'ನಿನ್ನ ಎನರ್ಜಿ ಕಡಿಮೆಯಾಗಿದೆ...' 2011ರ ವಿಶ್ವಕಪ್‌ಗೂ ಮುನ್ನ ಯುವಿಗೆ ಎಚ್ಚರಿಸಿದ ಸಚಿನ್‌!

By Santosh NaikFirst Published Dec 18, 2022, 6:10 PM IST
Highlights

ಸಚಿನ್ ತೆಂಡುಲ್ಕರ್ ಅವರು 2011 ರ ವಿಶ್ವಕಪ್‌ನಲ್ಲಿ ಭಾರತದ ಅಭಿಯಾನವನ್ನು ಪ್ರಾರಂಭಿಸುವ ಮೊದಲು ಯುವರಾಜ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಹಿಂದೆಂದೂ ಹಂಚಿಕೊಳ್ಳದ ಈ ಘಟನೆಯ ಬಗ್ಗೆ ಅವರು ಮಾತನಾಡಿದ್ದಾರೆ.

ಮುಂಬೈ (ಡಿ.18): ಟೀಮ್‌ ಇಂಡಿಯಾ ಆಲ್ರೌಂಡರ್‌ ಯುವರಾಜ್‌ ಸಿಂಗ್,‌ 2011ರ ಏಕದಿನ ವಿಶ್ವಕಪ್‌ ಗೆಲುವಿನಲ್ಲಿ ಮಹತ್ತರ ಪಾತ್ರ ನಿಭಾಯಿಸಿದ್ದರು. ಭಾರತದ ಆತಿಥ್ಯದಲ್ಲಿ ನಡೆದ ವಿಶ್ವಕಪ್‌ ಟೂರ್ನಿಯಲ್ಲಿ ಆಡಿದ 8 ಇನ್ನಿಂಗ್ಸ್‌ಗಳಿಂದ 362 ರನ್‌ ಬಾರಿಸಿದ್ದ ಯುವರಾಜ್‌ ಸಿಂಗ್‌ 15 ವಿಕೆಟ್‌ ಕೂಡ ಉರುಳಿಸಿದ್ದರು. ಮುಂಬೈನ ವಾಂಖೆಡೆ ಮಯದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಸೋಲಿಸಿ ಟೀಮ್‌ ಇಂಡಿಯಾ 2ನೇ ಬಾರಿಗೆ ವಿಶ್ವಕಪ್ ಟ್ರೊಫಿ ಮುಡಿಗೇರಿಸಿಕೊಂಡಿತ್ತು. ಈ ಟೂರ್ನಿಯ ಸರಣಿಶ್ರೇಷ್ಠನಾಗಿದ್ದ ಯುವರಾಜ್‌ ಸಿಂಗ್‌ಗೆ ಅದಾದ ಕೆಲವೇ ತಿಂಗಳಲ್ಲಿ ಆಕಾಶವೇ ಕಳಚಿಬಿದ್ದಂತ ಸುದ್ದಿ ಸಿಕ್ಕಿತ್ತು. ಯುವರಾಜ್‌ ಕ್ಯಾನ್ಸರ್‌ಗೆ ತುತ್ತಾಗಿರುವುದು ಚಕಿತ್ಸೆಯ ವೇಳೆ ಗೊತ್ತಾಗಿತ್ತು. ಬಳಿಕ ಚಿಕಿತ್ಸೆಗಾಗಿ ಅಮೆರಿಕದ ಬೋಸ್ಟನ್‌ಗೆ ಹಾರಿದ್ದ ಯುವರಾಜ್‌ ಸಿಂಗ್‌, ಅಂದಾಜು ಒಂದು ವರ್ಷಗಳ ಕಾಲ ಸಂಪೂರ್ಣ ಚಿಕಿತ್ಸೆ ಪಡೆದುಕೊಂಡಿದ್ದರು. ಕೊನೆಗೆ 2012ರ ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ತಂಡಕ್ಕೆ ಯಶಸ್ವಿಯಾಗಿ ಪುನರಾಗಮನ ಮಾಡಿದ್ದರು.

ಟೀಮ್‌ ಇಂಡಿಯಾದ ದಿಗ್ಗಜ ಬ್ಯಾಟ್ಸ್‌ಮನ್‌ ಹಾಗೂ 2011ರ ವಿಶ್ವಕಪ್‌ನಲ್ಲಿ ತಂಡದ ಸಹ ಆಟಗಾರನನಾಗಿದ್ದ ಸಚಿನ್‌ ತೆಂಡುಲ್ಕರ್‌, ಯುವರಾಜ್‌ ಸಿಂಗ್‌ ವಿಚಾರದಲ್ಲಿ ಹಿಂದೆಂದೂ ಹಂಚಿಕೊಂಡಿರದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. 2011ರ ವಿಶ್ವಕಪ್‌ಗೂ ಮುನ್ನವೇ ಯುವರಾಜ್‌ ಸಿಂಗ್‌ ಅವರ ಎನರ್ಜಿ ಮಟ್ಟದಲ್ಲಿ ಕಡಿಮೆ ಆಗುತ್ತಿರುವುದನ್ನು ತಾನು ಗಮನಿಸಿದ್ದೆ ಎಂದು ಸಚಿನ್‌ ತೆಂಡುಲ್ಕರ್‌ ಹೇಳಿದ್ದಾರೆ. ಬಾಂಗ್ಲಾದೇಶ ವಿರುದ್ಧ ಉದ್ಘಾಟನಾ ಪಂದ್ಯಕ್ಕೂ ಮುನ್ನ ಆಲ್ರೌಂಡ್‌ ಆಟಗಾರನನ್ನು ತನ್ನ ಹೋಟೆಲ್‌ ರೂಮ್‌ಗೆ ಆಹ್ವಾನಿಸಿದ್ದೆ, ಈ ವೇಳೆ ತರಬೇತಿಯ ವೇಳೆ ಹಾಗೂ ಮೈದಾನದಲ್ಲಿ ಯುವರಾಜ್‌ ಅವರ ಪ್ರದರ್ಶನದ ಬಗ್ಗೆ ಮಾತನಾಡಿದ್ದಾಗಿ ಸಚಿನ್‌ ಹೇಳಿದ್ದಾರೆ.

'ನನಗೆ ಯುವರಾಜ್‌ ಸಿಂಗ್‌ ಎನರ್ಜಿ ಬಹಳ ಕಡಿಮೆ ಆಗುತ್ತಿದೆ ಎಂದನಿಸಿತ್ತು. ಆ ಸಮಯದಲ್ಲಿ ಯಾರಿಗೂ ಕೂಡ ಯುವರಾಜ್‌ಗೆ ಅನಾರೋಗ್ಯವಿದೆ ಎನ್ನುವುದು ತಿಳಿದಿರಲಿಲ್ಲ. 2011ರ ವಿಶ್ವಕಪ್‌ ಮುಗಿದ ಬಳಿಕವೇ ಎಲ್ಲರಿಗೂ ಈ ಬಗ್ಗೆ ಗೊತ್ತಾಗಿತ್ತು. ಅದಕ್ಕೂ ಮುನ್ನ ನಾನು ಯುವರಾಜ್‌ ಸಿಂಗ್‌ ಅವರ ಎನರ್ಜಿ ಮಟ್ಟದಲ್ಲಿ ಕಡಿಮೆ ಆಗುತ್ತಿರುವುದನ್ನು ಗಮನಿಸಿದ್ದೆ. ಮೊದಲ ಪಂದ್ಯಕ್ಕೂ ಮುನ್ನ ಟೀಮ್‌ ಹೋಟೆಲ್‌ನಲ್ಲಿ ಅವರನ್ನು ನನ್ನ ಕೋಣೆಗೆ ಕರೆದಿದ್ದೆ. 'ಯುವಿ, ಬಾ ನಾವಿಬ್ಬರೂ ಊಟ ಮಾಡೋಣ' ಎಂದು ಆತನನ್ನು ಕರೆದಿದ್ದೆ' ಎಂದು ಸಚಿನ್‌ ಇನ್ಫೋಸಿಸ್‌ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ನೆನಪಿಸಿಕೊಂಡಿದ್ದಾರೆ.

'ಮುಂದೊಂದು ದಿನ ಖಂಡಿತಾ ದೊಡ್ಡ ಆಲ್ರೌಂಡರ್‌ ಆಗ್ತೀಯಾ..' ಸಚಿನ್‌ ಪುತ್ರನಿಗೆ ಯುವರಾಜ್‌ ತಂದೆಯ ಸಂದೇಶ!

ನಾವು ಮಾತನಾಡುತ್ತಲೇ ರೂಮ್‌ನಿಂದ ಹೊರಬಂದಿದ್ದೆವು. ಈ ವೇಳೆ ನಾನು, 'ನಾಳೆಯಿಂದ ನಾನೇ ನಿನಗಾಗಿ ಕೆಲವೊಂದು ಗೋಲ್‌ಗಳನ್ನು ಕಳಿಸುತ್ತೇನೆ. ಫೀಲ್ಡಿಂಗ್‌ನಿಂದ ಈ ಗೋಲುಗಳು ಆರಂಭವಾಗುತ್ತದೆ. ನೀನು ನಿಜವಾಗಿ ಮೈದಾನದಲ್ಲಿ ಅಥ್ಲೆಟಿಕ್‌ ಫೀಲ್ಡರ್‌. ಆದರೆ, ನನಗೇಕೂ ನಿನ್ನ ಎನರ್ಜಿ ಮಟ್ಟ ಕಡಿಮೆ ಆಗಿರುವ ರೀತಿ ಕಾಣುತ್ತಿದೆ. ನಾಳೆಯಿಂದ ನಮ್ಮ ಅಭ್ಯಾಸದ ಅವಧಿಗಳು ಭಿನ್ನವಾಗಿರಲಿದೆ. ನೀನು ಇನ್ನಷ್ಟು ಪರಿಶ್ರಮ ಪಡಬೇಕು ಎಂದು ನಾನು ಆಶಿಸುತ್ತೇನೆ. ನಿನಗೆ ಇಷ್ಟವಿದ್ದರೆ, ಇಬ್ಬರೂ ಒಟ್ಟಾಗಿ ಕೆಲಸ ಮಾಡೋಣ. ಇದು ನನ್ನ ಪ್ರಾಮಾಣಿಕ ಅನಿಸಿದೆ. ನಿಮ್ಮ ಗ್ರಾಫ್ ನಿಧಾನವಾಗಿ ಆದರೆ ಖಂಡಿತವಾಗಿ ಮೇಲಕ್ಕೆ ಹೋಗುತ್ತದೆ ಎಂದು ನಾನು ನಿಮಗೆ ಖಾತರಿ ನೀಡಬಲ್ಲೆ. ತಂಡದ ಕಠಿಣ ಸಂದರ್ಭಗಳಲ್ಲಿ ನೀನು ಬಹಳ ಪ್ರಮುಖ ಯುವಿ. ಕಠಿಣ ಪರಿಶ್ರಮ ಪಡು. ಈ ಪ್ರಯತ್ನವೇ ಬಹಳ ಪ್ರಮುಳ. ಸರಿಯಾದ ಸಮಯದಲ್ಲಿ ನಮ್ಮ ಫಾರ್ಮ್‌ ಉತ್ತುಂಗಕ್ಕೆ ಏರುವುದು ಕೂಡ ಕ್ರಿಕೆಟಿಗನ ಜೀವನದಲ್ಲಿ ಪ್ರಮುಖ' ಎಂದು ಹೇಳಿದ್ದಾಗಿ ಸಚಿನ್‌ ತಿಳಿಸಿದ್ದಾರೆ.

ಅಪ್ಪನ ದಾರಿಯಲ್ಲಿ ಮಗ, ರಣಜಿ ಪಾದಾರ್ಪಣೆ ಪಂದ್ಯದಲ್ಲೇ ಅರ್ಜುನ್‌ ತೆಂಡುಲ್ಕರ್‌ ಶತಕ!

ಸಚಿನ್‌ ತೆಂಡುಲ್ಕರ್‌ ವಿಶ್ವಕಪ್‌ಗೂ ಮುನ್ನ ಯುವಿ ಜೊತೆ ಆಡಿದ್ದ ಈ ಸಣ್ಣ ಮಾತುಕತೆಯೇ, ಯುವಿ ಪಾಲಿಗೆ ನಿರ್ಣಾಯಕ ಎನಿಸಿತ್ತು. ಸರಿಯಾದ ಸಮಯದಲ್ಲಿ ಫಾರ್ಮ್‌ನ ಉತ್ತುಂಗಕ್ಕೇರಿದ್ದ ಯುವರಾಜ್‌ ಸಿಂಗ್‌ ಭಾರತದ ವಿಶ್ವಕಪ್‌ ಗೆಲುವಿನ ರೂವಾರಿ ಎನಿಸಿದ್ದರು. 'ಬಹುಶಃ ಅಂದು ನಾನು ಏನು ಅಂದುಕೊಂಡಿದ್ದೆನೋ ಅದೇ ರೀತಿ ಯುವಿ ಆಡಿದರು. ಸರಿಯಾದ ಸಮಯದಲ್ಲಿ ಫಾರ್ಮ್‌ನ ಉತ್ತುಂಗಕ್ಕೆ ಏರಿದ್ದರು. ಕೊನೆಗೆ ಟೂರ್ನಿಯ ಶ್ರೇಷ್ಠ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಅದರೊಂದಿಗೆ ಶತಕೋಟಿ ಜನರ ಮುಖದಲ್ಲಿ ನಗು ತಂದಿದ್ದರು' ಎಂದು ಸಚಿನ್‌ ಹೇಳಿದ್ದಾರೆ.

click me!