
ಬೆಂಗಳೂರು(ಮಾ.27): ದಿಗ್ಗಜ ಆಟಗಾರರಾದ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ ಹಾಗೂ ವೆಸ್ಟ್ಇಂಡೀಸ್ನ ಕ್ರಿಸ್ ಗೇಲ್ ಅವರನ್ನು ಆರ್‌ಸಿಬಿ ತಂಡ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ತನ್ನ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳಿಸಿತು.
ಭಾನುವಾರ ಆರ್‌ಸಿಬಿ ತಂಡ ‘ಅನ್‌ಬಾಕ್ಸ್’ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಸಂಜೆ ಮಾಜಿ ನಾಯಕ ವಿರಾಟ್ ಕೊಹ್ಲಿ, ನಾಯಕ ಫಾಫ್ ಡು ಪ್ಲೆಸಿ ಸೇರಿದಂತೆ ಬಹುತೇಕ ಎಲ್ಲಾ ಆಟಗಾರರು ಕೆಲ ಹೊತ್ತು ಅಭ್ಯಾಸ ನಡೆಸಿದರು. ಅಪಾರ ಪ್ರಮಾಣದಲ್ಲಿ ಸೇರಿದ್ದ ಅಭಿಮಾನಿಗಳು 2019ರ ಬಳಿಕ ತವರು ಕ್ರೀಡಾಂಗಣದಲ್ಲಿ ಆರ್‌ಸಿಬಿ ಆಟಗಾರರನ್ನು ಕಂಡು ಆನಂದಿಸಿದರೆ, ಆಟಗಾರರು ಮೈದಾನದನುದ್ದಕ್ಕೂ ಸುತ್ತಾಡಿ ಅಭಿಮಾನಿಗಳಿಗೆ ಧನ್ಯವಾದ ಸಮರ್ಪಿಸಿದರು.
ಅಭ್ಯಾಸದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಆರ್‌ಸಿಬಿ ಪರ ಹಲವು ವರ್ಷಗಳ ಕಾಲ ಆಡಿದ್ದ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್‌ಗೆ ಹಾಲ್ ಆಫ್ ಫೇಮ್ ಗೌರವ ಸಮರ್ಪಿಸಲಾಯಿತು. ಜೊತೆಗೆ ಎಬಿ ಡಿವಿಲಿಯರ್ಸ್ರ 17, ಗೇಲ್‌ರ 333 ಜೆರ್ಸಿ ಸಂಖ್ಯೆಗೂ ಫ್ರಾಂಚೈಸಿ ನಿವೃತ್ತಿ ಘೋಷಿಸಿತು.
ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎನಿಸಿಕೊಂಡಿರುವ ಎಬಿ ಡಿವಿಲಿಯರ್ಸ್ 2011ರಿಂದ 2021ರವರೆಗೆ ಒಟ್ಟು 11 ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಆರ್‌ಸಿಬಿ ಪರ ಒಟ್ಟು 156 ಪಂದ್ಯಗಳನ್ನಾಡಿರುವ ಎಬಿ ಡಿವಿಲಿಯರ್ಸ್ 37 ಅರ್ಧ ಶತಕ ಹಾಗೂ 2 ಶತಕ ಸಹಿತ ಒಟ್ಟಾರೆ 4,491 ರನ್ ಬಾರಿಸಿ ಮಿಂಚಿದ್ದಾರೆ.
RCB Unbox ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಕಿಕ್ಕಿರಿದು ಸೇರಿದ ಆರ್‌ಸಿಬಿ ಫ್ಯಾನ್ಸ್..!
ವೆಸ್ಟ್ ಇಂಡೀಸ್ ದೈತ್ಯ ಪ್ರತಿಭೆ ಕ್ರಿಸ್ ಗೇಲ್ ಕೂಡಾ 2011ರಿಂದ 2017ರ ಅವಧಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. 2013ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ಗೇಲ್ ಆಡಿದ 16 ಪಂದ್ಯಗಳಲ್ಲಿ 708 ರನ್ ಸಿಡಿಸಿದ್ದರು. ಇದರಲ್ಲಿ ಅಜೇಯ 175 ರನ್‌ಗಳ ಇನಿಂಗ್ಸ್ ಕೂಡಾ ಒಂದಾಗಿತ್ತು. ಈ ವೈಯುಕ್ತಿಕ ಗರಿಷ್ಠ ಸ್ಕೋರ್ ದಾಖಲೆ ಐಪಿಎಲ್‌ನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ.
ರಾತ್ರಿವರೆಗೂ ನಡೆದ ಸಮಾರಂಭದಲ್ಲಿ ಹಲವು ಸಂಗೀತ ಕಲಾವಿದರು ಪ್ರದರ್ಶನ ನೀಡಿದರು. ತಾರೆಯರ ನೃತ್ಯ ಪ್ರದರ್ಶನ ಅಭಿಮಾನಿಗಳ ಕಣ್ಮನ ಸೆಳೆಯಿತು. ವಿವಿಧ ಬಣ್ಣಗಳ ಚಿತ್ತಾರ, ನೃತ್ಯಗಳ ನಡುವೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.
ಆರ್‌ಸಿಬಿ ನೂತನ ಜೆರ್ಸಿ ಅನಾವರಣ:
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 2023ನೇ ಸಾಲಿನ ಐಪಿಎಲ್ ಟೂರ್ನಿಗೆ ನೂತನ ಜೆರ್ಸಿಯನ್ನು ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಅನಾವರಣ ಮಾಡಿದರು.
ಹೊಸ ಜೆರ್ಸಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಹೆಚ್ಚಿನ ಬದಲಾವಣೆಯನ್ನು ಮಾಡಿಲ್ಲ. ಆರ್‌ಸಿಬಿ ಫ್ರಾಂಚೈಸಿಯು ಕೆಂಪು ಮತ್ತು ಕಪ್ಪು ಬಣ್ಣವನ್ನು ಜೆರ್ಸಿಯಲ್ಲಿ ಹಾಗೆಯೇ ಉಳಿಸಿಕೊಂಡಿದೆ. ಈ ಬಾರಿ ಸ್ಪಾನ್ಸರ್ ಹೆಸರು ಬದಲಾಗಿದ್ದು, ಕತಾರ್ ಏರ್‌ವೇಸ್, ಆರ್‌ಸಿಬಿ ತಂಡದ ಜೆರ್ಸಿ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ.
ಚೊಚ್ಚಲ ಕಪ್ ಗೆಲ್ಲುವ ನಿರೀಕ್ಷೆಯಲ್ಲಿ ಆರ್‌ಸಿಬಿ:
ಕಳೆದ 15 ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಲೇ ಬಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಇದುವರೆಗೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆರ್‌ಸಿಬಿ ಫ್ರಾಂಚೈಸಿಯು ಮೂರು ಬಾರಿ ಫೈನಲ್ ಪ್ರವೇಶಿಸಿದೆಯಾದರೂ, ಪ್ರಶಸ್ತಿಗೆ ಮುತ್ತಿಡಲು ಇದುವರೆಗೂ ಸಾಧ್ಯವಾಗಿಲ್ಲ. ಇನ್ನು ಕಳೆದ ಮೂರು ಆವೃತ್ತಿಗಳಲ್ಲೂ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿದೆಯಾದರೂ, ನಾಕೌಟ್ ಒತ್ತಡವನ್ನು ನಿಭಾಯಿಸಲು ಇನ್ನೂ ಸಾಧ್ಯವಾಗಿಲ್ಲ. ಈ ಬಾರಿಯಾದರೂ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತಂಡವು ಕಪ್ ಗೆಲ್ಲುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.