
ಕಟಕ್: ರೋಹಿತ್ ಶರ್ಮಾ ಅಬ್ಬರಿಸಿದರೆ ಎದುರಾಳಿ ತಂಡಕ್ಕೆ ಉಳಿಗಾಲವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ದೀರ್ಘಕಾಲದಿಂದ ವೈಫಲ್ಯ ಅನುಭವಿಸುತ್ತಾ, ಗಾಯಗೊಂಡ ಹುಲಿಯಂತಿದ್ದ ರೋಹಿತ್ ಈಗ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಇಂಗ್ಲೆಂಡ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ರೋಹಿತ್ ಸ್ಫೋಟಕ ಶತಕ ಸಿಡಿಸಿದ್ದು, ತಂಡಕ್ಕೆ 4 ವಿಕೆಟ್ ಗೆಲುವು ತಂದು ಕೊಟ್ಟಿದ್ದಾರೆ. ಜೊತೆಗೆ, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಭಾರತಕ್ಕೆ ಸರಣಿ ಉಡುಗೊರೆ ನೀಡಿದ್ದಾರೆ.
2023ರ ಏಕದಿನ ವಿಶ್ವಕಪ್ ಬಳಿಕ ರೋಹಿತ್ ಬ್ಯಾಟ್ ಸದ್ದು ಮಾಡಿದ್ದೇ ಕಮ್ಮಿ. ವ್ಯಾಪಕ ಟೀಕೆಗೂ ಗುರಿಯಾಗಿದ್ದ ರೋಹಿತ್ ಕಟಕ್ ಪಂದ್ಯದಲ್ಲಿ ಎಲ್ಲರ ಬಾಯಿ ಮುಚ್ಚುವಂತೆ ಮಾಡಿದರು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದು ಇಂಗ್ಲೆಂಡ್, ಭಾರತದ ದಾಳಿ ಎದುರಿಸಿ 304 ರನ್ ಗಳಿಸಿದರೂ, 49.5 ಓವರ್‌ಗಳಲ್ಲಿ ಆಲೌಟಾಯಿತು. ಇದು ದೊಡ್ಡ ಮೊತ್ತವೇ ಆಗಿದ್ದರೂ ರೋಹಿತ್ ಅಬ್ಬರದಿಂದಾಗಿ ಭಾರತಕ್ಕೆ ಸುಲಭ ತುತ್ತಾಯಿತು.
ಚಾಂಪಿಯನ್ಸ್ ಟ್ರೋಫಿ ಗೆಲ್ಲೋದಲ್ಲ ಭಾರತ ಸೋಲೋದನ್ನು ಎದುರು ನೋಡುತ್ತಿರುವ ಪಾಕ್! ಪ್ರಧಾನಿ ಮಾತು ವೈರಲ್
ಮೊದಲ ವಿಕೆಟ್‌ಗೆ ಶುಭಮನ್ ಗಿಲ್ ಜೊತೆಗೂಡಿ 100 ಎಸೆತಗಳಲ್ಲಿ 136 ರನ್ ಸೇರಿಸಿದರು. ಶುಭ್ ಮನ್ 60 ರನ್ ಔಟಾದರೂ, ಬೌಂಡರಿ, ಸಿಕ್ಸರ್‌ಗಳ ಮಳೆ ಸುರಿಸಿದ ರೋಹಿತ್ 76 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಒಟ್ಟು 90 ಎಸೆತ ಎದುರಿಸಿ 12 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 119 ರನ್ ಸಿಡಿಸಿದರು. 30ನೇ ಓವರ್‌ನಲ್ಲಿ ರೋಹಿತ್ ಔಟಾದ ಬಳಿಕ ಶ್ರೇಯಸ್ ಅಯ್ಯರ್ 44, ಅಕ್ಷರ್ ಪಟೇಲ್ ಔಟಾಗದೆ 41 ರನ್ ಗಳಿಸಿ ತಂಡವನ್ನು 44.3 ಓವರ್ ಗಳಲ್ಲಿ ಗೆಲ್ಲಿಸಿದರು.
ರೂಟ್, ಡಕೆಟ್ ಫಿಫ್ಟಿ: ಇದಕ್ಕೂ ಮೊದಲು ಇಂಗ್ಲೆಂಡ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಬೆನ್ ಡಕೆಟ್ 56 ಎಸೆತಗಳಲ್ಲಿ 65, ಜೋ ರೂಟ್ 72 ಎಸೆತಗಳಲ್ಲಿ 69 ರನ್ ಸಿಡಿಸಿದರು. ಲಿವಿಂಗ್‌ಸ್ಟೋನ್ 41, ಬಟ್ಲರ್ 34, ಹ್ಯಾರಿ ಬ್ರೂಕ್ 31 ರನ್ ಗಳಿಸಿ ತಂಡವನ್ನು 300ರ ಗಡಿ ದಾಟಿಸಿದರು. ಭಾರತ ಪರ ಸ್ಪಿನ್ನರ್ ರವೀಂದ್ರ ಜಡೇಜಾ 3 ವಿಕೆಟ್ ಕಿತ್ತರು.
ರೋಹಿತ್ ಶರ್ಮಾಗೆ ಅಮೂಲ್ಯ ಕಿವಿ ಮಾತು ಹೇಳಿದ ರವಿಚಂದ್ರನ್ ಅಶ್ವಿನ್!
ಅಂ.ರಾ. ಕ್ರಿಕೆಟ್‌ನಲ್ಲಿ ರೋಹಿತ್ 49 ಶತಕ
ರೋಹಿತ್ ಇಂಗ್ಲೆಂಡ್ ವಿರುದ್ದ ಭಾನುವಾರ ಸಿಡಿಸಿದ್ದು, ಅಂ.ರಾ. ಕ್ರಿಕೆಟ್‌ನಲ್ಲಿ ಅವರ 49ನೇ ಶತಕ. ಗರಿಷ್ಠ ಶತಕ ಸರದಾರರ ಪಟ್ಟಿಯಲ್ಲಿ ರೋಹಿತ್ ಜಂಟಿ 10ನೇ ಸ್ಥಾನಕ್ಕೇರಿದ್ದಾರೆ. ಸಚಿನ್ 100 ಶತಕದೊಂದಿಗೆ ನಂ.1 ಸ್ಥಾನದಲ್ಲಿದ್ದಾರೆ. ರೋಹಿತ್ ಭಾರತೀಯರ ಪೈಕಿ 3ನೇ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿ ವಿರಾಟ್ ಕೊಹ್ಲಿ(81)ಗೆ 2ನೇ ಸ್ಥಾನ. ಇನ್ನು, ರೋಹಿತ್ ಏಕದಿನದಲ್ಲಿ 32ನೇ ಶತಕ ಪೂರ್ಣಗೊಳಿಸಿದ್ದು, ಗರಿಷ್ಠ ಶತಕದ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 50, ಸಚಿನ್ 49 ಶತಕದೊಂದಿಗೆ ಅಗ್ರ 2 ಸ್ಥಾನಗಳಲ್ಲಿದ್ದಾರೆ.
ಸ್ಕೋರ್:
ಇಂಗ್ಲೆಂಡ್ 49.5 ಓವರಲ್ಲಿ 304/10 (ರೂಟ್ 69, ಡಕೆಟ್ 65, ಜಡೇಜಾ 3-35), ಭಾರತ 44.3 ಓವರಲ್ಲಿ 308/6 (ರೋಹಿತ್ 119, ಶುಭಮನ್ 60, ಶ್ರೇಯಸ್ 44, ಅಕ್ಷರ್ ಪಟೇಲ್ ಔಟಾಗದೆ 41, ಓವರ್‌ಟನ್ 2-27)
ಪಂದ್ಯಶ್ರೇಷ್ಠ: ರೋಹಿತ್ ಶರ್ಮಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.