5ನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್
ಮದುವೆಗೂ ಮುನ್ನ ಧೋನಿ ಆಶೀರ್ವಾದ ಪಡೆದ ಗಾಯಕ್ವಾಡ್ ಪತ್ನಿ
ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಋತುರಾಜ್ ಗಾಯಕ್ವಾಡ್-ಉತ್ಕರ್ಷ ಪವಾರ್
ಅಹಮದಾಬಾದ್(ಜೂ.03): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದು ಮೂರ್ನಾಲ್ಕು ದಿನಗಳೇ ಕಳೆದಿವೆ. ಹೀಗಿದ್ದೂ ಐಪಿಎಲ್ ಫೈನಲ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಭಾವಿಪತ್ನಿ ಉತ್ಕರ್ಷ ಪವಾರ್, ಸಿಎಸ್‌ಕೆ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಕ್ಯಾಪ್ಟನ್ ಕೂಲ್ ಧೋನಿಗೆ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವಿಡಿಯೋವೊಂದು ತಡವಾಗಿ ಬೆಳಕಿಗೆ ಬಂದಿದ್ದು, ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗುತ್ತಿದೆ.
ಹೌದು, 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಹಾಗೂ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿತ್ತು. ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸುವ ಮೂಲಕ ದಾಖಲೆಯ 5ನೇ ಬಾರಿಗೆ ಐಪಿಎಲ್ ಟ್ರೋಫಿಗೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿತ್ತು. ಚೆನ್ನೈ ಚಾಂಪಿಯನ್ ಪಟ್ಟ ಅಲಂಕರಿಸುತ್ತಿದ್ದಂತೆಯೇ ಗಾಯಕ್ವಾಡ್ ಪತ್ನಿ ಉತ್ಕರ್ಷ ಪವಾರ್ ಮೈದಾನಕ್ಕೆ ಬಂದು ಧೋನಿ ಕಾಲಿಗೆರಗಿ ಆಶೀರ್ವಾದ ಪಡೆದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಹೀಗಿತ್ತು ನೋಡಿ ಆ ಕ್ಷಣ:
Utkarsha (Mrs. Rutu) taking blessing of Dhoni 😍❤️💛. So Cute and Adorable🤌💕💞 pic.twitter.com/o5xH5RHMew
— Sai Vamshi Patlolla (@sai_vamshi21)ಐಪಿಎಲ್ ಇತಿಹಾಸದಲ್ಲೇ ಫೈನಲ್ ಪಂದ್ಯವೊಂದು ಮೂರು ದಿನಗಳ ಕಾಲ ನಡೆಯಿತು. ಮೇ 28ರಂದು ನಿಗದಿಯಾಗಿದ್ದ ಪಂದ್ಯ ಮಳೆಯಿಂದಾಗಿ ಫೈನಲ್ ಪಂದ್ಯವನ್ನು ಮೀಸಲು ದಿನವಾದ 29ಕ್ಕೆ ಮುಂದೂಡಲಾಯಿತು. ಇನ್ನು ಮೀಸಲು ದಿನದಲ್ಲಿ ಮೊದಲ ಇನಿಂಗ್ಸ್ ಮುಕ್ತಾಯದ ಬಳಿಕ ಮತ್ತೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಹೀಗಾಗಿ ತಡರಾತ್ರಿಯವರೆಗೂ ಪಂದ್ಯಾಟವು ನಡೆಯಿತು.
ಮೈದಾನದಲ್ಲೇ ಜಡೇಜಾ ಕಾಲಿಗೆ ನಮಸ್ಕರಿಸಿದ ಪತ್ನಿ, ಶಾಸಕಿ ರಿವಾಬಾ ಜಡೇಜಾ!
ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಸಾಯಿ ಸುದರ್ಶನ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್ ಬಾರಿಸಿತ್ತು. ಇನ್ನು ಗುರಿ ಬೆನ್ನತ್ತಿದ ಚೆನ್ನೈಗೆ ಮಳೆ ಅಡ್ಡಿಪಡಿಸಿದ್ದರಿಂದ 15 ಓವರ್‌ಗಳಲ್ಲಿ ಧೋನಿ ಪಡೆಗೆ ಡೆಕ್ವರ್ತ್ ಲೂಯಿಸ್ ನಿಯಮದನ್ವಯ 171 ರನ್‌ಗಳ ಗುರಿ ನೀಡಲಾಗಿತ್ತು. ಚೆನ್ನೈ ಬ್ಯಾಟರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ 5 ವಿಕೆಟ್‌ಗಳ ರೋಚಕ ಜಯ ಸಾಧಿಸುವ ಮೂಲಕ, ಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ ದಾಖಲೆ ಸರಿಗಟ್ಟುವಲ್ಲಿ ಧೋನಿ ಪಡೆ ಯಶಸ್ವಿಯಾಗಿದೆ.
ಈ ಮೊದಲು ಫೈನಲ್ ಪಂದ್ಯದ ಕೊನೆಯ ಎರಡು ಎಸೆತಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗೆಲ್ಲಲು 10 ರನ್ ಅಗತ್ಯವಿತ್ತು. ಈ ವೇಳೆ ಮೋಹಿತ್ ಶರ್ಮಾ ಬೌಲಿಂಗ್‌ನಲ್ಲಿ ರವೀಂದ್ರ ಜಡೇಜಾ ಒಂದು ಸಿಕ್ಸರ್ ಹಾಗೂ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಪಂದ್ಯ ಮುಗಿಯುತ್ತಿದ್ದಂತೆಯೇ ರವೀಂದ್ರ ಜಡೇಜಾ ಪತ್ನಿ ಹಾಗೂ ಗುಜರಾತ್‌ನ ಬಿಜೆಪಿ ಶಾಸಕಿ ರಿವಾಬಾ ಜಡೇಜಾ, ತಮ್ಮ ಪತಿಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದು, ಆನಂತರ ಹಗ್ ಮಾಡಿದ್ದರು.
ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ್ವಾಡ್:
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರತಿಭಾನ್ವಿತ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಹಾಗೂ ಮಹಾರಾಷ್ಟ್ರ ಮಹಿಳಾ ಕ್ರಿಕೆಟ್ ಆಟಗಾರ್ತಿ ಉತ್ಕರ್ಷ ಪವಾರ್ ಇಂದು (ಜೂನ್ 03) ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.