ಕ್ರಿಕೆಟ್‌ನ ಅತಿದೊಡ್ಡ ರೂಲ್ಸ್ ಬದಲಾಗುತ್ತಾ? ಈ ನಿಯಮ ಬದಲಿಸಿ ಎಂದು ಮತ್ತೊಮ್ಮೆ ಧ್ವನಿಯೆತ್ತಿದ ಸಚಿನ್ ತೆಂಡೂಲ್ಕರ್!

Published : Aug 26, 2025, 03:38 PM IST
 Sachin Tendulkar On umpires call

ಸಾರಾಂಶ

ಡಿಸಿಷನ್ ರಿವ್ಯೂ ಸಿಸ್ಟಮ್ (DRS) ನಲ್ಲಿರುವ ಅಂಪೈರ್ ಕಾಲ್ ನಿಯಮವನ್ನು ಬದಲಾಯಿಸಬೇಕೆಂದು ಭಾರತದ ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಈ ನಿಯಮದಿಂದ ಕ್ರಿಕೆಟ್ ಆಟ ಗೊಂದಲಮಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಮುಂಬೈ : ಭಾರತದ ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಡಿಸಿಷನ್ ರಿವ್ಯೂ ಸಿಸ್ಟಮ್ (DRS) ನಲ್ಲಿರುವ ಅಂಪೈರ್ ಕಾಲ್ ನಿಯಮವನ್ನು ಬದಲಾಯಿಸಬೇಕೆಂದು ಹೇಳಿದ್ದಾರೆ. ಈ ನಿಯಮದಿಂದ ಕ್ರಿಕೆಟ್ ಆಟ ಸ್ವಲ್ಪ ಗೊಂದಲಮಯವಾಗಿದೆ ಮತ್ತು ಗೊಂದಲ ಉಂಟಾಗುತ್ತದೆ ಎಂದು ಸಚಿನ್ ಅಭಿಪ್ರಾಯಪಟ್ಟಿದ್ದಾರೆ.

2009ರಲ್ಲಿ DRS ಜಾರಿಗೆ ಬಂದ ನಂತರ ಅಂಪೈರ್ ಕಾಲ್ ಎಂಬ ಪದ ಕ್ರಿಕೆಟ್‌ನ ಒಂದು ಭಾಗವಾಗಿದೆ. ಕೆಲವರು ಈ ನಿಯಮವನ್ನು ಬೆಂಬಲಿಸಿದರೆ, ಇನ್ನು ಕೆಲವರು ವಿರೋಧಿಸಿದ್ದಾರೆ. ಈ ಬಗ್ಗೆ ಸಚಿನ್ ತೆಂಡೂಲ್ಕರ್ ಇದೀಗ ಮನಬಿಚ್ಚಿ ಮಾತನಾಡಿದ್ದಾರೆ. “ನಾನು ಅಂಪೈರ್ ಕಾಲ್ ನಿಯಮವನ್ನು ಬದಲಾಯಿಸಲು ಬಯಸುತ್ತೇನೆ. ಮೈದಾನದಲ್ಲಿರುವ ಅಂಪೈರ್‌ಗಳ ನಿರ್ಧಾರ ಒಪ್ಪದಿದ್ದರೆ ಆಟಗಾರರು ಮೇಲ್ಮನವಿ ಸಲ್ಲಿಸುತ್ತಾರೆ. ಆಗ ಮತ್ತೆ ಅದೇ ಅಂಪೈರ್‌ಗಳ ಕರೆಯನ್ನು ಪರಿಗಣಿಸುವುದು ಸರಿಯಲ್ಲ. ಡಿಆರ್‌ಎಸ್‌ನಲ್ಲಿ ಏನು ತೀರ್ಮಾನ ಬರುತ್ತದೋ ಅದೇ ಅಂತಿಮವಾಗಿರಬೇಕು” ಎಂದು ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ

ಈಗ ಒಂದು ತಂಡ ಮೈದಾನದಲ್ಲಿನ ನಿರ್ಧಾರವನ್ನು ಪ್ರಶ್ನಿಸಿದಾಗ, ತಾಂತ್ರಿಕ ಪುರಾವೆಗಳನ್ನು ಪರಿಶೀಲಿಸಲಾಗುತ್ತದೆ. ಆದರೆ ಪುರಾವೆಗಳು ಸ್ಪಷ್ಟವಾಗಿಲ್ಲದಿದ್ದರೆ, ಅಂಪೈರ್‌ಗಳ ಮೊದಲ ನಿರ್ಧಾರವನ್ನೇ ಒಪ್ಪಿಕೊಳ್ಳಲಾಗುತ್ತದೆ. ವಿಶೇಷವಾಗಿ LBW ನಿರ್ಧಾರಗಳಲ್ಲಿ ಅಂಪೈರ್ ಕಾಲ್ ಅನ್ವಯಿಸುತ್ತದೆ. ಚೆಂಡು 50% ಕ್ಕಿಂತ ಕಡಿಮೆ ಸ್ಟಂಪ್‌ಗೆ ತಾಗಿದರೆ, ಅಂಪೈರ್‌ಗಳ ಮೊದಲು ಯಾವ ತೀರ್ಮಾನ ನೀಡಿರುತ್ತಾರೋ, ಅದೇ ತೀರ್ಪು ಅಂತಿಮವಾಗುತ್ತದೆ.

2020ರಲ್ಲೂ ಡಿಆರ್‌ಎಸ್ ಅಂಪೈರ್ ಕಾಲ್ ಬಗ್ಗೆ ಲಿಟ್ಲ್‌ ಮಾಸ್ಟರ್ ಸಚಿನ್ ತೆಂಡೂಲ್ಕರ್ ಮೊದಲ ಬಾರಿಗೆ ಧ್ವನಿಯೆತ್ತಿದ್ದರು. ಅಂಪೈರ್ ಡಿಆರ್‌ಎಸ್‌ ಕಾಲ್‌ನಿಂದ ಕ್ರಿಕೆಟ್‌ ಅಭಿಮಾನಿಗಳನ್ನು ಇಬ್ಬಾಗ ಮಾಡುತ್ತದೆ. ಹೀಗಾಗಿ ಡಿಆರ್‌ಎಸ್‌ನಲ್ಲಿ ಅಂಪೈರ್ ಕಾಲ್ ತೆಗೆದುಹಾಕಬೇಕು ಎಂದು ಮುಂಬೈಕರ್ 5 ವರ್ಷದ ಹಿಂದೆ ಸಲಹೆ ನೀಡಿದ್ದರು.

‘ಮಾಸ್ಟರ್ ಬ್ಲಾಸ್ಟರ್’ ಎಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ 1989 ರಿಂದ 2013 ರವರೆಗೆ ಅದ್ಭುತ ಬ್ಯಾಟಿಂಗ್‌ನಿಂದ ಜಗತ್ತಿನಾದ್ಯಂತ ಅಭಿಮಾನಿಗಳನ್ನು ರಂಜಿಸಿದ್ದಾರೆ. 664 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 48.52 ಸರಾಸರಿಯಲ್ಲಿ 34,357 ರನ್ ಗಳಿಸಿದ್ದಾರೆ. ಅವರ 100 ಶತಕಗಳು ಮತ್ತು 164 ಅರ್ಧಶತಕಗಳು ವಿಶ್ವ ದಾಖಲೆಗಳಾಗಿವೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕಗಳ ಶತಕ ಗಳಿಸಿದ ಏಕೈಕ ಆಟಗಾರ ಸಚಿನ್ ತೆಂಡೂಲ್ಕರ್. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಬಾರಿಸಿದ ಜಗತ್ತಿನ ಮೊದಲ ಬ್ಯಾಟರ್ ಎನ್ನುವ ಹೆಗ್ಗಳಿಕೆಯೂ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಇನ್ನು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ‘ಭಾರತ ರತ್ನ’ ಪ್ರಶಸ್ತಿಗೆ ಭಾಜನರಾದ ಮೊದಲ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸಚಿನ್ ಅವರನ್ನು ಕ್ರಿಕೆಟ್‌ನ ದೇವರು ಎಂದು ಅಭಿಮಾನಿಗಳು ಕರೆಯುತ್ತಾರೆ. 

ಕ್ರಿಕೆಟಿಗರು ನಿಧನರಾದ್ರೆ ಸಂಗಾತಿಗೆ ಬಿಸಿಸಿಐನಿಂದ ₹1 ಲಕ್ಷ ಪರಿಹಾರ

ಬೆಂಗಳೂರು: ಭಾರತೀಯರ ಕ್ರಿಕೆಟಿಗರ ಸಂಘ(ಐಸಿಎ)ದ ಸದಸ್ಯತ್ವ ಹೊಂದಿರುವ ಕ್ರಿಕೆಟಿಗರು ನಿಧನರಾದರೆ ಅವರ ಪತಿ/ಪತ್ನಿಗೆ ಒಂದು ಬಾರಿಗೆ 1 ಲಕ್ಷ ರು. ಪರಿಹಾರ ನೀಡುವ ಪ್ರಸ್ತಾಪಕ್ಕೆ ಬಿಸಿಸಿಐ ಅನುಮತಿ ನೀಡಿದೆ.

ಐಸಿಎ ಸದಸ್ಯತ್ವ ಹೊಂದಿರುವ ಕ್ರಿಕೆಟಿಗರಿಗೆ ಮಾತ್ರವೇ ಇದು ಅನ್ವಯವಾಗಲಿದೆ. ಆದರೆ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟಿಗರು ಇದರಿಂದ ಹೊರಗುಳಿಯಲಿದ್ದಾರೆ. ಐಸಿಎ ನಿರ್ಧಾರವು ಆರ್ಥಿಕ ಸಂಕಷ್ಟದಲ್ಲಿರುವ ಮೃತ ಕ್ರಿಕೆಟಿಗರ ಕುಟುಂಬಕ್ಕೆ ನೆರವಾಗಲಿದ್ದು, ಆರಂಭಿಕ ಹಂತದಲ್ಲಿ 50 ಫಲಾನುಭವಿಗಳಿಗೆ ಧನ ಸಹಾಯ ಮಾಡುವ ಯೋಜನೆಯನ್ನು ಹಾಕಿಕೊಂಡಿದೆ.

ಮುಂದಿನ ದಿನಗಳಲ್ಲಿ ಬಿಸಿಸಿಐ ವಿಧವೆಯರು ಮತ್ತು ವಿಧುರರಿಗೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಲು ಒಪ್ಪಿದರೆ ಈಗಿರುವ ಪರಿಹಾರ ಮೊತ್ತ ಪರಿಶೀಲನೆಗೆ ಒಳಪಡುವ ಸಾಧ್ಯತೆಯಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ