200 ಟೆಸ್ಟ್‌ ಮ್ಯಾಚ್‌ನಲ್ಲಿ ಸಚಿನ್‌ ಒಮ್ಮೆ ಮಾತ್ರ ಸ್ಟಂಪ್‌ ಔಟ್‌ ಆಗಿದ್ದಕ್ಕೆ ಕಾರಣ ನಾನೇ.. ಫನ್ನಿ ಸ್ಟೋರಿ ರಿವಿಲ್‌ ಮಾಡಿದ ಸೆಹ್ವಾಗ್‌

Published : Aug 26, 2026, 09:16 PM IST
Sachin and Sehwag

ಸಾರಾಂಶ

ತಮ್ಮ 200 ಟೆಸ್ಟ್‌ಗಳ ವೃತ್ತಿಜೀವನದಲ್ಲಿ ಸಚಿನ್ ತೆಂಡುಲ್ಕರ್ ಕೇವಲ ಒಂದು ಬಾರಿ ಸ್ಟಂಪ್ ಔಟ್ ಆಗಿದ್ದರು. ಬೆಂಗಳೂರಿನಲ್ಲಿ ನಡೆದ ಆ ಪಂದ್ಯದಲ್ಲಿ, ಸಚಿನ್‌ರನ್ನು ಪ್ರಚೋದಿಸಿ ಔಟ್ ಮಾಡಿಸಿದ್ದೇ ತಾನು ಎಂದು ವೀರೇಂದ್ರ ಸೆಹ್ವಾಗ್ ಹೇಳಿಕೊಂಡ ಸ್ವಾರಸ್ಯಕರ ಘಟನೆಯಿದು.

ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಟೆಸ್ಟ್‌ ಮಾದರಿಯಲ್ಲಿ 200 ಪಂದ್ಯ ಆಡಿದ್ದಾರೆ. ಎಲ್ಲಾ ರೀತಿಯಲ್ಲೂ ಔಟ್‌ ಆಗಿರುವ ಸಚಿನ್‌ ತೆಂಡುಲ್ಕರ್‌ ತಮ್ಮ 200 ಟೆಸ್ಟ್‌ ಪಂದ್ಯಗಳ ಇತಿಹಾಸದಲ್ಲಿ ಒಮ್ಮೆ ಮಾತ್ರವೇ ಸ್ಟಂಪ್‌ ಔಟ್‌ ಆಗಿದ್ದರು. ಆ ಪಂದ್ಯ ನಡೆದಿದ್ದು ಬೆಂಗಳೂರಲ್ಲಿ. 2001ರ ಡಿಸೆಂಬರ್ 20 ರಂದು ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯಕ್ಕೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಆ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸಚಿನ್‌ ತೆಂಡುಲ್ಕರ್‌ 90 ರನ್‌ಗೆ ಸ್ಟಂಪ್‌ ಔಟ್‌ ಆಗಿದ್ದರು. ಇಂಗ್ಲೆಂಡ್‌ನ ಎಡಗೈ ಸ್ಪಿನ್ನರ್‌ ಆಶ್ಲೆ ಜೈಲ್ಸ್‌ ಎಸೆತದಲ್ಲಿ ಕ್ರೀಸ್‌ನಿಂದ ಹೊರಬಂದು ಆಡಲು ಯತ್ನಿಸಿದ ಸಚಿನ್‌ರನ್ನು ವಿಕೆಟ್‌ಕೀಪರ್‌ ಜೇಮ್ಸ್‌ ಫಾಸ್ಟರ್‌ ಸ್ಟಂಪ್‌ ಮಾಡಿದ್ದರು. ಈ ವೇಳೆ ಸಚಿನ್‌ ಜೊತೆಯಾಗಿ ಆಡಿದ್ದ ವೀರೇಂದ್ರ ಸೆಹ್ವಾಗ್‌ 66 ರನ್‌ ಬಾರಿಸಿ ಔಟಾಗಿದ್ದರು.

ಸಚಿನ್‌ರನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ ಏಕೈಕ ಬಾರಿ ಸ್ಟಂಪ್‌ ಔಟ್‌ ಮಾಡಿದ್ದು ಜೈಲ್ಸ್‌ ಆಗಿದ್ದರೂ, ಅದರ ಹಿಂದಿದ್ದವರು ಸ್ವತಃ ವೀರೇಂದ್ರ ಸೆಹ್ವಾಗ್.‌ ಈ ಮಾತನ್ನು ಸೆಹ್ವಾಗ್‌ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

6ನೇ ವಿಕೆಟ್‌ಗೆ ನಾನು ಹಾಗೂ ಸಚಿನ್‌ ತೆಂಡುಲ್ಕರ್‌ ಬ್ಯಾಟಿಂಗ್‌ ಮಾಡುತ್ತಿದ್ದೆವು. ನಾನು ಬ್ಯಾಟಿಂಗ್‌ ಮಾಡಲು ಬರುವಾಗಲೇ ಸಚಿನ್‌ ತೆಂಡುಲ್ಕರ್‌ ತುಂಬಾ ಹೊತ್ತಿನಿಂದ ಬ್ಯಾಟಿಂಗ್‌ ಮಾಡುತ್ತಿದ್ದರು. 60-65 ರನ್‌ ಕೂಡ ಬಾರಿಸಿದ್ದರು ಅಂತಾ ಕಾಣುತ್ತೆ. ಕ್ರೀಸ್‌ಗೆ ಬಂದ ನಾನು ಬಿರುಸಾಗಿ ಬ್ಯಾಟಿಂಗ್‌ ಮಾಡಲು ಆರಂಭಿಸಿದೆ. ಬಡಬಡನೆ ಬೌಂಡರಿ ಬಾರಿಸಿ ಅರ್ಧಶತಕ ಪೂರೈಸಿದೆ. ಆದರೆ, ಆಗಲೂ ಸಚಿನ್‌ ಇನ್ನೂ 66-67 ರನ್‌ನಲ್ಲೇ ಇದ್ದರು. ಇಂಗ್ಲೆಂಡ್‌ ಸ್ಪಿನ್ನರ್‌ ಆಶ್ಲೈ ಜೈಲ್ಸ್‌ ಸಚಿನ್‌ಗೆ ಓವರ್‌ ದಿ ವಿಕೆಟ್‌ ಹಾಕಿ ಬಾಲಿನ ಬಳಿಯಲ್ಲೇ ಬೌಲಿಂಗ್‌ ಮಾಡುತ್ತಿದ್ದ. ಸಚಿನ್‌ ಪದೇ ಪದೇ ಪ್ಯಾಡ್‌ ಮಾಡುತ್ತಾ ಮೇಡನ್‌ ಮೇಲೆ ಮೇಡನ್‌ ಮಾಡುತ್ತಿದ್ದರು ಎಂದು ಸೆಹ್ವಾಗ್‌ ಹೇಳಿದ್ದಾರೆ.

ನನಗೆ ಆಶ್ಲೆ ಜೈಲ್ಸ್‌ ಬೌಲಿಂಗ್ ಮಾಡಲು ಬಂದಾಗ ಮೊದಲ ಎಸೆತ ರಿವರ್ಸ್‌ ಸ್ವೀಪ್‌ ಮಾಡಿದೆ. ಎರಡನೇ ಎಸೆತವನ್ನೂ ಸ್ವೀಪ್‌ ಮಾಡಿದೆ. ಆಮೇಲೆ ಮತ್ತೆ ರಿವರ್ಸ್‌ ಸ್ವೀಪ್‌ ಮಾಡಿ ಮೂರು ಬೌಂಡರಿ ಬಾರಿಸಿ ಅವರ ಬಳಿ ಹೋದೆ. 'ಪಾಜಿ.. ತುಂಬಾ ಸುಲಭವಾಗಿದೆ. ನೀವು ರನ್‌ ಹೊಡೆಯಬಹುದು. ರಿವರ್ಸ್‌ ಸ್ವೀಪ್‌ ಮಾಡಬಹುದು..' ಎಂದೆ. ಅದಕ್ಕೆ ಅವರು 'ಇಲ್ಲ ಇಲ್ಲ.. ರಿವರ್ಸ್‌ ಹೊಡೆಯುವಾಗ ರಫ್‌ನಲ್ಲಿ (ಪಿಚ್‌ನ ಸವೆದ ಭಾಗ) ಬಿದ್ದು ಔಟ್‌ ಆಗಬಹುದು' ಎಂದರು.

ಆಗ ನಾನು, "ಸರಿ" ಎಂದು ಮುಂದಿನ ಓವರ್‌ನಲ್ಲಿ ಕ್ರೀಸ್‌ನಿಂದ ಮುನ್ನುಗ್ಗಿ ಮಿಡ್ ಆನ್ ಮೇಲಿಂದ ಒಂದು ಬೌಂಡರಿ ಬಾರಿಸಿದೆ. ಮತ್ತೆ ಮುನ್ನುಗ್ಗಿ ಇನ್ನೊಂದು ಬೌಂಡರಿ ಹೊಡೆದು, "ನೀವು ಮುನ್ನುಗ್ಗಿ ಹೊಡೆಯಬಹುದು, ಇದು ಸುಲಭ" ಎಂದೆ. ಅದಕ್ಕೆ ಅವರು "ಸರಿ" ಎಂದು ಮುನ್ನುಗ್ಗಿ ಆಡಲು ಹೋಗಿ ಸ್ಟಂಪ್ ಔಟ್ ಆದರು. ತಮ್ಮ ಜೀವನದ 200 ಟೆಸ್ಟ್ ಪಂದ್ಯಗಳಲ್ಲಿ ಅವರು ಒಂದೇ ಒಂದು ಬಾರಿ ಸ್ಟಂಪ್ ಔಟ್ ಆಗಿದ್ದಾರೆ. ಅದು ನನ್ನಿಂದಾಗಿ, ಆ ಕ್ರೆಡಿಟ್ ಸೆಹ್ವಾಗ್‌ಗೆ ಸಲ್ಲುತ್ತದೆ ಎಂದು ಸೆಹ್ವಾಗ್‌ ತಮಾಷೆಯಾಗಿ ಹೇಳಿದ್ದಾರೆ.

ಪಂದ್ಯ ಡ್ರಾ, ಸರಣಿ ಗೆದ್ದಿದ್ದ ಭಾರತ

ಈ ಪಂದ್ಯವನ್ನು ಭಾರತ ಡ್ರಾ ಮಾಡಿಕೊಳ್ಳುವ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಗೆದ್ದಿತ್ತು. ಇಡೀ ಸರಣಿಯಲ್ಲಿ 370 ರನ್‌ ಬಾರಿಸಿದ್ದ ಸಚಿನ್‌ ಸರಣಿಶ್ರೇಷ್ಠರಾಗಿದ್ದರೆ, ಆಂಡ್ರ್ಯೂ ಫ್ಲಿಂಟಾಫ್‌ ಬೆಂಗಳೂರು ಟೆಸ್ಟ್‌ ಪಂದ್ಯದ ಪಂದ್ಯಶ್ರೇಷ್ಠ ಎನಿಸಿಕೊಂಡಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟೀಂ ಇಂಡಿಯಾಗೆ ಮತ್ತೆ ಎಂಟ್ರಿ ಕೊಡಲು ಸಜ್ಜಾದ 3 ಸ್ಟಾರ್ ಬೌಲರ್‍‌ಗಳು; ಒಂದೇ ಫ್ರೇಮ್‌ನಲ್ಲಿ ತ್ರಿಮೂರ್ತಿಗಳು
'ಆ ಪಂದ್ಯ ನೆನಪಾದಾಗ ಮೈಯೆಲ್ಲಾ ನಡುಗುತ್ತೆ..' ರಣ ರೋಚಕ ಪಂದ್ಯದ ಬಗ್ಗೆ ಸೂರ್ಯ ಮಾತು..