
ಲಂಡನ್(ಜೂ.28): ಭಾರತ ವಿರುದ್ದ ಇದೇ ಜುಲೈ 01ರಿಂದ ಆರಂಭವಾಗಲಿರುವ ಬರ್ಮಿಂಗ್‌ಹ್ಯಾಮ್ ಟೆಸ್ಟ್ (Birmingham Test) ಪಂದ್ಯಕ್ಕೆ 15 ಆಟಗಾರರನ್ನೊಳಗೊಂಡ ಬಲಿಷ್ಠ ತಂಡವನ್ನು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯು ಪ್ರಕಟಿಸಿದ್ದು, ಅನುಭವಿ ವೇಗಿ ಜೇಮ್ಸ್ ಆ್ಯಂಡರ್‌ಸನ್, ವಿಕೆಟ್ ಕೀಪರ್ ಬ್ಯಾಟರ್ ಸ್ಯಾಮ್ ಬಿಲ್ಲಿಂಗ್ಸ್ ತಂಡ ಕೂಡಿಕೊಂಡಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವೆ ಪುನರ್‌ನಿಗದಿಯಾಗಿರುವ 5ನೇ ಟೆಸ್ಟ್ ಪಂದ್ಯವು ಇದೇ ಶುಕ್ರವಾರ(ಜು.01) ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಜರುಗಲಿದೆ.
ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ (England vs New Zealand) ತಂಡಗಳ ನಡುವಿನ ಮೂರನೇ ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಬೆನ್ ಫೋಕ್ಸ್‌ಗೆ (Ben Foakes) ಕೋವಿಡ್ 19 ಸೋಂಕು ತಗುಲಿದ್ದು ದೃಢಪಟ್ಟಿತ್ತು. ಹೀಗಾಗಿ ಬೆನ್ ಫೋಕ್ಸ್ ಬದಲಿಗೆ ಸ್ಯಾಮ್ ಬಿಲ್ಲಿಂಗ್ಸ್‌ಗೆ (Sam Billings) ಮಣೆಹಾಕಲಾಗಿದೆ. ಇನ್ನು ನ್ಯೂಜಿಲೆಂಡ್ ಎದುರಿನ ಮೂರನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದ ಅನುಭವಿ ವೇಗಿ ಜೇಮ್ಸ್ ಆ್ಯಂಡರ್‌ಸನ್ ಕೂಡಾ ಭಾರತ ಎದುರಿನ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡವನ್ನು ಕೂಡಿಕೊಂಡಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ (India vs England) ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ಕಳೆದ ವರ್ಷ ಆಯೋಜನೆಗೊಂಡಿತ್ತು. 4 ಟೆಸ್ಟ್ ಪಂದ್ಯಗಳ ಮುಕ್ತಾಯದ ವೇಳೆಗೆ ಟೀಂ ಇಂಡಿಯಾ ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿತ್ತು. ಇನ್ನು ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಿದ್ದ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತೀಯ ಪಾಳಯದಲ್ಲಿ ಕೋವಿಡ್ 19 (COVID 19) ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಮುಂದೂಡಲಾಗಿತ್ತು.
ಜೇಮ್ಸ್ ಆ್ಯಂಡರ್‌ಸನ್ (James Anderson) ಟೆಸ್ಟ್ ಕ್ರಿಕೆಟ್‌ನಲ್ಲಿ 650 ವಿಕೆಟ್ ಪೂರೈಸಲು ಇನ್ನು ಕೇವಲ ಒಂದು ವಿಕೆಟ್‌ನ ಅಗತ್ಯವಿದ್ದು, ಭಾರತ ಎದುರಿನ ಪಂದ್ಯದಲ್ಲಿ ಈ ಸಾಧನೆ ಮಾಡುವ ನಿರೀಕ್ಷೆಯಿದೆ. ಜೇಮ್ಸ್ ಆ್ಯಂಡರ್‌ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಜೋಡಿ ಮತ್ತೊಮ್ಮೆ ಭಾರತೀಯ ಬ್ಯಾಟರ್‌ಗಳಿಗೆ ಚಾಲೆಂಜ್ ಹಾಕಲು ರೆಡಿಯಾಗಿದ್ದಾರೆ. ಸ್ಟುವರ್ಟ್ ಬ್ರಾಡ್ ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ 550ಕ್ಕೂ ಅಧಿಕ ವಿಕೆಟ್ ಕಬಳಿಸಿದ್ದಾರೆ.
ಇಂಗ್ಲೆಂಡ್ ಟೂರ್ ರೋಹಿತ್-ದ್ರಾವಿಡ್ ಜೋಡಿಗೆ ಅಗ್ನಿಪರೀಕ್ಷೆ..!
ಕಳೆದ 9 ತಿಂಗಳ ಹಿಂದೆ ಇದ್ದ ತಂಡಕ್ಕೂ ಈಗಿರುವ ಉಭಯ ತಂಡಗಳಲ್ಲೂ ಸಂಪೂರ್ಣ ಬದಲಾವಣೆಗಳಾಗಿದ್ದು, ತಂಡದ ನಾಯಕರು ಹಾಗೂ ಹೆಡ್ ಕೋಚ್ ಬದಲಾಗಿದ್ದಾರೆ. ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿ ಬೆನ್ ಸ್ಟೋಕ್ಸ್ ಹಾಗೂ ಹೆಡ್ ಕೋಚ್ ಆಗಿ ಬ್ರೆಂಡನ್ ಮೆಕ್ಕಲಂ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಟೀಂ ಇಂಡಿಯಾ ನಾಯಕರಾಗಿ ರೋಹಿತ್ ಶರ್ಮಾ (Rohit Sharma) ಹಾಗೂ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ (Rahul Dravid) ಕಾಣಿಸಿಕೊಂಡಿದ್ದಾರೆ. ಬೆನ್ ಸ್ಟೋಕ್ಸ್ (Ben Stokes) ನಾಯಕತ್ವದಲ್ಲಿ ಈಗಾಗಲೇ ಇಂಗ್ಲೆಂಡ್ ತಂಡವು ಪ್ರವಾಸಿ ನ್ಯೂಜಿಲೆಂಡ್ ಎದುರು 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದು, ಭಾರತ ಎದುರೂ ತನ್ನ ಗೆಲುವಿನ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ.
ಭಾರತ ಎದುರಿನ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ
ಬೆನ್ ಸ್ಟೋಕ್ಸ್(ನಾಯಕ), ಜೇಮ್ಸ್ ಆ್ಯಂಡರ್‌ಸನ್, ಜಾನಿ ಬೇರ್‌ಸ್ಟೋವ್, ಜೋ ರೂಟ್, ಸ್ಯಾಮ್ ಬಿಲ್ಲಿಂಗ್ಸ್, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಜಾಕ್ ಕ್ರಾಲೇ, ಬೆನ್ ಫೋಕ್ಸ್, ಜಾಕ್ ಲೀಚ್, ಅಲೆಕ್ಸ್ ಲೀಸ್, ಕ್ರೇಗ್ ಓವರ್‌ಟನ್, ಜೇಮ್ಸ್ ಓವರ್‌ಟನ್, ಮ್ಯಾಥ್ಯೂ ಪೋಟ್ಸ್, ಓಲಿ ಪೋಪ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.