
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅದ್ಭುತ ಪ್ರದರ್ಶನ ನೀಡುತ್ತಾ ಸಾಗುತ್ತಿದೆ. ಇದೀಗ ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ. ಇದರ ಜತೆಗೆ ಐಪಿಎಲ್ ಇತಿಹಾಸದಲ್ಲಿ ಯಾವ ತಂಡವೂ ಮಾಡದ ಅಪರೂಪದ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ.
ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಸವಾಲಿನ ಮೊತ್ತ ಕಲೆಹಾಕಿತು. ಗೆಲ್ಲಲು 163 ರನ್‌ಗಳ ಗುರಿ ಪಡೆದ ಆರ್‌ಸಿಬಿ ತಂಡವು 26 ರನ್ ಗಳಿಸುವಷ್ಟರಲ್ಲಿ ಜೆಕೊಬ್ ಬೆಥೆಲ್, ದೇವದತ್ ಪಡಿಕ್ಕಲ್ ಹಾಗೂ ನಾಯಕ ರಜತ್ ಪಾಟೀದಾರ್ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಆದರೆ ನಾಲ್ಕನೇ ವಿಕೆಟ್‌ಗೆ ಜತೆಯಾದ ವಿರಾಟ್ ಕೊಹ್ಲಿ ಹಾಗೂ ಕೃನಾಲ್ ಪಾಂಡ್ಯ 119 ರನ್‌ಗಳ ಜತೆಯಾಟವಾಡುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಆರ್‌ಸಿಬಿ ತಂಡವು ತವರಿನಾಚೆಯೇ ದಾಖಲೆಯ 6ನೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ತವರಿನಾಚೆಯೇ ಸತತ 6 ಪಂದ್ಯ ಗೆದ್ದ ಮೊದಲ ತಂಡ ಎನ್ನುವ ಅಪರೂಪದ ದಾಖಲೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಾತ್ರವಾಗಿದೆ.
ರಾಹುಲ್ ಎದುರೇ ಕಾಂತಾರ ಸ್ಟೈಲ್ ರಿಕ್ರಿಯೇಟ್ ಮಾಡಿದ ವಿರಾಟ್ ಕೊಹ್ಲಿ! ವಿಡಿಯೋ ವೈರಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತವರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗೆಲುವಿಗಾಗಿ ಕೊಂಚ ಪರದಾಡಿದೆ. ತವರಿನಲ್ಲಿ ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಆರ್‌ಸಿಬಿ ತಂಡವು, ರಾಜಸ್ಥಾನ ರಾಯಲ್ಸ್ ಎದುರು ಗೆಲ್ಲುವ ಮೂಲಕ ತವರಿನಲ್ಲೂ ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಎದುರು ಆರ್‌ಸಿಬಿ 6 ವಿಕೆಟ್ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಒಟ್ಟಾರೆ 7 ಜಯದೊಂದಿಗೆ 14 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.
ಆರ್‌ಸಿಬಿ ತಂಡದ ಜವಾಬ್ದಾರಿಯುತ ಆಟ ಪ್ರದರ್ಶಿಸಿದ ಕೃನಾಲ್ ಪಾಂಡ್ಯ ಅಜೇಯ 73 ರನ್ ಸಿಡಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಇನ್ನು ಮತ್ತೊಂದು ತುದಿಯಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಕೃನಾಲ್ ಪಾಂಡ್ಯಗೆ ಉತ್ತಮ ಸಾಥ್ ನೀಡಿದರು.
ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸುವಾಗ ಆರ್‌ಸಿಬಿಗೆ ಗೆಲ್ಲಲು ಕೇವಲ 18 ರನ್‌ಗಳ ಅಗತ್ಯವಿತ್ತು. ಈ ವೇಳೆ ಕ್ರೀಸ್‌ಗಿಳಿದ ಟಿಮ್ ಡೇವಿಡ್ ಕೇವಲ 5 ಎಸೆತಗಳಲ್ಲಿ ಅಜೇಯ 19 ರನ್ ಸಿಡಿಸುವ ಮೂಲಕ ಇನ್ನೂ 9 ಎಸೆತಗಳು ಬಾಕಿ ಇರುವಂತೆಯೇ ಆರ್‌ಸಿಬಿ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.
ಡೆಲ್ಲಿಯನ್ನು ಗಿಲ್ಲಿಯಂತೆ ಹೊಡೆದ ಆರ್‌ಸಿಬಿ; ಬೆಂಗಳೂರು ಈಗ ಟೇಬಲ್ ಟಾಪರ್!
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಲಿಳಿದ ಡೆಲ್ಲಿ ತಂಡವು ರನ್ ಗಳಿಸಲು ಪರದಾಡಿತು. ಡೆಲ್ಲಿ ಪರ ಕೆ ಎಲ್ ರಾಹುಲ್ 41 ರನ್ ಬಾರಿಸಿದ್ದೇ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು. ಆರ್‌ಸಿಬಿ ಪರ ಶಿಸ್ತುಬದ್ದ ದಾಳಿ ನಡೆಸಿದ ಭುವನೇಶ್ವರ್ ಕುಮಾರ್ 3 ಬಲಿ ಪಡೆದರೆ, ಜೋಶ್ ಹೇಜಲ್‌ವುಡ್ 2 ಕೃನಾಲ್ ಪಾಂಡ್ಯ ಹಾಗೂ ಯಶ್ ದಯಾಳ್ ತಲಾ ಒಂದೊಂದು ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.
ಟೇಬಲ್ ಟಾಪರ್ ಆರ್‌ಸಿಬಿ ಬಳಿ ಆರೆಂಜ್& ಪರ್ಪಲ್ ಕ್ಯಾಪ್:
ಆರ್‌ಸಿಬಿ ತಂಡವು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸಾಂಘಿಕ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದೆ. ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದರ ಜತೆಗೆ ಪರ್ಪಲ್ ಕ್ಯಾಪ್ ಹಾಗೂ ಆರೆಂಜ್ ಕ್ಯಾಪ್ ಕೂಡಾ ಆರ್‌ಸಿಬಿ ಆಟಗಾರರ ಬಳಿಯಿದೆ. 10 ಪಂದ್ಯಗಳಲ್ಲಿ 443 ರನ್ ಸಿಡಿಸಿದ ವಿರಾಟ್ ಕೊಹ್ಲಿ, ಇದೀಗ ಸೂರ್ಯಕುಮಾರ್ ಯಾದವ್ ಹಿಂದಿಕ್ಕಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ ಜೋಶ್ ಹೇಜಲ್‌ವುಡ್ 18 ವಿಕೆಟ್ ಕಬಳಿಸುವ ಮೂಲಕ ಪ್ರಸಿದ್ಧ್ ಕೃಷ್ಣ ಹಿಂದಿಕ್ಕಿ ಪರ್ಪಲ್ ಕ್ಯಾಪ್ ಮುಡಿಗೇರಿಸಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.