SA vs WI ವಿಂಡೀಸ್ ಎದುರು ವಿಶ್ವದಾಖಲೆಯ ಗುರಿ ಬೆನ್ನತ್ತಿ ಗೆದ್ದ ದಕ್ಷಿಣ ಆಫ್ರಿಕಾ..!

By Naveen KodaseFirst Published Mar 27, 2023, 10:46 AM IST
Highlights

ವೆಸ್ಟ್‌ ಇಂಡೀಸ್ ಎದುರು ಎರಡನೇ ಟಿ20 ಪಂದ್ಯ ಗೆದ್ದು ಬೀಗಿದ ಹರಿಣಗಳು
259 ರನ್‌ಗಳನ್ನು ಯಶಸ್ವಿಯಾಗಿ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೊದಲ ಶತಕ ಸಿಡಿಸಿದ ಕ್ವಿಂಟನ್ ಡಿ ಕಾಕ್

ಸೆಂಚೂರಿಯನ್‌(ಮಾ.27): ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಿದ ವಿಶ್ವ ದಾಖಲೆಯನ್ನು ದಕ್ಷಿಣ ಆಫ್ರಿಕಾ ಬರೆದಿದೆ. ಭಾನುವಾರ ವಿಂಡೀಸ್‌ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 259 ರನ್‌ ಗುರಿಯನ್ನು 7 ಎಸೆತ ಬಾಕಿ ಇರುವಂತೆ ಬೆನ್ನತ್ತಿತು. ಇದರೊಂದಿಗೆ ಸರ್ಬಿಯಾ ವಿರುದ್ಧ 2022ರಲ್ಲಿ ಬಲ್ಗೇರಿಯಾ 246, ಐಸಿಸಿ ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ ನ್ಯೂಜಿಲೆಂಡ್‌ ವಿರುದ್ಧ 2018ರಲ್ಲಿ 245 ರನ್‌ ಬೆನ್ನತ್ತಿ ಆಸ್ಪ್ರೇಲಿಯಾ ಬರೆದಿದ್ದ ದಾಖಲೆಯನ್ನು ದಕ್ಷಿಣ ಆಫ್ರಿಕಾ ಮುರಿಯಿತು.

ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ ಜಾನ್ಸನ್‌ ಚಾರ್ಲ್ರ್ಸ್‌  ಸ್ಫೋಟಕ ಶತಕದ ನೆರವಿನಿಂದ 20 ಓವರಲ್ಲಿ 5 ವಿಕೆಟ್‌ಗೆ 258 ರನ್‌ ಕಲೆಹಾಕಿತು. 39 ಎಸೆತದಲ್ಲಿ ಶತಕ ಬಾರಿಸಿದ ಚಾರ್ಲ್ಸ್, 46 ಎಸೆತದಲ್ಲಿ 10 ಬೌಂಡರಿ, 11 ಸಿಕ್ಸರ್‌ನೊಂದಿಗೆ 118 ರನ್‌ ಸಿಡಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್‌ ಕೈಲ್ ಮೇಯರ್ಸ್‌ ಕೇವಲ 27 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 51 ರನ್‌ ಬಾರಿಸಿ ಮಾರ್ಕೊ ಯಾನ್ಸೆನ್‌ಗೆ ವಿಕೆಟ್‌ ಒಪ್ಪಿಸಿದರು. ನಾಯಕ ರೋವ್ಮನ್ ಪೋವೆಲ್ 28 ರನ್‌ ಬಾರಿಸಿ ವೇಯ್ನ್ ಪಾರ್ನೆಲ್‌ಗೆ ವಿಕೆಟ್ ಒಪ್ಪಿಸಿದರೆ, ಕೊನೆಯಲ್ಲಿ ರೊಮ್ಯಾರಿಯೋ ಶೆಫರ್ಡ್‌ ಕೇವಲ 18 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 41 ರನ್ ಸಿಡಿಸಿದರೆ, ಮತ್ತೊಂದು ತುದಿಯಲ್ಲಿ ಓಡೆನ್ ಸ್ಮಿತ್ ಅಜೇಯ 11 ರನ್ ಬಾರಿಸಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.

South Africa created history in the second T20I against the West Indies at Centurion as they produced a record-breaking run chase 😲

Details 👇https://t.co/FJ05gPd2f9 pic.twitter.com/UcR9qR6hHX

— ICC (@ICC)

ಇನ್ನು ಬೆಟ್ಟದಂತಹ ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಕ್ವಿಂಟನ್ ಡಿ ಕಾಕ್ ಹಾಗೂ ರೀಜಾ ಹೆಂಡ್ರಿಕ್ಸ್‌ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಪರಿಣಾಮ ದಕ್ಷಿಣ ಆಫ್ರಿಕಾ ಮೊದಲ 6 ಓವರಲ್ಲೇ 102 ರನ್‌ ಕಲೆಹಾಕಿತು. ವೆಸ್ಟ್‌ ಇಂಡೀಸ್ ಬೌಲರ್‌ಗಳೆದುರು ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ಈ ಜೋಡಿ ಮೊದಲ ವಿಕೆಟ್‌ಗೆ ಕೇವಲ 65 ಎಸೆತಗಳನ್ನು ಎದುರಿಸಿ 152 ರನ್‌ ಜತೆಯಾಟವಾಡುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟಿತ್ತು. ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಕ್ವಿಂಟನ್ ಡಿ ಕಾಕ್ ಕೇವಲ 44 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 100 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅಂದಹಾಗೆ ಇದು ಕ್ವಿಂಟನ್ ಡಿ ಕಾಕ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಬಾರಿಸಿದ ಮೊದಲ ಶತಕ ಎನಿಸಿಕೊಂಡಿತು. 

ಗೇಲ್, ಎಬಿಡಿಗೆ ಆರ್‌ಸಿಬಿ ಹಾಲ್ ಆಫ್‌ ಫೇಮ್ ಗೌರವ, ನೂತನ ಜೆರ್ಸಿ ಅನಾವರಣ ಮಾಡಿದ ಕೊಹ್ಲಿ- ಫಾಫ್ ಜೋಡಿ

What a win! 💥

South Africa have pulled off an incredible heist in Centurion 🔥 | https://t.co/XyxteYowIn pic.twitter.com/MLP3tE21WO

— ICC (@ICC)

ಇನ್ನು ಕ್ವಿಂಟನ್ ಡಿ ಕಾಕ್‌ಗೆ ಉತ್ತಮ ಸಾಥ್ ನೀಡಿದ ರೀಜಾ ಹೆಂಡ್ರಿಕ್ಸ್‌ ಕೇವಲ 28 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 68 ರನ್ ಚಚ್ಚಿದರು. ಇನ್ನು ರೀಲೆ ರೂಸೌ(16), ಏಯ್ಡನ್ ಮಾರ್ಕ್‌ರಮ್(38*) ಹಾಗೂ ಹೆನ್ರಿಚ್‌ ಕ್ಲಾಸೇನ್(16*) ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ ದಕ್ಷಿಣ ಆಫ್ರಿಕಾ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ಸರಣಿ ಸಮಬಲ; ನಿರ್ಣಾಯಕ ಪಂದ್ಯದ ಮೇಲೆ ಎಲ್ಲರ ಚಿತ್ತ:

ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ ಇಂಡೀಸ್ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಜಯಿಸುವ ಮೂಲಕ ಸರಣಿಯಲ್ಲಿ 1-1ರ ಸಮಬಲ ಸಾಧಿಸಿವೆ. ಇದೀಗ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯವು ಮಾರ್ಚ್ 28ರಂದು ಜೋಹಾನ್ಸ್‌ಬರ್ಗ್‌ನ ದ ವಾಂಡರರ್ಸ್‌ ಮೈದಾನದಲ್ಲಿ ನಡೆಯಲಿದ್ದು, ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

click me!