Ind vs Aus: ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಕೆ ಎಸ್ ಭರತ್, ಸಿಹಿ ಮುತ್ತನ್ನಿಟ್ಟ ತಾಯಿ..! ಫೋಟೋ ವೈರಲ್

By Naveen KodaseFirst Published Feb 9, 2023, 4:39 PM IST
Highlights

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕೆ ಎಸ್ ಭರತ್
ಭಾವಾನಾತ್ಮಕ ಕ್ಷಣಗಳಿಗೆ ಸಾಕ್ಷಿಯಾದ ನಾಗ್ಪುರ ಕ್ರಿಕೆಟ್ ಮೈದಾನ
ಮಗನಿಗೆ ಸಿಹಿಮುತ್ತು ನೀಡಿದ ಭರತ್ ತಾಯಿ

ನಾಗ್ಪುರ(ಫೆ.09): ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಕೊನಾ ಶ್ರೀಕಾರ್ ಭರತ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್‌ ಪಂದ್ಯವು ಇಂದಿನಿಂದ ಆರಂಭವಾಗಿದ್ದು, ಇಶಾನ್ ಕಿಶನ್‌ರನ್ನು ಹಿಂದಿಕ್ಕಿ ಕೆ ಎಸ್ ಭರತ್, ಭಾರತ ಟೆಸ್ಟ್‌ ತಂಡಕ್ಕೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಆರಂಭವಾದ ಮೊದಲ ಟೆಸ್ಟ್‌ ಪಂದ್ಯದಲ್ಲಿ 29 ವರ್ಷದ ವಿಕೆಟ್ ಕೀಪರ್ ಬ್ಯಾಟರ್ ಕೆ ಎಸ್ ಭರತ್ ಅವರಿಗೆ ಅನುಭವಿ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಟೆಸ್ಟ್‌ ಕ್ಯಾಪ್ ನೀಡುವ ಮೂಲಕ ಭಾರತ ತಂಡಕ್ಕೆ ಅಧಿಕೃತವಾಗಿ ಸ್ವಾಗತಿಸಿದರು. ದೇಶಿ ಕ್ರಿಕೆಟ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲು ಹಾತೊರೆಯುತ್ತಿದ್ದ ಭರತ್‌, ಇದೀಗ ಕೊನೆಗೂ ದೇಶವನ್ನು ಪ್ರತಿನಿಧಿಸುವ ಅವಕಾಶಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತ ಜೆರ್ಸಿ ತೊಟ್ಟು ಒಂದು ಕ್ಷಣ ಭರತ್, ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದರು. ಕೆ ಎಸ್ ಭರತ್ ಜತೆಗೆ ಟಿ20 ನಂ.1 ಬ್ಯಾಟರ್ ಸೂರ್ಯಕುಮಾರ್ ಯಾದವ್‌ ಕೂಡಾ ಇದೇ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾದರು. 

Test debuts for & 👏 👏

The grin on the faces of their family members says it all 😊 😊 | | pic.twitter.com/dJc7uYbhGc

— BCCI (@BCCI)

ಇನ್ನು ಕೆ ಎಸ್ ಭರತ್, ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಂದರ್ಭದಲ್ಲಿ ಅವರ ಕುಟುಂಬಸ್ಥರು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದರು. ಆಂಧ್ರ ಪ್ರದೇಶ ಮೂಲದ ವಿಕೆಟ್‌ ಕೀಪರ್ ಬ್ಯಾಟರ್, ದೇಶವನ್ನು ಪ್ರತಿನಿಧಿಸಬೇಕು ಎನ್ನುವ ಬಾಲ್ಯದ ಕನಸನ್ನು ನನಸಾಗಿಸಿಕೊಂಡ ಬೆನ್ನಲ್ಲೇ ತಮ್ಮ ತಾಯಿಯನ್ನು ಅಪ್ಪಿಕೊಂಡರು. ಆಗ ಭರತ್ ತಾಯಿ, ತಮ್ಮ ಮಗನ ಕನಸು ನನಸಾಗಿಸಿಕೊಂಡಿದ್ದಕ್ಕೆ ಸಿಹಿ ಮುತ್ತು ನೀಡಿ ಸಂಭ್ರಮಿಸಿದರು. ಇದು ಕ್ರಿಕೆಟ್‌ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್‌ ಪಂದ್ಯದ ಟಾಸ್‌ಗೂ ಮುನ್ನ ಫೋಟೋಗ್ರಾಫರ್‌ಗಳು ಈ ಸುಂದರ ಕ್ಷಣಗಳನ್ನು ಸೆರೆಹಿಡಿಯಲು ಯಶಸ್ವಿಯಾದರು.

Picture of the day - kiss from the mother for KS Bharat. pic.twitter.com/Ni8Zcpautn

— Johns. (@CricCrazyJohns)

ಕೆ ಎಸ್ ಭರತ್ ಅವರಂತೆಯೇ ಸೂರ್ಯಕುಮಾರ್ ಯಾದವ್ ಕುಟುಂಬಸ್ಥರು ಕೂಡಾ, ಸೂರ್ಯ ಟೆಸ್ಟ್‌ಗೆ ಪಾದಾರ್ಪಣೆ ಮಾಡುವ ಕ್ಷಣವನ್ನು ಮೈದಾನದಲ್ಲೇ ನಿಂತು ಕಣ್ತುಂಬಿಕೊಂಡರು. ಸೂರ್ಯಕುಮಾರ್ ಯಾದವ್‌ಗೆ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ, ಟೆಸ್ಟ್‌ ಕ್ಯಾಪ್‌ ನೀಡಿ ವೈಟ್‌ ಬಾಲ್ ಕ್ರಿಕೆಟ್‌ಗೆ ಸ್ವಾಗತಿಸಿದರು.

Nagpur Test: ಭಾರತದ ಸ್ಪಿನ್ ಜಾಲಕ್ಕೆ ಸಿಲುಕಿದ ಕಾಂಗರೂ ಪಡೆ, ಸಾಧಾರಣ ಮೊತ್ತಕ್ಕೆ ಆಲೌಟ್..!

ರಿಷಭ್ ಪಂತ್‌, ತಮ್ಮ ಸ್ಪೋಟಕ ಬ್ಯಾಟಿಂಗ್ ಹಾಗೂ ಚಾಣಾಕ್ಷ ವಿಕೆಟ್ ಕೀಪಿಂಗ್ ಮೂಲಕ ಭಾರತ ಟೆಸ್ಟ್‌ ತಂಡದಲ್ಲಿ ವಿಕೆಟ್‌ ಕೀಪರ್ ಬ್ಯಾಟರ್‌ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರು. ಹೀಗಾಗಿ ಭರತ್, ಸಾಕಷ್ಟು ಸಮಯದಿಂದ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಲು ಕಾಯುತ್ತಿದ್ದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಡಿಸೆಂಬರ್ 30ರಂದು ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಪಂತ್ ಇನ್ನೂ ಮುಂದಿನ 6-7 ತಿಂಗಳು ಕ್ರಿಕೆಟ್‌ನಿಂದ ದೂರವೇ ಉಳಿಯುವ ಸಾಧ್ಯತೆಯಿದೆ. ಹೀಗಾಗಿ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಕೆ ಎಸ್ ಭರತ್ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದು, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

ಪಾದಾರ್ಪಣೆ ಪಂದ್ಯದಲ್ಲೇ ಭರತ್ ಮಿಂಚಿನ ಸ್ಟಂಪಿಂಗ್‌: ಟೀಂ ಇಂಡಿಯಾ ವಿಕೆಟ್ ಕೀಪರ್ ಕೆ ಎಸ್ ಭರತ್, ತಾವಾಡುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲೇ ಮಿಂಚಿನ ಸ್ಟಂಪಿಂಗ್ ಮೂಲಕ ಗಮನ ಸೆಳೆದಿದ್ದಾರೆ. 49 ರನ್ ಬಾರಿಸಿ ಅಪಾಯಕಾರಿಯಾಗುವ ಮುನ್ಸೂಚನೆ ನೀಡಿದ್ದ ಆಸ್ಟ್ರೇಲಿಯಾದ ಬ್ಯಾಟರ್‌ ಮಾರ್ನಸ್ ಲಬುಶೇನ್‌, ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಕ್ರೀಸ್‌ ತೊರೆದು ಡ್ರೈವ್ ಮಾಡುವ ಯತ್ನ ನಡೆಸುವ ಸಂದರ್ಭದಲ್ಲಿ ಭರತ್, ಕಣ್ಮಿಟುಕಿಸಿ ಬಿಡುವಷ್ಟರಲ್ಲಿ ಸ್ಟಂಪೌಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

KS Bharat's celebration after his first stumping - what a moment for Bharat! pic.twitter.com/kbIMtr2yFL

— Mufaddal Vohra (@mufaddal_vohra)
click me!