Border Gavaskar Trophy: ಸ್ಪಿನ್ನರ್‌ಗಳ ಬಳಿಕ ರೋಹಿತ್ ಶೈನಿಂಗ್, ಭಾರತಕ್ಕೆ ಮೊದಲ ದಿನದ ಗೌರವ..!

By Naveen KodaseFirst Published Feb 9, 2023, 4:49 PM IST
Highlights

ನಾಗ್ಪುರ ಟೆಸ್ಟ್‌ನಲ್ಲಿ ಭಾರತದ ಹಿಡಿತದಲ್ಲಿ ಕಾಂಗರೂ ಪಡೆ
ಮೊದಲ ಇನಿಂಗ್ಸ್‌ನಲ್ಲಿ ಕೇವಲ 177 ರನ್‌ಗಳಿಗೆ ಆಸೀಸ್‌ ಆಲೌಟ್
ಬ್ಯಾಟಿಂಗ್‌ನಲ್ಲಿ ಅಜೇಯ ಅರ್ಧಶತಕ ಸಿಡಿಸಿದ ನಾಯಕ ರೋಹಿತ್ ಶರ್ಮಾ

ನಾಗ್ಪುರ(ಫೆ.09): ಆರಂಭದಲ್ಲಿ ಟೀಂ ಇಂಡಿಯಾ ಸ್ಪಿನ್ನರ್‌ಗಳ ಮಾರಕ ದಾಳಿಗೆ ತತ್ತರಿಸಿದ್ದ ಆಸ್ಟ್ರೇಲಿಯಾ, ಇದೀಗ ರೋಹಿತ್ ಶರ್ಮಾ ಅಬ್ಬರಕ್ಕೆ ಕಂಗಾಲಾಗಿ ಹೋಗಿದೆ. ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಕೇವಲ 177 ರನ್‌ಗಳಿಗೆ ಆಲೌಟ್ ಮಾಡಿದ್ದ ಟೀಂ ಇಂಡಿಯಾ, ಇದೀಗ ಬ್ಯಾಟಿಂಗ್‌ನಲ್ಲೂ ದರ್ಬಾರ್ ನಡೆಸಿದೆ. ನಾಗ್ಪುರ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಂತ್ಯದ ವೇಳೆಗೆ ಟೀಂ ಇಂಡಿಯಾ ಒಂದು ವಿಕೆಟ್ ನಷ್ಟಕ್ಕೆ 77 ರನ್‌ ಬಾರಿಸಿದ್ದು, ಇನ್ನು ಕೇವಲ 100 ರನ್‌ಗಳ ಹಿನ್ನಡೆಯಲ್ಲಿದೆ.

ಇಲ್ಲಿನ  ವಿದರ್ಭ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆಸೀಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ಟೀಂ ಇಂಡಿಯಾ, ಬ್ಯಾಟಿಂಗ್‌ನಲ್ಲೂ ಭರ್ಜರಿ ಆರಂಭವನ್ನೇ ಪಡೆದಿದೆ. ಕೆ. ಎಲ್ ರಾಹುಲ್ ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿದರೆ, ನಾಯಕ ರೋಹಿತ್ ಶರ್ಮಾ, ಚುರುಕಿನ ಬ್ಯಾಟಿಂಗ್ ಮೂಲಕ ಮಿಂಚಿದರು. ಮೊದಲ ವಿಕೆಟ್‌ಗೆ ಈ ಜೋಡಿ 138 ಎಸೆತಗಳನ್ನು ಎದುರಿಸಿ 76 ರನ್‌ಗಳ ಜತೆಯಾಟವಾಡಿತು. ಕೆ ಎಲ್ ರಾಹುಲ್‌ 71 ಎಸೆತಗಳನ್ನು ಎದುರಿಸಿ ಮೊದಲ ದಿನದಾಟ ಮುಕ್ತಾಯಕ್ಕೆ 8 ಎಸೆತಗಳು ಬಾಕಿ ಇದ್ದಾಗ ಟೊಡ್ ಮೊರ್ಫಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಇನ್ನು ಮತ್ತೊಂದು ತುದಿಯಲ್ಲಿ ನಾಯಕನ ಆಟವಾಡಿದ ರೋಹಿತ್ ಶರ್ಮಾ, ಮತ್ತೊಂದು ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಮಿಂಚಿದರು. ಒಂದು ಕಡೆ ರಾಹುಲ್, ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರೆ, ಮತ್ತೊಂದೆಡೆ ರೋಹಿತ್ ಶರ್ಮಾ, ಮೊದಲ ಓವರ್‌ನ ಮೊದಲ ಎಸೆತದಿಂದಲೇ ಸ್ಪೋಟಕ ಬ್ಯಾಟಿಂಗ್‌ ರಣತಂತ್ರಕ್ಕೆ ಒತ್ತು ನೀಡಿದರು. ರೋಹಿತ್ ಶರ್ಮಾ 66 ಎಸೆತಗಳನ್ನು ಎದುರಿಸಿ ಅರ್ಧಶತಕ ಪೂರೈಸಿದರು. ಸದ್ಯ ರೋಹಿತ್ ಶರ್ಮಾ 69 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 56 ರನ್ ಬಾರಿಸಿ ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಮತ್ತೊಂದೆಡೆ ರವಿಚಂದ್ರನ್ ಅಶ್ವಿನ್‌ 5 ಎಸೆತಗಳನ್ನು ಎದುರಿಸಿದ್ದು, ಎರಡನೇ ದಿನ ಖಾತೆ ತೆರೆಯುವ ವಿಶ್ವಾಸದಲ್ಲಿದ್ದಾರೆ. 

Debutant Todd Murphy breaks the opening stand but India finish the opening day of the Nagpur Test on top. | | 📝 https://t.co/rzMJy0hUFm pic.twitter.com/cir0bmZWMy

— ICC (@ICC)

Ind vs Aus: ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಕೆ ಎಸ್ ಭರತ್, ಸಿಹಿ ಮುತ್ತನ್ನಿಟ್ಟ ತಾಯಿ..! ಫೋಟೋ ವೈರಲ್

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಎರಡು ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದರು. ಇದಾದ ಬಳಿಕ ಮಾರ್ನಸ್ ಲಬುಶೇನ್-ಸ್ಟೀವ್ ಸ್ಮಿತ್ ಮೂರನೇ ವಿಕೆಟ್‌ಗೆ ಜೋಡಿ 82 ರನ್‌ಗಳ ಜತೆಯಾಟವಾಡುವ ಮೂಲಕ ಕೊಂಚ ಆಸರೆಯಾದರು. ಈ ವೇಳೆ 123 ಎಸೆತಗಳನ್ನು ಎದುರಿಸಿ 8 ಬೌಂಡರಿ ಸಹಿತ 49 ರನ್ ಬಾರಿಸಿದ್ದ ಮಾರ್ನಸ್ ಲಬುಶೇನ್ ಅವರನ್ನು ಬಲಿ ಪಡೆಯುವ ಮೂಲಕ ರವೀಂದ್ರ ಜಡೇಜಾ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. ಇನ್ನು ಇದರ ಬೆನ್ನಲ್ಲೇ ಮ್ಯಾಟ್ ರೆನ್‌ಶೋ, ಶೂನ್ಯ ಸುತ್ತಿ ಪೆವಿಲಿಯನ್‌ ಪೆರೇಡ್ ನಡೆಸಿದರು. ಇದರ ಬೆನ್ನಲ್ಲೇ ಸ್ಮಿತ್‌ ಕೂಡಾ ಜಡೇಜಾಗೆ ಮೂರನೇ ಬಲಿಯಾದರು.

ಒಂದು ಹಂತದಲ್ಲಿ ಆಸ್ಟ್ರೇಲಿಯಾ ತಂಡವು 109 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಆದರೆ ಈ ವೇಳೆ 6ನೇ ವಿಕೆಟ್‌ಗೆ ಪೀಟರ್ ಹ್ಯಾಂಡ್ಸ್‌ಕಂಬ್‌ (31) ಹಾಗೂ ಅಲೆಕ್ಸ್‌ ಕ್ಯಾರಿ(36) ಜೋಡಿ 53 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿಯನ್ನು ಅಶ್ವಿನ್‌ ಬೇರ್ಪಡಿಸಿದರು. ಈ ಜೋಡಿ ಬೇರ್ಪಡುತ್ತಿದ್ದಂತೆಯೇ ಆಸೀಸ್ ತಂಡವು ನಾಟಕೀಯ ಕುಸಿತ ಕಂಡಿತು. ಕೇವಲ 15 ರನ್‌ಗಳ ಅಂತರದಲ್ಲಿ ಆಸ್ಟ್ರೇಲಿಯಾ ತಂಡವು ಕೊನೆಯ 5 ವಿಕೆಟ್ ಕಳೆದುಕೊಂಡಿತು.

ಇನ್ನು ಟೀಂ ಇಂಡಿಯಾ ಪರ ಶಿಸ್ತಿನ ದಾಳಿ ನಡೆಸಿದ ರವೀಂದ್ರ ಜಡೇಜಾ ಕೇವಲ 47 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 42 ರನ್ ನೀಡಿ 3 ವಿಕೆಟ್ ಉರುಳಿಸಿದರು. ಇನ್ನು ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.

click me!