ತಂಬಾಕು ಉತ್ಫನ್ನಗಳ ಬಗ್ಗೆ ತಂದೆಗೆ ಮಾತುಕೊಟ್ಟಿದ್ದ ಸಚಿನ್ ತೆಂಡುಲ್ಕರ್..! ಖಾಲಿ ಚೆಕ್ ಆಫರ್ ತಿರಸ್ಕರಿಸಿದ್ದ ಕ್ರಿಕೆಟ್ ದೇವರು

By Naveen KodaseFirst Published Jun 1, 2023, 6:36 PM IST
Highlights

ಮೇ 31 ವಿಶ್ವ ತಂಬಾಕು ವಿರೋಧಿ ದಿನ ಆಚರಣೆ
ತಂಬಾಕು ಉತ್ಫನ್ನಗಳ ಬಗೆಗಿನ ಹೋರಾಟಕ್ಕೆ ಕೈಜೋಡಿಸಿದ ಸಚಿನ್ ತೆಂಡುಲ್ಕರ್
ತಂದೆಗೆ ಕೊಟ್ಟ ಮಾತು ಉಳಿಸಿಕೊಂಡ ಮಾಸ್ಟರ್ ಬ್ಲಾಸ್ಟರ್

ಮುಂಬೈ(ಜೂ.01): ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಸಮಯ ಸಿಕ್ಕಾಗಲೆಲ್ಲಾ ತಮ್ಮ ತಂದೆಯ ಜತೆಗಿನ ಒಡನಾಟವನ್ನು ಮೆಲುಕು ಹಾಕುತ್ತಿರುತ್ತಾರೆ. ಇದೀಗ ತಮ್ಮ ತಂದೆಯಿಂದ ಪ್ರಭಾವಿತವಾದ ಕುತೂಹಲಕಾರಿ ಸಂಗತಿಯನ್ನು ಮೆಲುಕು ಹಾಕಿದ್ದಾರೆ.  

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್, ಇದೀಗ ಮತ್ತೊಮ್ಮೆ ತಮ್ಮ ತಂದೆಯಿಂದ ಪಡೆದ ವಿವೇಕದ ಕಿವಿಮಾತನ್ನು ಮೆಲುಕು ಹಾಕಿದ್ದಾರೆ. ಎಂದೆಂದಿಗೂ ಆಲ್ಕೋಹಾಲ್ ಅಥವಾ ತಂಬಾಕು ಉತ್ಫನ್ನಗಳ ರಾಯಬಾರಿ ಆಗಬೇಡ ಎನ್ನುವ ಅವರ ಮಾತನ್ನು ಚಾಚೂ ತಪ್ಪದೇ ನಡೆಸಿಕೊಂಡು ಬರುತ್ತಿರುವುದರ ಹಿಂದಿನ ಸೀಕ್ರೇಟ್‌ ಏನೂ ಎನ್ನುವ ವಿಚಾರವನ್ನು ತೆಂಡುಲ್ಕರ್ ಬಹಿರಂಗಪಡಿಸಿದ್ದಾರೆ.

ಮೇ 31ನ್ನು  ವಿಶ್ವ ತಂಬಾಕು ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಂಬೈನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತೆಂಡುಲ್ಕರ್, ತಮ್ಮ ತಂದೆಯ ಮಾರ್ಗದರ್ಶನದಂತೆ ತಾವು ಎಂತಹದ್ದೇ ದೊಡ್ಡ ಆಫರ್ ಬಂದರೂ ಸಹಾ ತಂಬಾಕು ಉತ್ಫನ್ನಗಳ ಪರ ಎಂದೆಂದಿಗೂ ಪ್ರಚಾರ ಮಾಡಲು ಮುಂದಾಗಲಿಲ್ಲ ಎನ್ನುವುದನ್ನು ವಿವರಿಸಿದ್ದಾರೆ.

"ನಾನು ಭಾರತ ಪರ ಆಡಲು ಪ್ರಾರಂಭಿಸಿದಾಗ, ನಾನು ಆಗ ತಾನೇ ಶಾಲೆ ಮುಗಿಸಿ ಬಂದಿದ್ದೆ. ಇನ್ನು ಆರಂಭದಲ್ಲೇ ನನಗೆ ಹಲವು ಜಾಹೀರಾತುಗಳ ಆಫರ್‌ಗಳು ಹುಡುಕಿಕೊಂಡು ಬರಲಾರಂಭಿಸಿದ್ದವು. ಆದರೆ ಆಗ ನನ್ನ ತಂದೆ, ನೀನು ಯಾವತ್ತೂ ತಂಬಾಕು ಉತ್ಫನ್ನಗಳ ಪರವಾಗಿ ಜಾಹೀರಾತು ನೀಡಬೇಡ ಎಂದು ಸಲಹೆ ನೀಡಿದ್ದರು. ನನಗೆ ಈ ಕುರಿತಾಗಿ ಹಲವು ಆಫರ್‌ಗಳು ಬಂದರೂ ಸಹಾ, ಅವುಗಳು ಯಾವುದನ್ನೂ ನಾನು ಒಪ್ಪಿಕೊಳ್ಳಲಿಲ್ಲ ಎಂದು ತೆಂಡುಲ್ಕರ್ ಹೇಳಿದ್ದಾರೆ.

ಗಿಲ್-ರಿಂಕು: ಐಪಿಎಲ್‌-16ರಲ್ಲಿ ಉದಯಿಸಿದ 11 ನವತಾರೆಯರು!

"ಇದು ನಾನು ನನ್ನ ತಂದೆಗೆ ನೀಡಿದ ವಚನವಾಗಿತ್ತು. ನೀನೊಬ್ಬ ರೋಲ್ ಮಾಡೆಲ್ ಆಗಿದ್ದೀಯ. ನೀನೇನು ಮಾಡುತ್ತೀಯೋ ಅದನ್ನು ಸಾಕಷ್ಟು ಮಂದಿ ಫಾಲೋ ಮಾಡುತ್ತಾರೆ ಎಂದು ಹೇಳಿದ್ದರು. ಈ ಕಾರಣಕ್ಕಾಗಿಯೇ ನಾನು ಆಲ್ಕೋಹಾಲ್ ಅಥವಾ ತಂಬಾಕು ಉತ್ಫನ್ನಗಳ ಕುರಿತಾಗಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿಲ್ಲ. 1990ರಲ್ಲಿ ನನ್ನ ಬ್ಯಾಟ್‌ಗೆ ಯಾವುದೇ ಸ್ಟಿಕ್ಕರ್ ಇರಲಿಲ್ಲ. ನಾನು ಯಾವುದೇ ಕಂಪನಿ ಜತೆಗೂ ಒಪ್ಪಂದ ಮಾಡಿಕೊಂಡಿರಲಿಲ್ಲ. ಆದರೆ ತಂಡದಲ್ಲಿರುವ ಪ್ರತಿಯೊಬ್ಬರು, ವಿಲ್ಸ್ ಹಾಗೂ ಫೋರ್ ಸ್ಕ್ವೇರ್‌ ಬ್ರ್ಯಾಂಡ್ ಸ್ಟಿಕ್ಕರ್‌ ಬಳಸುತ್ತಿದ್ದರು ಎಂದು ಆ ದಿನಗಳನ್ನು ಸಚಿನ್ ತೆಂಡುಲ್ಕರ್ ಮೆಲುಕು ಹಾಕಿದ್ದಾರೆ.

ಈ ಬ್ರ್ಯಾಂಡ್‌ಗಳನ್ನು ಪ್ರಚಾರಗೊಳಿಸುವ ಉದ್ದೇಶದಿಂದ ನಾನು ನನ್ನ ತಂದೆಗೆ ನೀಡಿದ ಮಾತನ್ನು ಮುರಿಯಲು ಇಷ್ಟವಿರಲಿಲ್ಲ. ತಂಬಾಕು ಕಂಪನಿಗಳು ನನ್ನ ಮುಂದೆ ಖಾಲಿ ಚೆಕ್ ನೀಡಿ ತಮ್ಮ ಉತ್ಫನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವಂತೆ ಮನವಿ ಮಾಡಿದ್ದರು. ನನ್ನ ಬ್ಯಾಟ್‌ನಲ್ಲಿ ತಂಬಾಕು ಉತ್ಫನ್ನಗಳ ಸ್ಟಿಕ್ಕರ್ ಬಳಸಲು ಕೂಡಾ ಸಾಕಷ್ಟು ಆಫರ್ ಬಂದಿದ್ದವು. ಆದರೆ ನಾನು ಎಂದೆಂದಿಗೂ ತಂಬಾಕು ಉತ್ಫನ್ನಗಳನ್ನು ಪ್ರಚಾರ ಮಾಡಲಿಲ್ಲ. ಈ ಆಲ್ಕೋಹಾಲ್ ಹಾಗೂ ತಂಬಾಕು ಉತ್ಫನ್ನಗಳಿಂದ ನಾನು ದೂರವೇ ಉಳಿಯುವ ಮೂಲಕ ತನ್ನ ತಂದೆಗೆ ನೀಡಿದ್ದ ಮಾತನ್ನು ಉಳಿಸಿಕೊಂಡೆ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ.

ಸಚಿನ್ ತೆಂಡುಲ್ಕರ್ ಮೈದಾನದೊಳಗೆ ಹಾಗೂ ಮೈದಾನದಾಚೆಗೆ ತನ್ನ ಸಜ್ಜನ ನಡೆಯ ಮೂಲಕ ಕ್ರಿಕೆಟ್ ಜಗತ್ತಿನಾದ್ಯಂತ ಗೌರವಾನ್ವಿತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮ ಎಂದು ಪರಿಗಣಿಸುವುದಾರೇ, ಅದಕ್ಕೆ ಸಚಿನ್ ತೆಂಡುಲ್ಕರ್ ದೇವರು ಎನ್ನುವ ಮಾತಿದೆ. ಸಚಿನ್ ತೆಂಡುಲ್ಕರ್ ಅವರನ್ನು ಲಕ್ಷಾಂತರ ಮಂದಿ ಜಗತ್ತಿನಾದ್ಯಂತ ಆರಾಧಿಸುತ್ತಾ ಬಂದಿದ್ದಾರೆ.

24 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಬದುಕಿನಲ್ಲಿ ಸಚಿನ್ ತೆಂಡುಲ್ಕರ್ 200 ಟೆಸ್ಟ್ ಹಾಗೂ 463 ಏಕದಿನ ಪಂದ್ಯಗಳನ್ನಾಡಿ ಕ್ರಮವಾಗಿ 15921 ಹಾಗೂ 18426 ರನ್ ಸಿಡಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರು ಶತಕ ಸಿಡಿಸಿದ ಮೊದಲ ಹಾಗೂ ಏಕೈಕ ಬ್ಯಾಟರ್ ಎನ್ನುವ ಹಿರಿಮೆ ಸಚಿನ್ ತೆಂಡುಲ್ಕರ್ ಅವರ ಬಳಿಯಿದೆ.

click me!