IPL 2022 ಐಪಿಎಲ್‌ ಕಾಮೆಂಟ್ರಿಗೆ ರೋಬೋಟ್‌ ಸಹಾಯ..!

Kannadaprabha News   | Asianet News
Published : Mar 17, 2022, 09:57 AM IST
IPL 2022 ಐಪಿಎಲ್‌ ಕಾಮೆಂಟ್ರಿಗೆ ರೋಬೋಟ್‌ ಸಹಾಯ..!

ಸಾರಾಂಶ

* ಬಹುನಿರೀಕ್ಷಿತ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 26ರಿಂದ ಆರಂಭ * ಈ ಬಾರಿಯ ವಿಶೇಷ ತಂತ್ರಜ್ಞಾನದಿಂದ ಐಪಿಎಲ್‌ ಟೂರ್ನಿಯ ರಂಗು ಮತ್ತಷ್ಟು ಹೆಚ್ಚಲಿದೆ  * ವೀಕ್ಷಕವಿವರಣೆಗಾರರಿಗೆ ನೆರವಾಗಲು ರೋಬೋಟ್ ತಂತ್ರಜ್ಞಾನದ ಬಳಕೆ

-ಸ್ಪಂದನ್ ಕಣಿಯಾರ್, ಕನ್ನಡಪ್ರಭ

ಬೆಂಗಳೂರು(ಮಾ.17): ಕ್ರಿಕೆಟ್‌ ಅಥವಾ ಯಾವುದೇ ಕ್ರೀಡೆಯ ಅಂದ ಹೆಚ್ಚಿಸುವವರು ವೀಕ್ಷಕ ವಿವರಣೆಗಾರರು (commentary). ಕ್ರಿಕೆಟ್‌ನಲ್ಲಿ ಪ್ರತಿ ಎಸೆತ, ಬೌಂಡರಿ, ಸಿಕ್ಸರ್‌, ವಿಕೆಟ್‌ನ ಕುರಿತು ಅವರು ನೀಡುವ ವಿವರಣೆ ನೋಡುಗರಿಗೆ ಪಂದ್ಯದ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಅಂಕಿ, ಸಂಖ್ಯೆಗಳ ಮೇಲೆಯೇ ಕ್ರಿಕೆಟ್‌ ನಿಂತಿದೆ. ಆದರೆ ಪ್ರತಿಯೊಬ್ಬ ಆಟಗಾರನಿಗೆ ಸಂಬಂಧಿಸಿದ ಇಲ್ಲವೇ ಪ್ರತಿಯೊಂದು ಸಂದರ್ಭಕ್ಕೆ ಅನುಗುಣವಾಗಿ ಅಂಕಿ-ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಯಾರಿಗಾದರೂ ಸಾಧ್ಯವಿಲ್ಲ. ವೀಕ್ಷಕ ವಿವರಣೆಗಾರರೂ ಇದಕ್ಕೆ ಹೊರತಲ್ಲ.

ಇದೇ ಕಾರಣಕ್ಕೆ ವೀಕ್ಷಕರಿಗೆ ಹೊಸ ಅನುಭವ ನೀಡುವ ಉದ್ದೇಶದಿಂದ, ಹೆಚ್ಚು ಅಂಕಿ-ಅಂಶಗಳನ್ನು ಒಳಗೊಂಡು ಕಾಮೆಂಟ್ರಿ ನಡೆಸಲು ಕಾಮೆಂಟೇಟರ್‌ಗಳಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ 15ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನಲ್ಲಿ (Indian Premier League) ಕೃತಕ ಬುದ್ಧಿಮತ್ತೆ(ಆರ್ಟಿಫಿಷಿಯಲ್‌ ಇಂಟಿಲಿಜೆನ್ಸ್‌) ಬಳಸಲಿದೆ. ರೋಬೋಟ್‌ವೊಂದರ ಸಹಾಯದಿಂದ ಕಾಮೆಂಟೇಟರ್‌ಗಳ ಕೈಬೆರಳಿನ ಅಂಚಿನಲ್ಲೇ ಎಲ್ಲಾ ಅಂಕಿ-ಅಂಶಗಳು ಲಭ್ಯವಿರುವಂತೆ ಮಾಡಲು, ಟೂರ್ನಿಯ ಅಧಿಕೃತ ಪ್ರಸಾರಕರಾದ ಸ್ಟಾರ್‌ ಸ್ಪೋರ್ಟ್ಸ್‌ ಸಂಸ್ಥೆಯು ಹೊಸ ಪ್ರಯೋಗ ನಡೆಸಲಿದೆ. ಈ ಬಗ್ಗೆ ಸಂಸ್ಥೆಯ ಮುಖ್ಯಸ್ಥರಾದ ಸಂಜೋಗ್‌ ಗುಪ್ತಾ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದು, ‘ಕ್ರಿಕೋ’ ಎನ್ನುವ ಹೆಸರಿನ ರೊಬೋಟ್‌ ಅನ್ನು ಸ್ಟಾರ್‌ ಸ್ಪೋರ್ಟ್ಸ್‌ (Star Sports) ಸಂಸ್ಥೆಯೇ ಅಭಿವೃದ್ಧಿಪಡಿಸಿರುವುದಾಗಿ ಹೇಳಿದ್ದಾರೆ.

ರೋಬೋಟ್‌ ಹೇಗೆ ಕೆಲಸ ಮಾಡುತ್ತೆ?

ಈ ಉಪಕರಣವು ಅಮೆಜಾನ್‌ನ ‘ಅಲೆಕ್ಸಾ’ ಗಾತ್ರದಷ್ಟಿರುತ್ತದೆ. ಐಪಿಎಲ್‌ ಒಳಗೊಂಡಂತೆ ಟಿ20 ಕ್ರಿಕೆಟ್‌ಗೆ ಸಂಬಂಧಿಸಿದ ಅಂಕಿ-ಅಂಶಗಳ ದತ್ತಾಂಶ ಇದರಲ್ಲಿರಲಿವೆ. ಉದಾಹರಣೆಗೆ ಎಂ.ಎಸ್‌.ಧೋನಿ (MS Dhoni) ಬ್ಯಾಟ್‌ ಮಾಡುವಾಗ ಅವರು ಐಪಿಎಲ್‌ನಲ್ಲಿ ಅಥವಾ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಎಷ್ಟುಬಾರಿ ಓವರ್‌ನ ಕೊನೆ ಎಸೆತದಲ್ಲಿ ಸಿಕ್ಸರ್‌ ಸಿಡಿಸಿದ್ದಾರೆ ಎಂದು ರೋಬೋಟ್‌ ಅನ್ನು ಕೇಳಿದಾಗ ತಕ್ಷಣ ಅದು ಉತ್ತರಿಸಲಿದೆ. ಅದೇ ರೀತಿ ವಿರಾಟ್‌ ಕೊಹ್ಲಿ (Virat Kohli) ತಮ್ಮ ಐಪಿಎಲ್‌ ವೃತ್ತಿಬದುಕಿನಲ್ಲಿ ಇನ್ನಿಂಗ್ಸ್‌ನ ಮೊದಲ 6 ಓವರ್‌ಗಳಲ್ಲಿ ಸರಾಸರಿ ಎಷ್ಟು ರನ್‌ ಗಳಿಸಿದ್ದಾರೆ. ಶಿಖರ್‌ ಧವನ್‌ ಎಷ್ಟು ಬಾರಿ ಲೆಗ್‌ ಸ್ಪಿನ್ನರ್‌ಗಳಿಗೆ ಔಟಾಗಿದ್ದಾರೆ, ಅಶ್ವಿನ್‌ ಪವರ್‌-ಪ್ಲೇನಲ್ಲಿ ಎಷ್ಟುವಿಕೆಟ್‌ ಕಬಳಿಸಿದ್ದಾರೆ, ಚಹಲ್‌ ಇನ್ನಿಂಗ್ಸ್‌ನ ಯಾವ ಅವಧಿಯಲ್ಲಿ ಹೆಚ್ಚು ಪರಿಣಾಮಕಾರಿ ಹೀಗೆ ಯಾವುದೇ ಆಟಗಾರನಿಗೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಕ್ಷಣ ಮಾತ್ರದಲ್ಲಿ ಕೇಳಿ ತಿಳಿದುಕೊಳ್ಳಬಹುದು.

ರೋಬೋಟ್‌ ಸಹಾಯದಿಂದ ಆನ್‌ಲೈನ್‌ ಅಥವಾ ಇನ್ಯಾವುದೇ ದಾಖಲೆಗಳಲ್ಲಿ ಅಂಕಿ-ಅಂಶಗಳನ್ನು ಹುಡುಕಲು ತಗುಲುವ ಸಮಯ ಉಳಿಯಲಿದೆ. ಜೊತೆಗೆ ಕಾಮೆಂಟೇಟರ್‌ಗಳು ಆಟಗಾರರ ನೈಜ ಸಾಮರ್ಥ್ಯವನ್ನು ವೀಕ್ಷಕರಿಗೆ ವಿವರಿಸಿ ಹೇಳಲು ಅನುಕೂಲವಾಗಲಿದೆ. ಈ ಪ್ರಯೋಗವು ನೋಡುಗರಿಗೆ ಹೊಸ ಅನುಭವ ನೀಡಲಿದೆ ಎನ್ನುವ ನಂಬಿಕೆ ಇದೆ.

- ಸಂಜೋಗ್‌ ಗುಪ್ತಾ, ಸ್ಟಾರ್‌ ಸ್ಪೋರ್ಟ್ಸ್‌ ಮುಖ್ಯಸ್ಥ

ಐಪಿಎಲ್‌ನಲ್ಲಿ ಕಾಮೆಂಟ್ರಿ ಮಾಡಲಿರುವ ಶಾಸ್ತ್ರಿ, ರೈನಾ

ಮುಂಬೈ: ಮೊದಲ ಬಾರಿ ಐಪಿಎಲ್‌ನಲ್ಲಿ ಯಾವುದೇ ತಂಡಕ್ಕೆ ಹರಾಜಾಗದೆ ಉಳಿದಿದ್ದ ‘ಮಿಸ್ಟರ್‌ ಐಪಿಎಲ್‌’ ಖ್ಯಾತಿಯ ಸುರೇಶ್‌ ರೈನಾ (Suresh Raina) 2022ರ ಐಪಿಎಲ್‌ ಮೂಲಕ ಕಾಮೆಂಟ್ರಿಗೆ ಪಾದಾರ್ಪಣೆ ಮಾಡಲಿದ್ದಾರೆ. ಇನ್ನು, ಟೀಂ ಇಂಡಿಯಾ (Team India) ಮಾಜಿ ಪ್ರಧಾನ ಕೋಚ್‌ ರವಿ ಶಾಸ್ತ್ರಿ (Ravi Shastri) ಕೂಡಾ 5 ವರ್ಷಗಳ ಬಳಿಕ ಕಾಮೆಂಟ್ರಿಗೆ ಮರಳಲಿದ್ದಾರೆ. ಸುಮಾರು 20 ವರ್ಷಗಳ ಕಾಲ ವೀಕ್ಷಕ ವಿವರಣೆಗಾರರಾಗಿ ಅನುಭವವಿರುವ ಶಾಸ್ತ್ರಿ, ಐಪಿಎಲ್‌ ವೇಳೆ ಹಿಂದಿ ಭಾಷೆಯಲ್ಲಿ ಕಾಮೆಂಟ್ರಿ ಮಾಡಲಿದ್ದಾರೆ.

IPL 2022: ಅತಿಹೆಚ್ಚು ಐಪಿಎಲ್ ಟ್ರೋಫಿ ಗೆದ್ದ ಟಾಪ್ 5 ಕ್ರಿಕೆಟಿಗರಿವರು..!

ಬಹುನಿರೀಕ್ಷಿತ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಮಾರ್ಚ್ 26ರಿಂದ ಆರಂಭವಾಗಲಿದ್ದು, ಟೂರ್ನಿಯಲ್ಲಿ ಈ ಬಾರಿ ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿದ್ದು, ಲೀಗ್ ಹಂತದ 70 ಪಂದ್ಯಗಳು ಸೇರಿದಂತೆ ಒಟ್ಟು 74 ಪಂದ್ಯಗಳು ನಡೆಯಲಿವೆ. ಲೀಗ್ ಹಂತದ ಎಲ್ಲಾ ಪಂದ್ಯಗಳಿಗೆ ಮಹಾರಾಷ್ಟ್ರದ 4 ಸ್ಟೇಡಿಯಂಗಳು ಆತಿಥ್ಯವನ್ನು ವಹಿಸಲಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರಾಟ್ ಕೊಹ್ಲಿ to ಕೆಎಲ್ ರಾಹುಲ್, ಭಾರತೀಯ ಕ್ರಿಕೆಟಿಗರಲ್ಲಿದೆ ಅತೀ ದುಬಾರಿ ಕಾರು
ಬ್ರೇಕ್ ಅಪ್ ಆಗೋರಿಗೆ ಮೂವ್ ಆನ್ ಆಗೋ ಬೆಸ್ಟ್ ಪಾಠ ಹೇಳಿದ ಸ್ಮೃತಿ ಮಂಧನಾ! ಕೊನೆಗೂ ಮೌನ ಮುರಿದ ಕ್ರಿಕೆಟರ್!