ರೋಹಿತ್‌ ಶರ್ಮಾ ಸೆಂಚುರಿ ದಾಖಲೆ; ಹಿಟ್‌ಮ್ಯಾನ್ ಮುಟ್ಟಿದ್ದೆಲ್ಲಾ ಚಿನ್ನ..!

By Kannadaprabha NewsFirst Published Mar 9, 2024, 9:16 AM IST
Highlights

ಗುರುವಾರ ಔಟಾಗದೆ 52 ರನ್‌ ಸಿಡಿಸಿದ ರೋಹಿತ್‌ ಶುಕ್ರವಾರ ಟೆಸ್ಟ್‌ನಲ್ಲಿ ತಮ್ಮ 12ನೇ ಶತಕ ಪೂರ್ಣಗೊಳಿಸಿದರು. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರಿಗಿದು 48ನೇ ಶತಕ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯರ ಪೈಕಿ 3ನೇ ಗರಿಷ್ಠ. 100 ಶತಕ ಬಾರಿಸಿರುವ ಸಚಿನ್‌ ತೆಂಡುಲ್ಕರ್‌ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಧರ್ಮಶಾಲಾ(ಮಾ.09): ಇಂಗ್ಲೆಂಡ್‌ ವಿರುದ್ಧ 5ನೇ ಟೆಸ್ಟ್‌ ಪಂದ್ಯದಲ್ಲಿ ಅತ್ಯಾಕರ್ಷಕ ಶತಕ ಸಿಡಿಸಿದ ಭಾರತದ ನಾಯಕ ರೋಹಿತ್‌ ಶರ್ಮಾ ಈ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ.

ಗುರುವಾರ ಔಟಾಗದೆ 52 ರನ್‌ ಸಿಡಿಸಿದ ರೋಹಿತ್‌ ಶುಕ್ರವಾರ ಟೆಸ್ಟ್‌ನಲ್ಲಿ ತಮ್ಮ 12ನೇ ಶತಕ ಪೂರ್ಣಗೊಳಿಸಿದರು. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರಿಗಿದು 48ನೇ ಶತಕ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯರ ಪೈಕಿ 3ನೇ ಗರಿಷ್ಠ. 100 ಶತಕ ಬಾರಿಸಿರುವ ಸಚಿನ್‌ ತೆಂಡುಲ್ಕರ್‌ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್‌ ಕೊಹ್ಲಿ 80 ಶತಕ ಸಿಡಿಸಿ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸದ್ಯ 48 ಶತಕ ಬಾರಿಸಿರುವ ರಾಹುಲ್‌ ದ್ರಾವಿಡ್‌ ಅವರ ದಾಖಲೆಯನ್ನು ರೋಹಿತ್‌ ಶರ್ಮಾ ಸರಿಗಟ್ಟಿದ್ದಾರೆ. ವಿರೇಂದ್ರ ಸೆಹ್ವಾಗ್‌ 38, ಸೌರವ್‌ ಗಂಗೂಲಿ 38 ಸೆಂಚುರಿ ಸಿಡಿಸಿ ನಂತರದ ಸ್ಥಾನಗಳಲ್ಲಿದ್ದಾರೆ.

Latest Videos

ಟೀಂ ಇಂಡಿಯಾ ಬಿಗಿ ಹಿಡಿತದಲ್ಲಿ ಧರ್ಮಶಾಲಾ ಟೆಸ್ಟ್..! ರೋಹಿತ್ ಪಡೆಗೆ ಬೃಹತ್ ಮುನ್ನಡೆ

ಗೇಲ್‌ರನ್ನು ಹಿಂದಿಕ್ಕಿದ ರೋಹಿತ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಅತಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ರೋಹಿತ್‌ ಅವರು ವೆಸ್ಟ್‌ಇಂಡೀಸ್‌ನ ಕ್ರಿಸ್‌ ಗೇಲ್‌ ಅವರನ್ನು ಹಿಂದಿಕ್ಕಿದರು. ರೋಹಿತ್‌ ಆರಂಭಿಕನಾಗಿ 43 ಶತಕ ಬಾರಿಸಿದ್ದು, ಗೇಲ್‌ 42 ಶತಕಗಳನ್ನು ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಅಗ್ರಸ್ಥಾನದಲ್ಲಿದ್ದಾರೆ. ಅವರು 49 ಶತಕ ಬಾರಿಸಿದ್ದು, ಸಚಿನ್ ತೆಂಡುಲ್ಕರ್‌ 45 ಸೆಂಚುರಿಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.

ಇದೇ ವೇಳೆ ಇಂಗ್ಲೆಂಡ್‌ ವಿರುದ್ಧ ಆರಂಭಿಕನಾಗಿ ಅತಿ ಹೆಚ್ಚು ಶತಕ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ರೋಹಿತ್‌ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. 4 ಶತಕ ಗಳಿಸಿರುವ ಅವರು ಸುನಿಲ್‌ ಗವಾಸ್ಕರ್‌ ಜೊತೆ ನಂ.1 ಸ್ಥಾನ ಹಂಚಿಕೊಂಡಿದ್ದಾರೆ. ವಿಜಯ್‌ ಮರ್ಚೆಂಟ್‌, ಮುರಳಿ ವಿಜಯ್‌ ಹಾಗೂ ಕೆ.ಎಲ್‌.ರಾಹುಲ್‌ ಇಂಗ್ಲೆಂಡ್‌ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದು ತಲಾ 3 ಶತಕ ಹೊಡೆದಿದ್ದಾರೆ.

Dharamsala Test: ಸಚಿನ್ ತೆಂಡುಲ್ಕರ್ ಅಪರೂಪದ ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ..!

ಇನ್ನು, 30 ವರ್ಷ ದಾಟಿದ ಬಳಿಕ ರೋಹಿತ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 35 ಶತಕ ಬಾರಿಸಿದ್ದಾರೆ. ಈ ಮೂಲಕ ಅವರು ಸಚಿನ್‌ ತೆಂಡುಲ್ಕರ್‌ ದಾಖಲೆ ಸರಿಗಟ್ಟಿದ್ದಾರೆ. ಸಚಿನ್ ಕೂಡಾ 35 ಶತಕ ಬಾರಿಸಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕರ 43, ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್‌ ಹಾಗೂ ರಿಕಿ ಪಾಂಟಿಂಗ್‌ ತಲಾ 36 ಶತಕ ಬಾರಿಸಿದ್ದಾರೆ.

ಅಲ್ಲದೆ 35 ವರ್ಷ ದಾಟಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕ ರೋಹಿತ್‌ 7 ಶತಕ (81 ಇನ್ನಿಂಗ್ಸ್‌) ಬಾರಿಸಿದ್ದಾರೆ. ಭಾರತದ ಉಳಿದೆಲ್ಲಾ ನಾಯಕರು ಸೇರಿ 219 ಇನ್ನಿಂಗ್ಸಲ್ಲಿ ಬಾರಿಸಿದ ಶತಕಗಳ ಸಂಖ್ಯೆ 6.

2021ರ ಬಳಿಕ 6 ಶತಕ

ರೋಹಿತ್‌ ಶರ್ಮಾ ಕಳೆದ 3 ವರ್ಷಗಳಲ್ಲಿ ಭಾರತೀಯರ ಪೈಕಿ ಶ್ರೇಷ್ಠ ಟೆಸ್ಟ್‌ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಅವರು 2021ರ ಬಳಿಕ 6 ಶತಕಗಳನ್ನು ಬಾರಿಸಿದ್ದಾರೆ. ಬೇರೆ ಯಾವುದೇ ಭಾರತೀಯ ಬ್ಯಾಟರ್‌ 5ಕ್ಕಿಂತ ಹೆಚ್ಚು ಶತಕ ಹೊಡೆದಿಲ್ಲ. ಶುಭ್‌ಮನ್ ಗಿಲ್‌ 4, ರವೀಂದ್ರ ಜಡೇಜಾ, ರಿಷಭ್‌ ಪಂತ್‌, ಯಶಸ್ವಿ ಜೈಸ್ವಾಲ್‌ ಹಾಗೂ ಕೆ.ಎಲ್‌.ರಾಹುಲ್‌ ತಲಾ 3 ಶತಕ ಬಾರಿಸಿದ್ದಾರೆ.

ಅತಿಹೆಚ್ಚು ಅಂ.ರಾ. ಶತಕ(ಭಾರತೀಯರು)

ಆಟಗಾರ ಶತಕ ಪಂದ್ಯ

ಸಚಿನ್‌ 100 664

ಕೊಹ್ಲಿ 80 522

ರೋಹಿತ್‌ 48 472

ದ್ರಾವಿಡ್‌ 48 504

ಸೆಹ್ವಾಗ್ 38 363

ಗಂಗೂಲಿ 38 421
 

click me!