (ಆ.30): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್‌ನ ಅತ್ಯಂತ ಶ್ರೀಮಂತ ಲೀಗ್ ಆಗಿ ಬೆಳೆದು ಜಾಗತಿಕ ಕ್ರೀಡಾ ವಿದ್ಯಮಾನವಾಗಿ ಮಾರ್ಪಟ್ಟಿದ್ದರೂ, ಐಪಿಎಲ್ 2008 ರ ಮೊದಲ ಆವೃತ್ತಿಯ ಒಂದು ಘಟನೆಯನ್ನು ಬಹಳ ದೀರ್ಘಕಾಲದವರೆಗೆ ಮುಚ್ಚಿಡಲಾಗಿತ್ತು. ಅದು ಎಷ್ಟು ದೀರ್ಘಕಾಲ ಎಂದರೆ ಬರೋಬ್ಬರಿ 17 ವರ್ಷ. 2008 ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದ ವೇಳೆ ಮುಂಬೈನ ಹರ್ಭಜನ್ ಸಿಂಗ್ ಪಂಜಾಬ್ ವೇಗಿ ಎಸ್. ಶ್ರೀಶಾಂತ್ ಅವರಿಗೆ 'ಸ್ಲ್ಯಾಪ್‌ಗೇಟ್' ಎಂದು ಕರೆಯಲ್ಪಡುವ ಘಟನೆಯಲ್ಲಿ ಕಪಾಳಮೋಕ್ಷ ಮಾಡಿದ್ದರು. ಈಗ, ಐಪಿಎಲ್ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಲಲಿತ್ ಮೋದಿ ಹರ್ಭಜನ್ ಮತ್ತು ಶ್ರೀಶಾಂತ್ ನಡುವೆ ನಡೆದ ಘಟನೆಯ ಈವರೆಗೆ ಯಾರೂ ಕಾಣದಂಥ ದೃಶ್ಯಗಳನ್ನು ಬಿಡುಗಡೆ ಮಾಡಿದ್ದರು.
ಇನ್ನು ಈ ಘಟನೆಯನ್ನು ಕಣ್ಣಾರೆ ಕಂಡಿದ್ದಂಥ ವ್ಯಕ್ತಿಗಳಲ್ಲಿ ಒಬ್ಬರಾದ ವಿಶ್ಲೇಷಕ ಹರ್ಷ ಭೋಗ್ಲೆ ಕೂಡ ಇದರ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ, 17 ವರ್ಷಗಳ ನಂತರ ಈ ವಿಡಿಯೋ ಹೊರಬಂದಿದ್ದೇಕೆ, ಅದರ ಹಿಂದಿನ ಕಾರಣಗಳನ್ನು ಮಾತ್ರ ತಿಳಿಸಿದ್ದಾರೆ.
ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ, ಹರ್ಭಜನ್ ಸಿಂಗ್ ಶ್ರೀಶಾಂತ್ ಗೆ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ಬಿಡುಗಡೆ ಮಾಡಿದ ನಂತರ, ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ, 'ನಮ್ಮಲ್ಲಿ ಬಹಳ ಕಡಿಮೆ ಜನರು ಮಾತ್ರ ಇದನ್ನು ನೋಡಿದ್ದರು. ಆದರೆ, ಈ ವಿಚಾರ ಸಾರ್ವಜನಿಕವಾಗಿ ಚರ್ಚೆಯಾಗಬಾರದು ಎನ್ನುವುದು ನಮ್ಮ ಇಚ್ಛೆಯಾಗಿತ್ತು, ಹಾಗಾಗಿ ಈ ವಿಚಾರದಿಂದ ದೂರ ಉಳಿಯುವುದಾಗಿ ಭರವಸೆ ನೀಡಿದ್ದೆವು. ಅದಕ್ಕೆ ಕಾರಣವೂ ಇತ್ತು. ಏಕೆಂದರೆ ಅದು ಐಪಿಎಲ್‌ನ ಮೊದಲ ವರ್ಷವಾಗಿತ್ತು. ಈ ಕಾರಣದಿಂದ ಐಪಿಎಲ್‌ಗೆ ಅದು ಉತ್ತಮ ಸುದ್ದಿಯಾಗುತ್ತಿರಲಿಲ್ಲ ಎನ್ನುವುದು ಗೊತ್ತಿತ್ತು' ಎಂದು ಹೇಳಿದ್ದಾರೆ.
ಇದು ಐಪಿಎಲ್ ಇತಿಹಾಸದ ಅತ್ಯಂತ ಪ್ರಮುಖ ಘಟನೆ. 17 ವರ್ಷಗಳ ಬಳಿಕ ಈ ವಿಡಿಯೋ ನೋಡೋದು ಸ್ಪೆಷಲ್ ಅನಿಸಿದರೂ, ತಮ್ಮ ವರ್ತನೆಗಾಗಿ ಹರ್ಭಜನ್ ಜೀವಮಾನಪೂರ್ತಿ ಮಾತು ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸ್ವತಃ ಹರ್ಭಜನ್ ಸಂದರ್ಶನವೊಂದರಲ್ಲಿ ಇದರ ಬಗ್ಗೆ ಮಾತನಾಡಿದ್ದರು. ಶ್ರೀಶಾಂತ್ ಅವರ ಪುಟ್ಟ ಮಗಳು ನನ್ನನ್ನು ಭೇಟಿ ಮಾಡಲು ಇಷ್ಟಪಡುತ್ತಿಲ್ಲ. ನನ್ನ ಮುಖ ನೋಡಲು ಕೂಡ ಇಷ್ಟಪಡುತ್ತಿಲ್ಲ. ನಾನು ಆಕೆಯ ತಂದೆಯ ಕೆನ್ನೆಗೆ ಹೊಡೆದೆ ಎನ್ನುವ ಸಿಟ್ಟು ಆಕೆಗೆ ಇದೆ. ಇಂದಿಗೂ ಕೂಡ ನನಗೆ ಅದು ವಿಷಾದವಾಗಿ ಕಾಡುತ್ತಿದೆ ಎಂದಿದ್ದರು.
ಇನ್ನು ಹರ್ಷ ಭೋಗ್ಲೆ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಹಲವರು, ಅಭಿಮಾನಿಗಳಿಗೆ ಏನಾಯ್ತು ಅನ್ನೋ ವಿಚಾರ ತಿಳಿಸೋಕ್ಕಿಂತ ಮುಖ್ಯವಾಗಿ ಐಪಿಎಲ್ ಅನ್ನೋ ಬ್ರ್ಯಾಂಡ್‌ನ ವರ್ಚುಸ್ಸು ಉಳಿಸಬೇಕಾಗಿರೋದು ನಿಮಗೆ ಮುಖ್ಯವಾಗಿದ್ದು ವಿಪರ್ಯಾಸ. ಅಭಿಮಾನಿಗಳಿಂದ ಇಂಥ ಎಷ್ಟು ಸಂಗತಿಗಳನ್ನು ಮುಚ್ಚಿಟ್ಟಿದ್ದೀರೋ ಯಾರಿಗೆ ಗೊತ್ತು ಎಂದು ಬರೆದಿದ್ದಾರೆ.
ಈ ವಿಡಿಯೋ ಬಿಡುಗಡೆಯಾಗಬಾರದಿತ್ತು.. ಈ ಘಟನೆಯಿಂದಾಗಿ ಶ್ರೀಶಾಂತ್ ಅವರ ಮಗಳು ಅವರನ್ನು ದ್ವೇಷಿಸುತ್ತಾಳೆ ಎಂದು ಹರ್ಭಜನ್ ಹೇಳಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರು ತಮ್ಮ ತಪ್ಪಿಗೆ ಹಲವಾರು ಬಾರಿ ಕ್ಷಮೆಯಾಚಿಸಿದ್ದಾರೆ. ನೋವುಂಟುಮಾಡುವ ಯಾವುದೋ ವಿಷಯವನ್ನು ಸಮಾಧಿಯಾಗಿ ಇಡಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.