
ಚೆನ್ನೈ(ಫೆ.13): ರೋಹಿತ್ ಶರ್ಮಾ(161) ಆಕರ್ಷಕ ಶತಕ ಹಾಗೂ ಅಜಿಂಕ್ಯ ರಹಾನೆ(67) ಸಮಯೋಚಿತ ಅರ್ಧಶತಕದ ನೆರವಿನಿಂದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ಭಾರತ ತಂಡ 6 ವಿಕೆಟ್ ಕಳೆದುಕೊಂಡು 300 ರನ್ ಬಾರಿಸಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್(33) ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಹೌದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಆದರೆ ಟೀಂ ಇಂಡಿಯಾ ರನ್ ಖಾತೆ ತೆರೆಯುವ ಮುನ್ನವೇ ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಎರಡನೇ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ಚೇತೇಶ್ವರ್ ಪೂಜಾರ ಜೋಡಿ 85 ರನ್‌ಗಳ ಜತೆಯಾಟವಾಡುವ ಮೂಲಕ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದರು.
ತಂಡಕ್ಕೆ ಬಲ ತುಂಬಿದ ರೋಹಿತ್ ಶರ್ಮಾ-ರಹಾನೆ: ಒಂದು ಹಂತದಲ್ಲಿ 86 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ನಾಲ್ಕನೇ ವಿಕೆಟ್‌ಗೆ 162 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ 7ನೇ ಶತಕ ಬಾರಿಸುವ ಮೂಲಕ ಅಬ್ಬರಿಸಿದರೆ, ಅಜಿಂಕ್ಯ ರಹಾನೆ ಹಿಟ್‌ಮ್ಯಾನ್‌ಗೆ ಉತ್ತಮ ಸಾಥ್ ನೀಡಿದರು. ರೋಹಿತ್ ಶರ್ಮಾ 231 ಎಸೆತಗಳನ್ನು ಎದುರಿಸಿ 18 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 161 ರನ್ ಬಾರಿಸಿ ಜಾಕ್ ಲೀಚ್‌ಗೆ ವಿಕೆಟ್ ಒಪ್ಪಿಸಿದರೆ, ಅಜಿಂಕ್ಯ ರಹಾನೆ 67 ರನ್ ಬಾರಿಸಿ ಮೋಯಿನ್ ಅಲಿ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಚೆನ್ನೈ ಟೆಸ್ಟ್: ಭಾರತಕ್ಕೆ ಮತ್ತೆ ಡಬಲ್ ಶಾಕ್, ರೋಹಿತ್-ರಹಾನೆ ಔಟ್..!
ಸದ್ಯ ರಿಷಭ್ ಪಂತ್ 33 ರನ್ ಬಾರಿಸಿ ಅಜೇಯರಾಗುಳಿದಿದ್ದರೆ, ಅಕ್ಷರ್ ಪಟೇಲ್ 5 ರನ್ ಬಾರಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಇಬ್ಬರು ಬ್ಯಾಟ್ಸ್‌ಮನ್‌ಗಳ ಜತೆಯಾಟದ ಮೇಲೆ ಟೀಂ ಇಂಡಿಯಾ ಮೊದಲ ಇನಿಂಗ್ಸ್ ಸ್ಕೋರ್ ನಿರ್ಧಾರವಾಗಲಿದೆ.
ಒಂದು ರನ್ ಅಂತರದಲ್ಲಿ ಎರಡು ಬಾರಿ 2 ವಿಕೆಟ್ ಪತನ: ಒಂದು ಹಂತದಲ್ಲಿ ಚೇತೇಶ್ವರ್ ಪೂಜಾರ(21) ವಿಕೆಟ್ ಪತನವಾದಗ ಟೀಂ ಇಂಡಿಯಾ 85 ರನ್ ಗಳಿಸಿತ್ತು. ಇದರ ಬೆನ್ನಲ್ಲೇ ತಂಡಕ್ಕೆ ಇನ್ನೊಂದು ರನ್ ಸೇರ್ಪಡೆಯಾಗುತ್ತಿದ್ದಂತೆ ವಿರಾಟ್ ಕೊಹ್ಲಿ(0) ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇನ್ನು ಶತಕದ ಜತೆಯಾಟ ನಿಭಾಯಿಸಿದ್ದ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಜೋಡಿ ಸಹ ಒಂದು ರನ್ ಅಂತರದಲ್ಲಿ ಪೆವಿಲಿಯನ್ ಸೇರಿದರು. ತಂಡದ ಸ್ಕೋರ್ 248 ರನ್ ಆಗಿದ್ದಾಗ ರೋಹಿತ್ ವಿಕೆಟ್ ಒಪ್ಪಿಸಿದರೆ, 249 ರನ್‌ಗಳಾಗುಷ್ಟರಲ್ಲಿ ಅಜಿಂಕ್ಯ ರಹಾನೆ ಕೂಡಾ ಪೆವಿಲಿಯನ್ ಹಾದಿ ಹಿಡಿದರು.
ಇಂಗ್ಲೆಂಡ್ ಪರ ಮೋಯಿನ್ ಅಲಿ, ಜಾಕ್ ಲೀಚ್ ತಲಾ 2 ವಿಕೆಟ್ ಪಡೆದರೆ, ಓಲಿ ಸ್ಟೋನ್ ಮತ್ತು ನಾಯಕ ಜೋ ರೂಟ್ ತಲಾ ಒಂದೊಂದು ವಿಕೆಟ್ ಪಡೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.