'ಹಿಂದಿ ಬಾರದ ಕೇರಳಿಗ, ಮಲಯಾಳಂ ಬಾರದ ಯುಪಿ ಪ್ಲೇಯರ್‌' ಭಾರತದ ವಿವಿಧತೆಯಲ್ಲಿ ಏಕತೆಗೆ ಕ್ರಿಕೆಟ್‌ಗಿಂತ ದೊಡ್ಡ ಉದಾಹರಣೆ ಇಲ್ಲ ಎಂದಿದ್ದ ದ್ರಾವಿಡ್‌!

Published : Nov 07, 2026, 12:00 PM IST
Rahul Dravid and Under 19 Players

ಸಾರಾಂಶ

2011ರ ಬ್ರಾಡ್ಮನ್ ಉಪನ್ಯಾಸದಲ್ಲಿ ರಾಹುಲ್ ದ್ರಾವಿಡ್ ಅವರು ತಮ್ಮ ಅಂಡರ್-19 ದಿನಗಳ ಸ್ವಾರಸ್ಯಕರ ಘಟನೆಯನ್ನು ಹಂಚಿಕೊಂಡಿದ್ದರು. ಪರಸ್ಪರ ಭಾಷೆ ಬಾರದ ಇಬ್ಬರು ಬೌಲರ್‌ಗಳು ಕ್ರೀಸ್‌ನಲ್ಲಿ ಒಂದಾಗಿ 100 ರನ್‌ಗಳ ಜೊತೆಯಾಟವಾಡಿದ್ದರು.

ಬೆಂಗಳೂರು (ನ.6): ಭಾರತೀಯ ಕ್ರಿಕೆಟ್‌ನ 'ದಿ ವಾಲ್' ಎಂದೇ ಖ್ಯಾತರಾಗಿರುವ ಮಾಜಿ ನಾಯಕ ರಾಹುಲ್ ದ್ರಾವಿಡ್ (Rahul Dravid) ಅವರು 2011 ರ ಪ್ರತಿಷ್ಠಿತ 'ಬ್ರಾಡ್ಮನ್‌ ಉಪನ್ಯಾಸದಲ್ಲಿ' (Bradman Oration) ಹಂಚಿಕೊಂಡಿದ್ದ ತಮ್ಮ ಅಂಡರ್-19 ದಿನಗಳ ನೆನಪು ಇಂದಿಗೂ ಭಾರತೀಯ ಕ್ರಿಕೆಟ್‌ನ ನೈಜ ಆತ್ಮವನ್ನು ಪ್ರತಿಫಲಿಸುತ್ತದೆ. ಪರಸ್ಪರ ಭಾಷೆಯೇ ಬಾರದ ಇಬ್ಬರು ಬೌಲರ್‌ಗಳು ಕ್ರೀಸಿನಲ್ಲಿ ಒಂದಾಗಿ ಶತಕದ ಜತೆಯಾಟವಾಡಿದ ಘಟನೆಯು 'ವಿವಿಧತೆಯಲ್ಲಿ ಏಕತೆ'ಯ ಭಾರತದ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿತ್ತು.

2011 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬ್ರಾಡ್ಮನ್‌ ಉಪನ್ಯಾಸದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ್ದ ರಾಹುಲ್ ದ್ರಾವಿಡ್, ತಮ್ಮ ಅಂಡರ್-19 ದಿನಗಳಲ್ಲಿ ನಡೆದ ಒಂದು ಸ್ವಾರಸ್ಯಕರ ಪ್ರಸಂಗವನ್ನು ನೆನಪಿಸಿಕೊಂಡಿದ್ದರು. ಆ ಕಥೆ ಉತ್ತರ ಪ್ರದೇಶದ ಧರ್ಮೇಂದ್ರ ಮಿಶ್ರಾ (Dharmendra Mishra) ಹಾಗೂ ಕೇರಳದ ಎಂ. ಸುರೇಶ್ ಕುಮಾರ್ (M. Suresh Kumar) ಎಂಬ ಇಬ್ಬರು ಕಿರಿಯ ಬೌಲರ್‌ಗಳ ಸುತ್ತ ಹೆಣೆಯಲ್ಪಟ್ಟಿತ್ತು. ಧರ್ಮೇಂದ್ರ ಮಿಶ್ರಾಗೆ ಕೇವಲ ಶುದ್ಧ ಹಿಂದಿ ಮಾತ್ರ ಮಾತನಾಡಲು ಬರುತ್ತಿತ್ತು; ಇತ್ತ ಕೇರಳದ ಸುರೇಶ್ ಕುಮಾರ್‌ಗೆ ಮಲಯಾಳಂ ಬಿಟ್ಟರೆ ಬೇರೆ ಭಾಷೆಯೇ ಬರುತ್ತಿರಲಿಲ್ಲ.

ಡ್ರೆಸ್ಸಿಂಗ್‌ ರೂಮ್‌ನಲ್ಲಿತ್ತು ಕುತೂಹಲ

ನ್ಯೂಜಿಲೆಂಡ್ ಜೂನಿಯರ್ ತಂಡದ ವಿರುದ್ಧ ನಡೆದ ಪಂದ್ಯವೊಂದರಲ್ಲಿ ಈ ಇಬ್ಬರೂ ಆಟಗಾರರು ಬ್ಯಾಟಿಂಗ್ ಮಾಡುವಾಗ ಕ್ರೀಸ್‌ನಲ್ಲಿ ಒಂದಾಗಿದ್ದರು. ಪರಸ್ಪರ ಒಬ್ಬರ ಭಾಷೆ ಇನ್ನೊಬ್ಬರಿಗೆ ಕನಿಷ್ಠ ಮಟ್ಟದಲ್ಲೂ ಅರ್ಥವಾಗದ ಈ ಇಬ್ಬರು ಆಟಗಾರರು ಕ್ರೀಸ್‌ನಲ್ಲಿ ರನ್ ಓಡುವಾಗ ಹಾಗೂ ಸಂವಹನ ನಡೆಸುವಾಗ ಹೇಗೆ ಕಮ್ಯುನಿಕೇಟ್ ಮಾಡುತ್ತಾರೆ? ಇವರಿಂದ ಹೇಗೆ ಜೊತೆಯಾದ ಸಾಧ್ಯ ಎಂಬ ಕುತೂಹಲ ಇಡೀ ಭಾರತೀಯ ಡ್ರೆಸ್ಸಿಂಗ್ ರೂಮ್‌ನ ಆಟಗಾರರಲ್ಲಿ ಮನೆಮಾಡಿತ್ತು. ಆದರೆ, ಎಲ್ಲಾ ಅಡೆತಡೆಗಳು ಮತ್ತು ಭಾಷೆಯ ಗಡಿಗಳನ್ನು ಮೀರಿ ನಿಂತ ಧರ್ಮೇಂದ್ರ ಮಿಶ್ರಾ ಮತ್ತು ಸುರೇಶ್ ಕುಮಾರ್ ಜೋಡಿ, ನ್ಯೂಜಿಲೆಂಡ್ ವಿರುದ್ಧ ಬರೋಬ್ಬರಿ 100 ರನ್‌ಗಳ ಭರ್ಜರಿ ಜತೆಯಾಟ (100-run partnership)ವಾಡಿ ಎಲ್ಲರನ್ನೂ ಬೆರಗುಗೊಳಿಸಿತ್ತು!

ಅವರ ಜಂಟಿ ಭಾಷೆ ಹಿಂದಿಯೂ ಅಲ್ಲ, ಮಲಯಾಳವೂ ಅಲ್ಲ... ಅದು 'ಕ್ರಿಕೆಟ್' ಎಂದಿದ್ದ ದ್ರಾವಿಡ್‌

ಈ ಕಥೆಯನ್ನು ದ್ರಾವಿಡ್ ಅತ್ಯಂತ ಭಾವನಾತ್ಮಕವಾಗಿ ಉಲ್ಲೇಖಿಸುತ್ತಾ, "ಅಂದು ಮೈದಾನದಲ್ಲಿ ಮಿಶ್ರಾ ಮತ್ತು ಸುರೇಶ್ ಕುಮಾರ್ ಮಾತನಾಡಿದ್ದು ಹಿಂದಿಯಲ್ಲ ಅಥವಾ ಮಲಯಾಳಂ ಕೂಡ ಅಲ್ಲ. ಅವರ ನಡುವಿನ ಮಾತುಕತೆ ಮತ್ತು ಸಂವಹನದ ಏಕೈಕ ಭಾಷೆಯಾಗಿದ್ದುದು 'ಕ್ರಿಕೆಟ್'! ಕ್ರಿಕೆಟ್ ಎಂಬ ಕ್ರೀಡಾ ಶಕ್ತಿಯು ಭಾಷಾ ಗಡಿಗಳನ್ನು ಸುಲಭವಾಗಿ ಮೆಟ್ಟಿ ನಿಂತು, ಮಹತ್ತರವಾದ ತಂಡದ ಗೆಲುವಿಗೆ ದಾರಿಯಾಯಿತು" ಎಂದು ಬಣ್ಣಿಸಿದ್ದರು.

ಭಾರತೀಯ ಕ್ರಿಕೆಟ್‌ನ ನಿಜವಾದ ಸೌಂದರ್ಯ ಮತ್ತು ಶಕ್ತಿಯು ಕೋಟ್ಯಂತರ ರೂಪಾಯಿಗಳ ಬಿಸಿನೆಸ್ ಡೀಲ್‌ಗಳು, ಮಾಧ್ಯಮ ಹಕ್ಕುಗಳ ಹರಾಜು ಅಥವಾ ಭಾರಿ ಪ್ರಚಾರದ ಹೆಡ್‌ಲೈನ್‌ಗಳಲ್ಲಿ ಇಲ್ಲ. ಬದಲಿಗೆ, ದೇಶದ ಮೂಲೆ ಮೂಲೆಗಳಿಂದ ಬರುವ ಆಟಗಾರರ ನಡುವೆ ಬೆಳೆಯುವ ಇಂತಹ ಅಪೂರ್ವ ಬಂಧದಲ್ಲಿದೆ ಎಂಬುದನ್ನು ದ್ರಾವಿಡ್ ಜಗತ್ತಿಗೆ ಸಾರಿದ್ದರು. ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಭಾರತ ದೇಶವು ಹೇಗೆ ದಿನದಿಂದ ದಿನಕ್ಕೆ ಬದಲಾಗುತ್ತಾ, ವಿಕಸನಗೊಳ್ಳುತ್ತಾ ಸಾಗುತ್ತಿದೆಯೋ, ಅದೇ ರೀತಿಯಲ್ಲಿ ಭಾರತದ ಅತ್ಯಂತ ಪ್ರೀತಿಯ ಕ್ರಿಕೆಟ್ ಕ್ರೀಡೆಯೂ ರೂಪಾಂತರಗೊಳ್ಳುತ್ತಿದೆ.

ಭಾರತದಲ್ಲಿ ಕ್ರಿಕೆಟ್ ಎಂಬುದು ಕೇವಲ 22 ಯಾರ್ಡ್‌ಗ:ಳ ಆಟವಲ್ಲ. ಅದು ಈ ವಿಶಾಲ ದೇಶದ 'ವಿವಿಧತೆಯಲ್ಲಿ ಏಕತೆ'ಯನ್ನು ಜಗತ್ತಿಗೆ ತೋರಿಸುವ ಕನ್ನಡಿಯಾಗಿದೆ. ಆಟಗಾರರು ದೇಶದ ಯಾವುದೇ ಮೂಲೆಯಿಂದ ಬಂದಿರಲಿ, ಯಾವುದೇ ಭಾಷೆ ಮಾತನಾಡಲಿ, ಧರ್ಮೇಂದ್ರ ಮಿಶ್ರಾ ಮತ್ತು ಸುರೇಶ್ ಕುಮಾರ್ ಜೋಡಿಯಂತೆ ಪ್ರತಿಯೊಬ್ಬ ಭಾರತೀಯನನ್ನೂ ಒಂದಾಗಿ ಬೆಸೆಯುವ ಶಕ್ತಿ ಕ್ರಿಕೆಟ್‌ಗಿದೆ ಎಂದು ರಾಹುಲ್ ದ್ರಾವಿಡ್ ನುಡಿದಿದ್ದ ಮಾತುಗಳು ಇಂದಿಗೂ ಕೋಟ್ಯಂತರ ಕ್ರೀಡಾಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ಉಳಿದುಕೊಂಡಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೊಹಮ್ಮದ್ ಶಮಿ ಟೆಸ್ಟ್ ನಿವೃತ್ತಿ ಬೆನ್ನಲ್ಲೇ ಬಿಸಿಸಿಐ ಆಯ್ಕೆ ಸಮಿತಿ ಮೇಲೆ ಕಿಡಿಕಾರಿದ ಮಾಜಿ ಕೋಚ್ ರವಿಶಾಸ್ತ್ರಿ..!
Breaking: ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಮ್‌ ಇಂಡಿಯಾ ವೇಗಿ ಮೊಹಮದ್‌ ಶಮಿ