
ಬೆಂಗಳೂರು: ತಮ್ಮ ನಿವೃತ್ತಿ ಬಗ್ಗೆ ಹರಿದಾಡುತ್ತಿರುವ ವದಂತಿ ಬಗ್ಗೆ ಭಾರತದ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೌನ ಮುರಿದಿದ್ದು, ಸದ್ಯಕ್ಕೆ ನಿವೃತ್ತಿ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಇದರ ಜತೆಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಕನಸನ್ನು ವಿರಾಟ್ ಕೊಹ್ಲಿ ವ್ಯಕ್ತಪಡಿಸಿದ್ದಾರೆ.
ನಗರದ ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ನಡೆದ ಆರ್‌ಸಿಬಿ ಇನ್ನೋವೇಷನ್ ಲ್ಯಾಬ್ ‘ಇಂಡಿಯನ್ ಸ್ಪೋರ್ಟ್ಸ್ ಸಮ್ಮಿಟ್’ನಲ್ಲಿ ಪಾಲ್ಗೊಂಡು ಕೊಹ್ಲಿ ಮಾತನಾಡಿದರು. ಇಂಗ್ಲೆಂಡ್ ಮಾಜಿ ಆಟಗಾರ್ತಿ ಇಶಾ ಗುಹಾ ಜೊತೆಗೆ ಸುಮಾರು 1 ಗಂಟೆ ಕಾಲ ನಡೆದ ಸಂವಾದದಲ್ಲಿ ತಮ್ಮ ವೃತ್ತಿ ಬದುಕು, ಭವಿಷ್ಯ, ಭಾರತೀಯ ಕ್ರೀಡಾ ವ್ಯವಸ್ಥೆ ಬಗ್ಗೆ ಮುಕ್ತವಾಗಿ ಅನಿಸಿಕೆ ಹಂಚಿಕೊಂಡರು.
‘ಯಾರೂ ತಳಮಳಗೊಳ್ಳುವ ಅಗತ್ಯವಿಲ್ಲ. ನಿವೃತ್ತಿ ಬಗ್ಗೆ ಸದ್ಯಕ್ಕೆ ಯಾವುದೇ ಘೋಷಣೆ ಮಾಡುವುದಿಲ್ಲ. ಸಾಮರ್ಥ್ಯವಿರುವವರೆಗೂ ನಾನು ಆಡುತ್ತೇನೆ. ಕ್ರಿಕೆಟ್ ಬದುಕನ್ನು ಆನಂದಿಸುತ್ತಿದ್ದೇನೆ. ಆದರೆ ಯಾವುದೇ ಸಾಧನೆಗಾಗಿ ನಾನು ಆಡುತ್ತಿಲ್ಲ’ ಎಂದಿದ್ದಾರೆ.
ಆದರೆ 2-3 ವರ್ಷಗಳಲ್ಲಿ ನಿವೃತ್ತಿಯಾಗುವ ಬಗ್ಗೆ ಕೊಹ್ಲಿ ಮುನ್ಸೂಚನೆ ನೀಡಿದ್ದಾರೆ. ‘ಹೊರಗಿನ ಒತ್ತಡದ ಬಗ್ಗೆ ಯೋಚಿಸಲು ಆರಂಭಿಸಿದರೆ ನಮ್ಮ ಹೊರೆ ಜಾಸ್ತಿಯಾಗುತ್ತದೆ. ಆಸ್ಟ್ರೇಲಿಯಾ ಸರಣಿಯಲ್ಲಿ ಇದರ ಅನುಭವವಾಗಿದೆ. ಮೊದಲ ಟೆಸ್ಟ್‌ನಲ್ಲಿ ಉತ್ತಮ ರನ್ ಗಳಿಸಿದ್ದೆ. ಬಳಿಕ ಸಾಧ್ಯವಾಗಲಿಲ್ಲ. ಆದರೆ ಮುಂದಿನ 4 ವರ್ಷಗಳಲ್ಲಿ ಮತ್ತೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿಲ್ಲ. ಈ ಹಿಂದಿನ ಪ್ರವಾಸಗಳ ಬಗ್ಗೆ ಖುಷಿಯಿದೆ’ ಎಂದು ಕೊಹ್ಲಿ ಹೇಳಿದ್ದಾರೆ.
ಇದೇ ವೇಳೆ ಕೊಹ್ಲಿ ಬಳಿ ನಿವೃತ್ತಿಯ ನಂತರ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಕೊಹ್ಲಿ, ‘ನಿವೃತ್ತಿ ನಂತರ ಏನು ಮಾಡಬೇಕು ಎಂಬುದನ್ನು ಸದ್ಯಕ್ಕೆ ಯೋಚಿಸಿಲ್ಲ. ಆದರೆ ಸಾಧ್ಯವಾದಷ್ಟು ನಾನು ದೇಶ ಸುತ್ತಲು ಚಿಂತಿಸಿದ್ದೇನೆ’ ಎಂದಿದ್ದಾರೆ.
ಇದನ್ನೂ ಓದಿ: ವಿರಾಟ್ ಕೊಹ್ಲಿಯ ಐಪಿಎಲ್ 973 ರನ್ ದಾಖಲೆ ಈ ಐವರಲ್ಲಿ ಯಾರು ಮುರಿಯಬಹುದು?
ಒಲಿಂಪಿಕ್ಸ್ ಚಿನ್ನದ ಪದಕ ಗೆಲ್ಲುವ ಕನಸು!
2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆ ಬಗ್ಗೆ ಮಾತನಾಡಿರುವ ಕೊಹ್ಲಿ, ಇದರ ಹಿಂದೆ ಐಪಿಎಲ್ ಪಾತ್ರ ದೊಡ್ಡದು ಎಂದಿದ್ದಾರೆ. ಇದೇ ವೇಳೆ ನಿವೃತ್ತಿ ಹಿಂಪಡೆದು ಒಲಿಂಪಿಕ್ಸ್ ಟಿ20 ಕ್ರಿಕೆಟ್‌ನಲ್ಲಿ ಆಡುತ್ತೀರಾ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಕೊಹ್ಲಿ, ‘ಅದರ ಬಗ್ಗೆ ಗೊತ್ತಿಲ್ಲ. ಆದರೆ ಒಲಿಂಪಿಕ್ಸ್ ಚಿನ್ನದ ಪದಕದ ಒಂದು ಪಂದ್ಯಕ್ಕಾಗಿ ಆಡುವ ಅವಕಾಶ ಸಿಕ್ಕರೆ, ಪದಕ ಪಡೆದು ಮನೆಗೆ ಮರಳುತ್ತೇನೆ’ ಎಂದರು.
ಇದನ್ನೂ ಓದಿ: ಕೊಹ್ಲಿಯಿಂದ ಗೇಲ್‌ವರೆಗೆ: ಐಪಿಎಲ್ ಇತಿಹಾಸದ ಟಾಪ್ 6 ಅತ್ಯುತ್ತಮ ಬ್ಯಾಟಿಂಗ್ ಇನ್ನಿಂಗ್ಸ್‌ಗಳಿವು!
ಮಹಿಳಾ ಕ್ರಿಕೆಟ್‌ನ ದಿಕ್ಕು ಬದಲಾಗಿದೆ
ವಿಶ್ವದೆಲ್ಲೆಡೆ ಮಹಿಳಾ ಕ್ರಿಕೆಟ್ ಬಗೆಗಿನ ಮನೋಭಾವ ಬದಲಾಗಿದೆ ಎಂದು ಕೊಹ್ಲಿ ಹೇಳಿದರು. ‘ಡಬ್ಲ್ಯುಪಿಎಲ್‌ನಿಂದಾಗಿ ಜಾಗತಿಕ ಮಟ್ಟದಲ್ಲಿ ಮಹಿಳಾ ಕ್ರಿಕೆಟ್ ಅನ್ನು ನೋಡುವ ದೃಷ್ಟಿ ಬದಲಾಗಿದೆ. ಕಳೆದ 6-7 ವರ್ಷಗಳ ಬೆಳವಣಿಗೆ ಗಮನಿಸಿದರೆ, ಬರೀ ಕ್ರಿಕೆಟ್ ಮಾತ್ರವಲ್ಲದೇ ಮಹಿಳಾ ಕ್ರೀಡೆ ಉನ್ನತ ಮಟ್ಟದಲ್ಲಿದೆ’ ಎಂದು ಶ್ಲಾಘಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.