ನ್ಯೂಜಿಲೆಂಡ್ ಎದುರು ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ; ಶಾಹಿದ್ ಅಫ್ರಿದಿ ಸಿಕ್ಸರ್ ದಾಖಲೆ ನುಚ್ಚುನೂರು..!

Published : Nov 07, 2026, 03:12 PM IST
Rohit Sharma

ಸಾರಾಂಶ

ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಎರಡು ಸಿಕ್ಸರ್ ಸಿಡಿಸುವ ಮೂಲಕ ಶಾಹಿದ್ ಅಫ್ರಿದಿ ಅವರ ದಾಖಲೆ ಮುರಿದರು. ಇದರೊಂದಿಗೆ ಕಿವೀಸ್ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೆಲ್ಲಿಂಗ್ಟನ್(ನ.07): ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ತಮ್ಮದಾಗಿಸಿಕೊಂಡಿದ್ದಾರೆ. ಶನಿವಾರ (ನವೆಂಬರ್ 7) ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಎರಡು ಸಿಕ್ಸರ್ ಸಿಡಿಸುವ ಮೂಲಕ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರ ದಾಖಲೆಯನ್ನು ರೋಹಿತ್ ಹಿಂದಿಕ್ಕಿದ್ದಾರೆ.

ಮುಂಬೈ ಮೂಲದ 39 ವರ್ಷದ ಬಲಗೈ ಬ್ಯಾಟರ್ ರೋಹಿತ್ ಶರ್ಮಾ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಅಫ್ರಿದಿ ದಾಖಲಿಸಿದ್ದ 50 ಸಿಕ್ಸರ್‌ಗಳ ದಾಖಲೆಯನ್ನು ಮುರಿಯಲು ಎರಡು ಸಿಕ್ಸರ್‌ಗಳ ಅಗತ್ಯವಿತ್ತು. ವೆಲ್ಲಿಂಗ್ಟನ್‌ನ ಹೆನ್ರಿ ಸ್ಟೇಡಿಯಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ 135 ರನ್‌ಗಳ ಗುರಿ ಬೆನ್ನಟ್ಟುವ ವೇಳೆ ರೋಹಿತ್ ಈ ಸಾಧನೆ ಮಾಡಿದ್ದಾರೆ.

ಈ ಪಂದ್ಯದಲ್ಲಿ ರೋಹಿತ್ 28 ಎಸೆತಗಳನ್ನು ಎದುರಿಸಿ 23 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌ಗಳು ಸೇರಿದ್ದವು. ಕೈಲ್ ಜೇಮಿಸನ್ ಎಸೆದ ಏಳನೇ ಓವರ್‌ನ ಎರಡನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ರೋಹಿತ್ ದಾಖಲೆ ಮುರಿಯುವ ಅಭಿಯಾನ ಆರಂಭಿಸಿದರು. ಬಳಿಕ ಇದೇ ಜೇಮಿಸನ್ ಬೌಲಿಂಗ್‌ನ ಒಂಬತ್ತನೇ ಓವರ್‌ನ ಎರಡನೇ ಎಸೆತದಲ್ಲೂ ಮತ್ತೊಂದು ಸಿಕ್ಸರ್ ಸಿಡಿಸಿದರು.

34 ಇನಿಂಗ್ಸ್‌ಗಳಲ್ಲಿ 51 ಸಿಕ್ಸರ್!

ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸಿಡಿಸಿದ ಈ ಎರಡು ಸಿಕ್ಸರ್‌ಗಳೊಂದಿಗೆ ರೋಹಿತ್ ಅವರ ಖಾತೆಯಲ್ಲಿ ಒಟ್ಟು 51 ಸಿಕ್ಸರ್‌ಗಳು ಸೇರಿವೆ. ನ್ಯೂಜಿಲೆಂಡ್ ವಿರುದ್ಧ ಆಡಿರುವ 36 ಏಕದಿನ ಪಂದ್ಯಗಳ 34 ಇನಿಂಗ್ಸ್‌ಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಪಾಕಿಸ್ತಾನದ ಶಾಹಿದ್ ಅಫ್ರಿದಿ ಈ ದಾಖಲೆಯ ಒಡೆಯರಾಗಿದ್ದರು. ನ್ಯೂಜಿಲೆಂಡ್ ವಿರುದ್ಧ 38 ಏಕದಿನ ಪಂದ್ಯಗಳನ್ನು ಆಡಿದ್ದ ಅಫ್ರಿದಿ, 35 ಇನಿಂಗ್ಸ್‌ಗಳಲ್ಲಿ 50 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇದೀಗ ರೋಹಿತ್ ಈ ದಾಖಲೆಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ಕ್ರಿಸ್ ಗೇಲ್, ಜಯಸೂರ್ಯ ನಂತರದ ಸ್ಥಾನದಲ್ಲಿ

ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮತ್ತು ಶಾಹಿದ್ ಅಫ್ರಿದಿ ನಂತರ ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಹಾಗೂ ಶ್ರೀಲಂಕಾದ ಸನತ್ ಜಯಸೂರ್ಯ ಇದ್ದಾರೆ. ಕ್ರಿಸ್ ಗೇಲ್ ತಮ್ಮ ಏಕದಿನ ಕ್ರಿಕೆಟ್ ವೃತ್ತಿಜೀವನದಲ್ಲಿ ನ್ಯೂಜಿಲೆಂಡ್ ವಿರುದ್ಧ 45 ಸಿಕ್ಸರ್‌ಗಳನ್ನು ಸಿಡಿಸಿದ್ದರೆ, ಜಯಸೂರ್ಯ 41 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದೀಗ 51 ಸಿಕ್ಸರ್‌ಗಳೊಂದಿಗೆ ರೋಹಿತ್ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಆರು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾಗಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಎರಡು ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಹೆಸರಿನಲ್ಲಿ ಮಹತ್ವದ ದಾಖಲೆಯೊಂದನ್ನು ಬರೆದಿದ್ದಾರೆ.

ರೋಚಕ ಪಂದ್ಯಕ್ಕೀಗ ಮಳೆ ಅಡ್ಡಿ:

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು ಟೀಂ ಇಂಡಿಯಾ ಮಾರಕ ದಾಳಿಗೆ ತತ್ತರಿಸಿ 41 ಓವರ್‌ಗಳಲ್ಲಿ ಕೇವಲ 134 ರನ್‌ ಗಳಿಸಿ ಸರ್ವಪತನ ಕಂಡಿತು. ಇನ್ನು ಗುರಿ ಬೆನ್ನತ್ತಿದ ಭಾರತ ಕೂಡಾ ರನ್ ಗಳಿಸಲು ಪರದಾಡುತ್ತಿದ್ದು, 26 ಓವರ್ ಅಂತ್ಯದ ವೇಳೆಗೆ ಭಾರತ 7 ವಿಕೆಟ್ ಕಳೆದುಕೊಂಡು 113 ರನ್ ಗಳಿಸಿದೆ. ಕನ್ನಡಿಗ ಕೆ ಎಲ್ ರಾಹುಲ್ 26 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆದರೆ ಈ ವೇಳೆ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು, ಭಾರತಕ್ಕೆ ಇನ್ನೂ ಗೆಲ್ಲಲು 22 ರನ್‌ಗಳ ಅಗತ್ಯವಿದೆ. ಕಿವೀಸ್ ಈ ಪಂದ್ಯ ಗೆಲ್ಲಲು ಕೇವಲ 3 ವಿಕೆಟ್ ಬೇಕಿದೆ. ಸದ್ಯ ಮಳೆಯಿಂದ ಪಂದ್ಯ ಮುಂದುವರೆಸಲು ಸಾಧ್ಯವಾಗದೇ ಇದ್ದರೇ ಭಾರತ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ 4 ರನ್‌ ಮುನ್ನಡೆಯಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

16 ಬೌಂಡರಿ, 2 ಸಿಕ್ಸರ್: ಕಿವೀಸ್‌ ನಾಡಲ್ಲಿ ಸತತ ಎರಡನೇ ಶತಕ ಚಚ್ಚಿದ ಯಶಸ್ವಿ ಜೈಸ್ವಾಲ್..! ಟೀಕಾಕಾರರ ಬಾಯಿ ಬಂದ್
'ಹಿಂದಿ ಬಾರದ ಕೇರಳಿಗ, ಮಲಯಾಳಂ ಬಾರದ ಯುಪಿ ಪ್ಲೇಯರ್‌' ಭಾರತದ ವಿವಿಧತೆಯಲ್ಲಿ ಏಕತೆಗೆ ಕ್ರಿಕೆಟ್‌ಗಿಂತ ದೊಡ್ಡ ಉದಾಹರಣೆ ಇಲ್ಲ ಎಂದಿದ್ದ ದ್ರಾವಿಡ್‌!