ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ 2ನೇ ದಿನವೇ ಕುತೂಹಲ ಘಟ್ಟ ತಲುಪಿದೆ. ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಟೀಂ ಇಂಡಿಯಾಗೆ ರನ್ ಮುನ್ನಡೆ ತಂದುಕೊಟ್ಟಿದೆ. ನಾಯಕ ರೋಹಿತ್ ಶರ್ಮಾ ದಾಖಲೆಯ ಸೆಂಚುರಿ ಸಿಡಿಸಿದರೆ, ರವೀಂದ್ರ ಜಡೇಜಾ ಹಾಗೂ ಅಕ್ಸರ್ ಪಟೇಲ್ ಹಾಫ್ ಸೆಂಚುರಿ ಮೂಲಕ ಭಾರತದ ಉತ್ತಮ ಸ್ಥಿತಿಗೆ ಕಾರಣರಾಗಿದ್ದಾರೆ.
ನಾಗ್ಪುರ(ಫೆ.10) ನಾಯಕ ರೋಹಿತ್ ಶರ್ಮಾ ದಾಖಲೆ ಶತಕ, ಇತ್ತ ರವೀಂದ್ರ ಜಡೇಜಾ ಹಾಗೂ ಅಕ್ಸರ್ ಪಟೇಲ್ ಹಾಫ್ ಸೆಂಚುರಿ ನೆರವಿನಿಂದ ಎರಡನೇ ದಿನದಾಟದಲ್ಲಿ ಭಾರತ ದಿಟ್ಟ ಹೋರಾಟ ನೀಡಿದೆ. ಆಸ್ಟ್ರೇಲಿಯಾ ಕರಾರುವಕ್ ದಾಳಿ ನಡುವೆ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 321 ರನ್ ಸಿಡಿಸಿದೆ. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 144 ರನ್ ಮುನ್ನಡೆ ಕಾಯ್ದುಕೊಂಡಿದೆ. ಇದೀಗ ಮೂರನೇ ದಿನದಾಟ ಅಂತ್ಯತ ಮಹತ್ವದ್ದಾಗಿದ್ದು, ಬೃಹತ್ ಮೊತ್ತ ಪೇರಿಸಲು ಭಾರತ ಹೋರಾಟ ನಡೆಸಲಿದೆ. ಮೊದಲೆರಡು ದಿನದಲ್ಲಿ ಭಾರತ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಮೇಲುಗೈ ಸಾಧಿಸುವ ಎಲ್ಲಾ ಲಕ್ಷಣಗಳಿವೆ.
ಮೊದಲ ದಿನದಾಟದ ಅಂತ್ಯದಲ್ಲಿ ಭಾರತ 1 ವಿಕೆಟ್ ನಷ್ಟಕ್ಕೆ 77 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿತ್ತು. 2ನೇ ದಿನದಾಟದಲ್ಲಿ ಬ್ಯಾಟಿಂಗ್ ಮುಂದುವರಿಸಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ದಿಟ್ಟ ಹೋರಾಟ ನೀಡಿದರು. ಆರ್ ಅಶ್ವಿನ್ ಜೊತೆ ಇನ್ನಿಂಗ್ಸ್ ಮುಂದುವರಿಸಿದರು. ಒಂದೆಡೆ ಟೀಂ ಇಂಡಿಯಾ ಕೂಡ ವಿಕೆಟ್ ಕಳೆದುಕೊಳ್ಳುತ್ತಲೇ ಹೋಯಿತು. ಆರ್ ಅಶ್ವಿನ್ 23 ರನ್ ಸಿಡಿಸಿ ಔಟಾದರು. ಇತ್ತ ಚೇತೇಶ್ವರ ಪೂಜಾರ ಕೇವಲ 7 ರನ್ ಸಿಡಿಸಿ ನಿರಾಸೆ ಮೂಡಿಸಿದರು.
Ind vs Aus: ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಕೆ ಎಸ್ ಭರತ್, ಸಿಹಿ ಮುತ್ತನ್ನಿಟ್ಟ ತಾಯಿ..! ಫೋಟೋ ವೈರಲ್
ಒಂದೆಡೆ ವಿಕೆಟ್ ಪತನಗೊಳ್ಳುತ್ತಿದ್ದರೂ ರೋಹಿತ್ ಶರ್ಮಾ ದಿಟ್ಟ ಹೋರಾಟ ನೀಡಿದರು. ಹಾಫ್ ಸೆಂಚುರಿಯನ್ನು ಶತಕವಾಗಿ ಪರಿವರ್ತಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದರು. ಇಷ್ಟೇ ಅಲ್ಲ ಮೂರು ಮಾದರಿಯಲ್ಲಿ ಸೆಂಚುರಿ ಸಿಡಿಸಿದ ವಿಶ್ವದ 4ನೇ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು. ಸೂರ್ಯಕುಮಾರ್ ಯಾದವ್ ಕೇವಲ 8 ರನ್ ಸಿಡಿಸಿ ಔಟಾದರು. ಅತ್ಯುತ್ತಮ ಇನ್ನಿಂಗ್ಸ್ ಮೂಲಕ ಆಸ್ಟ್ರೇಲಿಯಾ ಲೆಕ್ಕಾಚಾರ ಉಲ್ಟಾ ಮಾಡಿದ ರೋಹಿತ್ ಶರ್ಮಾ 212 ಎಸೆಚ ಎದುರಿಸಿ 120 ರನ್ ಸಿಡಿಸಿ ಔಟಾದರು.
ರೋಹಿತ್ ಶರ್ಮಾ ಬಳಿಕ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಶ್ರೀಕಾರ್ ಭರತ್ ಕೇವಲ 8 ರನ್ ಸಿಡಿಸಿ ಔಟಾದರು. ಆದರೆ 8ನೇ ವಿಕೆಟ್‌ಗೆ ರವೀಂದ್ರ ಜಡೇಜಾ ಹಾಗೂ ಅಕ್ಸರ್ ಪಟೇಲ್ ಹೋರಾಟ ಟೀಂ ಇಂಡಿಯಾಗೆ ಮತ್ತೆ ಹೊಸ ಚೈತನ್ಯ ನೀಡಿತು. ಇವರಿಬ್ಬರ ಜೊತೆಯಾಟ ಬ್ರೇಕ್ ಮಾಡಲು ಆಸ್ಟ್ರೇಲಿಯಾ ಇನ್ನಿಲ್ಲದ ಪ್ರಯತ್ನ ನಡೆಸಿತು. ಆದರೆ ರವೀಂದ್ರ ಜಡೇಜಾ ಹಾಗೂ ಅಕ್ಸರ್ ಪಟೇಲ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಈ ಮೂಲಕ ಭಾರತ 300 ರನ್ ಗಡಿ ದಾಟಿತು.
Nagpur Test: ಭಾರತದ ಸ್ಪಿನ್ ಜಾಲಕ್ಕೆ ಸಿಲುಕಿದ ಕಾಂಗರೂ ಪಡೆ, ಸಾಧಾರಣ ಮೊತ್ತಕ್ಕೆ ಆಲೌಟ್..!
ದಿನದಾಟ ಅಂತ್ಯದಲ್ಲಿ ಜಡೇಜಾ ಅಜೇಯ 66 ರನ್ ಸಿಡಿಸಿದರೆ, ಅಕ್ಸರ್ ಪಟೇಲ್ ಅಜೇಯ 52 ರನ್ ಸಿಡಿಸಿದ್ದಾರೆ. ಈ ಮೂಲಕ ಭಾರತ 7 ವಿಕೆಟ್ ನಷ್ಟಕ್ಕೆ 321 ರನ್ ಸಿಡಿಸಿದರು. 144 ರನ್ ಮುನ್ನಡೆ ಪಡೆದುಕೊಂಡಿದೆ.