
ಬೆಂಗಳೂರು: ಕಳೆದ ಜೂ.4 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದ್ದ 11 ಮಂದಿ ಅಭಿಮಾನಿಗಳ ಕುಟುಂಬಕ್ಕೆ ಫ್ರಾಂಚೈಸಿಯು ತಲಾ 25 ಲಕ್ಷ ರು. ಪರಿಹಾರ ಘೋಷಿಸಿದೆ.
ದುರಂತ ನಡೆದ 3 ತಿಂಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಆರ್‌ಸಿಬಿ ಕೇರ್ಸ್ ನಿಧಿಯಿಂದ ನೆರವು ಪ್ರಕಟಿಸಿದೆ. ಈ ಬಗ್ಗೆ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ‘ಜೂ.4ರಂದು ನಮ್ಮ ಹೃದಯ ಒಡೆದು ಹೋಯಿತು. ನಾವು ನಮ್ಮ ಕುಟುಂಬದ 11 ಮಂದಿ ಸದಸ್ಯರನ್ನು ಕಳೆದುಕೊಂಡೆವು. ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನ್ನಷ್ಟೇ ಅಲ್ಲ, ಅವರು ಕುಟುಂಬದ ಸದಸ್ಯರಾಗಿದ್ದು, ಹೃದಯದ ಭಾಗವಾಗಿದ್ದರು. ಅವರ ಜಾಗವನ್ನು ಎಷ್ಟೇ ಬೆಲೆ ಕೊಟ್ಟರೂ ತುಂಬಲು ಸಾಧ್ಯವಿಲ್ಲ. ಆದರೆ ಅತ್ಯಂತ ಗೌರವದಿಂದ ಆರ್‌ಸಿಬಿ ಅವರ ಕುಟುಂಬಗಳಿಗೆ 25 ಲಕ್ಷ ರು. ಪರಿಹಾರ ನೀಡಲಿದೆ’ ಎಂದು ಘೋಷಿಸಿದೆ.
ಕೆಲ ದಿನಗಳ ಹಿಂದಷ್ಟೇ ಆರ್‌ಸಿಬಿ ಫ್ರಾಂಚೈಸಿಯು ತಮ್ಮ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿತ್ತು. ಆರ್‌ಸಿಬಿ ಫ್ರಾಂಚೈಸಿಯು ಅಭಿಮಾನಿಗಳಿಗೆ ಬರೆದ ಪತ್ರ ಹೀಗಿದೆ ನೋಡಿ.
ನಾವು ಪೋಸ್ಟ್ ಮಾಡಿ ಸುಮಾರು ಮೂರು ತಿಂಗಳ ಕಾಲ ಕಳೆದಿದೆ.
ನಮ್ಮ ಮೌನ, ಖಾಲಿತನದಿಂದಷ್ಟೇ ಅಲ್ಲ, ದುಃಖದಿಂದ ತುಂಬಿದ ತೀವ್ರವಾದ ಮೌನ. ಈ ಮಾಧ್ಯಮದ ಮುಖಾಂತರ ನೀವೆಲ್ಲಾ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಮತ್ತು ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ಜೂನ್ 4ರ ಘಟನೆ ಎಲ್ಲವನ್ನೂ ಬದಲಾಯಿತು.
ಆ ದಿನ ನಮ್ಮ ಹೃದಯವನ್ನು ಮುರಿಯಿತು. ನಂತರದ ಮೌನವು ಕೇವಲ ನಿಶ್ಯಬ್ದವಲ್ಲ, ಅದು ಶ್ರದ್ದೆಯಿಂದ ತುಂಬಿದ ಶಾಂತ ಶ್ರದ್ದಾಂಜಲಿ. ಈ ಮೌನದೊಳಗೆ ನೋವನ್ನು ಅನುಭವಿಸುತ್ತಾ ನಾವು ಆಳವಾಗಿ ಯೋಚಿಸಿದೆವು ಮತ್ತು ಅನೇಕ ವಿಷಯಗಳನ್ನು ಕಲಿತೆವು. ನೋವನ್ನೇ ಶ್ರದ್ದೆಯಾಗಿ, ನಂಬಿಕೆಯಾಗಿ ರೂಪಿಸಬೇಕೆಂದು ತೀರ್ಮಾನಿಸಿದೆವು. ಅದರ ಫಲವೇ ಆರ್‌ಸಿಬಿ ಕೇರ್ಸ್. ನಮ್ಮ ಅಭಿಮಾನಿಗಳು ಮತ್ತು ಸಮುದಾಯಕ್ಕಾಗಿ ನಿಷ್ಠೆಯಿಂದ ರೂಪಿಸಿದ ಒಂದು ಯೋಜನೆ.
ಇಂದು ನಾವು ಮರಳಿದ್ದೇವೆ. ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತ, ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ನಮ್ಮ ಪ್ರತಿಭೆ. ಆರ್‌ಸಿಬಿ ಕೇರ್ಸ್: ಸದಾ ನಿಮ್ಮೊಂದಿಗಿದ್ದೇವೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಎಂದು ಆರ್‌ಸಿಬಿ ಫ್ರಾಂಚೈಸಿಗಳಿಗೆ ಪತ್ರ ಬರೆದಿದೆ.
2025ರ ಜೂನ್ 03ರಂದು ನಡೆದ ಐಪಿಎಲ್ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರೋಚಕವಾಗಿ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಕ್ರಿಕೆಟಿಗರು ನಿಧನರಾದ್ರೆ ಸಂಗಾತಿಗೆ ಬಿಸಿಸಿಐನಿಂದ ₹1 ಲಕ್ಷ ಪರಿಹಾರ
ಬೆಂಗಳೂರು: ಭಾರತೀಯರ ಕ್ರಿಕೆಟಿಗರ ಸಂಘ(ಐಸಿಎ)ದ ಸದಸ್ಯತ್ವ ಹೊಂದಿರುವ ಕ್ರಿಕೆಟಿಗರು ನಿಧನರಾದರೆ ಅವರ ಪತಿ/ಪತ್ನಿಗೆ ಒಂದು ಬಾರಿಗೆ 1 ಲಕ್ಷ ರು. ಪರಿಹಾರ ನೀಡುವ ಪ್ರಸ್ತಾಪಕ್ಕೆ ಬಿಸಿಸಿಐ ಅನುಮತಿ ನೀಡಿದೆ.
ಐಸಿಎ ಸದಸ್ಯತ್ವ ಹೊಂದಿರುವ ಕ್ರಿಕೆಟಿಗರಿಗೆ ಮಾತ್ರವೇ ಇದು ಅನ್ವಯವಾಗಲಿದೆ. ಆದರೆ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟಿಗರು ಇದರಿಂದ ಹೊರಗುಳಿಯಲಿದ್ದಾರೆ. ಐಸಿಎ ನಿರ್ಧಾರವು ಆರ್ಥಿಕ ಸಂಕಷ್ಟದಲ್ಲಿರುವ ಮೃತ ಕ್ರಿಕೆಟಿಗರ ಕುಟುಂಬಕ್ಕೆ ನೆರವಾಗಲಿದ್ದು, ಆರಂಭಿಕ ಹಂತದಲ್ಲಿ 50 ಫಲಾನುಭವಿಗಳಿಗೆ ಧನ ಸಹಾಯ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ.
ಮುಂದಿನ ದಿನಗಳಲ್ಲಿ ಬಿಸಿಸಿಐ ವಿಧವೆಯರು ಮತ್ತು ವಿಧುರರಿಗೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಒಪ್ಪಿದರೆ ಈಗಿರುವ ಪರಿಹಾರ ಮೊತ್ತ ಪರಿಶೀಲನೆಗೆ ಒಳಪಡುವ ಸಾಧ್ಯತೆಯಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.